ರಂಗ ವಿಚಾರ (ಕಥೆ)

'ಶ್ರೀ......ಗುರುಗಣಾಧಿಪತಯೇ......... ನಮಃ....... ಸಕಲ ಕಾರ್ಯ........ವಿಜಯೀ ಭವ..........' ಕಂಚಿನ ಕಂಠದಲ್ಲಿ ಈ ಗಾನ ಕೇಳಿಬರುತ್ತಲೇ ಗುಜುಗುಜು ಸದ್ದಿನ ಜನಸ್ತೋಮವೆಲ್ಲ ಸ್ತಬ್ಧವಾಯಿತೆಂದೇ ಅರ್ಥ. ಆ ಧ್ವನಿಗೆ ಮಂತ್ರ ಮುಗ್ಧನಾಗದ ಯಕ್ಷಗಾನ ಪ್ರೇಮಿಯೇ ಇಲ್ಲ. ಆ ಅದ್ಭುತ ಕಂಠವನ್ನು ಆಲಿಸದ ಯಕ್ಷಪ್ರೇಮಿ ಯಾರಾದರೂ ಇದ್ದಾನೆಂದು ಹೇಳಿದರೆ ಆತ ನಿಜವಾದ ಯಕ್ಷಾಭಿಮಾನಿಯೇ ಅಲ್ಲ ಎನ್ನುವುದು ನನ್ನ ಅಭಿಮತ. ಎತ್ತರದ ಧ್ವನಿಯಲ್ಲಿ ಒಂದು ಸ್ವಲ್ಪವೂ ಕೊಂಕಿಲ್ಲದಂತೆ ಹಾಡುತ್ತಾ ವಿವಿಧ ಮಜಲುಗಳಲ್ಲಿ ತೆರೆದುಕೊಳ್ಳುವ ಆ ಶೈಲಿಯೇ ಅನುಪಮ. ಯಕ್ಷಲೋಕದ ಹಲವು ತಾರೆಗಳಲ್ಲಿ ಈ ಧ್ವನಿಯ ಗಾರುಡಿಗನನ್ನು ದ್ರುವತಾರೆ ಎಂದು ಕರೆಯುವುದರಲ್ಲಿ ಯಾವುದೇ ಅತಿಶಯ ಇಲ್ಲ ಎಂಬುದು ಅವರ ಭಾಗವತಿಕೆಯನ್ನು ಕೇಳಿದ ಪ್ರತಿಯೊಬ್ಬನಿಗೂ ಅನ್ನಿಸುವ ಪ್ರಾಮಾಣಿಕ ಅನಿಸಿಕೆ. ನಾನು ಯಾರ ಬಗ್ಗೆ ಬರೆಯುತ್ತಿದ್ದೇನೆ ಎಂದು ಈಗಾಗಲೇ ತಿಳಿದಿರಬೇಕಲ್ಲ...ಹೌದು ನಾನು ಬರೆಯುತ್ತಿರುವುದು ಗುಜ್ಜೂರು ರಾಮ ಭಂಡಾರಿಯವರ ಬಗ್ಗೆಯೇ. ನನಗೆ ಯಕ್ಷಗಾನದ ಖಯಾಲಿ ತುಂಬಾ ಇದೆ. ಆಗೀಗ ಅಲ್ಲಿಲ್ಲಿ ಸಣ್ಣ ಪುಟ್ಟ ವೇಷಗಳನ್ನು ಹಾಕಿದ ಉದಾಹರಣೆಗಳೂ ಇವೆ. ಈ ಘಟ್ಟದ ಕೆಳಗಿನ ಪ್ರದೇಶದವರಿಗೆ ಯಕ್ಷಗಾನದಲ್ಲಿ ಆಸಕ್ತಿಯಿರುವದು ಒಂದು ವಿಶೇಷ...