'ಹಲೋ.. ನಾನು ಮ್ಯಾನೇಜರ್.... ' (ಕಥೆ)

ಸೂರ್ಯನ  ಕಿರಣಗಳ  ಝಳ  ತೀವ್ರತೆಯನ್ನು  ಪಡೆಯುತ್ತಿತ್ತು. ಕಾರು,  ಬಸ್ಸು,  ಲಾರಿ,  ಬೈಕು   ಅದು ಇದು  ಅಂತ  ವಾಹನಗಳೆಲ್ಲ  ಕೀ ಕೀ... ಪೊಂ ಪೊಂ.... ಫೆ  ಫೆ  ಹೀಗೆ  ಬೇರೆ  ಬೇರೆ  ರೀತಿಯಲ್ಲಿ  ಕಿರುಚುತ್ತಾ  ಅತ್ತ  ಇತ್ತ  ಸಾಗುತ್ತಿದ್ದವು.  ಜನಗಳು   ಯಾವ ಯಾವುದೋ  ಕೆಲಸದ  ಗಡಿಬಿಡಿಯಲ್ಲಿ  ಹೆಜ್ಜೆ  ಹಾಕುತ್ತಿದ್ದರು. ಅಂಗಡಿ  ಮುಂಗಟ್ಟುಗಳು  ತಮ್ಮ  ತಮ್ಮ  ವ್ಯಾಪಾರದಲ್ಲಿ  ಮುಳುಗಿದ್ದವು.    ಪ್ರದೇಶವೆಲ್ಲ  ಅತ್ಯಂತ  ಜೀವಂತಿಕೆಯಿಂದ,ಇಂದಿನ  ಬದುಕಿನ  ನಾಗಾಲೋಟಕ್ಕೆ  ಉದಾಹರಣೆಯಾಗಿ  ಕಂಡುಬರುತ್ತಿತ್ತು.  ಪಟ್ಟಣಗಳಲ್ಲಿ  ಇದು  ಜೀವನದ  ಸಹಜರೀತಿ.  ಈ  ಗಡಿಬಿಡಿಯ  ನಡುವೆ    ಪದೇ ಪದೇ  ಬೆವರುತ್ತಿದ್ದ  ಮುಖವನ್ನು  ತನ್ನ  ಸೆರಗಿನಿಂದ  ಒರೆಸಿಕೊಳ್ಳುತ್ತ,   ಸಾಗುವ  ವಾಹನಗಳ  ಪೈಪೋಟಿಗೆ ಬೆದರಿದಂತೆ  ರಸ್ತೆಯಂಚಿಗೆ  ನಿದಾನವಾಗಿ  ನಡೆದುಬರುತ್ತಿದ್ದವಳು  ಸುಶೀಲಮ್ಮ.     ಮನೆಯಿಂದ  10 ನಿಮಿಷ ದೂರ   ನಡೆದು  ಬರುವ  ಈ  ದಾರಿ  ಆಕೆಗೆ  ಹೊಸತೇನಲ್ಲ.  ಅದೆಷ್ಟು ಬಾರಿ  ಈ  ದಾರಿಯಲ್ಲಿ  ನಡೆದಿದ್ದಳೋ  ಏನೋ.. !?.  ಆದರೆ ಈಗ   ಇಳಿಮುಖದ  ಪ್ರಾಯ,  ಸ್ಥೂಲವಾಗುತ್ತಿದ್ದ   ದೇಹ   ಆಕೆಯ  ನಡಿಗೆಯ  ವೇಗವನ್ನು  ಕುಗ್ಗಿಸಿವೆ,  ಸುಸ್ತನ್ನು  ಹೆಚ್ಚಿಸಿವೆ .  ಈಚೀಚೆಗೆಲ್ಲ ಕೆಲವು  ಹೆಜ್ಜೆ ನಡೆಯುತ್ತಿದ್ದಂತೆ  ಏದುಸಿರು  ಪ್ರಾರಂಭವಾಗುತ್ತಿದ್ದರೂ  ಆಕೆ  ರಿಕ್ಷಾವನ್ನೋ,  ಮತ್ತೇನನ್ನೋ  ಬಳಸುವ  ಅಭ್ಯಾಸದವಳಲ್ಲ.  ಮೊದಲಿನಿಂದಲೂ  ನಡಿಗೆಯೇ  ಅಭ್ಯಾಸವಾಗಿರುವುದರಿಂದ  ಇಲ್ಲಿಂದಿಲ್ಲಿಗೆ  ಯಾಕೆ  ಸುಮ್ಮನೆ  ಆಟೋ ರಿಕ್ಷಾಕ್ಕೆ  ಖರ್ಚು  ಮಾಡಬೇಕು?   ಅನ್ನುವುದು  ಆಕೆಯ  ಅಭಿಪ್ರಾಯ.  ಹಾಗೆ  ಹೆಜ್ಜೆ  ಹಾಕುತ್ತಲೇ  ಬಸ್ ಸ್ಟಾಂಡ್  ಪಕ್ಕದ  ಎ ಟಿ ಎಂ   ಎದುರಿಗೆ  ಬಂದು ನೋಡಿದರೆ  ನಾಲ್ಕು  ಜನರ  ಕ್ಯೂ  ಇತ್ತು.  ನಿದಾನವಾಗಿ ಹೋಗಿ   ನಾಲ್ಕು  ಜನರ  ಹಿಂದೆ  ಐದನೆಯವಳಾಗಿ  ನಿಂತಳು.
                   *******
          ಮೊದಲಿನಿಂದಲೂ  ಹೀಗೆ  ಪೇಟೆಗೆ  ಬಂದು ವ್ಯವಹಾರ  ಮಾಡಿಕೊಂಡು  ಹೋಗುವುದು   ಸುಶೀಲಮ್ಮನದೇ  ಕೆಲಸ.    ಗಂಡನಿಗೆ  ಪಾರ್ಶ್ವವಾಯು  ಆಗಿದ್ದ ಕಾರಣ   ಹೊರಗೆ  ಹೋಗಿ  ಕೆಲಸ  ಮಾಡಿಕೊಂಡು  ಬರುವಷ್ಟೆಲ್ಲ   ಸಶಕ್ತವಾಗಿರಲಿಲ್ಲ ಆತ .     ಅಲ್ಲಿಂದಿಲ್ಲಿಗೆ  ನಿದಾನವಾಗಿ  ಹೆಜ್ಜೆ  ಹಾಕಬಲ್ಲವನಾಗಿದ್ದನಷ್ಟೆ. ಮದುವೆಗಿಂತ  ಮೊದಲೇ ಅವನ   ಪರಿಸ್ಥಿತಿ  ಹೀಗಿದ್ದರೂ ಅವಳು  ಅವನನ್ನು  ಮದುವೆಯಾಗಿದ್ದಳು.  

             ಅಂದಿನ  ಕಾಲದಲ್ಲಿ   ಹೆಣ್ಣು ಮಕ್ಕಳ  ಮದುವೆ  ಎಂಬುದು  ತಂದೆ ತಾಯಿಗಳ  'ಜೀವನದ  ದೊಡ್ಡ  ಸಾಧನೆ'  ಎನ್ನುವಂತಿತ್ತು.  ಹುಡುಗ  ಸಿಕ್ಕಿದರೆ  ಸಾಕು  ಎಂದು  ಹೆಣ್ಣು ಹೆತ್ತವರು  ಕಾಯುತ್ತಿದ್ದ  ಸಮಯ.  ಅದರಲ್ಲೂ  ಸುಶೀಲಮ್ಮ ಅಕ್ಕ  ತಂಗಿಯರು  ನಾಲ್ಕು  ಜನ. ಆಕೆಯ  ಹಿಂದೆ  ಇನ್ನೂ ಮೂವರು ಇದ್ದರು.ತಂದೆ  ಇಲ್ಲ.   ಈ  ನಾಲ್ಕು  ತಂಗಿಯರ  ಜವಾಬ್ದಾರಿ  ಅವರ  ಅಣ್ಣನ  ಮೇಲೆಯೇ  ಇತ್ತು.  ಇಂತಹ  ಪರಿಸ್ಥಿತಿಯಲ್ಲಿ  ಆಕೆಗೆ  ಸಿಕ್ಕಿದ  ಹುಡುಗನಿಗೆ  ಪಾರ್ಶ್ವ ವಾಯು  ಆಗಿದೆ  ಎನ್ನುವುದು  ಅಷ್ಟೊಂದು  ದೊಡ್ಡ  ಸಂಗತಿ  ಆಗಲಿಲ್ಲ.  ಅವನಿಗೆ   ಆಸ್ತಿ  ಇದೆ.  ಜೀವನಕ್ಕೇನೂ  ತೊಂದರೆ  ಇಲ್ಲ  ಎನ್ನುವುದು  ನಿರ್ಣಾಯಕವಾಗಿ , ಮದುವೆ  ಆಯಿತು.

          ಸುಶೀಲಮ್ಮ  ಮದುವೆಯಾದ  ಕೆಲವು  ದಿನಗಳಲ್ಲಿ   ಎಲ್ಲಾ  ಕಡೆ  ಆಗುವಂತೆ  ಹಿಸ್ಸೆ  ಆಗಿ  ಅವಳ  ಬಾವಂದಿರೆಲ್ಲ  ತಮ್ಮ  ತಮ್ಮ  ಪಾಲು  ಅಂತ  ಪಡೆದುಕೊಂಡು,  ತಮ್ಮ  ಸಂಸಾರವನ್ನು  ಪ್ರತ್ಯೇಕ  ಮಾಡಿಕೊಂಡು,  ಹಳೆಯ  ಮನೆಯನ್ನು  ಸುಶೀಲಮ್ಮನ  ಗಂಡನ  ಪಾಲಿಗೆ  ಬಿಟ್ಟು  ಹೋಗಿಬಿಟ್ಟರು. ಆಗ  ಒಮ್ಮೆಲೆ  ಸುಶೀಲಮ್ಮನಿಗೆ  ಸಂಸಾರದ  ನೊಗದ ಭಾರದ ಅನುಭವ ಆಯಿತು.  ನಿಧಾನವಾಗಿ   ಆಕೆ  ಅದಕ್ಕೆ  ಹೊಂದಿಕೊಂಡರು.  'ಹೋದ  ಮನೆಯಲ್ಲಿ  ಹೊಂದಿಕೊಂಡು  ಹೋಗು,  ತವರು  ಮನೆಗೆ  ಕೆಟ್ಟ  ಹೆಸರು  ತರಬೇಡ. ಅಣ್ಣ  ಎಷ್ಟು  ಕಷ್ಟಪಟ್ಟು  ನಿಮ್ಮನ್ನ  ಸಾಕಿದ್ದಾನೆ.  ತಂದೆಯ  ಜಾಗದಲ್ಲಿ  ಅವನು  ನಿಂತಿದ್ದಾನೆ.  ನಿನ್ನ  ನಂತರ ನಿನ್ನ  ತಂಗಿಯರು  ಇದ್ದಾರೆ.  ಅವರ  ಮದುವೆ  ಮಾಡಿ ,  ನಿನ್ನ  ಅಣ್ಣನಿಗೂ  ಮದುವೆ  ಆಗಬೇಕು. ಹೊಂದಿಕೊಂಡು  ಹೋಗು  ಮಗಳೇ' ಅಂತ  ತನ್ನ  ತಾಯಿ  ಕಣ್ಣೀರಿಡುತ್ತ  ಹೇಳಿ  ಕಳಿಸಿದ್ದು  ಸುಶೀಲಮ್ಮ  ಮರೆಯಲಿಲ್ಲ.  ಆದರೆ  ಈ  ವಿಷಯವನ್ನು  ತಾಯಿಯೇ  ಹೇಳಬೇಕೆಂದಿರಲಿಲ್ಲ.  ಸುಶೀಲಮ್ಮನಿಗೆ  ಇವೆಲ್ಲ  ವಿಷಯವು  ಗೊತ್ತಿದ್ದದ್ದೇ.  ಹಾಗಾಗಿ  ಗಂಡನ  ಮನೆಯಲ್ಲಿ  ಯಾವ  ಪರಿಸ್ಥಿತಿ  ಇದ್ದರೂ  ತವರಿನವರ  ಎದುರು  ಯಾವಾಗಲೂ  ತಾನು  ಸಂತೋಷವಾಗಿರುವಂತೆಯೇ  ತೋರಿಸುತ್ತಿದ್ದಳು.  ಅಂದಿನ  ದಿನಗಳಲ್ಲಿ  ಹೆಣ್ಣುಮಕ್ಕಳಲ್ಲಿ  ಕಂಡು  ಬರುತ್ತಿದ್ದ  ಈ  ಸಹಜತೆ  ಸುಶೀಲಮ್ಮನಲ್ಲೂ  ಇತ್ತು.

    ಹಾಗೆಂದ  ಮಾತ್ರಕ್ಕೆ  ಅವಳು  ಗಂಡನ  ಮನೆಯಲ್ಲಿ  ಕಣ್ಣೀರಿನಲ್ಲಿ  ಕೈ  ತೊಳೆಯುವ  ಪ್ರಸಂಗ  ಇರಲಿಲ್ಲ.  ಗಂಡ  ಹೆಂಡಿರಿಬ್ಬರು  ಎಲ್ಲರಂತೆ  ಸರಸ,  ವಿರಸ,  ಮುನಿಸು , ಪ್ರೀತಿ  ಇವೆಲ್ಲದರೊಂದಿಗೆ  ರಸಭರಿತ  ಸಂಸಾರ ನಡೆಸುತ್ತಿದ್ದರು.  ಆದರೆ  ಅವಳ  ಗಂಡ  ಎಲ್ಲ ಗಂಡಸರಂತೆ   ಹೊರಹೋಗಿ   ದುಡಿಯಲಾರದ  ಕಾರಣ  ಗಂಡಸಿನಂತೆ  ಹೊಲ ಗದ್ದೆಗಳಲ್ಲಿ  ದುಡಿಯುವ,  ಮನೆಯ  ಬೇಕು ಬೇಡಗಳನ್ನು  ನೋಡಿಕೊಳ್ಳುವ,  ಪೇಟೆ ಪಟ್ಟಣ  ಸುತ್ತಿ  ವ್ಯವಹಾರ  ಮಾಡುವ  ಕೆಲಸವೆಲ್ಲ  ಸುಶೀಲಮ್ಮನದೇ  ಆಗಿತ್ತು.  ಮೊದ ಮೊದಲು  ಸ್ವಲ್ಪ  ಕಷ್ಟವೆನಿಸಿದರೂ  ಸುಶೀಲಮ್ಮ  ನಿದಾನವಾಗಿ  ಕಲಿತುಕೊಂಡಳು. ಸ್ವಲ್ಪದಿನದಲ್ಲಿ  ಮಗ ದಿನೇಶ   ಹುಟ್ಟಿದ.  ಅವನ ಜವಾಬ್ದಾರಿಗೂ  ಅವಳೇ ದಿಕ್ಕಾಗಿದ್ದಳು. 

              ಮೊದಲೆಲ್ಲ  ಪೇಟೆಗೆ  ಬಂದರೆ   ಬ್ಯಾಂಕಿನ ಅಕೌಂಟಿನಲ್ಲಿ  ಇರುವ  ಐವತ್ತು-ನೂರು  ರೂಪಾಯಿ  ತೆಗೆಯಲು ,  ಮನೆಯಲ್ಲಿ  ಇರುವ  ಚಿಕ್ಕ  ಮಗು  ಹಾಗೂ  ಗಂಡನ  ಬಗ್ಗೆ  ಕಸಿವಿಸಿ  ಪಡುತ್ತಾ   ಸಾಲಿನಲ್ಲಿ  ತಾಸುಗಟ್ಟಲೆ  ಕಾಯಬೇಕಾಗಿರುತ್ತಿತ್ತು.   ಮನೆಯ ಕಡೆ  ಏನಾಯಿತೋ,  ಎಷ್ಟು  ಬೇಗ  ಮನೆ ಕಡೆ  ಹೋದೆನೋ  ಎಂದು  ಚಡಪಡಿಸುತ್ತಾ  ಉದ್ದನೆಯ  ಸರತಿ  ಸಾಲಿನಲ್ಲಿ  ನಿಂತು  ತೊಳಲುತ್ತಿದ್ದ  ಆ  ದಿನಗಳನ್ನು  ನೆನಪಿಸಿಕೊಂಡಾಗ   ' ಈಗೆಲ್ಲ ಎಷ್ಟು ಆರಾಮು ' ಎಂದು  ಆಕೆ  ಅಂದುಕೊಳ್ಳುತ್ತಿದ್ದಳು.   ಇವತ್ತು  ಎಲ್ಲಾ  ಸೌಲಭ್ಯಗಳು  ಬಂದು ಬಿಟ್ಟಿವೆ,  ಬಸ್ಸು  ಕಾರು  ಬೈಕು  ಅಂತ  ಆರಾಮವಾಗಿ  ಪ್ರಯಾಣ  ಮಾಡಬಹುದು.  ಹಿಂದಿನಂತೆ  ನಡೆದುಕೊಂಡೋ,  ಗಾಡಿ  ಕಟ್ಟಿಕೊಂಡೋ  ಹೋಗುವ  ಪ್ರಮೇಯವಿಲ್ಲ.  ಬೇರೆಯವರೊಂದಿಗೆ  ಮಾತನಾಡಲು  ಫೋನ್  ತೆಗೆದುಕೊಂಡು  ನಂಬರ್  ಒತ್ತಿದರಾಯಿತು.ಬೇರೆ  ಊರಿನಲ್ಲಿ  ಇರುವ  ಮಗ,  ಸೊಸೆ  ಮೊಮ್ಮಕ್ಕಳನ್ನ    ನೋಡಬೇಕೆನಿಸಿದರೆ  ವಿಡಿಯೋ ಕಾಲನ್ನು  ಮಾಡಬಹುದು.  ಕುಳಿತಲ್ಲಿಂದಲೇ  ಟಿ ವಿ ಚಾನೆಲ್ಲನ್ನು  ಬದಲಾಯಿಸಿ  ನೋಡಬಹುದು.   ಈ  ಎಲ್ಲಾ  ಸೌಲಭ್ಯಗಳು   'ಎಲ್ಲಾ  ಎಷ್ಟು  ಸುಲಭವಾಗಿ ಹೋಯ್ತು'  ಅಂತ ಸುಶೀಲಮ್ಮನಿಗೆ  ಅನಿಸುವಂತೆ ಮಾಡಿದ್ದವು.
                 ************* 

           ' ಅಮ್ಮಾ,  ಬನ್ನಿ.... ' ಎನ್ನುತ್ತಾ  ಅಲ್ಲಿದ್ದ  ವಾಚ್ ಮನ್  ಎ ಟಿ  ಎಮ್ಮಿನ  ಬಾಗಿಲು  ಸರಿಸಿದ. ಮೊದ  ಮೊದಲು  ಅವನ  ಸಹಾಯದಿಂದ  ದುಡ್ಡನ್ನ  ಎಟಿಎಂನಿಂದ ತೆಗೆಯುತ್ತಿದ್ದ  ಸುಶೀಲಮ್ಮ,  ಈಗ  ತಾನೇ  ಮಶಿನ್ನಿಗೆ  ಕಾರ್ಡ್  ಹಾಕಿ  ಪಿನ್  ಹೊಡೆದು,  ಎಷ್ಟು  ಹಣ ಬೇಕೋ  ಅಷ್ಟನ್ನ  ನಮೂದಿಸಿ ಹಣ ಮಶಿನ್ನಿನಿಂದ  ಹೊರ   ಬಂದೊಡನೆ   ಎಷ್ಟಿದೆ  ಎಂದು  ಎಣಿಸಿಕೊಂಡು  ಬರುತ್ತಿದ್ದಳು.  ಜೊತೆಗೆ  ಮಷಿನ್ನಿನಲ್ಲಿ ಬಂದ  ಚೀಟಿಯನ್ನು  ತೆಗೆದುಕೊಂಡು  ಬರುತ್ತಿದ್ದಳು.

        ಇಂದು  ಕೂಡ  ಕಾರ್ಡನ್ನ  ಹಾಕಿ  10000 ಅಂತ  ನಂಬರ್  ಟೈಪ್ ಮಾಡಿದಳು. ಎಟಿಎಂ  ಮಷಿನ್  'Insufficient  Balance' ಎಂದು  ತೋರಿಸಿತು.   ಅವಳು  ಮತ್ತೆ   ಪ್ರಯತ್ನಿಸಿದರೂ  ಹಾಗೆಯೇ ಬಂತು.  ಅವಳಿಗೆ  ಸಣ್ಣಗೆ  ಗಾಬರಿಯಾಗತೊಡಗಿತು.  ಮಗ  ದಿನೇಶ  ಅಪ್ಪನ  ಔಷಧಿಗೆ  ಅಂತ ಅವಳ  ಅಕೌಂಟಿಗೆ   15000 ರೂಪಾಯಿ  ಹಾಕಿ ಫೋನ್  ಮಾಡಿ ತಿಳಿಸಿದ್ದ.  ಈಗ  ಹಣ ಬರುತ್ತಾ ಇಲ್ಲ... !

         ಅವಳ ರೀತಿಯನ್ನ  ಗಮನಿಸಿದ   ವಾಚ್ ಮನ್  'ಅಮ್ಮಾ,  ನಿಮ್  ಅಕೌಂಟಿನಲ್ಲಿ  ಅಷ್ಟು  ಹಣ   ಇಲ್ಲ....' ಎಂದ. ಸುಶೀಲಮ್ಮ  ಕಸಿವಿಸಿಯಿಂದ  ಚಡಪಡಿಸುತ್ತಾ  ಕೈ ಕೈ  ಹಿಸುಕಿಕೊಳ್ಳುತ್ತಿದ್ದಳು. ಮುಖ ಬೆವರತೊಡಗಿತು.  ಆದರೆ  ಕೆಲವು  ಕ್ಷಣಗಳಲ್ಲಿ  ಅವಳ  ಮುಖ ಭಾವ  ಬದಲಾಯಿತು.

          'ಮರೆತೇ  ಹೋಗಿತ್ತು...  ಮ್ಯಾನೇಜರ್  ನಿನ್ನೆ  ಫೋನ್  ಮಾಡಿದ್ದರಲ್ಲ...' ಎಂದುಕೊಳ್ಳುತ್ತ  ಎಟಿಎಮ್ಮಿನಿಂದ  ಹೊರ  ಬಂದಳು.  ಪಕ್ಕದಲ್ಲೇ  ಇದ್ದ  ಬ್ಯಾಂಕಿನ  ಒಳಗೆ  ಹೆಜ್ಜೆ  ಹಾಕಿದಳು.   ವಾಚ್  ಮನ್  ಮತ್ತೊಬ್ಬರನ್ನ  ಎಟಿಎಮ್ಮಿನ  ಒಳಗೆ  ಕಳುಹಿಸಿದ.

            'ನಮಸ್ಕಾರ  ಮ್ಯಾನೇಜರ್ರೆ..... '
            ತಲೆಯೆತ್ತಿ  ನೋಡಿದ  ಮ್ಯಾನೇಜರ್  'ನಮಸ್ಕಾರ.... ಹೇಳಿ...  ಏನು  ವಿಷಯ...?!'
             ' ಅದು.....  ನಿನ್ನೆ  ನೀವು  ಫೋನ್  ಮಾಡಿದ್ರಲ್ಲ...  ನನ್ನ  ಎಟಿಎಂ  ಕಾರ್ಡ್  ಹಾಳಾಗಿದೆ,  ಸರಿ  ಮಾಡ್ಬೇಕು   ಅಂತ.... ಇನ್ನೂ  ಸರಿ  ಆಗ್ಲಿಲ್ವ...?  ನಂಗೆ ಸ್ವಲ್ಪ  ದುಡ್ಡು ತೆಗಿಬೇಕಿತ್ತು....' ಎನ್ನುತ್ತಾ  ಮ್ಯಾನೇಜರ್  ಮುಖ  ನೋಡಿದಳು.

              ಮ್ಯಾನೇಜರ್  ಕಣ್ಣು  ಕಿರಿದು ಮಾಡಿ  ಆಕೆಯನ್ನೇ  ನೋಡಿದ. 'ಏನು....ಹೇಳ್ತಿದೀರಮ್ಮ.... ನಾನು ಯಾವಾಗ  ಫೋನ್  ಮಾಡಿದ್ದೆ?  ಹಾಗೆಲ್ಲ  ನಾನು   ಫೋನ್  ಮಾಡಲ್ಲಮ್ಮ...'

               ಫೋನ್  ಮಾಡಿದ್ದೇ   ಸುಳ್ಳು  ಅನ್ನುತ್ತಿರುವ  ಮ್ಯಾನೇಜರ್ರನ ರೀತಿ  ಕಂಡು  ಸುಶೀಲಮ್ಮನಿಗೆ  ಸಿಟ್ಟು ಬಂತು. ' ನಿನ್ನೆ  ಫೋನ್  ಮಾಡಿದ್ರಲ್ಲ....  ಎ ಟಿ ಎಂ  ಕಾರ್ಡು  ಹಾಳಾಗಿದೆ....  ಸರಿ ಮಾಡ್ಬೇಕು  ಅಂತ  ನಂಬರ್ನೆಲ್ಲ  ತಗೊಂಡ್ರಲ್ಲ...  ಆಮೇಲೆ  ಮೊಬೈಲಿಗೆ  ಬಂದ  ನಂಬರ್ರನ್ನು  ಹೇಳಿದ್ನಲ್ಲ...  ಇದೇನು  ಈಗ  ಹಿಂಗೆ  ಹೇಳ್ತಿದೀರಿ' ಸ್ವಲ್ಪ  ಜೋರಾದ  ಧ್ವನಿಯಲ್ಲಿಯೇ  ಮಾತನಾಡಿದಳು.  ಆಕೆ  ವ್ಯವಹಾರಸ್ಥೆಯೇ   ಆಗಿದ್ದರಿಂದ  ಘಟ್ಟಿ ಮಾತನಾಡಲು  ಭಯವೇನು  ಇರಲಿಲ್ಲ. 
    ಮ್ಯಾನೇಜರ್  ಅವಳಿಂದ  ಪಾಸ್ ಬುಕ್  ತೆಗೆದುಕೊಂಡು  ಆನ್ಲೈನಿನಲ್ಲಿ  ಅಕೌಂಟ್  ನೋಡಿದ.  ಅಕೌಂಟ್ ನಲ್ಲಿ  ಹಣವೇ  ಇರಲಿಲ್ಲ.  15000ರೂಪಾಯಿ  ಹಿಂದಿನ  ತಾರೀಕಿಗೆ   ಖರ್ಚಾಗಿತ್ತು. ಏನಾಗಿದೆಯೆಂದು  ಅವನಿಗೆ  ಗೊತ್ತಾಯಿತು.   ಗಲ್ಲಕ್ಕೆ  ಕೈ  ಕೊಟ್ಟು  ಕ್ಷಣಕಾಲ  ಅವಳನ್ನೇ  ನೋಡಿದ.ಅವನಿಂದ  ಒಂದು  ನಿಟ್ಟುಸಿರು ಬಂತು.
            " ಅಮ್ಮಾ....  ನಾವು  ಪದೇ ಪದೇ  ಹೇಳ್ತೀವಿ,  ಹೊರಗಡೆನೂ  ಬೋರ್ಡ್  ಹಾಕಿದೀವಿ.  ಬ್ಯಾಂಕಿನವರು  ಯಾರು  ನಿಮ್ಮ  ಅಕೌಂಟು,  ಕಾರ್ಡ್  ನಂಬರ್ರು,  ಪಿನ್ನು  ಆ ತರದ್ದೆಲ್ಲ  ಕೇಳಲ್ಲಮ್ಮ.  ನಿಮಗೆ  ಯಾರೋ ಫೋನ್  ಮಾಡಿ  ಬ್ಯಾಂಕ್  ಮ್ಯಾನೇಜರ್  ಅಂತ ಹೇಳಿ  ನಿಮ್ಮ  ಕಾರ್ಡಿನ  ಮಾಹಿತಿ,  ಪಿನ್  ನಂಬರ್  ಎಲ್ಲಾ  ಪಡೆದು  ನಿಮ್ಮ  ಅಕೌಂಟಿನಿಂದ  ಹಣ  ಕದ್ದಿದ್ದಾರೆ. ಅಕೌಂಟಲ್ಲಿದ್ದ  15000ರೂಪಾಯಿ ಹೋಗಿದೆ.   ಬ್ಯಾಂಕಿನ  ಹೆಸರು  ಹೇಳಿ  ಮೋಸ  ಮಾಡಿದ್ದಾರೆ. ಅವರು  ಕೇಳಿದ್ದೆಲ್ಲ  ನೀವು  ಕೊಟ್ರಿ,  ಮೋಸ  ಹೋದ್ರಿ" ಮ್ಯಾನೇಜರ್  ಕನಿಕರದಿಂದ ಹೇಳಿದ.
         " ಅಯ್ಯೋ..... ಮ್ಯಾನೇಜರ್ರೇ.....  ಅದು  ಔಷಧಿಗೆ  ಮಗ  ಕಳಿಸಿದ  ಹಣ..... ನಮ್  ಯಜಮಾನರಿಗೆ....ಔಷಧಿಗೆ.... " ಜೋರಾಗಿ  ಮಾತನಾಡುತ್ತಲೇ  ಅವಳ  ಧ್ವನಿ  ನಡುಗತೊಡಗಿತು....  ತುಟಿಗಳು  ಅದುರತೊಡಗಿದವು.... ಕಣ್ಣುಗಳಲ್ಲಿ   ಹನಿ ತುಂಬಿ....ಉರುಳಿದವು...
             ಸೌಲಭ್ಯ  ಈ ರೀತಿಯಲ್ಲಿ  ವಂಚಿಸಲೂ  ಬಹುದೆಂದು  ಅವಳಿಗೆ  ಗೊತ್ತಿರಲಿಲ್ಲ.  ವಂಚಿಸಿದವರಿಗೆ  ಆಕೆಯ ಗಂಡನ  ಅನಾರೋಗ್ಯ ಕಟ್ಟಿಕೊಂಡು  ಆಗಬೇಕಾದದ್ದೇನೂ  ಇರಲಿಲ್ಲ.
          
                   {••••••••••••••••••••}
            


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬೆಳಕು ಬಿದ್ದೊಡನೆ (ಕಥೆ )

ಸವೆದ ಕಲ್ಲಿನ ಹಿಂದೆ (ಕಥೆ)

ಇಬ್ಬಗೆಯ ನೀತಿ ಏಕೆ?