ದೀಪ ಬೆಳಗಿತು (ಕಥೆ)

           ಸಾಯಂಕಾಲದ ಸಮಯ. ಬೆಂಕಿ ಕಡ್ಡಿಯಲ್ಲಿ ಅತ್ತಿತ್ತ ಓಲಾಡುತ್ತಿದ್ದ ಕುಡಿ ಪಟಕ್ಕನೆ ದೀಪದ ಬತ್ತಿಗೆ ತಗುಲಿ ಒಮ್ಮೆಲೆ ಮತ್ತಷ್ಟು ದೊಡ್ಡದಾಗಿ ಪ್ರಜ್ವಲಿಸತೊಡಗಿತು. ಬೆಂಕಿ ಕಡ್ಡಿಯನ್ನು ನಂದಿಸಿ ಹೊರಗೆ ಎಸೆದು, ಅಡುಗೆಮನೆಗೆ ಹೋಗಿ ಚಿಕ್ಕ ಹಾಲಿನ ಲೋಟದೊಂದಿಗೆ ವಾಪಾಸಾದಳು ಅಂಬುಜಾ. ಅದನ್ನು ದೇವರ ಎದುರು ಇಟ್ಟು, ಕೈ ಮುಗಿದು ಪ್ರದಕ್ಷಿಣೆ ಮಾಡಿ ಶಿರ ಬಾಗಿ ನಮಸ್ಕಾರ ಮಾಡಿದಳು. ಮನದ ಯೋಚನೆ ಏನಿತ್ತೋ ಅದು ದೇವರ ಎದುರಲ್ಲಿ ಪ್ರಾರ್ಥನೆಯಾಯಿತು.
            "ಯಲ್ ಹೋಗ್ಬಿಡಚೇನ...." ತನ್ನಷ್ಟಕ್ಕೆ ತಾನೇ ಹೇಳುತ್ತಾ ಚಪ್ಪಲಿ ಬಿಚ್ಚಿ ಪಕ್ಕದಲ್ಲಿಟ್ಟು ಚಿಂತಿತನಾಗಿ ಮನೆ ಒಳಗೆ ಬಂದ ಕೇಶವ. ಅವನ ಈ ಗೊಣಗು ಕೇಳಿಸಿಕೊಂಡ ಅಂಬುಜಾ ದೇವರ ಒಳದಿಂದ ಅಡುಗೆ ಮನೆಗೆ ಬರುತ್ತಾ ಹೇಳಿದಳು " ಬಿಡದು ಬ್ಯಾಡ ಹೇಳಿ ಸಾವ್ರ ಸರ್ತಿ ಹೇಳ್ದಿ. ನಿಂಗೌಕೆ ಯಾವಾಗ್ಲೂ ನಿಂಗಳದ್ದೇಯಾ. ಅಲ್ಲ, ಅಷ್ಟು ಗೊತ್ತಾಗ್ತಲ್ಯಾ ಹಂಗರೆ? ಗಬ್ಬದ ದನ, ತಿಂಗ್ಳ್ ತುಂಬತಾ ಇದ್ದು. ಕೆಚ್ಚಲು ಬಿಡ್ತಾ ಇದ್ದು ಅಂತ ನಿಂಗನೇ ಹೇಳಿದ್ದಿ. ಅಂತಾದ್ರಲ್ಲಿ ಇವತ್ತು ಬಿಟ್ಟಿದ್ರನ ಹಂಗರೆ...? ಇನ್ ಯಂತ ಹೇಳಕ್ಕು"
          "ಯಂತಾಗ್ತಲ್ಲೆ ಸುಮ್ನಿರೇ.... ಈಗೇನ್ ಬಾಳ ಹೊತ್ತಾಗಲ್ಲೆ. ಬತ್ತಿಕ್ಕು, ನೋಡನ" ಹೆಂಡತಿಯ ಮಾತಿಗೆ ಒಂದು ಕೌಂಟರ್ ಕೊಟ್ಟಿದ್ದು ಹೌದಾದರೂ ಅವನ ತಲೆಯಲ್ಲೂ ಚಿಂತೆಯು ಹರಳುಗಟ್ಟಿತ್ತು. ಅಷ್ಟು ಹೊತ್ತಿಗೆ ಬಿಸಿ ಕಾಫಿ ತಂದು ಅವನ ಕೈಗೆ ಕೊಟ್ಟಳು ಅಂಬುಜಾ. ತಲೆ ತುಂಬಾ ಬಿಸಿಯಾದಾಗ ಬಿಸಿ ಕಾಫಿ ಸ್ವಲ್ಪ ತಣ್ಣಗಾಗಿಸುತ್ತದೆ ಅನ್ನುವುದು ಮಲೆನಾಡಿಗರ ಅನುಭವ ಸತ್ಯ. ಅದೇ ಉದ್ದೇಶದಿಂದ ಕೇಶವ ಕಾಫಿಯನ್ನು 'ಸೊರ್.... ' ಎನ್ನುವ ಸದ್ದಿನೊಂದಿಗೆ ಇಷ್ಟಿಷ್ಟಾಗಿ ಹೀರತೊಡಗಿದ.
           "ಈಗ ಎಲ್ಲೆಲ್ಲಿ ನೋಡ್ಕ್ಯಬಂದಿ?.." ವಿಚಾರಣೆ ನಡೆಸುವ ರೀತಿಯಲ್ಲಿ ಗಂಡನನ್ನ ಕೇಳಿದಳು ಅಂಬುಜಾ.
          "ಸುಮಾರು ಹುಡ್ಕಿದ್ದಿ. ಕೆರೆ ಏರಿ, ಆಚೆ ದಿಂಬದ ತ್ವಾಟದ ಅಗಳ, ಆಚೆಕೇರಿ ಗುಡ್ಡ, ಗದ್ದೆ ಬೈಲು ಎಲ್ಲ. ಎಲ್ಲೂ ಇಲ್ಲೆ, ನೋಡಿದ್ದಿ ಅನ್ನವ್ರು ಯಾರೂ ಇಲ್ಲೆ" ಇಷ್ಟು ಹೇಳಿ ತಟಕ್ಕನೆ ಸುಮ್ಮನಾದ.ಮನದ ದುಗುಡ ಮುಖದಲ್ಲಿ ಮೂಡಿ ಬಂತು. ಅಂಬುಜಾಳ ಮುಖವನ್ನೇ ನೋಡುತ್ತಾ "ಕಲ್ಲ್ ಕ್ವಾರೆ ಹತ್ರ ಏನಾರು ಹೋಗ್ಬಿಡ್ತಾ ಅಂತ ಹೆದ್ರಿಕೆ ಆಗ್ತಾ ಇದ್ದು".
             ಭಯದ ರೇಖೆಗಳು ಅಂಬುಜಾಳ ಮುಖದಲ್ಲೂ ಕಾಣಿಸಿಕೊಂಡವು. "ಅಯ್ಯೋ..... ನಾಳೆ ಅಲ್ಲಾ ನಾಡ್ದು ದೀಪಾವಳಿ. ದೇವ್ರೇ... ಗೌರಿಗೆ ಏನೂ ಆಗ್ದೇ ಇರ್ಲಿ" ಗಾಬರಿಯಿಂದ ದೇವರನ್ನು ಬೇಡಿಕೊಂಡಳು ದೊಡ್ಡ ಧ್ವನಿಯಲ್ಲಿಯೇ.
             "ಇದ್ರ ಯೋಚ್ನೆ ಮದ್ಯೆ ಕೊಟ್ಗೆ ಕಡಿಗೆ ಹೋಗಕ್ಕೆ ಆಗಲ್ಲೆ ಇವತ್ತು. ನೀ ಹುಲ್ಲ್ ಹಾಕಿದ್ಯಾ ಸಂಜೆ ದನಕರಕ್ಕೆ?" ಹೆಂಡತಿಯನ್ನ ಕೇಳಿದ ಕೇಶವ.
            "ಇಲ್ಲೆ, ಹಾಕಲ್ಲೆ.ಹಾಲ್ ಕರ್ಕಂಡು ಬಂದ್ಮೇಲೆ ಯಂಗೆ ಒಳಗಡೆ ಕೆಲಸವೇ ಆಗೋತು"
             "ಸರಿ, ಹಂಗರೆ ಹಾಕಿಕ್ ಬತ್ತಿ" ಎನ್ನುತ್ತಾ ಕೊಟ್ಟಿಗೆಯ ಕಡೆಗೆ ಹೊರಟ ಕೇಶವ. ಅಂಬುಜಾ ಒಳಕ್ಕೆ ನಡೆದಳು.
                     ***********
             ಇಬ್ಬರೂ ಕೆಲಸದಲ್ಲಿ ನಿರತರಾಗಿದ್ದರೂ, ತಲೆಯ ತುಂಬಾ ಗೌರಿಯದೇ ಯೋಚನೆ. ಮಲೆನಾಡಿನ ಮಂದಿಗೆ ದೀಪಾವಳಿಯೆಂದರೆ 'ಗೋ ಪೂಜೆ'. ನಮಗೆ ಅಮೃತ ಸಮಾನವಾದ ಹಾಲಿಗೆ ಗೋವು ಬೇಕು, ಪೂಜೆ ಪುನಸ್ಕಾರಕ್ಕೆ ಗೋ ಮೂತ್ರ, ಗೋ ಮಯ ಅಂತ ಗೋವು ಬೇಕು. ತೋಟದ ಗೊಬ್ಬರಕ್ಕೆ ಗೋವು ಬೇಕು. ಹೀಗಾಗಿ ತಲೆ ತಲಾಂತರದಿಂದ ಗೋವಿನೊಂದಿಗೆ ಅವಿನಾಭಾವ ಸಂಬಂಧ ಬೆಸೆದುಕೊಂಡಿದೆ. ಬೆಳಗ್ಗೆ ಎದ್ದು ಗೋವಿನ ದರ್ಶನ ಮಾಡುವುದು ಬಹಳ ಪುಣ್ಯ ಅಂತ ಹಿಂದಿನವರು ಹೇಳುತ್ತಿದ್ದರು. ಇಲ್ಲಿನ ಜನರಿಗೆ ಗೋವಿನೊಂದಿಗಿನ ಆತ್ಮೀಯತೆ ತುಂಬಾ ಚಿಕ್ಕ ವಯಸ್ಸಿನಿಂದಲೇ ಬೆಳೆದುಕೊಂಡು ಬಿಡುತ್ತದೆ. ಕೊಟ್ಟಿಗೆಯಲ್ಲಿ ದನಕರ ಇದ್ದರೆ ಸಗಣಿ ತೆಗೆಯೋದು, ಹುಲ್ಲು ಹಾಕೋದು, ಅಕ್ಕಚ್ಚು ಕುಡಿಸೋದು, ಮೈ ತೊಳೆಯೋದು ಅಂತೆಲ್ಲ ಇಡೀ ದಿನ ಕೆಲಸ ಇದ್ದದ್ದೇ. ಜಾನುವಾರು ಅಂತ ಇದ್ದಾಗ ಮನೆಯಲ್ಲಿ ಒಬ್ಬರಲ್ಲ ಒಬ್ಬರು ಇರಲೇ ಬೇಕು. ಮನೆಗೆ ಬೀಗ ಹಾಕಿಕೊಂಡು ಹೋಗೋದಕ್ಕೆ ಆಗೋದಿಲ್ಲ. ಎಲ್ಲಿಗೆ ಹೋದರೂ ಸಾಯಂಕಾಲದ ಒಳಗೆ ವಾಪಸ್ಸು ಬರಲೇ ಬೇಕು. ಹಾಗೇನೇ ಹಿಂಡಿ ಹುಲ್ಲು, ಕಾಯಿಲೆ ಕಸಾಲೆ ಆರೈಕೆ ಅಂತ ದನಕರುಗಳು ಇದ್ದರೆ ಖರ್ಚು ಇರ್ತದೆ. ಆದರೆ ಇದ್ಯಾವುದು ಹೊರೆಯಲ್ಲ. ಭಾವನೆಯೊಂದಿಗೆ ಬೆಸೆದುಕೊಂಡಿರುವ ಜಾನುವಾರುಗಳು 'ನಮ್ಮವೇ' ಆಗಿರುವಾಗ ಇವನ್ನೆಲ್ಲ ಖರ್ಚು, ಭಾರ ಅಂತೆಲ್ಲ ನೋಡೋದಿಕ್ಕಾಗತ್ತಾ? ಇದು ಹಿಂದಿನಿಂದ ನಡೆದುಕೊಂಡು ಬಂದ ಯೋಚನಾಕ್ರಮ.
             ಈಗೀಗ ಊರಿನ ಹೊಸ ತಲೆಮಾರಿನ ಜನತೆ ಪೇಟೆ ಪಟ್ಟಣ ಸೇರುತ್ತಿದ್ದಾರೆ. ಹಳ್ಳಿ ಜೀವನ, ಕೃಷಿ, ಕೊಟ್ಟಿಗೆ ಕೆಲಸ ಇವೆಲ್ಲ 'ಹೆಮ್ಮೆಯ' ವಿಷಯಗಳಾಗಿ ಉಳಿದಿಲ್ಲ. ಎಲ್ಲವೂ ಲಾಭ ನಷ್ಟದ ದೃಷ್ಟಿಯಿಂದ ನೋಡುವ ಭಾವನೆ ಬೆಳೆದು ಹೋಗಿದೆ. ಯಾವಾಗಲಾದರೂ ಊರಿನ ಕಡೆ ಬಂದಾಗ ಕೊಟ್ಟಿಗೆಯಲ್ಲಿರುವ ದನದೊಂದಿಗೆ ಒಂದು ಸೆಲ್ಫಿ ತೆಗೆದುಕೊಂಡು ಅದನ್ನ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿ ' ಗೋವನ್ನ ರಕ್ಷಿಸಿ ' ಅಂತ ಪೋಸ್ಟ್ ಹಾಕಿ ಅದರಮೇಲೆ ಚರ್ಚೆ , ಕಮೆಂಟು ಬಯ್ದಾಟ, ಉಗಳಾಟ ಈ ತರದ್ದರಲ್ಲೇ ಕಳೆದುಹೋಗುತ್ತದೆ.
         ಕಣ್ಣಿಗೆ ಕಾಣುವ ಈ ಪಲ್ಲಟದ ಕಾರಣದಿಂದ 'ಮುಂದೆಲ್ಲ ಹ್ಯಾಂಗೇನ , ನಾವು ಇಪ್ಪವರಿಗೆ ಮಾಡ್ಕ್ಯಂಡ್ ಹೋಪುದು' ಅನ್ನುವ ತೀರ್ಮಾನಕ್ಕೆ ಬಂದಿದ್ದ ಕೇಶವ.
              ಗೋ ಪೂಜೆಯೇ ಮುಖ್ಯವಾಗಿರುವ ದೀಪಾವಳಿ ಇರುವಾಗ ಹೀಗೆ ಗೋವು ಕಳೆದುಹೋಗೋದು ಅಂದ್ರೆ ಯಾಕೋ ಒಳ್ಳೆ ಶಕುನ ಅಲ್ಲಾ ಅಂತ ಅನ್ನಿಸುತ್ತಾ ಇತ್ತು ಕೇಶವನಿಗೆ. ಅದಕ್ಕಿಂತಲೂ ಹೆಚ್ಚಾಗಿ ಗಬ್ಬದ ದನ ಎಲ್ಲಿ ಹೋಯ್ತೆನೋ ಅನ್ನುವ ಸಂಕಟ. ತುಂಬು ಗಬ್ಬದ ದನವನ್ನ ಗೊತ್ತಿದ್ದೂ ಗೊತ್ತಿದ್ದೂ ಹೊರಗೆ ಬಿಟ್ಟಿದ್ದಕ್ಕೆ ತನ್ನನ್ನೇ ತಾನು ಮತ್ತೆ ಮತ್ತೆ ಶಪಿಸಿಕೊಳ್ಳುತ್ತಿದ್ದ. ಮನಸ್ಸು ತಡೆಯುತ್ತಿರಲಿಲ್ಲ. ಯಾವದಕ್ಕೂ ಕಲ್ಲು ಕ್ವಾರೆ ಬಳಿ ಹೋಗಿ ನೋಡಿಕೊಂಡು ಬಂದ್ಬಿಡ್ತೀನಿ ಅಂದುಕೊಂಡು ಕೊಟ್ಟಿಗೆ ಕೆಲಸ ಮುಗಿಸಿ ಹೊರ ಬಂದ.
************
             "ಕ್ವಾರೆ ಕಡಿಗೆ ಹೋಗಿ ನೋಡ್ಕ್ಯಂಡ್ ಬತ್ನೇ...." ಅಂತ ಮನೆಯ ಹೊರಗಿನಿಂದಲೇ ಕೂಗಿ ಕೈಯಲ್ಲಿ ಬ್ಯಾಟರಿ ಹಿಡಿದು ಹೊರಡಲು ಅನುವಾದ. ಇದನ್ನು ಕೇಳಿದ ಅಂಬುಜಾ ಒಳಗಿನಿಂದಲೇ ಕೂಗುತ್ತ ಬಂದಳು " ಹೋಯ್, ಅಪ್ಪಿ ಫೋನ್ ಮಾಡಿದ್ದ. ರಾತ್ರಿ ಹತ್ತು ಗಂಟಿಗೆ ತಾಳಗುಪ್ಪಕ್ಕೆ ಬತ್ತ್ನಡ, ನಿಂಗ ಗಾಡಿ ತಗಂಡು ಬರಕ್ಕಡ ಕರ್ಕಂಡ್ ಬಪ್ಪಲೆ. ಹಬ್ಬ ಆಗಿದ್ದಕ್ಕಾಗಿ ರಾತ್ರಿ ಬಸ್ಸು ಯಾವ್ದು ಸಿಗದೇ ಹಗಲಿಗೆ ಹೊರಟಿದ್ನಡ ಬೆಂಗಳೂರಿಂದ. ಈಗ ಏಳೂ ಮುಕ್ಕಾಲಾಗ್ತಾ ಬಂತು. ಬೇಗ ಬನ್ನಿ"
               "ಹೂ......." ಎನ್ನುತ್ತಾ ತನ್ನ ಟೀವಿಎಸ್ಸನ್ನ ಹತ್ತಿ ಕಲ್ಲು ಕ್ವಾರೆ ಕಡೆ ಹೊರಟ ಕೇಶವ. ಐದು ನಿಮಿಷದ ಹೊತ್ತಿಗೆ ಕಲ್ಲು ಕ್ವಾರಿಯ ಸಮೀಪ ಬಂದು ಟೀವಿಎಸ್ಸನ್ನು ಅಲ್ಲಿಯೇ ಇಟ್ಟು ಮುನ್ನಡೆದ. ಒಂದು ಸಣ್ಣ ಗುಡ್ಡ. ಅದರ ಒಂದು ಮಗ್ಗುಲಲ್ಲಿ ಕಲ್ಲು ಕ್ವಾರಿಯಿದೆ, ಕಲ್ಲುಕ್ವಾರಿಗಿಂತ ಸ್ವಲ್ಪ ಮೇಲೆ ಭೂತಪ್ಪನ ಕಟ್ಟೆ, ಭೂತಪ್ಪನ ಕಟ್ಟೆ ಎದುರಿಗೆ ಅಕೇಶಿಯಾ ಪ್ಲಾಂಟೇಷನ್ ಇದೆ. ಮೊದ ಮೊದಲು ಚಿಕ್ಕದಾಗಿದ್ದ ಕ್ವಾರಿ ನಂತರ ಸುಮಾರು ದೊಡ್ಡ, ಆಳ ಆಗಿ ಈಗ ಹಾಲಿ ಬಂದ್ ಆಗಿತ್ತು. ಅಲ್ಲಿ ಕಲ್ಲನ್ನು ಕತ್ತರಿಸುವಂತಿರಲಿಲ್ಲ. ಆ ಗುಡ್ಡಕ್ಕೆ ಮೇಯಲು ಬಂದ ಎಷ್ಟೋ ದನಕರಗಳು ಮೇಯುತ್ತಾ ಮೇಯುತ್ತಾ ಕ್ವಾರಿ ಅಂಚಿಗೆ ಬಂದು ಮೂವತ್ತು ನಲವತ್ತು ಅಡಿ ಆಳದ ಕ್ವಾರಿಗೆ ಬಿದ್ದು ಸೊಂಟ-ಕುತ್ತಿಗೆ ಮುರಿದುಕೊಂಡು, ಹೊಟ್ಟೆ ಒಡೆದು ಸತ್ತೇ ಹೋಗಿದ್ದವು. ಆ ತರದ್ದೇನಾದರೂ ಆಗಿಬಿಟ್ಟಿದ್ದರೆ ಎನ್ನುವ ದುಗುಡದಲ್ಲೇ ಕೇಶವ ಬರುತ್ತಿದ್ದ.
              "ಗೌರೀ... ಗೌರೀ.... ಎಲ್ಲಿದ್ಯೆ....ಅಂಬಾ .. ಬಾ" ಎಂದು ಜೋರಾಗಿ ಕೂಗುತ್ತ ನಿದಾನವಾಗಿ ಕ್ವಾರೆಯ ಅಂಚಿಗೆ ನಡೆಯುತ್ತಾ ಬರುತ್ತಿದ್ದ. ಕೈಯಲ್ಲಿದ್ದ ಬ್ಯಾಟರಿಯ ಬೆಳಕಿನ ಹೊರತಾಗಿ ಅಲ್ಲಿ ಬೇರೆ ಯಾವುದೇ ಬೆಳಕು ಇರಲಿಲ್ಲ. ಬ್ಯಾಟರಿಯ ಬೆಳಕನ್ನು ಕ್ವಾರಿಯ ಮೂಲೆ ಮೂಲೆಗೆ ಹಾಯಿಸುತ್ತ ಸೂಕ್ಷ್ಮವಾಗಿ ಗಮನಿಸುತ್ತಾ ಹುಡುಕುತ್ತ ಮತ್ತೆ ಕರೆದ "ಗೌರೀ..... ಗೌರೀ...". ಅವನ ಧ್ವನಿ ಕೇಳಿತೆಂದರೆ "ಅಂಬಾ..." ಎಂಬ ಪ್ರತಿಕ್ರಿಯೆ ಗೌರಿಯಿಂದ ಇದ್ದೇ ಇರುತ್ತಿತ್ತು. ಆದರೆ ಈಗ ಯಾವುದೇ ಕೂಗು ಕೇಳಲಿಲ್ಲ. ಕೇಶವನ ಮನಸ್ಸಿನಲ್ಲಿ ಉಂಟಾಗಿದ್ದ ನಿರಾಸೆ ಬಲವಾಗತೊಡಗಿತು. ಮತ್ತೆರೆಡು ಬಾರಿ ಗೌರಿಯನ್ನು ಕರೆದು ನೋಡಿ ಪ್ರತಿಕ್ರಿಯೆ ಬಾರದಿದ್ದಾಗ ಕ್ವಾರಿಯ ಒಳಗಡೆ ಇಳಿದು ನೋಡೋಣ ಎಂದು ಹೊರಟ. ತಕ್ಷಣ ಅವನ ಕಿವಿಗೆ ಸಣ್ಣದಾಗಿ "ಹ್ಮ್...... ಹ್ಮ್ಮ್ಮ್... '' ಎನ್ನುವ ದನಿ ಕೇಳಿದಂತಾಯ್ತು. ಜಾಗೃತನಾಗಿ ಗಮನವಿಟ್ಟು ಆಲಿಸಿದ. ಮತ್ತೆ ಕೇಳಿಸಿತು " ಹ್ಮ್ಮ್ಮ್.... ಹ್ಮ್ಮ್ಮ್.....". ದನಿಯೆತ್ತಿ ಕೂಗಲಾಗದೆ ಯಾವುದೋ ಪ್ರಾಣಿ ಸಣ್ಣಗೆ ನರಳುತ್ತಿರುವ ಧ್ವನಿ ಕ್ವಾರಿಯ ಮೇಲ್ಬಾಗದ ಪ್ಲಾಂಟೇಶನ್ ಕಡೆಯಿಂದ ಬರುತ್ತಿದೆ. ಕೇಶವನ ಜೀವವೆಲ್ಲ ಒಮ್ಮೆಲೆ ಕಂಪಿಸಿತು. " ಗೌರಿ...... '' ಎಂದು ಒಮ್ಮೆಲೆ ಕೂಗಿದವನೇ ಧ್ವನಿ ಬಂದ ಕಡೆಗೆ ಬ್ಯಾಟ್ರಿ ಬಿಡುತ್ತ ಓಡತೊಡಗಿದ. ಅವನು ಓಡುತ್ತ ಹತ್ತಿರ ಹೋಗುತ್ತಿದ್ದಂತೆ ಧ್ವನಿ ಮತ್ತಷ್ಟು ಸ್ಪಷ್ಟವಾಯಿತು. ಪ್ಲಾನ್ಟೇಷನ್ನಿನ ಹತ್ತಿರ ಬಂದು ಏದುಸಿರು ಬಿಡುತ್ತ ಆಲಿಸಿದ. ಸ್ವಲ್ಪ ದೂರದಲ್ಲಿ ಬೇಲಿಯ ಹತ್ತಿರ ಒಂದು ದನ ಬಿದ್ದಿದ್ದು ಅಸ್ಪಷ್ಟವಾಗಿ ಕಾಣುತ್ತಿತ್ತು. ಮತ್ತೆ ಕೇಶವ ಅದರ ಕಡೆಗೆ "ಗೌರಿ...." ಎನ್ನುತ್ತಾ ಓಡಿದ. ಹತ್ತಿರ ಹೋಗಿ ಬ್ಯಾಟರಿ ಬಿಟ್ಟು ನೋಡಿದ, ಗೌರಿ ಅಲ್ಲ! ಯಾವುದೋ ಹೋರಿ!. ಪ್ಲಾಂಟೇಷನ್ನಿನಿಂದ ಹೊರ ನೆಗೆಯಲು ಹೋಗಿ ಬೇಲಿ ತಂತಿಗೆ ಕಾಲು ಸಿಕ್ಕಿ ಹಾಕಿಕೊಂಡು ಹಿಂಗಾಲು ಮೇಲಾಗಿ ಬಿದ್ದಿದೆ. ಹತ್ತಿರ ಹೋಗಿ ನೋಡಿದ, ' ಅಯ್ಯೋ.... ಭಗವಂತ .. ' ಎಂದುಬಿಟ್ಟ. ಬೇಲಿಯ ತಂತಿ ಹೋರಿಯ ಕಾಲನ್ನು ಹೊಕ್ಕು ಇಷ್ಟುದ್ದ ಸಿಗಿದುಬಿಟ್ಟಿದೆ. ಸಿಕ್ಕಿಹಾಕಿಕೊಂಡ ಕಾಲನ್ನು ಬಿಡಿಸಿಕೊಳ್ಳಲು ಅದು ಒದ್ದಾಡಿದ ಕಾರಣ ತಂತಿ ಮತ್ತಷ್ಟು ಆಳವಾಗಿ ಚುಚ್ಚಿದೆ. ನಿದಾನ ಹತ್ತಿರ ಹೋಗಿ ಅದರ ಕಾಲನ್ನು ಹಿಡಿದು ಸಿಕ್ಕಿಕೊಂಡ ತಂತಿಯಿಂದ ಮೇಲಕ್ಕೆತ್ತಿದ. ಹೋರಿ ಅಸಹನೀಯ ನೋವಿನಿಂದ ಒದ್ದಾಡಿ ಆರ್ಥನಾದದ ರೀತಿಯಲ್ಲಿ ಜೋರಾಗಿ ಕಿರುಚಿತು. ಕಾಲು ತಂತಿಯಿಂದ ತಪ್ಪಿದೆಯೆಂದು ಗೊತ್ತಾಗುತ್ತಿದ್ದಂತೆಯೇ ಎದ್ದು ನಿಲ್ಲಲು ಪ್ರಯತ್ನಿಸಿ ಬಿದ್ದುಬಿಟ್ಟಿತು. ಎರಡು ಬಾರಿ ಹೀಗೆ ಮಾಡುತ್ತಲೇ ಕಸುವು ಬಂದಂತಾಗಿ ರಕ್ತ ಸೋರುತ್ತಿದ್ದ ಕಾಲನ್ನು ಕುಂಟುತ್ತಾ ಅಲ್ಲಿಂದ ನಡೆದು ಕತ್ತಲೆಯಲ್ಲಿ ಮರೆಯಾಯಿತು. ಗೌರಿಯೂ ಹೀಗೆಯೇ ಎಲ್ಲಿಯಾದರೂ ಸಿಕ್ಕಿಹಾಕಿಕೊಂಡಿರಬಹುದು ಎನ್ನುವ ಭಯದಿಂದ ಬೇಲಿಯ ಉದ್ದಕ್ಕೂ ಕರೆಯುತ್ತಾ ಹೋದ ಕೇಶವ. ಎಲ್ಲಿಯೂ ಗೌರಿ ಕಾಣಲಿಲ್ಲ. ಆ ಹೋರಿಯ ಪರಿಸ್ಥಿತಿ ಕಂಡು ಕೇಶವನ ಮನಸ್ಸು ಮತ್ತಷ್ಟು ಕಂಪಿಸಿಬಿಟ್ಟಿತ್ತು. ಅಲ್ಲೆಲ್ಲೂ ಗೌರಿಯನ್ನು ಕಾಣದೇ ಅಳುಕು ಮನಸ್ಸಿನಿಂದ ಕ್ವಾರಿಯ ಕಡೆಗೆ ವಾಪಾಸಾಗತೊಡಗಿದ. ಬರುತ್ತಲೇ ಪಕ್ಕದ ಭೂತಪ್ಪನ ಕಟ್ಟೆಗೆ ಹೋಗಿ ಕೈ ಮುಗಿದು " ಭೂತಪ್ಪ... ಗೌರಿ ಎಲ್ಲಿ ಇದ್ರೂ ಸಿಗ ಹಾಂಗೆ ಮಾಡು. ನಿನ್ನೇ ನಂಬಿದ್ದಿ. ದನಕರ ಎಲ್ಲ ನೀನೇ ಕಾಯ್ತೆ ಹೇಳಿ ಎಲ್ಲರೂ ಹೇಳ್ತ. ಗೌರಿನೂ ಕಾಪಾಡು" ಎಂದು ಭೂತಪ್ಪನಿಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತಲೇ ಅವನ ಕಣ್ಣಿನಿಂದ ನೀರು ಜಿನುಗಿತು. " ಓ... ಸುಮಾರು ಹೊತ್ತಾಗೋತು. ಅಪ್ಪಿನ ತಾಳ್ಗುಪ್ಪಕ್ಕೆ ಹೋಗಿ ಕರ್ಕಂಬರಕ್ಕು" ಎಂದು ನೆನಪು ಮಾಡಿಕೊಂಡು ಕಣ್ಣು ಒರೆಸಿಕೊಂಡ. ಭೂತಪ್ಪನಿಗೆ ಮತ್ತೊಮ್ಮೆ ಕೈ ಮುಗಿದು ಬ್ಯಾಟ್ರಿ ಬಿಡುತ್ತ ಕ್ವಾರಿಯ ಬಳಿ ನಿಲ್ಲಿಸಿದ್ದ ತನ್ನ ಟೀವಿಎಸ್ಸಿನ ಕಡೆ ಹೆಜ್ಜೆ ಹಾಕಿದ.
                          *******
             ಮನೆಯ ಬಾಗಿಲಲ್ಲಿ ಗಂಡನ ಟೀವಿಎಸ್ಸಿನ ಸದ್ದಾಗುತ್ತಲೇ ಒಳಗಡೆಯಿಂದ ಓಡಿ ಬಂದಳು ಅಂಬುಜಾ. "ಹೋಯ್... ನಿಂಗೌಕೆ ಫೋನ್ ಮಾಡ್ದಿ ನಾನು. ನಿಂಗ ಫೋನ್ ಇಲ್ಲೇ ಇಟ್ಟಿಕ್ ಹೋಗ್ಬಿಟ್ಟಿದಿ. ಗೌರಿ ಬೈಂದು. ಕೊಟ್ಗೆಲಿ ಕಟ್ಯಾಕಿದ್ದಿ....." ಎನ್ನುತ್ತಾ ಉತ್ಸಾಹದಿಂದ ಅಂಬುಜಾ ಹೇಳುತ್ತಿರುವಾಗಲೇ ಕೇಶವ "ಆ... ಗೌರಿ ಬೈಂದ....?" ಎಂದು ಆಶ್ಚರ್ಯದಿಂದ ಕೇಳುತ್ತ ಕೊಟ್ಟಿಗೆಯ ಕಡೆಗೆ ಓಡಿದ.
              "ಬಂದಿದ್ದಷ್ಟೇ ಅಲ್ಲ, ಕರ ಹಾಕ್ಯಬೈಂದು. ಹೆಣ್ಗರ...." ಎನ್ನುತ್ತಾ ಅವನ ಹಿಂದೆ ಓಡಿದಳು ಅಂಬುಜಾ. ಆ ಹೊತ್ತಿಗಾಗಲೇ ಕೇಶವ ಕೊಟ್ಟಿಗೆಗೆ ಹೋಗಿ " ಯಲ್ ಹೋಗಿದ್ಯೇ ಗೌರೀ.. ಹುಡಕಾಡಿಸ್ಬಿಟ್ಯಲೆ. ಗೌರೀ... ಗೌರೀ.... " ಎನ್ನುತ್ತಾ ಮೈದಡವತೊಡಗಿದ. ಪಕ್ಕದಲ್ಲಿಯೇ ಎದ್ದುನಿಲ್ಲಲು ಪ್ರಯತ್ನಿಸುತ್ತಾ ಮತ್ತೆ ಮತ್ತೆ ಜಾರಿ ಬೀಳುತ್ತಿದ್ದ ಕರುವನ್ನು ಮುದ್ದಿಸುತ್ತಾ "ಬಾಳ ಚುರ್ಕಿದ್ದೆ ನೀನು" ಎನ್ನುತೊಡಗಿದ.
                "ಕಡೇಮನೆ ಕಡಿಗೆ ಹೋಗಿತ್ತಡ. ಎರಡ್ ಮೂರು ಕಿಲೋಮೀಟರಾದ್ರು ಆಗ್ತಲ್ಯಾ ಕಡೇಮನೆ? ಅಲ್ಲಿ ಈಶ್ವರ ದೇವಸ್ಥಾದತ್ರೆ ಕರ ಹಾಕ್ಯಂಡ್ ಬಿಟ್ಟಿತ್ತಡ. ಅದ್ಯಾರೋ ಭೂತಪ್ಪ ಅಂತ್ಲಡ ನೋಡಿ, ಅವ ಇದನ್ನ ನೋಡಿ ಕರ ಎತ್ಗಂಡು ಬಂದ್ನಡ. ಅವನ ಹಿಂದೆ ಗೌರಿಯು ಬಂದ್ಲಡ. ಅದ್ಯಾವ ಭೂತಪ್ಪನೇನ,   ನಾನು ಇದೇ ಮೊದ್ಲು ಅವನ್ನ ನೋಡಿದ್ದು. ದೇವಸ್ಥಾನದ ಹತ್ರಾನೇ ಇರ್ತ್ನಡ" ಎಂದು ಒಂದೇ ಉಸಿರಿನಲ್ಲಿ , ಉತ್ಸಾಹದಲ್ಲಿ ಹೇಳಿದಳು ಅಂಬುಜಾ.
                 ಅವಳ ಮಾತನ್ನ ಆಲಿಸುತ್ತಿದ್ದ ಕೇಶವ ಅವಳ ಕೆಡೆಗೆ ತಿರುಗಿ ಕೇಳಿದ. "ದೇವಸ್ಥಾನದತ್ರ ಇರ್ತ್ನಡ ?... ಅಲ್ಲಿ ಯಾರೂ ಭೂತಪ್ಪ ಅಂತ ಇಲ್ಯಲ..... ಹೋಗ್ಲಿ ಅವಂಗೆ ಆಸ್ರಿಗೆ ಎಂತಾರು ಕೊಟ್ಯ?"
               "ಆಸ್ರಿಗ್ ಚಾ ಮಾಡ್ತಿ ತಡಿಯ ಅಂದಿ. ನಾನು ಚಾನೆಲ್ಲ ಕುಡಿಯದಿಲ್ಲ ಅಂದ. ಬಂದಿದ್ದು ದೀಪಾವಳಿ, ದನ ಕಳೆದುಹೋದ್ರೆ ಸರಿಯಲ್ಲ ಅಂತ ಕರ್ಕಂಡ್ ಬಂದೆ. ಹೆಣ್ಗರ ಹಾಕೈತಿ, ಚನಾಗ್ ನೋಡ್ಕ್ಯಳ್ರಿ. ಅಮೆಯೆಲ್ಲ ಕಳದಾದಮೇಲೆ ನಂಗೆ ಹಾಲು ಕೊಡ್ಬಕು. ಮರೀಬೇಡಿ ಅಂತ ಹೇಳಿಕ್ ಹೊರ್ಟ್ಬಿಟ. ನಿಲ್ಲಲೇ ಇಲ್ಲೆ" ಅಂತ ಆಶ್ಚರ್ಯದಿಂದ ಹೇಳಿದಳು
              ಅವಳ ಮಾತನ್ನೇ ಕೇಳಿಸಿಕೊಳ್ಳುತ್ತಿದ್ದ ಕೇಶವನ ಮುಖದಲ್ಲಿ ಒಂದು ಆಶ್ಚರ್ಯದ ಗೆರೆ ಮೂಡಿತು. ಕಂಗಳಲ್ಲಿ ಕೃತಜ್ಞತೆ ಹೊಮ್ಮಿತು. ಅಪ್ರಯತ್ನವಾಗಿ ಕೈ ಮುಗಿದು " ಆಯ್ತಪ್ಪ ಭೂತಪ್ಪ, ಹಾಲು ಕೊಡ್ತೀವಿ" ಎಂದ ಕೇಶವ.
           "ಎಂತದ್ರಿ ಅದು...ಕೈಯೆಲ್ಲ ಮುಗಿತಿದ್ದಿ" ಅವನ ರೀತಿ ಕಂಡು ಏನೂ ಗೊತ್ತಾಗದೆ ಕೇಳಿದಳು ಅಂಬುಜಾ.
          "ಅದೆಲ್ಲ ಆಮೇಲೆ ಹೇಳ್ತಿ.... ಮೊದ್ಲು ನಂಗೆ ಊಟ ಹಾಕು. ಅಪ್ಪಿ ಕರ್ಕಂಬರಕ್ಕೆ ತಾಳಗುಪ್ಪಕ್ ಹೋಯಕ್ಕು. ಲೇಟಾಗೋತು" ಅನ್ನುತ್ತಾ ಕೇಶವ ಹೊರಟ.
           "ಯಂತದೆನಪ ನಿಂಗಳದ್ದು, ಯಂಗಂತೂ ಅರ್ತಾಗಲ್ಲೆ" ಎನ್ನುತ್ತಾ ಅಂಬುಜಾ ಅವನನ್ನೇ ಹಿಂಬಾಲಿಸಿದಳು.
           ಕೊಟ್ಟಿಗೆಯಲ್ಲಿ ಗೌರಿ ಕರುವಿನ ಮೈಯ್ಯನ್ನು ಪ್ರೀತಿಯಿಂದ ನೆಕ್ಕುತ್ತಿತ್ತು. ಕರು ತಾಯಿಯ ಕೆಚ್ಚಲನ್ನು ಗುದ್ದಿ ಗುದ್ದಿ ಹಾಲು ಕುಡಿಯುತ್ತಿತ್ತು.


ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬೆಳಕು ಬಿದ್ದೊಡನೆ (ಕಥೆ )

ಸವೆದ ಕಲ್ಲಿನ ಹಿಂದೆ (ಕಥೆ)

ಇಬ್ಬಗೆಯ ನೀತಿ ಏಕೆ?