ಪೋಸ್ಟ್‌ಗಳು

ಜುಲೈ, 2018 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹೆಮ್ಮೆಯ ಧ್ವಜ

ಇಮೇಜ್
ಬಾನಗಲದಿ ಸ್ವಚ್ಛಂದದಿ  ಹಾರಿದೆ ನನ್ನಯ ಹೆಮ್ಮೆಯ ಬಾವುಟವು ಪಟಪಟ ಸದ್ದಿನ ಬಾವುಟ ಕಾಣಲು ನರನಾಡಿಗೆ ಅದೆ ಹೊಸ ಕಸುವು ಹಲವರ ಕನಸದು ನನಸಾಯಿತು ಸ್ವಾತಂತ್ರ್ಯವ ದೇಶವು ಪಡೆದಂದು ಹರಿಸಿದ ನೆತ್ತರು, ಸುರಿಸಿದ ಬೆವರು ಪಡೆಯಿತು ತಾ ಸಫಲತೆಯಂದು ತ್ಯಾಗದ ತಳಹದಿ ಮೇಲ್ಗಡೆ ಇರುವ ಜೀವನದರ್ಶನ ಇಲ್ಲಿಹುದು ಪರೋಪಕಾರವು, ಪ್ರತ್ಯುಪಕಾರವು  ಅತಿಸಹಜದಿ ನೆಲೆನಿಂತಿಹುದು ಎಷ್ಟು ಆಕ್ರಮಣ ಮತ್ತೆಷ್ಟು ಲೂಟಿಗಳು ನಡೆದವು ಚರಿತ್ರೆ ಪುಟಗಳಲಿ ಎಲ್ಲವ ಮೀರಿಯೆ ನಿಂತಿದೆ ದೇಶವು ಅಳಿವಿಲ್ಲದೆ ಸ್ಥಿರ ರೂಪದಲಿ ಜೀವನದಾಳವ, ಜೀವನ ಧ್ಯೇಯವ ವಿಶ್ವಕೆ ಸಾರಿದ ದೇಶವಿದು ಪ್ರಜ್ಞೆಯ ಸೀಮೆಯ ತುದಿಯನು ಮುಟ್ಟುವ ಸಾರ್ಥಕ ಬಾಳ್ವೆ ಇಲ್ಲಿಯದು ಮರೆತಿರಬಹುದು ಆ ಮಹದಾದರ್ಶವ ಕಾಲನ ಹೊಡೆತಕೆ ತುತ್ತಾಗಿ ಕುಯುಕ್ತಿಯ ಜನಗಳ ಪಿತೂರಿಯರಿಯದೆ ಅಜ್ಞಾನದ ಅಮಲಿಗೆ ತೊತ್ತಾಗಿ ಕಣ್ಣರಳಿಸಿ ನೋಡಲು ಹೆಮ್ಮೆಯ ಧ್ವಜವನು ಹೃದಯವು ತಾನೇ ಅರಿಯುವುದು ಹಲವು ಸಾವಿರದ ವರ್ಷಗಳಿಂದಲಿ  ಪ್ರಕಾಶಿಸುತಿರುವ ದೇಶವಿದು.

ಆ ಕ್ಷಣದ ಕ್ಷಣಗಣನೆ

ಮನದಲಿ ಸ್ವಲ್ವವೆ ಸುಳಿದಾಡು ಹೃದಯದಿ ಸ್ವಲ್ಪವೆ ನಲಿದಾಡು ಮನಸಿನ, ಹೃದಯದ ಸ್ಪಂದನೆಯಿಂದ ನಾ ಪಡೆಯುವೆ ಅಮಿತಾನಂದ ನೀ ಬರಲೇಬೇಕೆನ್ನುವ ಕಾತರ ಎಂದಿಗೆ ಬಂದೀಯೆನ್ನುವ ಆತುರ ಕಾದರು ಬಾರದೆ ಕಾಡುವುದೇತಕೆ? ದೂರದಲೆಲ್ಲೋ ಇರುವುದು ಏತಕೆ? ನಿನ್ನ ಪ್ರವಾಹದ ಧಾರೆಯ ನದಿಗಳು ನನ್ನೊಳು ಉದಯಿಸಿ ನನ್ನನೆ ತೋಯಿಸಿ ಮರುಕ್ಷಣ ಮುಳುಗಿಸಿ ಗಗನಕೆ ಚಿಮ್ಮಿಸಿ ರಮಿಸಿದ ಅವುಗಳೇ ಹೋನ್ನಿನ ದಿನಗಳು ಅಂದಿನ ದಿನಗಳ ಇಂದಿನ ನೆನಪು ಇಂದಿನ ದಿನದವೇ ಆಗುವುದೇ? ಅಂದಿನ ಅವುಗಳು ಇಂದೂ ಆದರೆ ಇಂದಿನ ಈ ಕ್ಷಣ ಹೊನ್ನಾಗದೇ?

ಬೇಕಿದೆ...

ಮಳೆಯ ಹನಿ ಹನಿ ನೀರು ಭುವಿಯ ಒಡಲೊಳು ಇಳಿದು ಇಳೆಯ ಮೇಲ್ಗಡೆಯಲ್ಲಿ ಹುಲುಸಾದ ಹಸಿರು. ಸದ್ವಿಚಾರಗಳೆನ್ನ ಮನದಲ್ಲಿ ಇಳಿದರೆ ಶುಭವ ಮಾಡುವ ಕನಸೆ ನನ್ನ ಜೀವನದ ಉಸಿರು ಜಗವು ನೀಡುವುದೆನಗೆ ನೂರು ಭಾವಗಳನ್ನು ಅವುಗಳಿಂದ ಮನದಿ ನೂರೊಂದು ಅಚ್ಚು ಆ ಅಚ್ಚುಗಳ ಪರಿಣಾಮ ನನ್ನ ಹೃದಯ ತುಂಬ ರೋಷ ಆವೇಷ, ಕೆಚ್ಚು ರೊಚ್ಚು. ಇಂತ ಕಸ ಕಡ್ಡಿಗಳು ಬೇಡ ಜೀವನದಲ್ಲಿ ಮನಕೆ ಬೇಕಿದೆ ಶಾಂತಿ, ಜೊತೆಗೆ ವಿಶ್ರಾಂತಿ ಕೊಳಕು ಕೊಚ್ಚೆಯ ಕಳೆದು ಪರಿಶುದ್ಧ ಚಿತ್ತದಲಿ ಚಿಮ್ಮಿ ಹೊಮ್ಮಲಿ ನನ್ನ ಪರಿಶುದ್ಧ ಕಾಂತಿ ಇದನೆಲ್ಲ ಅರುಹಿದವ ನೀನಲ್ಲವೆ? ಮತ್ತಾರ ಬಳಿ ಇದನು ಬೇಡಲಾರೆ ಹೇಳಿದವ ನೀನು, ತಿಳಿದವನು ನೀನು ನೀಡಬೇಕಿದನೆನಗೆ ನೀನೆ ಗುರುವೇ.....