ಪೋಸ್ಟ್‌ಗಳು

ಏಪ್ರಿಲ್, 2010 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹೇಳು.

ತೇಲುವ ಮೇಘದ ಮೇಗಡೆಯೆಲ್ಲೋ ಅಡಗಿಹೆಯಾ ನೀನು? ನೀ ಹನಿಯಾಗಿ ಇಳಿಯುವೆಯೆಂದು ಕಾಯುತಿಹೆ ನಾನು. ನೀ ಸೂಸಿದರೆ ಹೂನಗೆಯನ್ನು ಹೂವಿಗೂ ನಗುವುಂಟು, ನಿನ್ನಯ ಕಂಗಳ ಬೆಳಕನು ಕಂಡರೆ ರವಿಗೂ ಹೊಳಪುಂಟು. ನಿನ್ನಯ ದನಿಯ ಮಧುರತೆಯೆದುರು ಕೋಗಿಲೆಗೆಣೆಯುಂಟೆ? ನನ್ನೀ ಕಲ್ಪನೆ ಹಿಂದೆ ತುಂಬಿಹ ಪ್ರೀತಿಗೆ ಕೊನೆಯುಂಟೆ?

ಎದೆಯಾಳದಿಂದ......

ತಡಕಾಡಿ ಪದಗಳಿಗೆ ಬರೆದೆ ಈ ಕವನ . ತಡೆ ತಡೆದು ಹೊಸತೊಂದು ಭಾವ ಸ್ಪುರಣ . ಸಂತಸದ ಮತ್ತಿನಲಿ ಹೆಚ್ಚೇನು ಹೇಳಲಿ ? ಹೇಳು , ನೀ ಎಂದು ಬರುವೆ ನನ್ನೀ ಬಾಳಲಿ ? ಹೇಳುವರು ಅವರು ನೀ ನನ್ನಲೊಂದು ಬಹು ಹಳೆಯಕಾಲದಿಂದ, ಮುಂದೂನು ಹೀಗೆ ಇರುವುದಂತೆ ಈ ನಮ್ಮ ಸಂಬಂಧ. ಆ ಹಿಂದೂ ಮುಂದು ನನಗೀಗ ಬೇಡ ,ನಾ ಕಾಣಲಿಲ್ಲವಲ್ಲ! ಈ ದಿನವೇ ಸತ್ಯ ,ಅದರಲ್ಲೇ ನಿತ್ಯ ನನ್ನ ಪ್ರತೀಕ್ಷೆಯೆಲ್ಲ. ನೀನೆಲ್ಲೇ ಇರಲಿ,ನೀ ಹೇಗೆ ಇರಲಿ ನನಗಿಲ್ಲ ಅದರ ಚಿಂತೆ, ಕಪ್ಪಾದರೇನು? ಬಿಳುಪಾದರೇನು? ಒಂದೊಂದು ಬಣ್ಣದಂತೆ. ಕೊಟ್ಟಾದಮೇಲೆ ಮನಸನ್ನು ನಿನಗೆ ಕಿತ್ತಿಡಲು ಸಾಧ್ಯವೇನು? ಮನದಲ್ಲೇ ಹೀಗೆ ಬಿಕನಾಸಿಯೆಂದು ನೀ ನನ್ನ ತಿಳಿದೆಯೇನು? ಹೇಳುವೆನು ಕೇಳು ನಾ ಇಲ್ಲೇ ಹೀಗೆ ಮಾತಲ್ಲ ನನ್ನ ಗೀಳು. ಕೈ ಹಿಡಿದ ಮೇಲೆ ಬಿಡಲಾರೆ ನಾನು ಕೊನೆವರೆಗೂ ಜೋಡಿ ಬಾಳು. ಕೇಳುವೆನು ನಾನು ನಿನ್ನಲ್ಲಿ ಒಂದು ತಪ್ಪೇನು ಇಲ್ಲ ತಾನೇ? ಬರುವವಳೇ ನೀನು ಆಗಿರಲೆಬೇಕು ಬಂಗಾರಗುಣದ ಕನ್ಯೆ.

ಭ್ರಾಂತ ಏಕಾಂತ

ಕತ್ತಲ ರಾತ್ರಿಯ ನೀರವ ಮೌನದಿ ನೆನಪಾಗಿಹೆ ನೀನು. ಕಣ್ಣನು ಮುಚ್ಚಲು ಮೌನವ ಸೀಳಿ ನುಡಿಯುವೆ ಏನೇನೋ. ಕಂಠದ ಮಧುರತೆ ಮತ್ತೇರಿಸುತಿದೆ, ತೇಲುತಿಹೆ ನಾನು. ಎದುರಿಗೆ ಬಾರದೆ ಕಾಡುವೆ ಹೀಗೆ ,ಕಾರಣ ಹೇಳಿನ್ನು. ಕಣ್ಣನು ಮುಚ್ಚಲು ನನ್ನೆಡೆ ಬಂದು ಸೂಸುವೆ ಹೂ ನಗೆಯ, ಕಣ್ಣಲೆ ಹೇಳುವೆ ನೋಡುತ ನನ್ನನೆ ಏನೋ ಭಾವನೆಯ. ಭಾವನೆ ಅರ್ಥವ ಅರಿಯಲಾಗದೆ ನಾ ಪದುತಿಹೆ ಯಾತನೆಯ, ಕರೆಯಲೇ, ನಿನ್ನನು ಭ್ರಾಂತಿಯ ತುಂಬಿ ಕಾಡುತಿಹ ಮಾಯಾ?