ಬೆಳಕು ಬಿದ್ದೊಡನೆ (ಕಥೆ )

      ಸುತ್ತಲೂ ದಟ್ಟ ಕಾಡು. 'ಟಿರ್..ಟಿರ್....ಟಿರ್...ಟಿರ್' ರಸ್ತೆಯ ಅಕ್ಕಪಕ್ಕದ ಮರಗಳಿಂದ ಹುಳಗಳು ಮಾಡುತ್ತಿದ್ದ ಸದ್ದು ರಾತ್ರಿಯ  ಮೌನವನ್ನು ಸೀಳಿ ಕಿವಿಗೆ ತಾಗುತ್ತಿತ್ತು.  ಕಾಡಿನ ಮಧ್ಯೆ ಅಂಕುಡೊಂಕಾಗಿ ಹಾದುಹೋಗಿದ್ದ ನಿರ್ಜನವಾದ ಕಚ್ಚಾ ರಸ್ತೆಯಲ್ಲಿ  ಅವರಿಬ್ಬರೂ ಸರಸರನೆ ಹೆಜ್ಜೆ ಹಾಕುತ್ತಾ ಮುಂದೆ ಸಾಗುತ್ತಿದ್ದರು. ತುಂಬಾ ದೂರದಿಂದ ನಡೆಯುತ್ತಿದ್ದುದರಿಂದ ಆ ತಂಗಾಳಿ ತೀಡುತ್ತಿದ್ದ ವಾತಾವರಣದಲ್ಲೂ ಅವರ ಮೈಯೆಲ್ಲ ಬೆವರಿತ್ತು. "ಇನ್ನೆಷ್ಟು ದೂರ ನಡೀಬೇಕು?" ನಡೆನಡೆದು ಆಯಾಸಗೊಂಡಿದ್ದ ಲಕ್ಷ್ಮಣ ಕೇಳಿದ. "ಇನ್ನು ಸ್ವಲ್ಪವೇ ದೂರ, ಮನೆ ಬಂದೇ ಬಿಡುತ್ತದೆ" ಈಗಾಗಲೆ ಮೂರು ನಾಲ್ಕು ಬಾರಿ ಹೇಳಿದ್ದನ್ನೇ ಮತ್ತೆ ಹೇಳಿದ ಮಂಜಯ್ಯ. "ಇದನ್ನೇ ಆವಾಗಿನಿಂದ ಹೇಳುತ್ತಾ ಇದ್ದೀಯ. ನಿನಗಾದರೂ ಗೊತ್ತಿದೆಯೋ ಇಲ್ವೋ ನಿಜವಾಗಿಯೂ ಎಷ್ಟು ದೂರ ಅಂತ" ಕೇಳಿದ  ಲಕ್ಷ್ಮಣ.  " ಹಗಲಲ್ಲಾದರೆ ದಾರಿ ಸಾಗಿದ್ದೇ ಗೊತ್ತಾಗೋದಿಲ್ಲ ಎಷ್ಟು ದೂರ ಬಂದು ತಲುಪಿದ್ದೀವಿ ಅಂತ ಆರಾಮಾಗಿ ಗೊತ್ತಾಗ್ತದಪ್ಪ. ಈ ರಾತ್ರಿಯಲ್ಲಿ ಹೇಗೆ ಹೇಳೋದು? ಕೈಯ್ಯಲ್ಲಿರೊ  ಲಾಟೀನಿನ ಬೆಳಕಲ್ಲಿ ಮುಂದೆರಡು ಮಾರು ಬಿಟ್ಟು ಬೇರೆನು ಕಾಣ್ತದೆ? ಅಂದಾಜು ಮೇಲೆ ಮಾತಾಡ್ತಾ ಇದ್ದೀನಿ.   ಬಾ ಇಲ್ಲೇ ಸ್ವಲ್ಪ ದೂರ ಹೋದರೆ ಆಯ್ತು" ಸರಸರನೆ ನಡೆಯುತ್ತಲೇ ಇರುವ ಸಮಸ್ಯೆಯನ್ನು ಹೇಳಿದ ಮಂಜಯ್ಯ. 
       ಲಾಟೀನಿನ ಬೆಳಕನ್ನೇ ಅನುಸರಿಸುತ್ತಾ ಮುನ್ನಡೆಯುತ್ತಿದ್ದ ಅವರಿಗೆ ಕೆಲ ಹೊತ್ತಿನ ನಂತರ ದೂರದಲ್ಲಿ ಮಸುಕಾದ ದೀಪ ಇರುವಂತೆ ತೋರಿತು.ಇವರ ಪ್ರತಿ ಹೆಜ್ಜೆ ಹೆಜ್ಜೆಗೂ ದೀಪ ಸ್ಪಷ್ಟವಾಗುತ್ತಾ ಬಂದಂತೆ ದೀಪದ ಬೆಳಕು ತೂರಿ ಬರುತ್ತಿದ್ದ ಕಿಟಕಿ, ಗೋಡೆಗಳು ತೆರೆದುಕೊಳ್ಳುತ್ತಾ ದೊಡ್ಡ ಮನೆಯ ಆಕೃತಿ ಸ್ಪಷ್ಟವಾಗಿ ಗೋಚರಿಸಿತು. ಮನೆಗಿಂತ ಐದಾರು ಮಾರು ಮೊದಲು ಸಿಕ್ಕಿದ ದಣಪೆಕೋಲಿನ ಗೇಟನ್ನು ಪಕ್ಕಕ್ಕೆ ಸರಿಸಿ ಒಳ ಬಂದು ಮನೆಯೊಳಕ್ಕೆ ಕಾಲಿಟ್ಟರು ಲಕ್ಷ್ಮಣ ಹಾಗೂ ಮಂಜಯ್ಯ. 
   " ಬನ್ನಿ ಬನ್ನಿ ಕೂತ್ಗೊಳ್ಳಿ. ತುಂಬಾ ತಡವಾಯ್ತಲ್ಲ ಬರೋದು.ಏನೂ ತೊಂದ್ರೆ ಆಗ್ಲಿಲ್ಲ ತಾನೆ?" ಇವರ ಆಗಮನವನ್ನೇ ಕಾಯುತ್ತಿದ್ದಾನೆ ಎಂಬಂತೆ  ವ್ಯಕ್ತಿಯೊಬ್ಬ ಕೇಳಿದ. " ತೊಂದ್ರೆ ಏನೂ ಆಗ್ಲಿಲ್ಲ. ರಾತ್ರಿಯಾಗಿದ್ರಿಂದ ಹಗಲಿನಷ್ಟು ಬೇಗ ಬರ್ಲಿಕ್ಕಾಗ್ಲಿಲ್ಲ ಅಷ್ಟೆ" ಪ್ರವೇಶಿಸಿದ ಹಜಾರದ ಎಡದಲ್ಲಿದ್ದ ಉದ್ದನೆಯ ಮಂಚವೊಂದರ ಮೇಲೆ ಕುಳಿತುಕೊಳ್ಳುತ್ತಾ ಹೇಳಿದ  ಮಂಜಯ್ಯ  ಹೇಳಿದ. ಅವನ ಪಕ್ಕದಲ್ಲಿಯೇ ಲಕ್ಷ್ಮಣನೂ ಆಸೀನನಾದ. ಅಪರಿಚಿತ ಜಾಗ, ಅಪರಿಚಿತ ಜನರು. ಲಕ್ಷ್ಮಣ ಮಾತಾಡುವುದೇನೂ ಇಲ್ಲದೆ ಸುಮ್ಮನೆ ಇದ್ದ. ಲಕ್ಷ್ಮಣನ ಪರಿಸ್ಥಿತಿ ಅರಿತ ಮಂಜಯ್ಯ  ತಾನೇ " ಲಕ್ಷ್ಮಣ , ಇವರು ಯಾರು ಅಂತ ಗೊತ್ತಾಗ್ಲಿಲ್ವ ನಿಂಗೆ?  ಇವರೇ ಸದಾಶಿವಯ್ಯನವರು. ನಾನು ನಿನ್ನನ್ನ ಕರ್ಕೋಂಡು ಹೋಗೋಕೆ ಬಂದಿದ್ದೀನಿ ಅಂದಾಗ ಅನುಮಾನ ಪಟ್ಟೆ ಅಲ್ವಾ ನೀನು? ಈಗೇನಂತೀಯ? ನೀನೇನೂ ಯೋಚನೆ ಮಾಡಬೇಡ. ನಿನ್ನ ಇಲ್ಲಿಗೆ ಕರೆತರೋದಷ್ಟೆ ನನ್ನ ಕೆಲಸ ಆಗಿತ್ತು. ಇವರು ಮುಂದಿನದೆಲ್ಲ ನೋಡ್ಕೋತಾರೆ.  ನಿನ್ನಂತ ಕನಸುಗಾರರೇ ಇವರಿಗೆ ಬೇಕು. " ಎಂದು ಲಕ್ಷ್ಮಣನ ಭುಜದಮೇಲೆ ಕೈಯಿರಿಸುತ್ತ ಆತ್ಮೀಯತೆಯಿಂದ ನುಡಿದ. ಸದಾಶಿವಯ್ಯನ ಕಡೆಗೆ ನೋಡಿ ನಮಸ್ಕರಿಸಿದ ಲಕ್ಷ್ಮಣ. ಆ ನಮಸ್ಕಾರವನ್ನು ಆತ ಗಮನಿಸಿದಂತೆ ಕಾಣಲಿಲ್ಲ.
        ಎಂಟ್ಹತ್ತು ಕಿಲೋಮಿಟರುಗಳಷ್ಟು ನಡೆದಿರಬಹುದೇನೊ ಅವರು. ಅದೂ ಅಲ್ಲದೆ ಅಂಕುಡೊಂಕಾದ ಗುಡ್ಡಗಾಡಿನ ರಸ್ತೆ. ಹಾಗಾಗಿ ಆಯಾಸವಾಗಿತ್ತು,ಜೊತೆಗೆ ಹಸಿವೂ ಆಗಿತ್ತು. ಗೋಡೆಯ ಮೇಲೆ ಇದ್ದ ಗಡಿಯಾರದ ಮುಳ್ಳುಗಳು ರಾತ್ರಿಯ ಹತ್ತೂವರೆ ಸಮಯವನ್ನು  ತೋರಿಸುತ್ತಿದ್ದವು. ಗಡಿಯಾರದ ಪಂಡಲಮ್ ಯಾವ ಕ್ಷಣವನ್ನೂ ನಿಲ್ಲಗೊಡದೆ ಮುಂದಕ್ಕೆ ತಳ್ಳುತ್ತಿತ್ತು. " ನೀವು ಈಗ ಒಂದು ಸ್ನಾನ ಮಾಡಿಬಿಡಿ. ನಂತರ ಊಟಮಾಡಿ ಬೆಳಗಿನವರೆಗೂ ವಿಶ್ರಾಂತಿ ಪಡೆಯಬಹುದು" ಬೆವರಿದ ಅವರ ಬಟ್ಟೆಗಳನ್ನು ಗಮನಿಸುತ್ತಾ ಸದಾಶಿವಯ್ಯ ಹೇಳಿದ.  ಅದನ್ನೇ  ಬಯಸುತ್ತಿದ್ದ ಮಂಜಯ್ಯ ಹಾಗೂ ಲಕ್ಷ್ಮಣ ಇಬ್ಬರೂ ಸ್ನಾನ  ಮುಗಿಸಿ ಬಂದು ಮತ್ತೆ ಅಲ್ಲಿಯೇ ಆಸೀನರಾದರು. ಉಟ್ಟ ಬಟ್ಟೆಯ ಹೊರತು ಬೇರೇನೂ ಇರದಿದ್ದ ಲಕ್ಷ್ಮಣನಿಗೆ ತನ್ನದೇ ಇನ್ನೊಂದು ಜೊತೆಯ ಬಟ್ಟೆಯನ್ನು ಮಂಜಯ್ಯ  ನೀಡಿದ.
     
"ಮಹಾದೇವಿ , ಇವರಿಗೆ ಊಟ ಹಾಕಮ್ಮ ತುಂಬ ಹಸಿದಿದ್ದಾರೆ" ಎಂದು ಸದಾಶಿವಯ್ಯ ಕೂಗಿ ಹೇಳಿದಾಗಲೇ ಈ ಮನೆಯಲ್ಲಿ ಇನ್ನೂ ಒಬ್ಬರು ಇದ್ದಾರೆ ಎಂಬ ವಿಷಯ ತಿಳಿಯಿತು ಲಕ್ಷ್ಮಣನಿಗೆ.  ಎರಡು ಬಾಳೆ ಎಲೆಗಳೊಂದಿಗೆ ಹುಡುಗಿಯೊಬ್ಬಳು ಒಳಗಿನಿಂದ ಬಂದು ಹಜಾರದಲ್ಲಿ ಇವರು ಕುಳಿತಿದ್ದ ಮಂಚದ ನೆಲದ ಪಕ್ಕದಲ್ಲಿ ಅವುಗಳನ್ನು ಹಾಸಿ ಹೋದಳು. ವಯಸ್ಸಿನ್ನೂ ಹದಿನೆಂಟು ಇಪ್ಪತ್ತಿತ್ತೇನೊ. ತಲೆ ತಗ್ಗಿಸಿ ಬಂದು ತಲೆ ತಗ್ಗಿಸಿಕೊಂಡೇ ಹೋದ ಅವಳ ನಡೆವಳಿಕೆಯನ್ನು ಲಕ್ಷ್ಮಣ ಗಮನಿಸಿದ. ಒಂದೂ ಮಾತನಾಡದೆ ಮಾಡಿದ ಅಡುಗೆಯನ್ನೆಲ್ಲ ಒಂದೊಂದಾಗಿ ತಂದು ಬಡಿಸುತ್ತಿದ್ದಳು. ಸದಾಶಿವಯ್ಯನೇ "ಇನ್ನಷ್ಟು ಹಾಕಿಕೊಳ್ಳಿ-ಮತ್ತಷ್ಟು ಹಾಕಿಕೊಳ್ಳಿ" ಅಂತ  ಒತ್ತಾಯ ಮಾಡುತ್ತಿದ್ದ. ಹಸಿವೆಗೆ ತಕ್ಕಂತೆ ಊಟ ಮಾಡಿ ಎದ್ದರು. ಕೈತೊಳೆದು ಬರುವಾಗ ಅದೇ ಹುಡುಗಿ ಲಗುಬಗೆಯಿಂದ ಇವರಿಬ್ಬರ ಮಲಗುವ ಏರ್ಪಾಡು ಮಾಡುತ್ತಿರುವುದನ್ನು ಲಕ್ಷ್ಮಣ ನೋಡಿದ. ಅವಳ ಚುರುಕುತನ ಅವನಿಗೆ ಇಷ್ಟವಾಯಿತು. ನಡೆದ ದಣಿವಿನ ಜೊತೆಗೆ ಉಂಡ ಊಟ ಲಕ್ಷ್ಮಣ ಹಾಗೂ ಮಂಜಯ್ಯ  ಇಬ್ಬರನ್ನೂ ಹಾಸಿಗೆಗೆ ದೂಡಿತು.
             ಮಲಗಿದ ಕೆಲವೇ ನಿಮಿಷಕ್ಕೆ ಮಂಜಯ್ಯ ನಿದ್ದೆಗೆ ಜಾರಿದರೂ ಲಕ್ಷ್ಮಣನಿಗೆ ನಿದ್ದೆ ಬರಲಿಲ್ಲ. ದಿಂಬಿಗೆ ತಲೆ ಆನಿಸುತ್ತಲೇ ಅವನ ಮನಸ್ಸೊಳಗಿನ ಆ ಬಲಿದಾನದ ಕನಸಿನ ಕದ ತೆರೆಯಿತು. ಅವನ ಆ ಕನಸು ಅವನದೇ ವಯಸ್ಸಿನ ಹೆಚ್ಚಿನ ಎಲ್ಲಾ ಯುವಕರ ಕನಸಾಗಿತ್ತು. ' ಭಗತ್ ಸಿಂಗ್,  ಸುಖದೇವ್ ಹಾಗೂ ರಾಜಗುರು ಅವರುಗಳ ತ್ಯಾಗದ ಪ್ರೇರಣೆಯನ್ನು ಎಂತಹ ಸಂದರ್ಭದಲ್ಲಿಯೂ ನಾನು ಕಳೆದುಕೊಳ್ಳಬಾರದು. ಸ್ವತಂತ್ರ ರಾಷ್ಟ್ರದ ಸ್ವತಂತ್ರ ಗಾಳಿಯನ್ನೇ ನಾನು ಉಸಿರಾಡಬೇಕು. ಸಾಧ್ಯವಾಗದಿದ್ದರೆ ಉಸಿರು ಹೋಗಬೇಕು. ಯಾವ ಕ್ಷಣದಲ್ಲಿಯೂ ದಾರಿ ಮರೆಯಬಾರದು.' ತನ್ನ ಯೋಚನೆಯ ನಡುವೆ ಯಾವಾಗಲೋ ನಿದ್ದೆ ಆತನಿಗೆ ಅರಿವಿಲ್ಲದಂತೆಯೇ  ಆವರಿಸಿತು.
        ****
       
  ಚುಮು ಚುಮು ಬೆಳಗು ಇಬ್ಬನಿಯ ಹನಿಗಳು  ಹೂ ಹಸಿರನ್ನೆಲ್ಲ ಮುತ್ತಿದ್ದ ಸಮಯ. ಸದಾಶಿವಯ್ಯ ಹಾಗೂ ಮಂಜಯ್ಯ ಇಬ್ಬರೂ ಆ ಸಮಯದಲ್ಲಾಗಲೇ ಎದ್ದು ಮನೆಯ ಹೊರಭಾಗದದಲ್ಲಿದ್ದ ನೀರಿನ ತೊಟ್ಟಿಯ ಸಮೀಪದಲ್ಲಿ ನಿಂತು ಸಣ್ಣಧ್ವನಿಯಲ್ಲಿ ಮಾತಾಡುತ್ತಿದ್ದರು.  "ಇನ್ನಿಬ್ಬರನ್ನ ಯಾವಾಗ ಕರೆದುಕೊಂಡು ಬರ್ತೀಯ  ಮಂಜಯ್ಯ? ಒಬ್ಬೊಬ್ಬರನ್ನೇ ಕರೆದುಕೊಂಡು ಬರ್ತಾ ಕೂತರೆ ಆಗೋದಿಲ್ಲ. ಎರಡು ಸಾವಿರ ರೂಪಾಯಿ ಕೈ ತಪ್ಪಿ ಹೋಗ್ತದೆ. ಆಮೇಲೆ ನಂಗೂ ಇಲ್ಲ ನಿಂಗೂ ಇಲ್ಲ. ಬಿಟ್ಟಿ ಊಟ ಕೊಟ್ಟದ್ದು ಬಿಟ್ಟು ಬೇರೇನೂ  ಲಾಭ ಇಲ್ಲ ನಂಗೆ" ಅಸಹನೆಯ ಧ್ವನಿಯಲ್ಲಿ ಹೇಳುತ್ತಿದ್ದ  ಸದಾಶಿವಯ್ಯ. ಅವನ ಆ ಮಾತು ಮಂಜಯ್ಯನಿಗೂ ಸಹನೆಯಾಗಲಿಲ್ಲ. "ನೀವು ಹೇಳಿದಷ್ಟು ಸುಲಭ ಅಲ್ಲ. ಅವರನ್ನ ನಂಬಿಸಿ ಕರೆದುಕೊಂಡು ಬರಬೇಕು. ಅಷ್ಟು ಸುಲಭಕ್ಕೆ ಅವರು ಯಾರ ಮಾತನ್ನೂ ನಂಬೋದಿಲ್ಲ.  ಎಲ್ಲರೂ ಒಟ್ಟಿಗೇ ಹೊರಡೋದಿಲ್ಲ. ಇವನನ್ನ ಹೂರಡಿಸಬೇಕಿದ್ದರೇನೇ ಎಷ್ಟೊಂದು ಕಷ್ಟ ಆಯ್ತು ಗೊತ್ತಾ? ನಂಬಿಸಿ ಕರೆದುಕೊಂಡು ಬರಬೇಕು. ನೀವು ಸ್ವಲ್ಪ ಕಾಯ್ರಿ. ಪ್ರತಿಯೊಬ್ಬರನ್ನೂ ಇಲ್ಲಿಗೆ ಕರೆದುಕೊಂಡು ಬರ್ತೀನಿ" ಮಂಜಯ್ಯ ಗಂಭೀರವಾಗಿಯೇ  ತನ್ನ ಕೆಲಸ ಸುಲಭದ್ದಲ್ಲ, ತುಂಬಾ ಶ್ರಮವಹಿಸಬೇಕು ಎನ್ನುವ ಭಾವನೆಯಲ್ಲಿ ನುಡಿದ. " ಆಯ್ತು, ಈಗ ಮೊದಲು ಹೋಗಿ ಪೇಟೆಯ ಪೋಲೀಸರಿಗೆ ಇವನ ವಿಷಯ ತಿಳಿಸಿ ಬಾ" ಎಂದ ಸದಾಶಿವಯ್ಯ. "ಈಗ ತಕ್ಷಣ ಮನೆಗೆ ಹೋಗುತ್ತೀನಿ.  ನನಗೊಂದು 10 ರೂಪಾಯಿ ಕೊಡಿ. ಮನೆಗೆ ಕೊಟ್ಟು ಸಂಜೆ ಪೇಟೆಗೆ ಹೋಗಿ ಪೋಲೀಸರನ್ನ ಕರೆದುಕೊಂಡು ಬರೋದು ನಾಳೆಯೇ ಆಗಬೋದು" ಮಂಜಯ್ಯ ಹೇಳಿದ. "ಸರಿ, ಹಣಕೋಡ್ತೇನೆ. ತಗೊಂಡು ಹೋಗು" ಎಂದು ಹೇಳಿ  ನೀರಿನ ತೊಟ್ಟಿಯಲ್ಲಿದ್ದ ನೀರಿನಿಂದ  ಮುಖ ತೊಳೆಯಲು ಪ್ರಾರಂಭಿಸಿದ. ಮಂಜಯ್ಯನೂ ಕೈಲಿದ್ದ ಬೇವಿನ ಕಡ್ಡಿಯನ್ನು ಹಲ್ಲಿನ ಸಂದುಗೊಂದುಗಳಲ್ಲೆಲ್ಲ ಉಜ್ಜತೊಡಗಿದ.
                                     ****
      ಗಾಢ ನಿದ್ದೆಯಲ್ಲಿದ್ದ  ಲಕ್ಷ್ಮಣನಿಗೆ ಒಮ್ಮೆಲೆ ಎಚ್ಚರಾಯಿತು. ತಾನು ಎಲ್ಲಿದ್ದೇನೆಂದು ಅರಿವಾಗಲು ನಾಲ್ಕಾರು ಕ್ಷಣಗಳೇ ಬೇಕಾದವು. ಪಕ್ಕದಲ್ಲಿ ಮಲಗಿದ್ದ ಮಂಜಯ್ಯ ಇರಲಿಲ್ಲ. ತಕ್ಷಣವೇ ಹಾಸಿಗೆಯಿಂದ ಎದ್ದುನಿಂತ ಅದೇ ಹೊತ್ತಿಗೆ ಸರಿಯಾಗಿ ಮಂಜಯ್ಯ ಬಂದ. "ನಿದ್ದೆ ಬಂತಾ ಚೆನ್ನಾಗಿ? ನಿನ್ನೆಯ ಆಯಾಸವೆಲ್ಲ ಪರಿಹಾರವಾಯ್ತ? ಇವತ್ತೊಂದು ದಿನ ಆರಾಮವಾಗಿ ಇದ್ದುಬಿಡು  ಇಲ್ಲಿ. ನಾಳೆಯ ಹೊತ್ತಿಗೆ ಆಯಾಸವೆಲ್ಲ  ಸಂಪೂರ್ಣ ಹೋಗಿರ್ತದೆ" ತಾನು ತಂದ ಚೀಲದಲ್ಲಿ ತನ್ನ ನೆನ್ನೆಯ ಬಟ್ಟೆಗಳನ್ನು ತುಂಬುತ್ತಾ ಹೇಳಿದ ಮಂಜಯ್ಯ.  ಆತನ ಮಾತು ಲಕ್ಷ್ಮಣನಿಗೆ ವಿಚಿತ್ರವಾಗಿ ತೋರಿತು. " ನಾನು  ಇಲ್ಲಿ ಆರಾಮವಾಗಿ ಇದ್ದುಬಿಡಲು ಬಂದದ್ದಲ್ಲ. ಇವರು ಕೊಡೋ ಹಣವನ್ನ ತಗೋಂಡು ಈಗಲೇ ಹೋಗಿಬಿಡ್ತೀನಿ. ಸುಮ್ಮನೆ ಇಲ್ಲಿ ಏಕೆ  ಸಮಯ ವ್ಯರ್ಥ ಮಾಡುತ್ತಾ ಕುಳಿತುಕೊಂಡಿರಲಿ?" ಕೇಳಿದ ಲಕ್ಷ್ಮಣ.  ಲಕ್ಷ್ಮಣನ ಮಾತು  ಗಂಭೀರವಾದದ್ದೇ ಅಲ್ಲ ಎನ್ನುವಂತೆ " ಅಯ್ಯೋ ಇರಯ್ಯ. ಹೋಗಿ ಕಡಿದು ಗುಡ್ಡೆ ಹಾಕುವಂತದ್ದು  ಏನಿದೆ" ಎನ್ನುತ್ತ ತನ್ನ ಕೈ ಚೀಲ ಹಿಡಿದು ಮನೆಯಿಂದ ಹೊರಟ. ಆತ ಹೊರಟದ್ದನ್ನು ಕಂಡು " ನೀನೆಲ್ಲಿ ಹೊರಟೆ ಈಗ?" ಕೇಳಿದ ಲಕ್ಷ್ಮಣ.  " ಹೊರಡುವಾಗ ಎಲ್ಲಿಗೆ ಅಂತ ಕೇಳ್ತೀಯಲ್ಲ, ಅಷ್ಟೂ ಗೊತ್ತಾಗೋದಿಲ್ವ ನಿಂಗೆ?" ಎಂದು ಕೇಳುತ್ತಾ ದಣಪೆಯ ಗೇಟನ್ನು ತೆಗೆದು ಮುಂದಕ್ಕೆ ನಡೆದ ಮಂಜಯ್ಯ.  ಆತನ ಈ ರೀತಿ ವಿಚಿತ್ರವಾಗಿ ಕಂಡು ಅವನು ಹೋದ ಕಡೆಗೆ ನೋಡುತ್ತಾ ನಿಂತ ಲಕ್ಷ್ಮಣ. 
            "ಮುಖ ತೊಳೆದು ಬಂದಾಯ್ತ? ನೀವು ಈಗ ಏನಾದರೂ ಕುಡಿತೀರ?" ಮಂಜಯ್ಯ ಹೋದ ಕಡೆಗೆ ನೋಡುತ್ತಿದ್ದ ಲಕ್ಷ್ಮಣ ಈ ಮಾತನ್ನು ಕೇಳಿ ಹಿಂದಿರುಗಿ ನೋಡಿದ. ಮಹಾದೇವಿ ನಿಂತಿದ್ದಳು. ನಿನ್ನೆಯ ದಿನ ಒಂದು ಮಾತೂ ಆಡದಿದ್ದವಳು ಮೊದಲಬಾರಿಗೆ ಲಕ್ಷ್ಮಣನಲ್ಲಿ ಮಾತಾಡಿದ್ದಳು. "ಇಲ್ಲ... ಇಲ್ಲ.... ಮು...ಖ .. ತೊಳೆದಾಗಿಲ್ಲ. ಈಗ ತೊಳೆಯುತ್ತೀನಿ" ಎಂದು   ಹೊರಭಾಗದ ತೊಟ್ಟಿಯತ್ತ ಹೊರಟವನು ತಿರುಗಿ ಕೇಳಿದ " ಅವರು..... ಸದಾಶಿವಯ್ಯನವರು ಎಲ್ಲಿ?".   "ಅಪ್ಪ ಈಗಷ್ಟೆ ತಿಂಡಿ ತಿಂದು ಹೋದರು, ಪಕ್ಕದ ಊರಿನಲ್ಲೇನೋ ಪಂಚಾಯತಿಗೆ ಇದೆಯಂತೆ" ಎಂದು ಹೇಳಿ ಮಹಾದೇವಿ ಒಳಕ್ಕೆ ಹೋದಳು. 
                 ಮುಖಮಾರ್ಜನ ಮುಗಿಸಿ ಬಂದ ಲಕ್ಷ್ಮಣನಿಗೆ ಬಿಸಿಯಾದ ತಿಂಡಿ ಕಾದಿತ್ತು. ಆದರೆ ತಿಂಡಿಯ ಯೋಚನೆ ಆತನಿಗೆ ಇರಲೇ ಇಲ್ಲ. ಮಂಜಯ್ಯ ಹೀಗೆ ಬಿಟ್ಟು ಹೋದದ್ದಲ್ಲದೆ ಅವನ ಮಾತಿನ ಧಾಟಿ ಬದಲಾದದ್ದೂ ಲಕ್ಷ್ಮಣನನ್ನು ಯೋಚನೆಗೆ ಹಚ್ಚಿತ್ತು. ಅದೇ ಯೋಚನೆಯಲ್ಲಿ ತಿಂಡಿತಿನ್ನುತ್ತಿದ್ದ ಲಕ್ಷ್ಮಣನನ್ನು ಮಹಾದೇವಿ ಕೇಳಿದಳು " ನೀವು ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿರೋ ಲಕ್ಷ್ಮಣ ಪಾಟೀಲ ಅಲ್ಲವೆ?" ಲಕ್ಷ್ಮಣ ಆಕೆಯ ಮುಖವನ್ನೇ ನೋಡಿ  ಹೌದು ಎನ್ನುವಂತೆ ತಲೆಯಾಡಿಸಿದ. "ನೀವು ಹಿಂದಿನ  ತಿಂಗಳು ನಡೆದ ರೈಲು ದರೋಡೆ, ಅಂಚೆ ಕಚೇರಿ ಧ್ವಂಸದಲ್ಲಿ ಭಾಗವಸಿದ್ದಿರಿ ಅಲ್ಲವೆ?"ಮತ್ತೊಂದು ಪ್ರಶ್ನೆ ಆಕೆಯಿಂದ ಬಂತು. ಹೌದು ಎಂದು ತಲೆಯಾಡಿಸಿ ಆಕೆಯನ್ನೇ ನೋಡಿದ ಲಕ್ಷ್ಮಣ.  ಮಂಜಯ್ಯ ಹಾಗೆ ಹೇಳದೇ ಕೇಳದೇ ಹೋದದ್ದಕ್ಕೂ, ಮಹಾದೇವಿ ಕೇಳುವ ಪ್ರಶ್ನೆಗಳಿಗೂ  ಸಂಬಂಧವಿದೆ ಎನ್ನಿಸಿ ಅಪಾಯವೇನೋ ಇದೆ ಎನ್ನಿಸಿತು. ಆಗಲೇ ಮಹಾದೇವಿಯಿಂದ  ಇನ್ನೊಂದು ಪ್ರಶ್ನೆ ಬಂತು "ಮಂಜಯ್ಯ ನಿಮಗೆ ಹೇಗೆ ಪರಿಚಯ? ನಿಮ್ಮನ್ನು ಏನು ಹೇಳಿ ಕರೆದುಕೊಂಡು ಬಂದ ಇಲ್ಲಿಗೆ?" ಲಕ್ಷ್ಮಣ ಆಕೆಗೆ ಇದ್ದ ವಿಷಯ ಹೇಳಿದ "ಮಂಜಯ್ಯ ನನ್ನದೇ ಊರಿನವನೇ. ಮೊದಲಿನಿಂದಲೂ ಪರಿಚಯ. ಸದಾಶಿವಯ್ಯನವರು ಸ್ವಾತಂತ್ರ್ಯ ಹೋರಾಟಗಾರರ ಹೋರಾಟಕ್ಕೆ ಸಹಾಯ ಮಾಡುತ್ತಾರೆ. ನಮ್ಮ ಹೋರಾಟಕ್ಕೆ ಹಣದ ಅವಶ್ಯಕತೆ ಇದೆ. ಇವರು ನೀಡುತ್ತಾರೆ ಅಂತ ನನ್ನನ್ನು ಕರೆದುಕೊಂಡು ಬಂದ". ತನ್ನ ಕಡೆಗೇ ನೋಡಿ ಮಾತಾಡುತ್ತಿದ್ದ ಅವನನ್ನು ನೋಡಿ ನಸುನಕ್ಕಳು ಮಹಾದೇವಿ. "ಹೀಗೇಕೆ ನಗುತ್ತಿದ್ದೀರಿ" ಎಂದು ಕೇಳುವಂತೆ ಆಕೆಯನ್ನೇ ನೋಡಿದ ಲಕ್ಷ್ಮಣ.  " ನೀವೆಷ್ಟು ಮುಗ್ಧರಿದ್ದೀರಿ. ದೇಶಪ್ರೇಮದ ಹೊರತು ಬೇರೇನೂ ಗೊತ್ತೇ ಇಲ್ಲ ನಿಮಗೆ. ಮಂಜಯ್ಯ ನಿಮ್ಮನ್ನು ಇಲ್ಲಿಗೆ ಕರೆತಂದದ್ದು ನಿಮಗೆ ಹಣಕೊಡಿಸಬೇಕೆಂದಲ್ಲ. ತಾನು ಹಣ ಗಳಿಸಲಿಕ್ಕಾಗಿ. ನಿಮ್ಮನ್ನು ಹಿಡಿದುಕೊಟ್ಟರೆ ಎರಡು ಸಾವಿರ ರೂಪಾಯಿ ನಗದು ಬಹುಮಾನ ನೀಡುವುದಾಗಿ ಸರಕಾರ ಘೋಷಿಸಿದೆ. ಆ ಬಹುಮಾನ ಗಳಿಸಲಿಕ್ಕಾಗಿ ನನ್ನ ತಂದೆ ಹಾಗೂ ಮಂಜಯ್ಯ ಉಪಾಯದಿಂದ ನಿಮ್ಮನ್ನು ಇಲ್ಲಿಗೆ ಕರೆತಂದದ್ದು" ಹೇಳಿದಳು ಮಹಾದೇವಿ. ಆಕೆಯ ಮಾತುಗಳನ್ನ ಕೇಳಿ ಲಕ್ಷ್ಮಣನ ಎದೆ ದಸಕ್ಕೆಂದಿತು. ವಂಚನೆಯ ಜಾಲದಲ್ಲಿ ತಾನು ಇದ್ದೇನೆಂದು ಗೊತ್ತಾದ ತಕ್ಷಣ ಧಡಕ್ಕನೆ ಎದ್ದು ನಿಂತ.  "ನಿಮಗೆ ಈಗ ಇಲ್ಲಿ ಯಾವುದೇ ರೀತಿಯ ತೊಂದರೆ ಇಲ್ಲ. ನಿಮ್ಮನ್ನು ಬಂಧಿಸುವುದಾದರೂ ಅದು ನಾಳೆ. ಅಲ್ಲದೆ ನಾನಿರುವ ವರೆಗೂ ನಿಮಗೆ ಬಂಧನದ ಭೀತಿ ಬೇಡ. ನೀವೀಗ ನಿಶ್ಚಿಂತೆಯಿಂದ ತಿಂಡಿ ತಿನ್ನಿ" ತಣ್ಣನೆಯ ಧ್ವನಿಯಲ್ಲಿ ಹೇಳಿದಳು ಮಹಾದೇವಿ. ಕಣ್ಣು ಕದಲಿಸದೆ ಆಕೆಯೆಡೆಗೇ ನೋಡುತ್ತಾ ಕುಳಿತ ಲಕ್ಷ್ಮಣ. 
                                      ******
     
ಹಜಾರದ ಮಂಚದ ಮೇಲೆ ಯೋಚನಾಮಗ್ನನಾಗಿ ಕುಳಿತಿದ್ದ ಲಕ್ಷ್ಮಣ.  ಎಷ್ಟು ಮಾಡಿದರೂ ಅಲ್ಲಿರಲು ಮನಸ್ಸೊಪ್ಪಲಿಲ್ಲ. ವಿಶ್ವಾಸಘಾತಕರ ಮನೆಯ ಅನ್ನ ತಿಂದೆನಲ್ಲ ಎನ್ನಿಸುತ್ತಿತ್ತು ಅವನಿಗೆ.  ಇಂತಹ ಅಪಾಯದ ಬಗ್ಗೆ ತಿಳಿಸಿದ ಮಹಾದೇವಿಗೆ ಧನ್ಯವಾದಗಳನ್ನು ಹೇಳಿ ಹೋಗೋಣವೆಂದು ಅಡುಗೆಮನೆಗೆ ನಡೆದ. ಅಲ್ಲಿ ಮಹಾದೇವಿ ಏನೋ ಕೆಲಸ ಮಾಡುತ್ತಿದ್ದಳು. "ಮಹಾದೇವಿಯವರೆ..."  ಆತ ಕರೆದಾಗ ಆಕೆ ತಿರುಗಿ  ನೋಡಿದಳು. "ನಿಮ್ಮಿಂದ ನನಗೆ ತುಂಬಾ ಉಪಕಾರವಾಯಿತು. ನೀವು ನನ್ನ ರಕ್ಷಿಸಿದ್ದಕ್ಕಿಂತ ಹೆಚ್ಚಾಗಿ ನನ್ನ ಹೋರಾಟವನ್ನ ರಕ್ಷಿಸಿದಿರಿ. ಜೊತೆಯ ಪರಿಚಿತ ಮಂಜಯ್ಯ ವಿಶ್ವಾಸಘಾತುಕನಾಗಿದ್ದ. ಪರಿಚಯವೇ ಇಲ್ಲದ ನೀವು ಉಪಕಾರಿಯಾದಿರಿ. ನಿಮಗೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಕಡಿಮೆಯೇ. ಭಾರತ ಮಾತೆಯ ಒಡಲಲ್ಲಿ  ನಿಮ್ಮಂತ ಪುತ್ರಿಯರು ಇರುವವರೆಗೂ ನನ್ನಂತವರ ಹೋರಾಟಕ್ಕೆ ಸೋಲಾಗುವುದಿಲ್ಲ.  ನಿಮಗೆ ಎಂದೆಂದಿಗೂ ಕೃತಜ್ಞನಾಗಿರುತ್ತೇನೆ. ನಾನಿನ್ನು ಹೊರಡುತ್ತೇನೆ" ಎಂದು ಆಕೆಗೆ ಕೈ ಮುಗಿದು ಆಕೆಯನ್ನೇ ದಿಟ್ಟಿಸಿ ನೋಡಿದ. ಮಹಾದೇವಿ ಆತನನ್ನೇ  ನೋಡಿದಳು. ಆಕೆಯ ಕಂಗಳಲ್ಲಿ ನೀರು ತುಂಬಿತ್ತು. ಆಕೆ ಲಕ್ಷ್ಮಣನಿಗೆ ಕೈಮುಗಿದು ಹೇಳಿದಳು " ನೀವು ಈಗ ನನಗೆ ಉಪಕಾರ ಮಾಡಬೇಕು. ನೀವೀಗ ಹೊರಟು ಹೋದರೆ  ನನ್ನ ತಂದೆ ನನ್ನನ್ನು ಸುಮ್ಮನೆ ಬಿಡುವುದಿಲ್ಲ.   ಅವರ ಉದ್ದೇಶ ಗೊತ್ತಿದ್ದದ್ದು  ನನಗೆ ಮಾತ್ರ.  ಅವರ ಯೋಜನೆ ನನಗೆ ಇಷ್ಟವಾಗುವುದಿಲ್ಲ ಎನ್ನುವುದೂ ಅವರಿಗೆ ತಿಳಿದಿದೆ. ಹಾಗಾಗಿ ನೀವು ತಪ್ಪಿಸಿಕೊಂಡು ಓಡಿಹೋದರೆ ಅದು ನನ್ನಿಂದಲೇ ಎನ್ನುವುದೂ ಅವರಿಗೆ ಗೊತ್ತು. ಎರಡು ಸಾವಿರ ರೂಪಾಯಿ ತಪ್ಪಿಸಿದೆ ಎನ್ನುವ ಕೋಪವನ್ನು ನನ್ನಮೇಲೆ ತೀರಿಸಿಕೊಳ್ಳುತ್ತಾರೆ. ಈಗ ನನ್ನನ್ನು ರಕ್ಷಿಸಿ ಉಪಕಾರಮಾಡಿ" ಅವಳ ಧ್ವನಿ ಗದ್ಗದಿತವಾಗಿತ್ತು. ಕಣ್ಣಿನಿಂದ ನೀರು ಹನಿಯುತ್ತಿತ್ತು. ಆಕೆಯ ಮಾತು ಅನಿರೀಕ್ಷಿತವಾಗಿತ್ತು.  ಲಕ್ಷ್ಮಣನಿಗೆ ಏನೊಂದೂ ತೋಚಲಿಲ್ಲ. " ನಾನೇನು ಉಪಕಾರ ಮಾಡಬೇಕು. ನನ್ನ ಮನೆ ಮಾರಿನವರಿಗೆ ಏನೂ ಉಪಕಾರ ಮಾಡದ ಸ್ಥಿತಿಯಲ್ಲಿ ನಾನಿದ್ದೇನೆ. ನಿಮಗೆ ಏನು ತಾನೆ ಉಪಕಾರಮಾಡಬಲ್ಲೆ?" ಅವನು ಕೇಳಿದ.  " ನನ್ನನ್ನೂ ನಿಮ್ಮ ಜೊತೆ ಕರೆದು ಕೊಂಡು ಹೋಗಿ" ಮಹಾದೇವಿ ದೃಢವಾಗಿ ಹೇಳಿದಳು. ಲಕ್ಷ್ಮಣನಿಗೆ ಆಶ್ಚರ್ಯವೂ, ಅನುಮಾನವೂ ಆಯಿತು ಆಕೆಯ ಮಾತನ್ನು ಕೇಳಿ! " ದೇಶಕ್ಕಾಗಿ ತಮ್ಮ ಸ್ವಂತದ್ದೆಲ್ಲವನ್ನೂ ತೊರೆದು ನಿಸ್ವಾರ್ಥದಿಂದ ಹೋರಾಡುವವರನ್ನು ನಂಬಿಸಿ ಕರೆತಂದು ಮೋಸ ಮಾಡುವ ಈ ವಾತಾವರಣ ನನ್ನನ್ನು ಹಿಂಸಿಸುತ್ತಿದೆ. ಮುಗ್ಧವಾಗಿ ನಂಬಿ ಬಂದವರಿಗೆ ಅನ್ನ ಹಾಕಿ ನಂತರ ಕತ್ತು ಕೊಯ್ಯುವ ಇವರ ಕಾರ್ಯದಲ್ಲಿ ನಾನೂ , ನನಗಿಷ್ಟವಿಲ್ಲದಿದ್ದರೂ ಭಾಗಿಯಾಗುತ್ತಿದ್ದೇನೆ.  ನನಗಿದು ಬೇಡ. ನಾನೂ ಈ ದೇಶಕ್ಕಾಗಿ ದುಡಿಯಬೇಕು. ಅದರಲ್ಲಿಯೇ ಮರಣ ಬಂದರೂ ಸಂತೋಷವೆ. ನನ್ನನ್ನೂ ನಿಮ್ಮ ಜೊತೆಗೇ ಕರೆದುಕೊಂಡು ಹೋಗಿ" ವಿನಮ್ರವಾಗಿ ಹೇಳಿದಳು.  ಅವಳ ಮಾತಿನಲ್ಲೂ ಮನಸ್ಸಿನಲ್ಲೂ ಕಪಟವಿದ್ದಂತೆ ತೋರಲಿಲ್ಲ. " ಯಾರು ಏನು ಎಂದೇ ಗೊತ್ತಿರದ ನನ್ನ ಜೊತೆ ಹೇಗೆ ಬರುತ್ತೀರಿ. ಅದಲ್ಲದೆ..." ಆತ ಮಾತಾಡುತ್ತಿದ್ದ. ನಡುವೆಯೇ "ನೀವು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ನಿಶ್ಕಲ್ಮಶ ಮನಸ್ಸಿನ ವ್ಯಕ್ತಿ. ಇದಕ್ಕಿಂತ ಹೆಚ್ಚಿನ ಪರಿಚಯದ ಅಗತ್ಯವಿಲ್ಲ" ನೇರವಾಗಿಯೇ ಹೇಳಿದಳು.  ವಿಷಯ ಅದಲ್ಲವೇ ಅಲ್ಲ ಎಂದು ಮನದಟ್ಟು ಮಾಡಬೇಕಾದ ಅಗತ್ಯ ಮನಗಂಡು ಹೇಳಿದ ಲಕ್ಷ್ಮಣ " ನಮ್ಮ ಬದುಕು ಹೂವಿನ ದಾರಿಯದಲ್ಲ. ಯಾವ ಹೊತ್ತಿನಲ್ಲಿ ಹೇಗೆಂದು ಹೇಳುವುದೇ ಕಷ್ಟ.  ನಾವು ಸಿಕ್ಕಿಬಿದ್ದರೆ ಸರಕಾರ ನಮಗೆ ಕೊಡುವ ಬಹುಮಾನ ಜೈಲು ವಾಸ ಅಥವ ನೇಣಿನ ಕುಣಿಕೆ. ನೀವಿದನ್ನು ಯೋಚನೆ ಮಾಡಿದಂತಿಲ್ಲ. ಅಲ್ಲದೆ, ಹೀಗೆ ಅಪರಿಚಿತ ಹೆಣ್ಣನ್ನು ನನ್ನ ಜನರು ಒಪ್ಪಿಕೊಳ್ಳುವುದೇ ಇಲ್ಲ". ಲಕ್ಷ್ಮಣನ ಯೋಚನೆ ಒಂದು ತರಹದ್ದಾದರೆ ಮಹಾದೇವಿ ಇನ್ನೊಂದು ತರದಲ್ಲಿ ಯೋಚಿಸುತ್ತಿದ್ದಳು " ನನ್ನನ್ನು ಅಪರಿಚಿತಳನ್ನಾಗಿ ಕರೆದುಕೊಂಡು ಹೋಗಬೇಡಿ. ಕೈ ಹಿಡಿದು ಚಿರ ಪರಿಚಿತೆಯನ್ನಾಗಿಯೇ ಕರೆದುಕೊಂಡು ಹೋಗಿ. ನಿಮ್ಮೊಡನೆ ಜೈಲು ಸೇರುವುದಾದರೂ ಸರಿ, ನೇಣಿಗೇರುವುದಾದರೂ ಸರಿ. ನಾನು ತಯಾರಿದ್ದೇನೆ. ಒಂದೊಮ್ಮೆ  ನಿಮ್ಮನ್ನು ಅಗಲಿ ಇರಬೇಕಾದ ಪರಿಸ್ಥಿತಿ ಬಂದರೂ ನಿಮ್ಮದೇ ನೆನಪಿನಲ್ಲಿ ಬದುಕುತ್ತೇನೆ. ಆ ಬದುಕು ನನಗೆ ಹೆಮ್ಮೆಯ ಬದುಕು. ಸ್ವಾತಂತ್ರ್ಯದ ಕನಸನ್ನು ಹೊತ್ತವರನ್ನು ವಂಚಿಸುವವನ ಮಗಳಾಗಿ ಇರುವುದಕ್ಕಿಂತ ಸ್ವಾತಂತ್ರ್ಯಕ್ಕಾಗಿ ನೆಣಿಗೇರಿದವನ ವಿಧವೆಯಾಗಿ ಬದುಕುವುದು ಉತ್ತಮ. ನನ್ನ ಕೈ ಬಿಡಬೇಡಿ...." ಎಂದು ಅಳುತ್ತಾ ಲಕ್ಷ್ಮಣನ ಕಾಲು ಹಿಡಿದಳು. ಅವಳ ಆ ಮಾತುಗಳಲ್ಲಿ ಯಾವ ಕುಟಿಲತೆಯೂ ಲಕ್ಷ್ಮಣನಿಗೆ ಕಾಣಲಿಲ್ಲ. ಅವಳ ದೇಶಪ್ರೇಮ ಸುಳ್ಳೆಂದು ಅವನಿಗೆ ಅನ್ನಿಸಲಿಲ್ಲ. ಅವನ ಕಂಗಳಲ್ಲೂ ನೀರು ತುಂಬಿತು. ಆಕೆಯನ್ನು ಬರಸೆಳೆದು ಅಪ್ಪಿಕೊಂಡ.
                             ******
  ಸುತ್ತಲೂ ಕತ್ತಲೆಯಾಗಿತ್ತು. ದಣಪೆಯ ಗೇಟನ್ನು ದಾಟಿ ಒಳ ಬಂದರೂ ಮನೆಯಲ್ಲಿ ಯಾವುದೇ ಬೆಳಕು ಕಾಣದೆ ಗಟ್ಟಿಯಾಗಿ ಕೊಗಿದ ಸದಾಶಿವಯ್ಯ " ಮಹಾದೇವಿ.... ಮಹಾದೇವಿ". ಅಭ್ಯಾಸ ಬಲದಂತೆ ಮನೆಯೊಳಗೆ ಹೋಗಿ ಲಾಟೀನು ಹಚ್ಚಿದ. ಮನೆಯೊಳಗೆ ಯಾರೂ ಕಾಣಲಿಲ್ಲ. ಲಾಟೀನಿನೊಡನೆ ಹಜಾರಕ್ಕೆ ಬಂದ. ಗಡಿಯಾರ ರಾತ್ರಿಯ ಒಂಬತ್ತುಗಂಟೆ ತೋರಿಸುತ್ತಿತ್ತು. ಅತ್ತಿತ್ತ ನೋಡಿದಾಗ ಪಕ್ಕದ ಮಂಚದ ಮೇಲೆ ಒಂದು ಪತ್ರ ಕಂಡಿತು. ಅದನ್ನು ತೆರೆದು ಓದತೊಡಗಿದ. " ಅಪ್ಪಾ, ನಿಮಗೆ ಹೇಳದೆ ನಾನು ಮನೆ ಬಿಟ್ಟು ಹೋಗುತ್ತಿದ್ದೇನೆ. ದೇಶಕ್ಕಾಗಿ ಹೋರಾಡುವವರನ್ನು ನಂಬಿಸಿ ಕತ್ತು ಕೊಯ್ಯುವ ನಿಮ್ಮ ಕೆಲಸ ನೋಡಿಕೊಂಡಿರುವ ದೌರ್ಭಾಗ್ಯ ನನ್ನದಾಗಿತ್ತು. ಆದರೆ ಈಗ ದೇಶ ಸೇವಕರ ಜೊತೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುವ  ಅವಕಾಶ ಬಂದಿದೆ. ಇಷ್ಟು ದಿನದ ಪಾಪಕೃತ್ಯಕ್ಕೆ ಇದು ಪ್ರಾಯಶ್ಚಿತ್ತ.  ಇದುವರೆಗೆ ನೀವು ಎರಡು ಸಾವಿರ- ಮೂರು ಸಾವಿರ ಬಹುಮಾನದ ಮಾತನ್ನು ಕೇಳಿದ್ದೀರಿ. ನನ್ನನ್ನು ಹಿಡಿದವರಿಗೆ ಸರಕಾರ ಐದುಸಾವಿರ ಬಹುಮಾನ ಘೋಷಿಸುವಂತೆ ನಾನು ಬೆಳೆಯಬೇಕು. ಬ್ರಿಟೀಷ್ ಸರಕಾರ ನನ್ನನ್ನು ನೆನಪಿಸಿಕೊಂಡಾಗಲೆಲ್ಲ ಸಾಕ್ಷಾತ್ ರಣದುರ್ಗೆಯನ್ನೇ ಕಂಡಂತಾಗಿ ಬೆಚ್ಚಿಬೀಳಬೇಕು. ಹಾಗಾಗಲೆಂದು ನನ್ನನ್ನು ಹರಸಿ. ಇಂತಿ ನಿಮ್ಮ ಮಗಳು" ನಡುಗುವ ಕೈಗಳಿಂದ ಸದಾಶಿವಯ್ಯ ಪತ್ರವನ್ನೇ ನೋಡುತ್ತಿದ್ದ. ಅದೇ ಸಮಯಕ್ಕೆ ಲಕ್ಷ್ಮಣ ಹಾಗೂ ಮಹಾದೇವಿ ಕಾಡಿನ ದಾರಿಯಲ್ಲಿ ಕೈ ಕೈ ಹಿಡಿದು ಸಾಗುತ್ತಿದ್ದರು. ಲಕ್ಷ್ಮಣನ ಕೈಯಲ್ಲಿದ್ದ ಲಾಟೀನು ಅವರ ಪ್ರತಿ ಹೆಜ್ಜೆಗೂ ಬೆಳಕು ಚೆಲ್ಲುತ್ತಿತ್ತು.

           
( ಸ್ವಾತಂತ್ರ್ಯ ಹೋರಾಟಗಾರರಾದ ಶಕುಂತಲ ಧಾಮಣಕರ್ ಹಾಗೂ ಶಂಕರ ಕುರ್ತಕೋಟಿ ಇವರ ನಡುವೆ ಬೆಳೆದ ಪ್ರೀತಿಗೆ ಅವರಲ್ಲಿದ್ದ ದೇಶಭಕ್ತಿಯೇ ಕಾರಣವಾಯ್ತು ಎಂದು ಓದಿದ ನೆನಪಲ್ಲೇ ಈ ಕಾಲ್ಪನಿಕ ಕಥೆ ಬರೆದಿದ್ದೇನೆ)
ಚಿತ್ರಕೃಪೆ: ಗೂಗಲ್

ಕಾಮೆಂಟ್‌ಗಳು

  1. ಅತ್ಯುತ್ತಮ ಬರಹ..ಹೀಗೇ ಮೂಡಿ ಬರುತ್ತಿರಲಿ.

    ಪ್ರತ್ಯುತ್ತರಅಳಿಸಿ
  2. ಬ್ಲಾಗ್‌ನ ನಿರ್ವಾಹಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  3. Teti Tonti Tonti - Titanium Cost - TITNC | TITNIA
    Teti Tonti Tonti. titanium trim hair cutter Tonti Tonti Tonti. Tonti Tonti. Tonti Tonti. Tonti. Tonti. Tonti. harbor freight titanium welder Tonti. microtouch titanium trim Tonti. Tonti. Tonti. Tonti. Tonti. titanium pipe Tonti. Tonti. Tonti. Tonti. titanium ring Tonti. Tonti. Tonti. Tonti. Tonti. Tonti. Tonti.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸವೆದ ಕಲ್ಲಿನ ಹಿಂದೆ (ಕಥೆ)

ಇಬ್ಬಗೆಯ ನೀತಿ ಏಕೆ?