ಭಾನುವಾರ, ಜುಲೈ 29, 2018

ಹೆಮ್ಮೆಯ ಧ್ವಜಬಾನಗಲದಿ ಸ್ವಚ್ಛಂದದಿ  ಹಾರಿದೆ ನನ್ನಯ ಹೆಮ್ಮೆಯ ಬಾವುಟವು
ಪಟಪಟ ಸದ್ದಿನ ಬಾವುಟ ಕಾಣಲು ನರನಾಡಿಗೆ ಅದೆ ಹೊಸ ಕಸುವು
ಹಲವರ ಕನಸದು ನನಸಾಯಿತು ಸ್ವಾತಂತ್ರ್ಯವ ದೇಶವು ಪಡೆದಂದು
ಹರಿಸಿದ ನೆತ್ತರು, ಸುರಿಸಿದ ಬೆವರು ಪಡೆಯಿತು ತಾ ಸಫಲತೆಯಂದು
ತ್ಯಾಗದ ತಳಹದಿ ಮೇಲ್ಗಡೆ ಇರುವ ಜೀವನದರ್ಶನ ಇಲ್ಲಿಹುದು
ಪರೋಪಕಾರವು, ಪ್ರತ್ಯುಪಕಾರವು  ಅತಿಸಹಜದಿ ನೆಲೆನಿಂತಿಹುದು
ಎಷ್ಟು ಆಕ್ರಮಣ ಮತ್ತೆಷ್ಟು ಲೂಟಿಗಳು ನಡೆದವು ಚರಿತ್ರೆ ಪುಟಗಳಲಿ
ಎಲ್ಲವ ಮೀರಿಯೆ ನಿಂತಿದೆ ದೇಶವು ಅಳಿವಿಲ್ಲದೆ ಸ್ಥಿರ ರೂಪದಲಿ
ಜೀವನದಾಳವ, ಜೀವನ ಧ್ಯೇಯವ ವಿಶ್ವಕೆ ಸಾರಿದ ದೇಶವಿದು
ಪ್ರಜ್ಞೆಯ ಸೀಮೆಯ ತುದಿಯನು ಮುಟ್ಟುವ ಸಾರ್ಥಕ ಬಾಳ್ವೆ ಇಲ್ಲಿಯದು
ಮರೆತಿರಬಹುದು ಆ ಮಹದಾದರ್ಶವ ಕಾಲನ ಹೊಡೆತಕೆ ತುತ್ತಾಗಿ
ಕುಯುಕ್ತಿಯ ಜನಗಳ ಪಿತೂರಿಯರಿಯದೆ ಅಜ್ಞಾನದ ಅಮಲಿಗೆ ತೊತ್ತಾಗಿ
ಕಣ್ಣರಳಿಸಿ ನೋಡಲು ಹೆಮ್ಮೆಯ ಧ್ವಜವನು ಹೃದಯವು ತಾನೇ ಅರಿಯುವುದು
ಹಲವು ಸಾವಿರದ ವರ್ಷಗಳಿಂದಲಿ  ಪ್ರಕಾಶಿಸುತಿರುವ ದೇಶವಿದು.

ಶುಕ್ರವಾರ, ಜುಲೈ 6, 2018

ಆ ಕ್ಷಣದ ಕ್ಷಣಗಣನೆ

ಮನದಲಿ ಸ್ವಲ್ವವೆ ಸುಳಿದಾಡು
ಹೃದಯದಿ ಸ್ವಲ್ಪವೆ ನಲಿದಾಡು
ಮನಸಿನ, ಹೃದಯದ ಸ್ಪಂದನೆಯಿಂದ
ನಾ ಪಡೆಯುವೆ ಅಮಿತಾನಂದ

ನೀ ಬರಲೇಬೇಕೆನ್ನುವ ಕಾತರ
ಎಂದಿಗೆ ಬಂದೀಯೆನ್ನುವ ಆತುರ
ಕಾದರು ಬಾರದೆ ಕಾಡುವುದೇತಕೆ?
ದೂರದಲೆಲ್ಲೋ ಇರುವುದು ಏತಕೆ?

ನಿನ್ನ ಪ್ರವಾಹದ ಧಾರೆಯ ನದಿಗಳು
ನನ್ನೊಳು ಉದಯಿಸಿ ನನ್ನನೆ ತೋಯಿಸಿ
ಮರುಕ್ಷಣ ಮುಳುಗಿಸಿ ಗಗನಕೆ ಚಿಮ್ಮಿಸಿ
ರಮಿಸಿದ ಅವುಗಳೇ ಹೋನ್ನಿನ ದಿನಗಳು

ಅಂದಿನ ದಿನಗಳ ಇಂದಿನ ನೆನಪು
ಇಂದಿನ ದಿನದವೇ ಆಗುವುದೇ?
ಅಂದಿನ ಅವುಗಳು ಇಂದೂ ಆದರೆ
ಇಂದಿನ ಈ ಕ್ಷಣ ಹೊನ್ನಾಗದೇ?

ಬೇಕಿದೆ...

ಮಳೆಯ ಹನಿ ಹನಿ ನೀರು
ಭುವಿಯ ಒಡಲೊಳು ಇಳಿದು
ಇಳೆಯ ಮೇಲ್ಗಡೆಯಲ್ಲಿ ಹುಲುಸಾದ ಹಸಿರು.
ಸದ್ವಿಚಾರಗಳೆನ್ನ ಮನದಲ್ಲಿ ಇಳಿದರೆ
ಶುಭವ ಮಾಡುವ ಕನಸೆ ನನ್ನ ಜೀವನದ ಉಸಿರು

ಜಗವು ನೀಡುವುದೆನಗೆ ನೂರು ಭಾವಗಳನ್ನು
ಅವುಗಳಿಂದ ಮನದಿ ನೂರೊಂದು ಅಚ್ಚು
ಆ ಅಚ್ಚುಗಳ ಪರಿಣಾಮ ನನ್ನ ಹೃದಯ ತುಂಬ
ರೋಷ ಆವೇಷ, ಕೆಚ್ಚು ರೊಚ್ಚು.

ಇಂತ ಕಸ ಕಡ್ಡಿಗಳು ಬೇಡ ಜೀವನದಲ್ಲಿ
ಮನಕೆ ಬೇಕಿದೆ ಶಾಂತಿ, ಜೊತೆಗೆ ವಿಶ್ರಾಂತಿ
ಕೊಳಕು ಕೊಚ್ಚೆಯ ಕಳೆದು ಪರಿಶುದ್ಧ ಚಿತ್ತದಲಿ
ಚಿಮ್ಮಿ ಹೊಮ್ಮಲಿ ನನ್ನ ಪರಿಶುದ್ಧ ಕಾಂತಿ

ಇದನೆಲ್ಲ ಅರುಹಿದವ ನೀನಲ್ಲವೆ?
ಮತ್ತಾರ ಬಳಿ ಇದನು ಬೇಡಲಾರೆ
ಹೇಳಿದವ ನೀನು, ತಿಳಿದವನು ನೀನು
ನೀಡಬೇಕಿದನೆನಗೆ ನೀನೆ ಗುರುವೇ.....

ಭಾನುವಾರ, ಜೂನ್ 17, 2018

ಕೃತಘ್ನನ ಕೃತಜ್ಞತೆ.

         
ನಿ:ಶಕ್ತಿಯಿಂದ ಮುಂದೆ ಹೆಜ್ಜೆಯಿಡಲಾರದೆ  ಸುಸ್ತಾಗಿ ಮರಕ್ಕೆ  ಒರಗಿ ನಿಂತ ವೃದ್ಧನಂತೆ ಕಾಣುತ್ತಿರುವ ಈ ಸೈಕಲ್  ನೆಪಮಾತ್ರಕ್ಕಷ್ಟೇ ಬದುಕಿಕೊಂಡಿದೆ. ಜೀವನದುದ್ದಕ್ಕೂ ದುಡಿದು ದಣಿದ, ದುಡಿಮೆಯಾಚೆಗೆ ಜೀವನವನ್ನೇ ಕಾಣದೆ  ಜೀವನದ ಕೊನೆಯಲ್ಲಿ ಯಾರಿಗೂ ಬೇಡವಾಗಿ, ಕಣ್ಣೆದುರಿದ್ದೂ ಎಲ್ಲರಿಂದಲೂ ಉಪೇಕ್ಷೆಗೊಳಗಾದ ವ್ಯಕ್ತಿಯ ಪರಿಸ್ಥಿತಿ ಅದರದ್ದು. ವೃದ್ದಾಪ್ಯದಲ್ಲಿ ತಂದೆತಾಯಂದಿರನ್ನು ಕಡೆಗಣಿಸಿ ಭಂಡತನದಿಂದ ಓಡಾಡಿಕೊಂಡಿರುವ ಮಕ್ಕಳಂತೆ ಸೈಕಲ್ಲಿನ ಈ ಪರಿಸ್ಥಿತಿಯನ್ನು ಕಂಡೂ ಕಾಣದಂತೆ ಇರುವ ಜಗಭಂಡ ನಾನು.  ತನ್ನ ಜೀವನವನ್ನು ನನಗಾಗಿಯೇ ಸವೆಸಿದ ಆ ಸೈಕಲ್ಲಿನ ಬಗ್ಗೆ ಯಾವ ಕೃತಜ್ಞತೆಯನ್ನೂ ತೋರದೆ ನಿರ್ಲಜ್ಜನಾಗಿ ಬದುಕುತ್ತಿದ್ದೇನೆ. ಇಂದು ನನ್ನ ಕಾಲಮೇಲೆ ನಾನು ನಿಂತಿದ್ದೇನೆ. ಆದರೆ ಒಂದಾನೊಂದು ಕಾಲದಲ್ಲಿ ನನ್ನ ಸಂಪೂರ್ಣ ಭಾರವನ್ನು ತಾನು ಹೊತ್ತು ನನ್ನನ್ನು ಮುನ್ನಡೆಸಿದ್ದು ಈ ಸೈಕಲ್ !
  ಸರಿಯಾಗಿ  ೧೬ ವರ್ಷಗಳ ಹಿಂದೆ ಈ ಸೈಕಲ್ ನನ್ನ ಬಾಳಿನಲ್ಲಿ ಪ್ರವೇಶಿಸಿತು‌. ನಾನು ಆಗ ಸಿದ್ದಾಪುರದ ಎಂ ಜಿ ಸಿ ಕಾಲೇಜಿನಲ್ಲಿ ಡಿಗ್ರಿ ಓದುತ್ತಿದ್ದೆ. ಮನೆಯಿಂದ ತಾಳಗುಪ್ಪದ ವರೆಗೆ ಸೈಕಲ್ ತುಳಿದು ಅಲ್ಲಿಂದ ಬಸ್ಸಿನ ಪ್ರಯಾಣ. ಮನೆಗೆ ವಾಪಾಸಾಗುವುದೂ ಕೂಡ ಇದೇ ರೀತಿಯಲ್ಲಿ. ಒಟ್ಟಾರೆ ೧೦ ಕಿಮಿಯ ಸೈಕಲ್ ಸವಾರಿ ನನ್ನ ಪ್ರತಿನಿತ್ಯದ ಪಾಡಾಗಿತ್ತು. ಮೊದಲು ಒಂದು ಸೈಕಲ್ ಇದ್ದರೂ, ಅದು ನನಗೆ ಗಿಡ್ಡವಾಗಿದ್ದರಿಂದ ಬೆನ್ನು ನೋವು ಬರುತ್ತಿತ್ತು.  ನಂಗೊಂದು ೨೪ ಇಂಚಿನ ಸೈಕಲ್ ಬೇಕು ಅಂತ ಅಪ್ಪನ ಎದುರಲ್ಲಿ ಬೇಡಿಕೆ ಇಟ್ಟೆ‌ . ಹೊಸ ಸೈಕಲ್ಲಿಗೆ ಸಾವಿರದ ಮೇಲಿದ್ದದ್ದರಿಂದ, ಅವನ ಬಜೆಟ್ಟಿಗನುಗುಣವಾಗಿ ಅಪ್ಪ ಸೆಕೆಂಡ್ ಹ್ಯಾಂಡ್ ಸೈಕಲ್ಲಿನ ಹುಡುಕಾಟದಲ್ಲಿ ತೊಡಗಿದ.  ಕೊನೆಗೆ ತಾಳಗುಪ್ಪದ ಶ್ರೀಧರ ಶೆಟ್ರ ಹತ್ತಿರ ಇದ್ದ ಈ ಹರ್ಕ್ಯುಲೆಸ್  ಸೈಕಲ್ಲು ೨೫೦ರೂಪಾಯಿಗೆ  ಖರೀದಿಯಾಗಿ ಮನೆ ಪ್ರವೇಶಿಸಿತು.
ಅಂದಿನಿಂದ 'ನಾನುಂಟು, ನನ್ನ ಸೈಕಲ್ ಉಂಟು' ಅಂತಾಗಿತ್ತು. ಪ್ರತಿನಿತ್ಯ  ತಾಳಗುಪ್ಪಕ್ಕೆ ೨೦ ನಿಮಿಷದಲ್ಲಿ ತಲುಪಬೇಕಿತ್ತು.  ಐದು ನಿಮಿಷ ಲೇಟ್ ಆದರೂ ಸಾಗರ-ಯಲ್ಲಾಪುರ ಬಸ್ಸು ಮಿಸ್ಸಾಗಿ ಮತ್ತೊಂದು ಬಸ್ಸು ಬರುವವರೆಗೂ ಕಾಯುವ ಪಡಿಪಾಟಲು ಇರುತ್ತಿತ್ತು‌‌ ಹಾಗಾಗಿ ನನ್ನ ಸೈಕಲ್ಲಿನದು ಯಾವಾಗಲೂ ನಾಗಾಲೋಟ. ಜಲ್ಲಿರಸ್ತೆ, ಗದ್ದೆಯ ಸಣ್ಣ ಹಾಳಿ( ಜಾರಿಬಿದ್ದರೆ ನೀರು ಹರಿಯುವ ತೋಡಿ), ಧೂಳನ್ನೇ ಹೊದ್ದು ಮಲಗಿದ್ದ ರಸ್ತೆ ಇಲ್ಲೆಲ್ಲ ಕುದುರೆಯಂತೆ ಜಿಗಿಯುತ್ತ, ಚಂಗನೆ ಎಗರುತ್ತ ನನ್ನ ಸೈಕಲ್ ತಾಳುಪ್ಪದ ಕಡೆ ಓಡುತ್ತಿತ್ತು. ಮಳೆಗಾಲದಲ್ಲಂತೂ ಅದ್ಭುತ! ಜಾರುತ್ತ ಬೀಳುತ್ತ, ಏಳುತ್ತ, ಬರುವುದು ಸಹಜವಾಗಿತ್ತು.  ಒಂದುಕೈಲಿ ಸೈಕಲ್ ಹ್ಯಾಂಡ್ಲು, ಮತ್ತೊಂದು ಕೈಲಿ ಛತ್ರಿ ಹಿಡಿದು ಗದ್ದೆ ಬಯಲಿನಲ್ಲಿ ಎದುರುಮುಖ ಬೀಸುವ ಗಾಳಿಗೆ ಎದೆಯೊಡ್ಡಿ ಛಲ ಬಿಡದ ತ್ರಿವಿಕ್ರಮನಂತೆ  ನರಬಿಗಿದು ಪೆಡಲು ತುಳಿಯುತ್ತಿದ್ದೆ. ಹಾಗೆ ತಾಳಗುಪ್ಪಕ್ಕೆ ಬಂದು ಸೈಕಲ್ಲನ್ನು ಅರಳಿ ಮರದ ಕೆಳಗೆ , ಅಪರೂಪಕ್ಕೊಮ್ಮೆ  ಮೂಗಿಮನೆ ಮಿಲ್ಲಿನಲ್ಲಿ  ಒಗೆದು ಬಸ್ ಸ್ಟಾಂಡಿನೆಡೆಗೆ ಮುಖ ಮಾಡುತ್ತಿದ್ದೆ. ಹೀಗೆ ೨೦೦೨ ರಿಂದ ೨೦೦೫ ರ ವರೆಗೆ ನನ್ನ ಡಿಗ್ರಿ ಪಯಣ  ಈ ಸೈಕಲ್ಲಿನ  ಉಪಕಾರದಲ್ಲಿಯೇ
ಆಮೇಲೆ ನಾನು ತೆರಳಿದ್ದು ಕುಮಟಾ ಕಮಲಾ ಬಾಳಿಗ ಕಾಲೇಜಿಗೆ. ಸೈಕಲ್ಲಿನ ಹಾಗೂ ನನ್ನ ಬಾಂಧವ್ಯ  ಸೈಕಲ್ಲನ್ನು ಅಲ್ಲಿಗೂ ಕರೆತಂದಿತು‌. ನಾನಿದ್ದ    ಹೆಗಡೆಯಿಂದ ಕಾಲೇಜಿಗೆ ಸುಮಾರು ೨ ಕಿಮಿಯ ನನ್ನ ಪ್ರಯಾಣ ಈ ಸೈಕಲ್ಲಿನಲ್ಲಿಯೇ. ಅಲ್ಲದೆ ಕುಮಟಾ, ಮಿರ್ಜಾನು, ಹಳಕಾರು ಅಂತೆಲ್ಲ ಆಸುಪಾಸಿನ ಊರುಗಳಿಗೆಲ್ಲ ಇದರಮೇಲೆ ಓಡಾಟ. ಹೀಗೆ ಒಂದು ವರ್ಷ ಅಲ್ಲಿ ಕಳೆದಾದಮೇಲೆ ಊರಿಗೆ ವಾಪಾಸಾಗುವಾಗ ಬಸ್ಸಿನಮೇಲೆ ಈ ಸೈಕಲ್ಲನ್ನೂ ಹೇರಿಕೊಂಡು ಬಂದೆ.  ಆಮೇಲೆ ನಾನು ದುಡಿಮೆಯ ಹಿಂದೆ ಬಿದ್ದು ಬೆಂಗಳೂರು ಸೇರಿದೆ. ಸೈಕಲ್ ಮನೆಯಲ್ಲಿಯೇ ಆಯಿತು. ಈಗ ಅಪ್ಪ ಅದರ ಸವಾರನಾದ‌.
ಕೇವಲ ಓದಿಗಷ್ಟೇ ಅಲ್ಲ, ನನ್ನ ಇತರೆ ಎಲ್ಲ ಹಡಬಿಟ್ಟಿ ತಿರುಗಾಟಕ್ಕೂ  ಒದಗುತ್ತಿದ್ದ ಈ ಸೈಕಲ್ಲಿನ ಹಣೆಬರಹ ನಿದಾನವಾಗಿ ಬದಲಾಯಿತು.‌‌ ಅಪ್ಪನ ಹೆವಿಡ್ಯೂಟಿ ಬಂದ ನಂತರ ಅಪ್ಪ ಸೈಕಲ್ಲೇರುವುದನ್ನು ಕಡಿಮೆಮಾಡಿ ಕ್ರಮೇಣ ನಿಲ್ಲಿಸಿಯೇಬಿಟ್ಟ. ಮನೆಯೆದುರು ಠೀವಿಯಿಂದ ಇರುತ್ತಿದ್ದ ಸೈಕಲ್ ಮನೆಯ ಪಕ್ಕಕ್ಕೆ ಹೋಯಿತು. ಛಲಿ, ಮಳೆ ಬಿಸಿಲಿನ ಆಘಾತಕ್ಕೆ ಸಿಲುಕಿ ಜರ್ಜರಿತವಾಗತೊಡಗಿತು. ಆ ಹೊತ್ತಿಗೆ ನಂಗೂಂದು ದುಡಿಮೆ ಅಂತಾಗಿ  ಬೇರೆ ಊರಿನಲ್ಲಿದ್ದೆ.  ಮೊದಲೆಲ್ಲ ಮನೆಗೆ ಬಂದಾಗ ಸೈಕಲ್ ಏರುತ್ತಿದ್ದವನು ಈಗ ಅಪ್ಪನ ಹೆವಿಡ್ಯೂಟಿ ಏರತೊಡಗಿದೆ. ಯಾವ ಸೈಕಲ್ ನನ್ನದಾಗಿತ್ತೋ ಅದು ಮನೆಯ ಪಕ್ಕದ ಕಂಪೌಂಡಿಗೆ ಒರಗಿ ವೃದ್ದಾಪ್ಯವನ್ನು ಆಹ್ವಾನಿಸುತ್ತ ಸೊರಗತೊಡಗಿತ್ತು. ಆಮೇಲಾಮೇಲೆ ನನ್ನದೇ ಬೈಕು,  ಕಾರು ಬಂದಿತು.  ಒಂದಾನೊಂದು ಕಾಲದಲ್ಲಿ ನನ್ನದು ಎನ್ನುವ  ಹೆಮ್ಮೆಯ ಸೈಕಲ್ ಹರಗಣವಾಯಿತು. ಒಮ್ಮೆ ಆ ಪಕ್ಕಕ್ಕೆ ಮತ್ತೊಮ್ಮೆ ಈ ಪಕ್ಕಕ್ಕೆ  ಎತ್ತಿ ತಂದಿಡುತ್ತ, ಎಸೆಯುತ್ತ ಇರುವುದು ಸಾಮಾನ್ಯವಾಯಿತು. ಈಗ ಸೈಕಲ್ಲಿಗೆ ಯಾವ ತ್ರಾಣವೂ ಇಲ್ಲ‌  ರಿಮ್ಮಿಗಾಗಲಿ, ಚೈನಿಗಾಗಲಿ ತಾಕತ್ತಿಲ್ಲ.  ಏನೊಂದು ಇಲ್ಲದೆ  ಅಸ್ತಿಪಂಜರವಾಗಿದೆ.  ಅದರಿಂದ ಉಪಕೃತನಾದ ನಾನು ತಿಂದುಂಡು ಮೈ ಬೆಳೆಸಿದ್ದೇನೆ.  ನಾಲ್ಕು ಹೆಜ್ಜೆಯ ದಾರಿಗೂ ಬೈಕೋ, ಕಾರೋ ಬೇಕು ಎನ್ನುತ್ತೇನೆ.
      ಇಂದು ಮನೆಯ ಪಕ್ಕ ಕಣ್ಣು ಹಾಯಿಸಿದಾಗ ಅಲ್ಲಿ ಸೈಕಲ್ ಇರುವುದು ಅರಿವಿಗೆ ಬಂತು, ಇಷ್ಟು ದಿನ ಕಾಣುತ್ತಿದ್ದರೂ ಅರಿವಿಗೆ ಬಂದಿರಲಿಲ್ಲ!. ಇದೇನಾ ನಾನು ಓಡಿಸುತ್ತಿದ್ದ ಸೈಕಲ್ ಎನ್ನಿಸಿತು‌.ಆ ಸೈಕಲ್ಲಿಗೇನಾದರೂ ಜೀವವಿದ್ದಿದ್ದರೆ ನನ್ನನ್ನು ಖಂಡಿತಾ ಶಪಿಸುತ್ತಿತ್ತು, ಅದರ ಇಂದಿನ ಸ್ಥಿತಿಗೆ ಕಣ್ಣೀರಿಡುತ್ತಿತ್ತು ಎಂದು ಊಹಿಸಿಕೊಂಡೆ, ನಾನೆಷ್ಟು 'ಕೃತಘ್ನ' ಎನ್ನಿಸಿತು.

ಏಕಮೇವ ಕೋರಿಕೆ.

ಸುಖ ಬರುವುದು, ನಲಿವಿರುವುದು
ಸಂತೋಷತಾನೆ...!
ಅದರ ಜೊತೆಜೊತೆಯೇ
ಕಷ್ಟವೂ ಬರಲಿ, ನೋವೂ ಬರಲಿ
ಬರಬೇಕಾದುದೆಲ್ಲವೂ ಬಂದೇ ಬರಲಿ
ಅದು ಸಹಜವೇನೇ...!
ಆದರೆ
ನೀ ಎನ್ನ ತೊರೆವ ಕ್ಷಣ,
ಕೈ ಬಿಟ್ಟು ನಡೆವ ಕ್ಷಣ,
ತಿರುಗಿ ಸ್ವಲ್ಪವು ಎನ್ನ ನೋಡದೆ ಇರುವ ಕ್ಷಣ....
ಶ್ರೀಗುರುವೇ...
ಅದು ಮಾತ್ರ ಎಂದಿಗೂ ಬಾರದಿರಲಿ!
ಆ ದಿನವ ಈ ಬಾಳು ಕಾಣದಿರಲಿ.!!

ಬುಧವಾರ, ಏಪ್ರಿಲ್ 18, 2018

ಮುಳುಗಡೆಯಾಗದ ನೆನಪುಗಳು...

   
    ನಿನ್ನೆ ಅಂದರೆ 17/04/2018ರಂದು ಬರಬಳ್ಳಿಗೆ ಹೋಗಿ ಬಂದೆ. ಬಹಳ ದಿನಗಳಿಂದ ಹೋಗಬೇಕು ಅಂತ ಅಂದ್ಕೊಂಡಿದ್ರೂ ನಿನ್ನೆ ಅವಕಾಶ ಆಯ್ತು. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ದಟ್ಟ ಕಾಡುಗಳ ನಡುವೆ ಇದ್ದ ಪುಟ್ಟ ಹಳ್ಳಿ ಬರಬಳ್ಳಿ, ನನ್ನ ಅಮ್ಮನ ತವರೂರು. ಬರಬಳ್ಳಿಯಲ್ಲೇ ನಾನು ಹುಟ್ಟಿದ್ದು. ಬಾಲ್ಯದ ದಿನಗಳಲ್ಲಿ ಬೇಸಿಗೆ ರಜಾ ಬಂದೊಡನೆ ಅಮ್ಮನೊಂದಿಗೆ ಹೋಗಿ ನಲಿದಾಡುತ್ತಿದ್ದ ಸ್ವರ್ಗ ಅದು. ಕಾಳಿ ನದಿಯ ದಡದ ಉದ್ದಗಲಗಳಲ್ಲಿ ಹರಿಡಿಕೊಂಡಿದ್ದ ಊರು ಬರಬಳ್ಳಿ. ವನದೇವತೆಯ ಅಧಿಕೃತ ಆವಾಸ ಎನ್ನುವಂತಿದ್ದ ಆ ಕಗ್ಗಾಡಿನ ಊರಿನಲ್ಲಿ ಚದುರಿಕೊಂಡಿದ್ದ ಅಡಿಕೆ ಹಾಗೂ ತೆಂಗಿನ ಮರಗಳ ಹೊರತಾಗಿ ಉಳಿದ ಮರಗಳೆಲ್ಲ ನೈಸರ್ಗಿಕವಾಗಿಯೇ ಬೆಳೆದುಕೊಂಡಿದ್ದವು. ಉಳಿದೆಲ್ಲ ಮರಗಳು ಎಂದರೆ- ಹಲಸು, ಮಾವು, ಬಾಳೆ, ಸಪೋಟ, ಸೀತಾಫಲ, ಪೇರಲ ,ಪನ್ನೇರಲ, ನೇರಲ ಹೀಗೆ ಕಂಡು ಕೇಳಿದ ಹಣ್ಣುಗಳೆಲ್ಲ  ಬೇಕಾಬಿಟ್ಟಿ ಸಿಗುತ್ತಿದ್ದ ಊರದು. ಇವತ್ತು ಬೆಂಗಳೂರಿನಂತಹ ನಗರಗಳಲ್ಲಿ ಹಲಸಿನ ಸೊಳೆಯೊಂದಕ್ಕೆ ಐದೂ ಆರೋ ರೂಪಾಯಿ ಕೊಡಬೇಕಾಗಿರಬಹುದು. ಆದರೆ ಬರಬಳ್ಳಿಯಲ್ಲಿ ಹಲಸು ತಿಂದು ಮಿಕ್ಕಿ ಕೊಳೆತು ಹೋಗುವುದು ಅತ್ಯಂತ ಸಹಜವಾಗಿತ್ತು. ಹಲಸೊಂದೇ ಅಲ್ಲ. ಎಲ್ಲ ಹಣ್ಣುಗಳ ಕತೆಯೂ ಹೀಗೆಯೇ!. ಹಪ್ಪಳ ,ಪಾಯಸ, ಉಕಡಾಪು, ಹುಳಿ, ಪಲ್ಯ, ಉಪ್ಪಿನಕಾಯಿ, ಗೊಜ್ಜು ಮತ್ತೊಂದು ಮಗದೊಂದು ಹೀಗೆ ಅಡುಗೆಯಲ್ಲೆಲ್ಲ ಹಲಸು, ಮಾವು, ಬಾಳೆಕಾಯಿಗಳದ್ದೇ ಕಾರುಬಾರು.   
   ಬಹಳಷ್ಟು ಜನರಿಗೆ ಕಲ್ಪನೆಯೇ ಬರಲಿಕ್ಕಿಲ್ಲ, ಬರಬಳ್ಳಿಯಲ್ಲಿ ಪ್ರತಿಮನೆಯಲ್ಲಿಯೂ ದಿನದ ಇಪ್ಪತ್ತನಾಲ್ಕುಗಂಟೆ ದಬದಬನೆ  ಅಬ್ಬಿ ನೀರು ಸುರಿಯುತ್ತಿರುತ್ತಿತ್ತು. ಊರಿನಲ್ಲಿದ್ದ ವಾಸಂತಿಕೆರೆಯಿಂದ ಸೆಲೆಯೊಡೆದು ಬರುತ್ತಿದ್ದ ಶುದ್ಧ ನೀರು ಕಾಲುವೆಗಳ ಮೂಲಕ ಹಾದು ಅಡಿಕೆ ದಬ್ಬೆಯ ಹರಣಿಗಳ ಮೂಲಕ ಪ್ರತಿ  ಮನೆಗೆ ಸರಬರಾಜಾಗುವ ನೈಸರ್ಗಿಕ ವ್ಯವಸ್ಥೆ ಅಲ್ಲಿತ್ತು. ಆ ಅಬ್ಬಿಯ ಧಾರೆಗೆ ಮೈಕೊಟ್ಟು ಮೀಯುತ್ತಿದ್ದ ದಿನಗಳ ಹಿತವಾದ ನೆನಪು ನನಲ್ಲಿ ಈಗಲೂ ಇದೆ. ಹಾಗಾದರೆ ಅಲ್ಲಿ ಬಾವಿ, ಬೋರ್ವೆಲ್ ಏನೂ ಇರಲಿಲ್ವ ಅಂತ ಯೋಚಿಸಬೇಡಿ ಮತ್ತೆ..! ಭೂಮಿಯೊಡಲನ್ನ  ಸೀಳಿ ನೀರು ತರುವ ಯಾವ ಅಗತ್ಯವೂ ಅಲ್ಲಿರಲಿಲ್ಲ.
   
    ನನ್ನ ಬಾಲ್ಯದ ಆಟ, ಹುಡುಗಾಟ, ಮೆಚ್ಚಿನ ಬಸ್ಸಾಟ  ಎಲ್ಲ  ಆ ಹಸಿರಿನ ಮರಗಳ ನಡುವೆಯೇ ನಡೆಯುತ್ತಿತ್ತು. ನನ್ನಣ್ಣ, ಚಿಕ್ಕಮ್ಮನ ಮಗ, ಮಾವನ ಮಕ್ಕಳು ಹೀಗೆ ನನ್ನ ಜೊತೆಯೇ  ಬೆಳೆದ, ಬರಬಳ್ಳಿಯಲ್ಲಿ ನಲಿದ ಹಲವರಿದ್ದಾರೆ. ಅವರೆಲ್ಲರೂ ಆ ನಿಸರ್ಗದ ಸವಿಯುಂಡ ಭಾಗ್ಯಶಾಲಿಗಳು ಎನ್ನುತ್ತೇನೆ.  ಬರಬಳ್ಳಿಯ ಅಕ್ಕಪಕ್ಕ  ಬಾರೆ, ಕಳಚೆ , ಹೆಬ್ಬಾರ ಕುಂಬ್ರಿ, ಕೊಡಸಳ್ಳಿ , ವಡ್ಡಿ, ಸಾತೊಡ್ಡಿ  ಅಂತೆಲ್ಲ ಬೇರೆ ಬೇರೆ ಊರುಗಳಿದ್ದರೂ ನನಗೆ ಕಳಚೆ, ಸಾತೊಡ್ಡಿಯ  ಹೊರತಾಗಿ ಬೇರೆ ಯಾವ ಊರನ್ನೂ ನೋಡಿದ ನೆನಪು ಕಾಣಿಸುತ್ತಿಲ್ಲ.  ಚಿಕ್ಕವನಿದ್ದಾಗ ಅಮ್ಮನ ಗುಮ್ಮನಾಗಿದ್ದ ನನಗೆ ಹಾಗೆಲ್ಲ ಬೇರೆ ಊರುಗಳಿಗೆ ಹೋಗುವ ಪ್ರಸಂಗ ಬಂದದ್ದೇ ಕಡಿಮೆ. ಈ ವಿಷಯದಲ್ಲಿ ನನ್ನಣ್ಣ ನನಗೆ ಸಂಪೂರ್ಣ ತದ್ವಿರುದ್ದ. ಜೊತೆ ಸಿಕ್ಕಿದರೆ ಎಲ್ಲಿ ಬೇಕಾದರೂ ತಿರುಗುವ ನಂಬರ್ ಒನ್ ತಿರುಬಿಕ್ಕೆ ಆಗಿದ್ದ  ಅವನು.
     
ಆಧುನಿಕತೆಯ ಆಕ್ರಮಣವಾಗಿರದಿದ್ದ ಬರಬಳ್ಳಿಯಲ್ಲಿ  ಕರೆಂಟ್ ಸಂಪರ್ಕ ಕೆಲವರ ಮನೆಯಲ್ಲಿ ಇತ್ತು. ಮಣ್ಣಿನ ಗೋಡೆಯ ಮನೆಗಳೇ ಹೆಚ್ಚು.  ಜಗಲಿಯಲ್ಲಿ ಕುಳಿತುಕೊಳ್ಳಲು ಮಣ್ಣುಪೀಠ ಇರುವುದು ಸಾಮಾನ್ಯವಾಗಿತ್ತು. ಹಳೆಯದಾದ ನನ್ನ ಅಜ್ಜನ ಮನೆಯಲ್ಲಿ   ಮೊದಲೆಲ್ಲ ಕರೆಂಟ್ ಇರಲಿಲ್ಲ. ಆಮೇಲೆ ಯಾವಾಗಲೋ ಕರೆಂಟ್ ಬಂದ ನೆನಪು ನನಗೆ. ಹೊಗೆಯುಗುಳುತ್ತಿದ್ದ ಚಿಮಣಿದೀಪದಲ್ಲಿಯೇ ರಾತ್ರಿಗಳು ಕಳೆಯುತ್ತಿದ್ದವು‌. ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಒಂದು ಪಿಲಿಪ್ಸ್ ರೇಡಿಯೊ ಇತ್ತು, ಯಾವಾಗಲೂ ಅದು ' ಇದು ಆಕಾಶವಾಣಿ ಧಾರವಾಡ ಕೇಂದ್ರ' ಎನ್ನುತ್ತಿತ್ತು. ಹೊರಜಗತ್ತಿನ ಆಗು ಹೋಗುಗಳನ್ನು ತಿಳಿಯಲು ಇದ್ದದ್ದು ಆಕಾಶವಾಣಿಯ ವಾರ್ತೆಗಳು ಹಾಗೂ ಪ್ರದೇಶ ಸಮಾಚಾರಗಳು ಮಾತ್ರ.  
 ನಿಸರ್ಗ ಜೀವನವೇ ಇದ್ದ ಅಲ್ಲಿ  ಒಂದು ಕೈಮುಷ್ಟಿ ಗಾತ್ರದ ಕುರ್ಲಿ(ಏಡಿ)ಗಳು ಅಬ್ಬಿಯ ಆಸುಪಾಸಿನಲ್ಲೆಲ್ಲ ಆರಾಮಾಗಿ ಓಡಾಡುತ್ತಿದ್ದವು‌. ಆಗಾಗ ಮನೆಯೊಳಗೆ ಹಾವು, ಚೇಳು ನುಗ್ಗುವುದು ಸಾಮಾನ್ಯವಾಗಿತ್ತು. ಅವುಗಳನ್ನು ಕಂಡು ಹೌಹಾರುತ್ತಿದ್ದದ್ದು ಈಗಲೂ ನೆನಪಿದೆ ನನಗೆ. ಊರಿನ ಸುತ್ತಲೂ ಇದ್ದ ದಟ್ಟ ಕಾಡಿನಲ್ಲಿ ಹುಲಿ, ಕಾಡು ಕೋಣ, ನರಿ, ಹೆಬ್ಬಾವು, ಬೇರೆ ಬೇರೆ ಹಕ್ಕಿಪಕ್ಷಿಗಳು ವಾಸವಾಗಿದ್ದವು.
     ಊರಿನಲ್ಲಿದ್ದ ಗಣಪತಿ ದೇವಸ್ಥಾನ ( ಬರಬಳ್ಳಿಯ ಜನ ಅದಕ್ಕೆ ಮೊಠ ಎನ್ನುತ್ತಿದ್ದರು) ಊರಿನ ಕೇಂದ್ರಭಾಗವಾಗಿತ್ತು, ಬರಬಳ್ಳಿಗರ ಶ್ರದ್ಧಾಕೇಂದ್ರವಾಗಿತ್ತು.  ಅಲ್ಲಿ ನಡೆಯುತ್ತಿದ್ದ ಕಾರ್ತಿಕ ಮಾಸದ ರಾತ್ರಿ ಜರುಗುತ್ತಿದ್ದ ಕಾರ್ತಿಕ ಉತ್ಸವಕ್ಕೆ  ನನ್ನಜ್ಜನ ಮನೆಯಿಂದ ಹೋಗುತ್ತಿದ್ದರು. ರಾತ್ರಿ  ತೋಟದ ಮದ್ಯದ ದಾರಿಯಲ್ಲಿ ಬೆಳಕಿಗಾಗಿ 'ಸೂಡಿ' ( ಅಡಿಕೆ ಸೋಗೆಗೆ ಬೆಂಕಿ ಹಚ್ಚಿಕೊಂಡು ದಾರಿದೀಪವಾಗಿ ಬಳಸುವುದು) ಮಾಡಿಕೊಂಡು ಹೋಗುತ್ತಿದ್ದದ್ದು ಈಗಲೂ ನನ್ನ ಕಣ್ಣಮುಂದೆ ಕಟ್ಟಿದೆ.  ಮಳೆಗಾಲದ ಪ್ರಾರಂಭದ ತನಕ  ದೇವಸ್ಥಾನದವರೆಗೆ ವಾಹನಗಳು ಬರಬಹುದಾಗಿತ್ತು. ಮಳೆಗಾಲ ಪ್ರಾರಂಭವಾದೊಡನೆ  ಸಾತೊಡ್ಡಿಯ ಮುಂದೆ ಯಾವ ವಾಹನವೂ ಬರುತ್ತಿರಲಿಲ್ಲ. ಬರಬಳ್ಳಿಯವರು ಯಲ್ಲಾಪುರ ಹೋಗುವಾಗ ಸಾತೊಡ್ಡಿಯವರೆಗೆ ಬಂದೇ ಬಸ್ಸನ್ನ ಹತ್ತಬೇಕಿತ್ತು. ಮದ್ಯದಲ್ಲಿಯೇ ಮೈತುಂಬಿ ಹರಿಯುತ್ತಿದ್ದ ಕಾಳಿ ನದಿ ಹಾಗೂ  ಸಣ್ಣ ಹೊಳೆಯ ಸಂಗಮದ ಕಿರಿದಾದ ಪ್ರದೇಶದಲ್ಲಿ ಸರ್ಕಸ್ ಮಾಡುತ್ತಾ ದಾಟಬೇಕಿತ್ತು. ಹಾಗೆ ಭಯದಿಂದ ದಾಟುತ್ತಿದ್ದ ನೆನೆಪು ನನಗಿದೆ.
      ಸುಮಾರು 1996-97 ರ ಹೊತ್ತಿಗ ಕಾಳಿನದಿಗೆ ಕೊಡಸಳ್ಳಿ  ಎಂಬಲ್ಲಿ ಅಣೆಕಟ್ಟು  ನಿರ್ಮಾಣದ ಕೆಲಸ ಪ್ರಾರಂಭವಾಯಿತು. ಅಣೆಕಟ್ಟು ನಿರ್ಮಾಣವಾದರೆ ಕಾಳಿನದಿಯ ಹಿನ್ನೀರಿನಲ್ಲಿ ಬರಬಳ್ಳಿ ಮುಳುಗಡೆಯಾಗುತ್ತದೆ ಎಂದು  ಅಷ್ಟುದಿನ ಊರವರ ಮನಸ್ಸಿನಲ್ಲಿ ಆಡುತ್ತಿದ್ದ  ಗುಮ್ಮ ನಿಜವಾಯಿತು.  ಮುಳುಗಡೆಯವರ ಪುನರ್ವಸತಿಯಾಗಿ ನೀಡಿದ್ದ ಹೆಗ್ಗಾರಿನ ಕಡೆಗೆ ಒಂದೊಂದೇ ಕುಟುಂಬಗಳು ತೆರಳತೊಡಗಿದವು. ಇಲ್ಲಿಯ ಈ ಸಮೃದ್ಧ, ಸ್ವರ್ಗ ಸದೃಶ ಭೂಮಿಯನ್ನು ಬಿಟ್ಟು, ಹೆಗ್ಗಾರಿನ ಬೊಳು ಬೆಟ್ಟಗಳಲ್ಲಿ ಮತ್ತೊಮ್ಮೆ   ಜೀವನವನ್ನು ನೆಲೆ ನಿಲ್ಲಿಸುವ ಅನಿವಾರ್ಯತೆ ಅವರಿಗೆ  ಎದುರಾಗಿತ್ತು. ಸುಮಾರು 2002ನೇ ಇಸವಿಯವರೆಗೂ ನನ್ನ ಮಾವನೊಬ್ಬ ಬರಬಳ್ಳಿಯಲ್ಲಿಯೇ ಇದ್ದ. ಅವನ ಮನೆಯವರೆಗಿನ್ನೂ ನೀರು ಬಂದು ತಲುಪಿರಲಿಲ್ಲ. ಆ ಹೊತ್ತಿಗೊಮ್ಮೆ ನಾನು ಬರಬಳ್ಳಿಗೆ ಹೋಗಿದ್ದೆ. ಅದೇ ಕೊನೆ ಆ ನಂತರ ನಾನು ಬರಬಳ್ಳಿಗೆ ಹೋಗಿರಲೇ ಇಲ್ಲ.
  ಇತ್ತೀಚೆಗೆ  ಬರಬಳ್ಳಿಯನ್ನೊಮ್ಮೆ ನೋಡಬೇಕು ಅನ್ನಿಸುತ್ತಿತ್ತು. ಬೆಳೆದು ನಿಂತ ಜಂಜಡದ ಬದುಕಿನಲ್ಲಿ ಕಳೆದು ಹೋದ ಬಾಲ್ಯದ ದಿನಗಳ ಹಂಬಲವಾಗುತ್ತಿತ್ತು. ಹೀಗೆ ನನ್ನ ಮನಸ್ಸಿನಲ್ಲಿ ಬಂದ ವಿಚಾರ ವಿನಿಮಯವಾಗಿ ನನ್ನಣ್ಣ, ವಿನಯ( ಚಿಕ್ಕಮ್ಮನ ಮಗ),  ಶ್ರೀಕಾಂತ( ವಿನಯನ ಊರಿನವನು) ಬರಬಳ್ಳಿಗೆ ಹೊರಟೆವು ನನ್ನ ನ್ಯಾನೋ ಕಾರಿನಲ್ಲಿ. ಮನೆಯಿಂದ ನನಗೆ ಒಟ್ಟು 260 ಕಿ ಮಿ ಪ್ರಯಾಣ ಆಗುತ್ತಿತ್ತು. ಕಾನಲೆಯಿಂದ ಸಿದ್ದಾಪುರ, ಶಿರಸಿ, ಯಲ್ಲಾಪುರ ,ವಜ್ರಳ್ಳಿ, ಕಳಚೆ ಮಾರ್ಗವಾಗಿ ಬರಬಳ್ಳಿ ತಲುಪಿದೆವು. ಕಳಚೆಯಿಂದ ಬರಬಳ್ಳಿಯ ದಾರಿ ನನ್ನ ನ್ಯಾನೋಗೆ ಕಠಿಣ ಸವಾಲಾಗಿತ್ತು. ಸವಾಲನ್ನು ಎದುರಿಸಿ ನ್ಯಾನೋ ಗೆದ್ದಿತು.
  ನಾನು ಬಾಲ್ಯದಲ್ಲಿ  ಕಂಡಿದ್ದ ಬರಬಳ್ಳಿ ಈಗ ಇಲ್ಲ.  ಊರಿನ ಬಹುಪಾಲು ಮುಳುಗಿಹೋಗಿದೆ. ಸ್ವಲ್ಪ ಎತ್ತರದ ಭಾಗ ಉಳಿದಿದೆಯಾದರೂ ಜನರ ಸಂಪರ್ಕವೇ ಇಲ್ಲದ ಕಗ್ಗಾಡಾಗಿದೆ. ಹಾಗಿದ್ದರೂ ಇಲ್ಲಿ ಈಗಲೂ ವಾಸವಾಗಿರುವ ಬಾರೇ ಶಿವರಾಮ ಬಾವ ಹಾಗೂ  ಅವನ ತಂಗಿ 'ಬೆಟ್ಟದ ಜೀವಗಳೇ' ಆಗಿದ್ದಾರೆ.  ಹಳೆ ನೆನಪಿನ ಖುಷಿಯಲ್ಲಿ ಬರಬಳ್ಳಿಗೆ ಹೋಗಿ ನೋಡಿದೆ. ನಾನು ಹುಟ್ಟಿದ, ಆಟವಾಡಿದ, ಸುಂದರ ಬಾಲ್ಯವನ್ನು ಕಳೆದ ನನ್ನಜ್ಜನ ಮನೆ ಮುಳುಗಿಹೋಗಿ  ಯಾವ ಕುರುಹೂ ಇಲ್ಲದಂತಾಗಿದೆ. ಆ ಜಾಗದ ಸಮೀಪ ನಿಂತು ನೋಡಿದರೆ ಅದೆಷ್ಟೋ ಮನೆ, ಮರ ಮಟ್ಟಗಳನ್ನು ತನ್ನೊಳಗೆ ನುಂಗಿಕೊಂಡಿರುವ ಅಪಾರ ಜಲರಾಶಿ ಕಾಣಿಸುತ್ತದೆ. ನಾನು ಮೇಲೆಲ್ಲ ವರ್ಣಿಸಿದ್ದೆಲ್ಲ ಸುಳ್ಳು ಎನ್ನುವಂತೆ ಮಾಡುತ್ತದೆ. ನನ್ನಜ್ಜನ ಮನೆಯಿದ್ದ ಜಾಗದಿಂದ ಸ್ವಲ್ಪ ಮೆಲಕ್ಕೆ ನನ್ನ ಮಾವನ ಮನೆ ಇತ್ತು. ಪೂರ್ಣ ಅಲ್ಲಿಯವರೆಗೆ ಕಾಳಿನದಿಯ ಹಿನ್ನೀರು ತಲುಪುವುದಿಲ್ಲ ಹಾಗಾಗಿ ಮಾವನ ಮನೆ ಮುಳುಗಡೆಯಾಗಿಲ್ಲ. ಆದರೆ  ಮಾವನ ಮನೆಯ ಅಳಿದುಳಿದ ಕಂಬಗಳು, ಉದುರಿಬಿದ್ದ ಗೋಡೆಗಳು ಎಷ್ಟೋ ಶತಮಾನಗಳ ಹಿಂದೆ ಇಲ್ಲಿ ವಸತಿಯಿದ್ದಿತ್ತು ಎನ್ನುವ ಭ್ರಮೆಯನ್ನುಂಟುಮಾಡುತ್ತವೆ. 
    ಬಾಲ್ಯದದಿನಗಳು ಬರಬಳ್ಳಿಯಲ್ಲಿ ಮತ್ತೊಮ್ಮೆ ನೆನಪಾಗಬಹುದೆಂಬ ಆಸೆಯಿಂದ ಬಂದ ನನಗೆ  ಆ ಯಾವ ಸ್ಮೃತಿಯೂ ಗೋಚರಿಸಲಿಲ್ಲ. ನನ್ನೊಳಗಿನ ಸ್ಮೃತಿಗೆ ಆ ತರದ ಯಾವ ಹಂಗೂ ಇಲ್ಲವೆನ್ನಿ.  ಆದರೆ  ಬರಬಳ್ಳಿ ಏನಾಗಿದೆಯೆಂಬ  ವಾಸ್ತವದ ಅರಿವು ಚೆನ್ನಾಗಿ ಆಯಿತು. ಸಮೃದ್ಧವಾದ ಜೀವಂತ ಬರಬಳ್ಳಿ  ಈಗಿಲ್ಲ. ಎಲ್ಲೆಲ್ಲೂ ನೀರಿದೆ, ಆದರೆ ಬರಬಳ್ಳಿ ಬರಡಾಗಿದೆ.

ಮಂಗಳವಾರ, ಫೆಬ್ರವರಿ 20, 2018

ಜಿ ವಿ ಅತ್ರಿಯ ನೆನಪಿನಲ್ಲಿ...


ಗಣೇಶ ವಿಜಯ್ ಕುಮಾರ್ ಅತ್ರಿ ಎನ್ನುವ ಹೆಸರನ್ನು ಕೇಳಿದವರು ಅಷ್ಟೊಂದು ಇರಲಿಕ್ಕಿಲ್ಲ. ಆದರೆ ಅದೇ ಹೆಸರನ್ನೇ ಚಿಕ್ಕದಾಗಿ 'ಜಿ ವಿ ಅತ್ರಿ' ಅಂದ ತಕ್ಷಣ ಕನ್ನಡ ನಾಡಿನ ಸಂಗೀತ ಪ್ರೇಮಿಗಳ ಕಣ್ಮುಂದೆ ಎತ್ತರದ ನಿಲುವಿನ, ಹೊಳೆಯುವ ಕಂಗಳ,  ನಗುಮುಖದ ಆ ಯುವಕನ ಚಿತ್ರ ಹಾದು ಹೋಗುತ್ತದೆ.  ಅತ್ರಿಯವರ ಮಧುರ ಕಂಠದಿಂದ ಮೂಡಿಬಂದ ಹಾಡುಗಳೆಷ್ಟೋ ಕಿವಿಯಲ್ಲಿ ಅನುರಣನಗೊಳ್ಳುತ್ತವೆ.
      1964ರ ಮೇ 21ರಂದು ಜನಿಸಿದ ಅತ್ರಿ ಈಗ ನಮ್ಮೊಡನೆ ಇದ್ದಿದ್ದರೆ 53 ವರ್ಷದವರಾಗಿರುತ್ತಿದ್ದರು.  ಬಾಲ್ಯದಿಂದಲೇ ಸಂಗೀತದಲ್ಲಿ ಆಸಕ್ತಿಹೊಂದಿದ್ದ ಅತ್ರಿ ಸಂಗೀತ ಕ್ಷೇತ್ರದಲ್ಲಿ ಮಿಂಚಿನಂತೆ ಬಂದು ಮರೆಯಾಗಿ ಹೋದವರು.  2000ನೇ ಇಸವಿಯ ಎಪ್ರಿಲ್ 30ರಂದು ಶೃಂಗೇರಿಯಲ್ಲಿ ತುಂಗಾ ನದಿಯಲ್ಲಿ ಸ್ನಾನಮಾಡುವಾಗ ನಡೆದ ದುರಂತದಲ್ಲಿ ಅತ್ರಿ ಪತ್ನಿ ಹಾಗೂ ಪುತ್ರ ಸೇರಿದಂತೆ  ಕುಟುಂಬದ ಐದು ಜನ ಸದಸ್ಯರೊಂದಿಗೆ ಮುಳುಗಿ ಅಸುನೀಗಿದರು. ಈ ದುರಂತ ಸಂಭವಿಸುವಾಗ ಅವರಿಗಿನ್ನೂ 36ರ ಎಳೆ ವಯಸ್ಸು.  ಆದರೆ ಆ ಹೊತ್ತಿಗಾಗಲೇ ಅತ್ರಿಯವರ 200ಕ್ಕೂ ಹೆಚ್ಚು  ಆಡಿಯೋ ಕೆಸೆಟ್ಗಳು ಬಿಡುಗಡೆಯಾಗಿದ್ದವೆಂದರೆ ಅವರು ಅದಿನ್ನೆಂತಹ ಪ್ರತಿಭೆಯಾಗಿದ್ದರು! ಸಂಗೀತ ಜಗತ್ತಿಗಾದ ನಷ್ಟ ಅದಿನ್ನೆಂತದ್ದು!!
  ಬೆಂಗಳೂರಿನ ಶೇಷಾದ್ರಿ ಗವಾಯಿಯವರಲ್ಲಿ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಅಭ್ಯಸಿಸಿದ್ದ ಅತ್ರಿ ಸುಗಮ ಸಂಗೀತದ ಕ್ಷೇತ್ರದ ಕಡೆ ವಿಶೇಷ ಗಮನ ಹರಿಸಿದ್ದರು. ತಮ್ಮ ಧ್ವನಿಯಿಂದಾಗಿ ' ಪಿ ಬಿ ಎಸ್ ಅವರ ಮಾನಸ ಪುತ್ರ ' ಎಂದೇ ಪ್ರಸಿದ್ದರಾಗಿದ್ದ ಅವರು ಕೆಲವು ಚಲನ ಚಿತ್ರಗಳಿಗೂ ಹಿನ್ನೆಲೆ ಗಾಯಕರಾಗಿ ಹಾಡಿದ್ದರು. ಗಾಯಕರಾಗಿಯಷ್ಟೇ ಅಲ್ಲದೆ  ಸಂಗೀತ ಸಂಯೋಜಕರಾಗಿಯೂ ಅತ್ರಿ ತಮ್ಮ ಗುರುತನ್ನು ಮೂಡಿಸಿದ್ದಾರೆ.  ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪನವರು ಹಾಡಿದ ಹಾಡುಗಳ 'ಕರುನಾಡ ಕಂಪು' ಧ್ವನಿ ಸುರುಳಿಗೆ ರಾಗಸಂಯೋಜನೆ ನೀಡಿದವರೂ ಅತ್ರಿಯವರೇ. ಭಕ್ತಿಗೀತೆ, ಭಾವಗೀತೆ, ಜನಪದಗೀತೆ, ದಾಸರಪದಗಳು, ದೇಶಭಕ್ತಿಗೀತೆ ಹೀಗೆ ಹಲವು ಪ್ರಕಾರಗಳ ಹಾಡುಗಳಿಗೆ  ಜೀವ ತು0ಬಿದ್ದ ಅತ್ರಿ ತಮ್ಮದೇ ಆದ ' ಸಂಗೀತಗಂಗಾ' ಸಂಸ್ಥೆಯ ಮೂಲಕ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದರು. ಒಳ್ಳೆಯ ಲೇಖಕರೂ ಆಗಿದ್ದ ಅತ್ರಿಯವರ ಲೇಖನಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ದೂರದರ್ಶನದಲ್ಲಿ ಪ್ರಸಾರವಾದ  ಟಿ ಎನ್ ಸೀತಾರಾಮ್ ಅವರ ' ಮಾಯಾಮೃಗ' ಧಾರಾವಾಹಿಯಲ್ಲೂ ಅತ್ರಿ ಅಭಿನಯಿಸಿದ್ದಾರೆ.

    ಅದ್ಭುತ ಪ್ರತಿಭೆ ಅತ್ರಿಯವರನ್ನು ಕೊಟ್ಟ ದೇವರು ಅವರಿಗೆ ಆಯಸ್ಸು ಕೊಡಲು ಮಾತ್ರ ಮರೆತುಬಿಟ್ಟ. ಅವರದೇ ದನಿಯಲ್ಲಿ ' ಮೋಸ ಹೋದೆನಲ್ಲ ಸಕಲವು ವಾಸುದೇವ ಬಲ್ಲ' ಎನ್ನುವ ದಾಸರ ರಚನೆಯನ್ನು ಕೇಳುವಾಗ ಹೃದಯ ಭಾರವಾಗುತ್ತದೆ, ಕಣ್ಣುಗಳು ತೇವವಾಗುತ್ತವೆ.

ಅತ್ರಿಯವರು ಹಾಡಿದ ಕೆಲವು ಕಾಡುವ ಹಾಡುಗಳು:
* ಏಳೆನ್ನ ಮನದನ್ನೇ ಏಳೂ ಮುದ್ದಿನ ಕನ್ನೆ
* ಪ್ರಕೃತಿಯಂತೆ ಕವಿಯ ಮನಸು ವಿಫುಲ ರೂಪ ಧಾರಿಣೀ
* ಹಾಡು ಹಳೆಯದಾದರೇನು ಭಾವ ನವನವೀನ
* ಮರೆಯಬೇಡ ಮನವೆ ನೀನು ಹರಿಯ ಸ್ಮರಣೆಯ
* ಮೂಡಲ್ ಕುಣಿಗಲ್ ಕೆರೇ
* ಉತ್ತಮರ ಸಂಗ ಎನಗಿತ್ತು ಸಲಹೋ
* ಅಂಬಿಗ ನಾ ನಿನ್ನ ನಂಬಿದೇ
* ಎಲ್ಲೋ ದೂರದಿ ಜಿನುಗುವ ಹನಿಗಳೇ
* ಹೊನ್ನು ತಾ ಗುಬ್ಬೀ ಹೊನ್ನು ತಾ...............................................................................

ಶುಕ್ರವಾರ, ಜನವರಿ 12, 2018

ಕಳೆದು ಹೋಯಿತು..

ಅಂದು ತಾಷ್ಕಂಟಿನಲಿ ಕಳೆದುಕೂಂಡೆವು ನಾವು
ಅತಿ ವಿರಳ, ಬಹು ಸರಳ ರತ್ನವೊಂದ.
ವರುಷ ಐವತ್ತೊಂದು ಕಳೆದು ಹೋದರು ಕೂಡ 
ಪಡೆಯದಾದೆವು ಮರಳಿ ಅಂತದ್ದೊಂದ.

ಸಾಮಾನ್ಯರಲ್ಲಿ ಅತಿ ಸಾಮಾನ್ಯನಾಗಿ
ಎತ್ತರದ ಪದವಿಯಲಿ ಈ ಜನಾನುರಾಗಿ
ಕುಳಿತು ಆಳಿದರು ಹದಿನೇಳು ತಿಂಗಳು
ನೆನಪಾಗಿ ಅರಳುವುದು ಸಂತಸದಿ ಕಂಗಳು

ಶತ್ರುಗಳು ಬಂದು ಮುತ್ತಿಗೆಯ ಹಾಕಿದರು
ಒಂದಿನಿತು ಕೂಡ ಅಳುಕಲಿಲ್ಲ ಇವರು
ಆಯುಧಕೆ ಆಯುಧದೆ ಕೊಡುವೆವುತ್ತರವೆಂದು
ಸಾರಿದರು ಅತಿಘೋರ ಸಮರವಂದು

ದೇಶದೊಳಿತಿಗೆ ಮಾಡಿ ಉಪವಾಸವೆಂದು
ತಮ್ಮಿಂದಲೇ ಅದನು ಜಾರಿಯಲಿ ತಂದು
ಗೆದ್ದರು ದೇಶ ವಾಸಿಗಳ ಹೃದಯ
ಎಂದೆಂದಿಗೂ ಅದುವೆ ಅವರಾಲಯ

ವಾಮನಾಕಾರದಲಿ ಕಣ್ಣ ಕೋರೈಸುವುದು
ಸರಳತೆಯ ಹಿಂದಿರುವ ದಿವ್ಯ ಪ್ರಕಾಶ
ಪಾದಕೆರಗಿ ಒಮ್ಮೆ ನಮಿಸಬೇಕಿದೆ ಅದಕೆ
ಎಂದಾದರೊಂದುದಿನ ಸಿಕ್ಕರವಕಾಶ.

( ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ೫೨ನೇ ಪುಣ್ಯ ತಿಥಿ: ದಿನಾಂಕ ೧೧-೦೧-೨೦೧೮)

ಮಂಗಳವಾರ, ಡಿಸೆಂಬರ್ 5, 2017

ಕಾಲ-ಯಾನ

ಕಣ್ಣಿಗೆ ಕಾಣದೆ ಸಾಗುತಲಿರುವ
ಅದೃಶ್ಯ ಪಯಣಿಗ ಕಾಲ
ಸಾಗಿದೆ ಇಲ್ಲಿಂದಲ್ಲಿಗೆ ಆದರೂ
ಇಲ್ಲ ಕಾಲೂ ಬಾಲ.

ನೂರಾಸೆಗಳ ಕುದುರೆಯ ಹತ್ತಿ
ಹಿಡಿತವೆ ಇಲ್ಲದೆ ಸಾಗುತಲಿಹೆವು
ಸರಿಯುತಲಿಹ ಈ ಕಾಲದ ಜೊತೆಯಲೆ
ಎತ್ತೆತ್ತೆತ್ತಲೊ ಹೋಗುತಲಿಹೆವು.

ಕಾಲದ ಜೊತೆಯಲೆ ಕಾಲವ ಕಳೆದು
ಕಳೆದೇ ಹೋದರೂ ನಾವು
ಈ ಕಾಲದ ಕಾಲಿಗೆ ಸುಸ್ತೂ ಇಲ್ಲ
ಕಾಡುವುದಿಲ್ಲ ನೋವು

ನಿಲ್ಲದೆ ಸಾಗುತ ಹೋಗುವುದೆಲ್ಲಿಗೆ ?
ನಿಲ್ಲಯ್ಯ ನೀ ಕೊಂಚ
ಎಂದರೂ ಕಾಲಕೆ ನಿಲುಗಡೆಯಿಲ್ಲ
ಯಾಕೋ ಈ ದಾವಂತ!?

ಮಂಗಳವಾರ, ಜುಲೈ 11, 2017

ಎದೆಯೊಳಗಿನ ಮಳೆ.....

ಭೋರ್ಗರೆವ ಮಳೆ ನನ್ನೊಳಗೆ
ಬೆಚ್ಚನೆ ಮುಚ್ಚಿಹ ಪದರನು ಸಡಿಲಿಸಿ
ಒಳಗಣ ನೆನಪನು ಕೆದಕುತಿದೆ
ನೂರಾಸೆಯ ಒಡಲನು ತಟ್ಟುತಿದೆ

ಭಿರುಬೀಸಿನ ಈ ಮಳೆಯ ಆರ್ಭಟಕೆ
ಮನದ ಸಂಯಮವೆ ಹಾರುತಿದೆ
ಸಶಕ್ತವಲ್ಲದ ಕದವನು ಒಡೆದು
ಮನದೊಳಗೆಯೆ ಜಲ ನುಗ್ಗುತಿದೆ

ತಲೆ ಎತ್ತಿದ ಹಳೆ ನೆನಪುಗಳೆಲ್ಲ
ಹೊಸದೆಂಬಂತೆಯೆ ತೋರುತಿವೆ
ಬಣ್ಣ ಬಣ್ಣದಲಿ ಕಂಗೊಳಿಸುತ ಇವು
ರಂಗಿನ ಲೋಕವ ಸೃಷ್ಟಿಸಿವೆ

ನೆನಪುಗಳಾಳದ ಬೇರಿನ ಅಂಚಲಿ
ಆಸೆಗಳೆಷ್ಟೋ ಚಿಮ್ಮುತಿವೆ
ಚಿಮ್ಮುವ ಆಸೆಯ ಹೊಮ್ಮುವ ಪ್ರವಾಹ
ನನ್ನನೆ ಎಲ್ಲಿಗೊ ಒಯ್ಯುತಿದೆ.