ರಂಗ ವಿಚಾರ (ಕಥೆ)

     
  'ಶ್ರೀ......ಗುರುಗಣಾಧಿಪತಯೇ......... ನಮಃ....... ಸಕಲ ಕಾರ್ಯ........ವಿಜಯೀ ಭವ..........' ಕಂಚಿನ ಕಂಠದಲ್ಲಿ ಈ ಗಾನ  ಕೇಳಿಬರುತ್ತಲೇ ಗುಜುಗುಜು ಸದ್ದಿನ ಜನಸ್ತೋಮವೆಲ್ಲ ಸ್ತಬ್ಧವಾಯಿತೆಂದೇ ಅರ್ಥ.  ಆ ಧ್ವನಿಗೆ  ಮಂತ್ರ ಮುಗ್ಧನಾಗದ ಯಕ್ಷಗಾನ ಪ್ರೇಮಿಯೇ ಇಲ್ಲ. ಆ ಅದ್ಭುತ ಕಂಠವನ್ನು ಆಲಿಸದ ಯಕ್ಷಪ್ರೇಮಿ ಯಾರಾದರೂ ಇದ್ದಾನೆಂದು ಹೇಳಿದರೆ ಆತ ನಿಜವಾದ ಯಕ್ಷಾಭಿಮಾನಿಯೇ ಅಲ್ಲ ಎನ್ನುವುದು ನನ್ನ ಅಭಿಮತ. ಎತ್ತರದ ಧ್ವನಿಯಲ್ಲಿ ಒಂದು ಸ್ವಲ್ಪವೂ ಕೊಂಕಿಲ್ಲದಂತೆ ಹಾಡುತ್ತಾ ವಿವಿಧ ಮಜಲುಗಳಲ್ಲಿ ತೆರೆದುಕೊಳ್ಳುವ  ಆ ಶೈಲಿಯೇ ಅನುಪಮ. ಯಕ್ಷಲೋಕದ ಹಲವು ತಾರೆಗಳಲ್ಲಿ ಈ ಧ್ವನಿಯ ಗಾರುಡಿಗನನ್ನು ದ್ರುವತಾರೆ ಎಂದು  ಕರೆಯುವುದರಲ್ಲಿ ಯಾವುದೇ ಅತಿಶಯ ಇಲ್ಲ ಎಂಬುದು  ಅವರ ಭಾಗವತಿಕೆಯನ್ನು ಕೇಳಿದ ಪ್ರತಿಯೊಬ್ಬನಿಗೂ ಅನ್ನಿಸುವ ಪ್ರಾಮಾಣಿಕ ಅನಿಸಿಕೆ. ನಾನು ಯಾರ ಬಗ್ಗೆ ಬರೆಯುತ್ತಿದ್ದೇನೆ ಎಂದು ಈಗಾಗಲೇ ತಿಳಿದಿರಬೇಕಲ್ಲ...ಹೌದು ನಾನು ಬರೆಯುತ್ತಿರುವುದು  ಗುಜ್ಜೂರು ರಾಮ ಭಂಡಾರಿಯವರ ಬಗ್ಗೆಯೇ.
             ನನಗೆ ಯಕ್ಷಗಾನದ ಖಯಾಲಿ ತುಂಬಾ ಇದೆ. ಆಗೀಗ ಅಲ್ಲಿಲ್ಲಿ ಸಣ್ಣ ಪುಟ್ಟ ವೇಷಗಳನ್ನು ಹಾಕಿದ ಉದಾಹರಣೆಗಳೂ ಇವೆ. ಈ ಘಟ್ಟದ ಕೆಳಗಿನ ಪ್ರದೇಶದವರಿಗೆ ಯಕ್ಷಗಾನದಲ್ಲಿ ಆಸಕ್ತಿಯಿರುವದು ಒಂದು ವಿಶೇಷವೆನಲ್ಲ. ಹಾಗಾಗಿ ನನಗೆ ಯಕ್ಷಗಾನದಲ್ಲಿ ಆಸಕ್ತಿ ಇರುವುದರಲ್ಲಿ ದೊಡ್ಡಸ್ತಿಕೆಯೇನೂ ಇಲ್ಲ. ನನ್ನ ಊರಿನ ಆಸುಪಾಸಿಲ್ಲಿ ಏನಾದರೂ ಯಕ್ಷಗಾನವಿದೆಯೆಂದಾದರೆ ನಾನು ತಪ್ಪಿಸಿಕೊಂಡ ಉದಾಹರಣೆಯೇ ಇಲ್ಲ.  ಬಾಲ್ಯದಿಂದಲೇ ಚೌಕಿಯ ಹತ್ತಿರದ ಒಡನಾಟ ಇದ್ದದ್ದರಿಂದ ನಾನು ಯಕ್ಷಗಾನದಲ್ಲಿಯೇ ಮುಂದೆ ಬರುತ್ತೇನೆ ಅಂತ ಬಹಳಷ್ಟು ಜನ ಅಂದುಕೊಂಡಿದ್ದರು. ಆದರೆ ಹಾಗೇನೂ ಆಗದಿದ್ದರೂ  ಯಕ್ಷಗಾನದಲ್ಲಿನ ಆಸಕ್ತಿ ಮಾತ್ರ ಈಗಲೂ ಹಾಗೆಯೇ ಇದೆ. ಹೀಗೆ ಯಕ್ಷಗಾನದ ಮೇಲಿನ ಪ್ರೀತಿಯ ಕಾರಣದಿಂದಲೇ  ಹಲವಾರು ಯಕ್ಷಗಾನ ಕಲಾವಿದರು ನನ್ನ ಸ್ನೇಹಿತರಾದರು. ಅವರಲ್ಲಿ ಗುಜ್ಜೂರು ರಾಮ ಭಂಡಾರಿಯವರೂ ಒಬ್ಬರು ಎಂದು ಹೇಳಿದರೂ, ಆತ್ಮೀಯತೆಯಲ್ಲಿ ಅವರೇ ಎಲ್ಲರಿಗಿಂತ ಸಮೀಪ ಇರುವವರು. ಒಮ್ಮೆ ನಾನು ತಾಳಗುಪ್ಪದ ನನ್ನ ದೊಡ್ಡಮ್ಮನ ಮನೆಗೆ ಹೋಗಿದ್ದೆ.  ಅಲ್ಲಿಯೇ ಹತ್ತಿರದಲ್ಲಿ ಯಕ್ಷಗಾನ ಇತ್ತು. ಯಕ್ಷಗಾನ ನೋಡಲು ನಾನೂ ಹೋಗಿದ್ದೆ ಎಂದು ಪ್ರತ್ಯೇಕವಾಗಿ ಹೇಳಬೇಕಾದದ್ದೇನಿಲ್ಲ. ಅಂದಿನ ಚಿತ್ರಾಂಗದಾ ಪರಿಣಯ ಎನ್ನುವ ಪ್ರಸಂಗದಲ್ಲಿ   ಅವರು  ' ಮದನಿಕೆ ನಿನ್ನ ಸರಸಕೆ ಸೋತೆನೇ ನಾ ಸೋತೆನೇ' ಎಂದು ಅವರು ಹಾಡಿದರೀತಿ, ಗಾಯನದುಧ್ದಕ್ಕೂ ಅವರು ಕಾಯ್ದುಕೂಂಡ ಆ ಶೃಂಗಾರ ರಸ ನನ್ನನ್ನು ನಿಜವಾಗಿಯೂ ಮೂಕನನ್ನಾಗಿ ಮಾಡಿತ್ತು. ಆ ದಿನ ಚೌಕಿಯಲ್ಲಿ ನಾನವರನ್ನು ಭೇಟಿಯಾದೆ. ಅದ್ಭುತವಾಗಿತ್ತು  ಭಾಗವತರೇ ಎಂದು ನಾನು ಹೇಳಿದಾಗ ಅವರು ನನ್ನನ್ನು ನೋಡಿ ನಗೆ ಬೀರಿದರಲ್ಲದೆ ಬೇರೇನೂ ಹೇಳಲಿಲ್ಲ. ಎಲ್ಲರೂ ಬಂದು ಹೀಗೇ ಹೇಳುತ್ತಿದ್ದುದರಿಂದ ಅವರಲ್ಲಿ ಅದೇನೂ ಸಂಚಲನ ಮೂಡಿಸಿರಲಿಲ್ಲವೋ ಅಥವ ಈ ಹೊಗಳಿಕೆಗೆ ಹಿಗ್ಗುವ  ಪ್ರವೃತ್ತಿ ದೂರವಾಗಿತ್ತೊ ಗೊತ್ತಿಲ್ಲ. ಒಟ್ಟಾರೆ ಅದು ನಮ್ಮ ಮೊದಲ ಭೇಟಿ ಹಾಗೆಯೇ ಮುಂದೆ ಬೆಳೆದು ನಿಂತ ನಮ್ಮ ಗೆಳೆತನ ಮೊದಲು ಕುಡಿಯೊಡೆದದ್ದೂ ಅಲ್ಲಿಯೇ ಎಂಬುದು ಸತ್ಯ.
               ಆ ಮೊದಲ ಭೇಟಿಯಿಂದ ಲೆಕ್ಕ ಹಾಕಿದರೂ ನಮ್ಮಿಬ್ಬರ ಪರಿಚಯಕ್ಕೆ ಹತ್ತಿರ ಹತ್ತಿರ ಅರ್ಧ ಶತಮಾನದ ಹರೆಯ. ನನಗೀಗ ಎಪ್ಪತ್ತಾರು ವರ್ಷ. ಅವರು ನನಗಿಂತಲೂ ಮೂರು ವರ್ಷ ದೊಡ್ಡವರೆಂದು ಅವರೇ ಹೇಳಿದ ನೆನಪು. ವಯಸ್ಸಿನ ವ್ಯತ್ಯಾಸ ಮೂರೇ ವರ್ಷ ಇದ್ದರೂ ಅವರ ವ್ಯಕ್ತಿತ್ವ ಮಾತ್ರ ತುಂಬಾ ದೊಡ್ಡದು. ಆ ವ್ಯಕ್ತಿತ್ವದ ಕಾರಣದಿಂದಲೆ ಅವರಿಗೆ ತುಂಬಾ ದೊಡ್ಡ ಗೆಳೆಯರ ಬಳಗ ಇತ್ತು. ಅಷ್ಟು ದೊಡ್ಡ ಕಲಾವಿದನೆಂದು ಹೆಸರು ಮಾಡಿದ್ದರೂ ನಯ, ವಿನಯ, ನಾಚಿಕೆ ಅವರಲ್ಲಿ ಇದ್ದೇ ಇತ್ತು. ಅದನ್ನು ಗಮನಿಸಿಯೇ ನಾನು ಒಮ್ಮೆ  "  ಭಂಡಾರಿಯವರೇ,  ನಿಮ್ಮನ್ನು ನೋಡಿದರೆ, ಮಾತನಾಡಿಸಿದರೆ ನೀವೊಬ್ಬ ಪ್ರಸಿದ್ಧ ಭಾಗವತ ಎಂಬುದು ಗೊತ್ತಾಗುವುದೇ ಇಲ್ಲ ಬಿಡಿ. ಬಾಯಿಬಿಟ್ಟರೆ ಏನು ಎಡವಟ್ಟಾಗಿ ಬಿಡುತ್ತದೆಯೋ ಎನ್ನುವ ಭಯದಲ್ಲಿರುವವರಂತೆ ಕಾಣುತ್ತೀರಿ. ಹೀಗಿದ್ದರೂ ಏನೊಂದೂ ಎಡವಟ್ಟಿಲ್ಲದೆ ಪದ್ಯ ಹೇಳುವುದು ಮಾತ್ರ ವಿಶೇಷ" ಎಂದು ಹೇಳಿದ್ದೆ. ಅದಕ್ಕೆ ಅವರು "ಅಂದರೆ ಪದ್ಯ ಹೇಳುವಾಗಲೂ ಭಯ ಇರಬೇಕು ಎನ್ನುತ್ತೀರಿ ಎಂದಾಯ್ತು!" ಎಂದು ಹೇಳಿ ನಕ್ಕು " ನೋಡಿ, ನಾನು ಭಾಗವತಿಕೆ ಮಾಡುವುದು. ಹಾಗಾಗಿ ಪದ್ಯವನ್ನು ಹೇಳಬಲ್ಲೆ. ಅರ್ಥದಾರಿಕೆಯನ್ನೋ, ವೇಷದಾರಿಕೆಯನ್ನೋ  ಮಾಡುವುದಾಗಿದ್ದಿದ್ದರೆ ನಾನೂ ಆರಾಮವಾಗಿ ಮಾತಾಡುತ್ತಿದ್ದೆ. ಅದೂ ಅಲ್ಲದೆ ನಯ ವಿನಯ ಇರಬೇಕಾದ ಗುಣವೇ ಅಲ್ಲವೇ.."ಎಂದು ಹೇಳಿದ್ದರು. ನನಗೆ ಆ ಮಾತು ಹೌದೆಂದು ಇಂದಿಗೂ ಅನ್ನಿಸುತ್ತಿದೆ.
              ಅವರ ಹಾಗೂ ನನ್ನ ಬಾಲ್ಯದ ಕಾಲ ಸೌಲಭ್ಯಗಳ ಕಾಲ ಆಗಿರಲಿಲ್ಲ. ಶ್ರೀಮಂತಿಕೆಯಿದ್ದರೂ ಸೌಲಭ್ಯಗಳು ಇತ್ತೆಂದು ಹೇಳಲಾಗುವುದಿಲ್ಲ. ಹಾಗೆ ನೋಡಿದರೆ  ಒಳ್ಳೆಯ ಕೃಷಿ ಜಮೀನಿದ್ದ ಹಿನ್ನೆಲೆಯಲ್ಲಿ ನಾನು ಶ್ರೀಮಂತನೇ ಆಗಿದ್ದೆ ಹಾಗಾಗಿ ಶಾಲೆಯ ಮುಖ ಕಂಡದ್ದಷ್ಟೇ ಅಲ್ಲದೆ ಕಾಲೇಜು ಮೆಟ್ಟಿಲನ್ನೂ ಹತ್ತಿ ಇಳಿದಿದ್ದೇನೆ ಕೂಡ. ಆದರೆ ಗುಜ್ಜೂರು ರಾಮ ಭಂಡಾರಿಯವರಿಗೆ ಶಾಲೆಯ ಮೆಟ್ಟಿಲೂ ಹತ್ತಲಾಗಲಿಲ್ಲ. ಅವರ ಮನೆಯಲ್ಲಿ ಆರು ಜನ ಮಕ್ಕಳಲ್ಲಿ ಇವರೂ ಒಬ್ಬರು. ಕೂಲಿಯೇ ಜೀವನಾವಾಗಿರುವಾಗ  ಬೇರೇನನ್ನೂ ನಿರೀಕ್ಷಿಸುವಂತೆಯೇ ಇರಲಿಲ್ಲ. ಮನೆಯವರ ಕಾಳಜಿಯೂ ಇರಲಿಲ್ಲ. ಹಾಗಾಗಿ  ಮಕ್ಕಳೆಲ್ಲ ಅಡ್ಡಾಡಿಕೊಂಡಿದ್ದವರೇ. ಹೀಗಿರುವಾಗಲೇ ಯಕ್ಷಗಾನದ ಹುಚ್ಚು ಹಚ್ಚಿಸಿಕೊಂಡು ಆಟದ ಮೇಲೆ ಆಟ ನೋಡುತ್ತಿದ್ದ ಗುಜ್ಜೂರರಿಗೆ ಮನ ಸೆಳೆದದ್ದು ಭಾಗವತಿಕೆ. ಆ ಕಾಲದ ಪ್ರಸಿದ್ಧ ಭಾಗವತರಾಗಿದ್ದ ತಿಮ್ಮಯ್ಯ ಹೆಗಡೆಯವರಲ್ಲಿ ಹೋಗಿ " ನನಗೂ ಹಾಡು ಹೇಳಿಕೊಡಿ" ಎಂದು ಕೇಳಿದಾಗ ಗೂಜ್ಜೂರರು ಇನ್ನೂ ಎಂಟು ವರ್ಷದ ಹುಡುಗ. ಹೃದಯವಂತರಾಗಿದ್ದ ಹೆಗಡೆಯವರು ಹುಡುಗನ ಆಸಕ್ತಿ ಕಂಡು ಅವನಿಗೆ ಭಾಗವತಿಕೆಯ ಶಿಕ್ಷಣ ನೀಡಲು ಒಪ್ಪಿದರು. ಅಂದಿನಿಂದ ಗುಜ್ಜೂರರಿಗೆ ಹೆಗಡೆಯವರಲ್ಲಿಯೇ ವಾಸ,  ಅಶನ , ಕೆಲಸ , ಭಾಗವತಿಕೆ ಶಿಕ್ಷಣ ಎಲ್ಲವೂ ಒದಗಿ ಬಂತು. ಹೆಗಡೆಯವರು ಮಾಡಿದ ಸಹಾಯವನ್ನು ನಾನು ಹೀಗೆ ಹೇಳಿದೆ. ಆದರೆ ಗುಜ್ಜೂರರು ಆ ಬಗ್ಗೆ ನನ್ನಲ್ಲಿ ಕಣ್ತುಂಬಿಕೊಂಡು ಹೇಳಿದ್ದರು " ಅವರು ನನ್ನ ಪಾಲಿನ  ದೇವರು.  ಅವರು ನನಗೆ ಎಲ್ಲವನ್ನೂ ಕೂಟ್ಟರು. ಪೆಟ್ಟು ಕೊಟ್ಟರು- ಬೆನ್ನು ತಟ್ಟಿದರು. ತಿದ್ದಿ ತೀಡಿದರು. ಅವರ ವಿದ್ಯೆಯನ್ನು ಒಂದು ಸ್ವಲ್ಪವೂ  ಉಳಿಯದಂತೆ ನನಗೆ ನೀಡಿದರು. ಇಂದು ಜನರು ನನ್ನ ಬಗ್ಗೆ ಅಭಿಮಾನ ತೋರಬಹುದು. ಆದರೆ ಆ ಅಭಿಮಾನಕ್ಕೆ ಕಾರಣರು ಹೆಗಡೆಯವರು. ಅವರು ಅಂದು ನನ್ನನ್ನು ಸ್ವೀಕರಿಸದೇ ಇದ್ದಿದ್ದರೆ ಇವತ್ತು ರಾಮ ಭಂಡಾರಿ ಯಾರು ಎಂದು ಕೇಳಬೇಕಾಗುತ್ತಿತ್ತು."  ಹಾಗೆಯೇ ಹೆಗಡೆಯವರೂ ಕೂಡ " ಭಂಡಾರಿಯಂತಹ ಇನ್ನೊಬ್ಬ ಹುಡುಗ ನನಗೆ ಸಿಗಲಿಲ್ಲ. ಅವನಿಗೆ ಕಲಿಸಿದ್ದು ವ್ಯರ್ಥವಾಗಲಿಲ್ಲ" ಎಂದು ಹೇಳಿದ್ದರೆಂದು ಕೇಳಿದ್ದೇನೆ. ಅದೇನೆ ಇದ್ದರೂ ಅವರಿಬ್ಬರಿಂದ ಶ್ರೀಮಂತವಾದದ್ದು ಯಕ್ಷರಂಗ ಎಂಬುದು ಯಕ್ಷಗಾನದ ಅಭಿಮಾನಿಗಳು ಒಪ್ಪಿಕೊಳ್ಳುವ ಮಾತು.
           ಯಕ್ಷಗಾನದಿಂದ  ಭಂಡಾರಿಯವರಿಗೆ ದೊಡ್ಡ ಹೆಸರು ಬಂದರೂ  ಮೈಮೇಲೆ ಹೇರಿಕೊಳ್ಳುವಷ್ಟು ಶ್ರೀಮಂತಿಕೆಯೇನೂ ಬರಲಿಲ್ಲ. ಏಕೆಂದರೆ ಅವರೆಂದೂ ಹಣದ ಹಿಂದೆ ಹೋದವರೇ ಅಲ್ಲ. ಗುಜ್ಜೂರರು ಭಾಗವತಿಕೆಗೆ ಬರಬೇಕೆಂದಾದರೆ 'ಗುಜ್ಜೂರರೆ ನಾಡಿದ್ದು ಬರಬೇಕು. ತಪ್ಪಿಸಬಾರದು' ಎಂದಿಷ್ಟೇ ಹೇಳಿಕೆಯೂ  ಸಾಕಾಗುತ್ತಿತ್ತು. ಅವರ ಈ ಮುಗ್ಧತೆಯನ್ನ ದುರುಪಯೋಗ ಮಾಡಿಕೊಂಡವರೆ ಹೆಚ್ಚು. ಇಷ್ಟೇ ಹಣ ಗುಜ್ಜೂರರೇ ಎಂದು ಒಂದು ರೂಪಾಯಿ ಕೊಟ್ಟಾಗಲೂ ಅವರು ಮರು ಮಾತಿಲ್ಲದೆ ತೆಗೆದುಕೊಂಡು ಬಂದ ಉದಾಹರಣೆಗಳು ಹಲವು ಇವೆ. ಕೆಲವು ಸಂದರ್ಭದಲ್ಲಿ ಆಟವಾಡಿಸಿದವರು ಮೇಳದವರು ಮುಂದಿನ ವಾರ ತಲುಪಿಸುತ್ತೇವೆ ಎಂದು ಹೇಳಿ ಆ ಮುಂದಿನ ವಾರ ಮುಂದೆಂದೂ ಬಾರದೇ ಹೋದದ್ದೂ ಇದೆ.  ಇಂತಹ ಪರಿಸ್ಥಿತಿ ಇದ್ದದ್ದರಿಂದ ಗುಜ್ಜೂರರು ಹಾಗೆಹೀಗೆ ಮಾಡಿ   ಸಣ್ಣದೊಂದು ಸೂರು ಮಾಡಿಕೊಂಡಿದ್ದರಷ್ಟೆ. ಇಬ್ಬರು ಮಕ್ಕಳನ್ನು ಶಾಲೆಗೆ ಸೇರಿಸುವಾಗ, ಹಬ್ಬದ ಬಂದಾಗ, ಮನೆಯವರಿಗೆ ಆರೋಗ್ಯ ತಪ್ಪಿದಾಗ ಹೀಗೆ ಹಲವು ಸಂದರ್ಭಗಳಲ್ಲಿ ಅವರು ನನ್ನಲ್ಲಿ ಹಣವನ್ನು ಕೇಳಿದ್ದು ಇದೆ. ಹಾಗೆ ಕೇಳುವಾಗ ಸಂಕೋಚ ಮಾಡಿ ನನ್ನಿಂದ ಬೈಸಿಕೊಂಡದ್ದೂ ಇದೆ. ತೆಗೆದುಕೊಂಡ ಹಣದಲ್ಲಿ ಒಂದು ಪೈಸೆಯನ್ನೂ ತಪ್ಪಿಸದೆ ಹಿಂದಿರುಗಿಸುವುದು ಅವರ ಜಾಯಮಾನ.  ನಿಜ ಹೇಳಬೇಕೆಂದರೆ ನಾನು ಅವರಿಗೆ ನೀಡಿದ ಒಂದು ರೂಪಾಯಿಗೂ ಲೆಕ್ಕ ಇಟ್ಟಿಲ್ಲ. ವಾಪಸ್ ಕೊಡಲಿ ಎಂದು ಆಶಿಸಲೂ ಇಲ್ಲ. ಅವರು ವಾಪಸ್ ನೀಡಿದಾಗ ಎಣಿಸಿ ನೋಡಿದವನೂ ಅಲ್ಲ. 
                   ಗುಜ್ಜೂರರಿಗೆ ಒಂದು ಆಸೆ ತುಂಬಾ ಇತ್ತು. ತಮ್ಮ ಮಗನೂ ತಮ್ಮಂತೆಯೇ ಭಾಗವತನಾಗಬೇಕೆಂದು ತುಂಬಾ ಹಂಬಲಿಸಿದ್ದರು.  ಈ ಕಲೆಯನ್ನು ತಮ್ಮ ನಂತರ ತಮ್ಮ ಕುಟಂಬದವರು ಮುಂದುವರೆಸಿಕೊಂಡು ಹೋಗಬೇಕೆಂಬ ಆಸೆ ಅವರದ್ದು. ಆದರೆ ಅವರ ಈ ಆಸೆ ಮನೆಯ ಉಳಿದವರಾರಿಗೂ ಒಪ್ಪಿತವಾಗಿರಲಿಲ್ಲ. ಹಾಗೆಂದು ಆಳವಾದ ಭಿನ್ನಾಭಿಪ್ರಾಯವಾಗಲಿ, ಜಗಳ ದೊಂಬಿಯಾಗಲಿ ಈ ವಿಷಯದಲ್ಲಿ ನಡೆಯಲಿಲ್ಲ. ಒಂದೊಮ್ಮೆ ಗುಜ್ಜೂರರು ಬಲವಂತ ಮಾಡಿದ್ದರೆ ಮಗ ಒಪ್ಪುತ್ತಿದ್ದನೇನೋ. ಆದರೆ ಗುಜ್ಜೂರರು ಬಲವಂತ ಮಾಡಲಿಲ್ಲ. ಅವರ ಮಗನಲ್ಲಿ ಒಮ್ಮೆ ಈ ವಿಷಯ ಮಾತನಾಡಿದಾಗ " ಅದು ದೊಡ್ಡ ಕಲೆಯೇನೋ ಹೌದು, ಆದರೆ ಅದರಲ್ಲಿ ಅಭಿಮಾನದ ಹೊರತಾಗಿ ಬೇರೇನೂ ಸಿಗುವುದಿಲ್ಲ.  ಓಡಾಟ ತಪ್ಪುವುದಿಲ್ಲ, ಮನೆಕಡೆಯೂ ಕೆಲಸ ಆಗುವುದಿಲ್ಲ." ಎಂದು ಹೇಳಿದಾಗಲೇ ಗುಜ್ಜೂರರು ಎಲ್ಲವನ್ನೂ ಅರ್ಥಮಾಡಿಕೊಂಡಿದ್ದರು. ಮಗನೂ ಅಷ್ಟೇ ಪೇಟೆಯಲ್ಲೊಂದು ಅಂಗಡಿಯನ್ನು ಇಟ್ಟುಕೊಂಡು ಜೀವನ ನಡೆಸುತ್ತಿದ್ದಾನೆ.ಅದೂ ಚೆನ್ನಾಗಿ ನಡಿತಾ ಇದೆ. ಓಡಾಟವೂ ಕಡಿಮೆ. ಅದಲ್ಲದೆ  ಇನ್ಶುರೆನ್ಸ್ ಏಜೆಂಟ್ ಕೂಡ ಆಗಿದ್ದಾನೆ ಅಂತ ನಾನು ಕೇಳಿದ್ದೇನೆ. ಹಾಗಾಗಿ ಗುಜ್ಜೂರರಿಗೆ ಈ ವಿಷಯದಲ್ಲಿ ಬೇಸರ ಮಾಡಿಕೊಳ್ಳುವಂತದ್ದೇನೂ ಇಲ್ಲ.
                  ಮತ್ತಾವುದನ್ನೂ ತಲೆಗೆ ಹಚ್ಚಿಕೊಳ್ಳದೆ ತಮ್ಮ ಭಾಗವತಿಕೆಯನ್ನೇ ಜೀವನವಾಗಿಸಿಕೊಂಡಿದ್ದ ರಾಮ ಭಂಡಾರಿಯವರಿಗೆ ಅದೇಕೆ ಈ ಕ್ಯಾನ್ಸರ್ ಬಂತು ಎಂದು ಯೋಚಿಸಿದಾಗ ಮನಸ್ಸು ಕವಳಿಸುತ್ತದೆ. ಅವರಿಗೆ ಕ್ಯಾನ್ಸರ್ ಎಂದು ತಿಳಿದಾಗ  ಅಕ್ಷರಶಃ ಕಣ್ಣೀರಿಟ್ಟ ಹಲವರು ಇದ್ದಾರೆ. ಅಂತವರಲ್ಲಿ ನಾನೂ ಒಬ್ಬ. ಆಗೀಗ ಬೀಡಿ ಸೇದುವುದನ್ನು  ಬಿಟ್ಟರೆ       ಅವರಿಗೆ ಬೇರೆ ಯಾವುದೇ ಚಟ ಅಂತ ಇರಲಿಲ್ಲ. ನಿದಾನವಾಗಿ ಎದೆನೋವು ಗಂಟಲು ನೋವು ಅಂತ ಶುರುವಾದ ಇದು ಕ್ಯಾನ್ಸರ್ ಅಂತ ತೀರ್ಮಾನವಾಗುವ ಹೊತ್ತಿಗೆ ಸುಮಾರು ಒಂದು ಒಂದೂವರೆ ವರ್ಷವೇ ಆಗಿತ್ತು. ಮೊದ ಮೊದಲು ಡಾಕ್ಟರು "ನೀವು ಭಾಗವತಿಕೆ ಕಡಿಮೆ ಮಾಡಿ" ಎಂದು ಹೇಳಿದ್ದರೂ ರಾಮ ಭಂಡಾರಿಗಳು ಅದನ್ನು ಗಂಭೀರವಾಗಿ ತೆಗೆದುಕೊಳ್ಳಲೇ ಇಲ್ಲ. ನನ್ನಲ್ಲೇ ಒಂದು ಬಾರಿ " ಈಗಿನ ಡಾಕ್ಟರ್ಗಳು ಹೇಗೆ ಅಂದ್ರೆ ಎದೆನೋವು ಬಂದರೆ ಹಾಡೋದು ಕಡಿಮೆಮಾಡು, ಗಂಟಲು ನೋವು ಬಂದ್ರೆ ತಿನ್ನೋದು ಕಡಿಮೆ ಮಾಡು ಅಂತಾರೆ. ಎಲ್ಲ ಸುಮ್ಮನೆ ಹೆದರಸೋದು" ಅಂತ ಡಾಕ್ಟರ್ಗಳ ಬಗ್ಗೆಯೇ ನಕ್ಕಿದ್ದರು. ನಾನೂ ಅವರ ಜೊತೆ ನಕ್ಕಿದ್ದೆ. ಆದರೆ ಅವರ ಎದೆನೋವು ಕ್ಯಾನ್ಸರ್ ಎಂದಾದಮೇಲೆ ಡಾಕ್ಟರ್ರು ಭಾಗವತಿಕೆ ನಿಲ್ಲಿಸುವುದಷ್ಟೇ ಅಲ್ಲ, ಮಾತಾಡುವುದನ್ನೂ ಕಡಿಮೆಮಾಡಬೇಕು" ಎಂದು ಹೇಳಿದಾಗ ಮಾತ್ರ ಅವರಿಗೆ ಉಸಿರಾಟವನ್ನೇ ನಿಲ್ಲಿಸಬೇಕು ಎಂದು ಹೇಳಿದಂತಾಯ್ತು. ಅಂದಿನಿಂದ ಅವರು ದೈಹಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗಿಹೋದರು. ಆ ಹೂತ್ತಿನಲ್ಲಿ ನಾನೊಮ್ಮೆ ಅವರ ಮನೆಗೆ ಹೋದಾಗ ಅವರು ನನ್ನನ್ನು ಅಪ್ಪಿಕೊಂಡು ಜೋರಾಗಿ ಅತ್ತುಬಿಟ್ಟರು. " ನಾನು ಭಾಗವತಿಕೆ ಮಾಡುವುದು ನಿಲ್ಲಿಸಬೇಕಂತೆ. ನಾನು ಜೀವನದಲ್ಲಿ ಭಾಗವತಿಕೆಯನ್ನು ಬಿಟ್ಟು ಬೇರೇನೂ ಕಲಿತಿಲ್ಲ. ಭಾಗವತಿಕೆಯೇ ಇಲ್ಲದೆ ನಾನು ಬದುಕೋದು ಹೇಗೆ? ನನ್ನ ಆಪರೇಶನ್ನಿಗಾಗಿ ಜನರೆಲ್ಲ ಸೇರಿ ಮೂರು ಲಕ್ಷ ಒಟ್ಟು ಮಾಡಿಕೊಟ್ಟಿದ್ದಾರಂತೆ. ಅವರು ಕೊಟ್ಟಿದ್ದು ನಾನು ಹಾಡಬೇಕು ಅಂತಲೇ ಅಲ್ಲವೆ...?". ನಾನು ಅವರನ್ನು ಸಮಾಧಾನ ಮಾಡುತ್ತ " ನೀವು ಮೊದಲು ಗುಣಮುಖರಾಗಿ. ಆಮೇಲೆ ನಾನೇ ನಿಮ್ಮನ್ನ ಮತ್ತೆ ಭಾಗವತಿಕೆ ಮಾಡುವಂತೆ ಮಾಡುತ್ತೇನೆ" ಎಂದು ಹೇಳಿದೆ. ಹಾಗೆ ಹೇಳಿದ್ದು ಹೌದಾದರೂ ಅದರಂತೆ ನಡೆಯಲಾಗಲಿಲ್ಲ. ನಾನು ಭೇಟಿಯಾಗಿ  ಎರಡುವಾರಕ್ಕೆ ರಾಮ ಭಂಡಾರಿಯವರು ತೀರಿಕೊಂಡರು.
           ನಾಳೆ ರಾಮ ಭಂಡಾರಿಯವರ ಹತ್ತನೇ ಪುಣ್ಯ ತಿಥಿಯಂತೆ. ಅಭಿಮಾನಿಗಳು ಅವರ ಹೆಸರಿನಲ್ಲಿ ಉದಯೋನ್ಮುಖ ಭಾಗವತರಿಗೆ ಪ್ರಶಸ್ತಿ ಕೊಡುತ್ತಾರಂತೆ. ಈ ಕಾರ್ಯಕ್ರಮಕ್ಕೆ ಗುಜ್ಜೂರು ರಾಮ ಭಂಡಾರಿಯವರ ಮಗ ನನ್ನನ್ನೂ ಕರೆದಿದ್ದಾನೆ. ಆದರೆ ನನಗೂ ಎರಡು ಬಾರಿ ಹೃದಯದ ಬೈಪಾಸ್ ಸರ್ಜರಿ ಆಗಿದೆ  ಜಾಸ್ತಿ ಓಡಾಡಬಾರದು ಅಂತ ಡಾಕ್ಟರ್ರು ಹೇಳಿದ್ದಾರೆ. ಹಾಗಾಗಿ ನಾನು ಆ ಕಾರ್ಯಕ್ರಮಕ್ಕೆ ಹೋಗ್ತಾ ಇಲ್ಲ. ಈಗೀಗ ಗುಜ್ಜೂರರ ಗಾನಗಳ ಧ್ವನಿಸುರಳಿಯನ್ನು ಕೇಳತಾನೇ ಕಾಲ ಕಳೆಯುತ್ತಾ ಇರುತ್ತೀನಿ.



( ಇದು ಬುಡದಿಂದ ತುದಿಯವರೆಗೂ ಸಂಪೂರ್ಣ ಕಾಲ್ಪನಿಕ ಕಥೆ)
ಚಿತ್ರಕೃಪೆ : ಗೂಗಲ್

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸವೆದ ಕಲ್ಲಿನ ಹಿಂದೆ (ಕಥೆ)

ಇಬ್ಬಗೆಯ ನೀತಿ ಏಕೆ?

ಬೆಳಕು ಬಿದ್ದೊಡನೆ (ಕಥೆ )