ನನ್ನ ಕವನ
ನನ್ನ ಕವನ ಬರೀ ಕವನವಷ್ಟೇ, ಮತ್ತೇನಲ್ಲ. ಬರೆದದ್ದಕ್ಕೆಲ್ಲ ಏನಿರುತ್ತದೆ ವಿಶೇಷ? ನನ್ನ ಸಾಲುಗಳು ಕ್ರಾಂತಿಕಾರಿಯೇನಲ್ಲ, ಸುಧಾರಣೆ ಮಾಡಲು ಶಕ್ತವಲ್ಲ. ಮಳೆಗಾಲದಲ್ಲಿದ್ದು ಬೇಸಿಗೆಯಲ್ಲಿ ಮಾಯವಾಗುವ ಸಣ್ಣ ತೊರೆಯಂತೆ ಈಗ ಇದೆ, ಈಗ ಇಲ್ಲ. ಮನವೆಲ್ಲೋ ಕುಣಿದಾಗ ಅಥವಾ ಜಂಜಡ ದಿಂದ ದಣಿದಾಗ ನನ್ನೊಳಗಿಂದ ಬರುತ್ತದೆ.ಎಲ್ಲಿಂದ? ಗೊತ್ತಿಲ್ಲ. ಧುಮ್ಮಿಕ್ಕುತ್ತದೆ ಜಲಪಾತದಂತೆ, ಏನು ಹೇಳಲಿ ನನ್ನ ಪಾಡು ತತ್ತರಿಸಿಹೊಗುತ್ತೇನೆ ನಾನು. ಮರುಕ್ಷಣವೆ ಮಾಯ , ಮನ ತೊಯ್ದ ನೆಲದಂತೆ. ಅಬ್ಬರವಿಲ್ಲ,ಆದ್ರೆ ಒಳಗೆಲ್ಲ ತಂಪು. ಕೆಲವು ಪದಗಳ ಸಾಲು ಅದು. ತೂಕವೆನಿಲ್ಲ. ಗಾಳಿ ಗುಳ್ಳೆಯಂತೆ. ಅದಕ್ಕೆಲ್ಲಾದರೂ ತೂಕವುಂಟೆ? ಸುಮ್ಮನೆ ಹಾರಾಡುತ್ತದೆ ಬಾನಗಲ. ಅದರೂ ಅದಕ್ಕೆ ಬಾನೆ ಸಾಲದು. ಸ್ವಚ್ಚಂದ ಅದು. ಮಿತಿಯಿಲ್ಲ. ಭಾರವಿದ್ದಿದ್ದರೆ ಅದು ಹಾರುತ್ತಿರಲಿಲ್ಲ. ಈಗದು ಹಾರುತ್ತದೆ ಬಹುದೂರ. ನನ್ನನ್ನೂ ಕರೆದುಕೊಂಡು........