ದೇಶವಲ್ಲ, ಮಾತೆ ಆಗಬೇಕು

             ಯಾವ ದೇಶದಲ್ಲಿ ಹಿಂದಿನ ತಲೆಮಾರಿನವರ ಸಂಸ್ಮರಣೆ ಇರುವುದಿಲ್ಲವೋ, ಆ ದೇಶದಲ್ಲಿ ವರ್ತಮಾನವೂ,ಭವಿಷ್ಯವೂ ಆಶಾದಾಯಕವಾಗಿರುವುದಿಲ್ಲ. ಏಕೆಂದರೆ ಅವರು ಪಡೆದುಕೊಂಡಿರುವುದೆಲ್ಲ ತಮ್ಮ ಹಿಂದಿನ ತಲೆಮಾರಿನವರು ನೀಡಿರುವುದನ್ನೆ. ಈಮಾತು ನಮ್ಮ ದೇಶಕ್ಕೂ ಅನ್ವಯಿಸುತ್ತದೆ. 9ನೇ ತರಗತಿಯ ಇಂಗ್ಲಿಷ್ ಪುಸ್ತಕದಲ್ಲಿ Little Martyr ಎಂಬ ಪಾಠ ಇದೆ. ಹುಬ್ಬಳ್ಳಿಯ ನಾರಾಯಣ ಮಹಾದೇವ ಢೋಣಿ ಎನ್ನುವ 13ವರ್ಷದ ಹುಡುಗನೊಬ್ಬ,"ಕ್ವಿಟ್ ಇಂಡಿಯಾ" ಚಳುವಳಿಯ ಸಮಯದಲ್ಲಿ ಬ್ರಿಟೀಷರ ಗುಂಡಿಗೆ ಬಲಿಯಾದ ಕರುಣಾಜನಕ ಕಥೆ ಅದು. ನಮ್ಮ ದೇಶ ಸ್ವಾತಂತ್ರಕ್ಕಾಗಿ ನಡೆಸಿದ ಸುದೀರ್ಘ ಹೋರಾಟದಲ್ಲಿ ಇಂತಹ ಅದೆಷ್ಟು ಅಮಾಯಕರು ಪ್ರಾಣ ನೀಡಿರಬಹುದು? ಲೆಕ್ಕ ಇದೆಯೆ? ಸ್ವಾತಂತ್ರ್ಯ ಹೋರಾಟದ ನಂತರದ ದಿನಗಳಲ್ಲಿ ಭೂಮಿಯ ಮೇಲಿರುವ ನಮಗೆ, ಆ ದಿನಗಳಲ್ಲಿ ನಮ್ಮ ಹಿರಿಯರು ಅನುಭವಿಸಿದ ಕಷ್ಟಕೋಟಲೆಗಳ, ನೋವಿನ ಮಹತ್ವದ ಕಿಂಚಿತ್ತಾದರೂ ಅರಿವು ಇದೆಯ? ಇವತ್ತಿನ ಪರಿಸ್ತಿತಿಯನ್ನು ಗಮನಿಸಿದಾಗ ಈ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ.

                 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆದಾಗಿನಿಂದ ಒಂದಲ್ಲ ಒಂದು ರೀತಿಯಲ್ಲಿ ಸಂಘಟನಾತ್ಮಕ ಹೋರಾಟ ಬ್ರಿಟೀಷರ ವಿರುದ್ದ ನಡೆಯುತ್ತಲೇ ಇತ್ತು. ಬಾಲಗಂಗಾಧರ ತಿಲಕ್, ಗೋಪಾಲಕೃಷ್ಣ ಗೋಖಲೆಯವರುಗಳು ಭಾರತವನ್ನು ಮಹಾ ಹೋರಾಟವೊಂದಕ್ಕೆ ಸಜ್ಜುಗೊಳಿಸುತ್ತಲೆ ಇದ್ದರು..ಗಾಂಧೀಜಿಯವರ ಆಗಮನದಿಂದ ಹೋರಾಟ ವ್ಯಾಪಕವಾಯಿತು.. ಹೆಂಗಸರು,ಮುದುಕರು, ಮಕ್ಕಳೆನ್ನದೆ ಇಡೀ ಭಾರತದ ಜನತೆ ತನ್ನು ತಾನು ಹೋರಾಟದಲ್ಲಿ ತೊಡಗಿಸಿಕೊಂಡಿತು. ಗಾಂಧೀಜಿಯವರು ಮತ್ತವರ ಅನುಯಾಯಿಗಳ ಅಹಿಂಸಾತ್ಮಕ ಹೋರಾಟ,, ಭಗತ್ ಸಿಂಗ್, ಆಜಾದ್ ರಂತಹ ಬಿಸಿರಕ್ತದ ಕ್ರಾಂತಿಕಾರಿಗಳ ಕ್ರಾಂತಿ, ಸುಭಾಷ ಚಂದ್ರ ಬೋಸರ ಸಶಸ್ತ್ರ ಯುದ್ದ ಇವೆಲ್ಲ ಬ್ರಿಟೀಷರ ಮೇಲೆ ಒತ್ತಡವನ್ನು ಹೇರಿದ ವಿಭಿನ್ನ ನೆಲೆಗಳು. ಇದಲ್ಲದೆ ಸ್ವಾಮಿ ವಿವೇಕಾನಂದ,ಅರಬಿಂದೋ ಘೋಷ್ ರಂತಹ ವಿರಕ್ತರು ಕೂಡ ಸ್ವಾತಂತ್ರ ಹೋರಾಟವನ್ನು ಅಧ್ಯಾತ್ಮಿಕ ಸಾಧನೆಯ ಜೊತೆಯಲ್ಲಿಯೇ ಸಮೀಕರಿಸಿದರು. ರವೀಂದ್ರನಾಥ ಠ್ಯಾಗೋರ್, ಬಂಕಿಮಚಂದ್ರ ಚಟಜರ್ಿ ಮೊದಲಾದವರೆಲ್ಲರ ಲೇಖನಿಯಿಂದಲೂ ಹೋರಾಟದಕೆಚ್ಚು ಮೂಡಿ ಬಂತು. "ವಂದೇ ಮಾತರಂ..." ಗೀತೆ ಮಹಾ ಮಂತ್ರವಾಗಿ ಜನಮನದಲ್ಲಿ ನೆಲೆಸಿತ್ತು. ಇವೆಲ್ಲದರ ಪರಿಣಾಮವಾಗಿ ಜ್ವಲಿಸಿದ ದೇಶಭಕ್ತಿಯ ಜ್ವಾಲೆಯಲ್ಲಿ ಬ್ರಿಟೀಷ ಆಡಳಿತ ಸುಟ್ಟು ಹೋಯಿತು. ದೇಶಭಕ್ತಿ ಎಂಬ ಏಕಸೂತ್ರದಲ್ಲಿ ಅಂದಿನ ಜನತೆ ಬಂಧಿತರಾಗಿರದಿದ್ದರೆ, ನಾವು ಇವತ್ತಿಗೂ ಬ್ರಿಟೀಷರ ಕಾಲಡಿಯಲ್ಲಿಯೇ ಇರುತ್ತಿದ್ದೆವು. ಏಕೆಂದರೆ ಬ್ರಿಟೀಷರ ನೀತಿಯೇ "ಒಡೆದು ಆಳುವ ನೀತಿ". 
 
               ಬಹುಶಃ ಆ ದಿನಗಳಲ್ಲಿ ನಮ್ಮವರಿಗೊಂದು ಕನಸಿತ್ತು. ನಮ್ಮದೇ ಆದ ದೇಶವೊಂದು ನಮಗೆ ಸಿಗುತ್ತದೆ, ಅಲ್ಲಿ ನಮ್ಮವರದೇ ಆಡಳಿತ,ನಮ್ಮ ಆಶೋತ್ತರಗಳಿಗೆ ಸ್ಪಂಧಿಸುವ ಆಡಳಿತ ಇರುತ್ತದೆ ಎನ್ನುವ ಸಂತೋಷ ಅವರಲ್ಲಿತ್ತು. ದಿನದಿಂದ ದಿನಕ್ಕೆ ಅಭಿವೃದ್ಧಿ ಪಥದಲ್ಲಿ ಸಾಗುವ ರಾಷ್ಟ್ರದ ಚಿತ್ರಣ ಅವರಲ್ಲಿದ್ದಿರಬಹುದು. ಹಾಗಿಲ್ಲದಿದ್ದರೆ ತಮ್ಮ ತನು,ಮನ,ಸಮಸ್ತವನ್ನೂ ಧಾರೆ ಎರೆದು, ಎಲ್ಲಾರೀತಿಯ ಹಿಂಸೆಗಳನ್ನು,ನೋವನ್ನು ಸಹಿಸಿಕೊಂಡು ಹೋರಾಡಲು ಕಾರಣವಿಲ್ಲ. ಆದರೆ ಇವತ್ತು ಭಾರತದ ಸ್ಥಿತಿ ಒಂದು ಹೆಜ್ಜೆ ಮುಂದಿಟ್ಟರೆ ಎರಡು ಹೆಜ್ಜೆ ಹಿಂದೆ ಜಾರುವಂತಾಗಿದೆ. ನಿಜ,ನಾವು ರಾಕೆಟ್ ಗಳನ್ನು ಹಾರಿಸಿದ್ದೇವೆ, ಉಪಗ್ರಹಗಳನ್ನು ಸೃಷ್ಟಿಸಿದ್ದೇವೆ, ಅಣುಬಾಂಬ್ ಗಳನ್ನು ಸಿಡಿಸಿದ್ದೇವೆ. ಆ ಮೂಲಕ ವಿಶ್ವ ಮಟ್ಟದಲ್ಲಿ ಸ್ಥಾನ ಮಾನಗಳನ್ನು ಗಳಿಸಿದ್ದೇವೆ. ಆದರೆ ದೇಶದ ಆಂತರಿಕ ಸ್ಥಿತಿ ಏನಾಗಿದೆ ಏನಾಗಿದೆ? ದಿನ ಬೆಳಗಾದರೆ ಧರ್ಮ(ಗಳ) ಯುದ್ಧ, ತುತ್ತು ಅನ್ನಕ್ಕಾಗಿ ಪರದಾಡಬೇಕಾದ ಬಡತನ,ಸಾಧಿಸಲಾಗದ ಸಂಪೂರ್ಣ ಸಾಕ್ಷರತೆ, ಬೇಜವಾಬ್ದಾರಿಯ ಆಡಳಿತ, ಇವುಗಳೊಂದಿಗೆ ಏಗುತ್ತಿದೆ. . ಹಾಗೆಂದು ನಮ್ಮದೊಂದು ಬಡ ದೇಶ ವೆಂದೆನ್ನಲಾಗುವುದಿಲ್ಲ. ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ನಮ್ಮವರ ಮುಖಗಳಿವೆ, ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಪ್ಪಟ ಭಾರತೀಯರಿದ್ದಾರೆ. ಝಣ ಝಣ ರೂಪಾಯಿ ನೀಡುವ ಮಾಹಿತಿ ತಂತ್ರಜ್ಞಾನಕ್ಕೆ ಭಾರತವೇ ಆಧಾರಸ್ತಂಭ. ಇಂತಹ ವೈರುದ್ಯ, ಬಹುಶಃ, ಜಗತ್ತಿನ ಬೇರೆ ಯಾವ ದೇಶದಲ್ಲು ಕಂಡುಬರಲಿಕ್ಕಿಲ್ಲ.
      ಭಾರತದ ಇಂದಿನ ಸ್ಥಿತಿಯ ತಾಯಿ ಬೇರು ಭ್ರಷ್ಟಾಚಾರ. ಸಮಾಜದಲ್ಲಿರುವ ಜಾತೀಯತೆ, ಪ್ರಾಂತೀಯತೆ,ಆರ್ಥಿಕ-ಶೈಕ್ಷಣಿಕ ಅಸಮಾನತೆ ಇಂತಹ ವಿಚ್ಚೇದನೀಯ ಅಂಶಗಳಿಗೆ ಕಾರಣ ದೇಶದಲ್ಲಿನ ಅಂತರ್ಗತ ಭ್ರಷ್ಟಾಚಾರ. ಹೇಗಾದರೂ ಸರಿ, ಯಾವ ಮಾರ್ಗದಲ್ಲಾದರೂ ಓ ಕೆ, ನಾನು ದೊಡ್ಡ ಮನುಷ್ಯನಾಗಬೇಕು, ದುಡ್ಡು ಮಾಡಬೇಕು- ಇದು ನಮ್ಮ ದೇಶವಾಸಿಗಳಲ್ಲಿರುವ ಸಾಮಾನ್ಯ ತುಡಿತ. ಸಮಾಜ ಹಾಳಾಗಲಿ, ದೇಶ ಧೂಳೆದ್ದು ಹೋಗಲಿ, ಸಂಬಂಧವೇ ಇಲ್ಲ. ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿಯೂ ಜಾತಿ ಮತ ಪಂಥ ಭೆದಗಳಿದ್ದವು. ಬೇರೆ ಬೇರೆ ಪ್ರಾಂತ್ಯಗಳು ಅಸ್ತಿತ್ವದಲ್ಲಿದ್ದವು. ಆದರೆ ಅದೆಲ್ಲವನ್ನೂ ಮೀರಿ ಅಖಂಡ ಭಾರತದ ಬಗ್ಗೆ ಅವರಲ್ಲಿ ಪ್ರೀತಿ ಇತ್ತು.ಶ್ರದ್ಧೆ- ಭಕ್ತಿಗಳಿದ್ದವು. ಏಕೆಂದರೆ ಅವರಿಗೆ ಈ ದೇಶ ಕೇವಲ ಭಾರತವಾಗಿರಲಿಲ್ಲ,"ಭಾರತ ಮಾತೆ"ಯಾಗಿದ್ದಳು. 
 
                  ಸ್ವಾತಂತ್ರ್ಯ ಹೋರಾಟದ ಹಿಂದಿದ್ದ ಈ ಸ್ಪೂರ್ತಿಯನ್ನು ತಲೆಮಾರಿನಿಂದ ತಲೆಮಾರಿಗೆ ವರ್ಗಾಯಿಸುವ ಕೆಲಸ ನಡೆಯಲಿಲ್ಲ. ಸ್ವಾತಂತ್ರ್ಯಾನಂತರ ಈ ಕೆಲಸ ಶಿಕ್ಷಣ ಕ್ಷೇತ್ರದಿಂದ, ಮಾಧ್ಯಮಗಳಿಂದ ಆಗಬೇಕಿತ್ತು. ಆಗಲಿಲ್ಲ. ಇಂದಿನ ಎಳೆಯರಲ್ಲಿ ಏನಾಗಿದೆ ನೋಡಿ, ಯಾವ ಗಾಧೀಜಿಯವರ ಹೊರತಾಗಿ ನಮ್ಮ ಸ್ವಾತಂತ್ರ್ಯ ಹೋರಾಟಕ್ಕೆ ಪೂರ್ಣತೆಯಿರಲಿಲ್ಲವೋ ಅಂತಹ ಗಾಂಧೀಜಿಯವರ ಬಗೆಗೆ ಜೋಕ್ ಗಳು ಮೊಬೈಲ್ ಗಳಲ್ಲಿ ಸಂದೇಶಗಳ ರೂಪದಲ್ಲಿ ಸರಿದಾಡುತ್ತಿವೆ. ಭವಿಷ್ಯದ ಸುಂದರ ಕನಸು ಕಾಣುತ್ತ, ಮದುವೆ- ಮಕ್ಕಳ ನಿರೀಕ್ಷೆಯಲ್ಲಿರಬೇಕಾದ ವಯಸ್ಸಿನಲ್ಲಿ ಸಾವಿಗೆ ಎದೆ ಒಡ್ಡಿದ ಭಗತ್ ಸಿಂಗ್, ಆಜಾದ್ ರಂತವರು ನಮ್ಮ ಯುವ ಜನತೆಯ ಆದರ್ಶವಾಗಬೇಕಿತ್ತು. ಆದರೆ, ನಮ್ಮ ಯುವಕರಲ್ಲಿ, ಇವರುಗಳು ಹುಟ್ಟಿದರು-ಸತ್ತರು ಎಂಬುದನ್ನು ಬಿಟ್ಟು, ಅವರಲ್ಲಿದ್ದ ಮಿಡಿತ- ತುಡಿತಗಳ ಬಗೆಗೆ ಕೇಳಿದರೆ ಪ್ಯಾ ಪ್ಯಾ ಎಂದಾರು! 
 
               ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದವರೆಲ್ಲ ನಿದಾನವಾಗಿ ಕಣ್ಮರೆಯಾಗುತ್ತಿದ್ದಾರೆ. ಅವರ ನಂತರದ ತಲೆಮಾರಿನವರು ರಾಜಕೀಯದ ಅಖಾಡದಲ್ಲಿದ್ದಾರೆ. ಇವತ್ತಿನ 'ಹಿರಿಯ' ರಾಜಕಾರಣೀಗಳೆಲ್ಲ 40ರ ದಶಕದಲ್ಲಿ ಜನಿಸಿದವರು.. ಬುದ್ದಿ ಬೆಳೆಯುವ ಹೊತ್ತಿಗೆ ಅವರು ಸ್ವತಂತ್ರ ಭಾರತದಲ್ಲಿದ್ದರು. ಸ್ವಾತಂತ್ರ್ಯಕ್ಕಾಗಿ ಮಾಡಿದ ಹೋರಾಟದ ಕಲ್ಪನೆ ಇರದಿದ್ದ ಇವರಿಗೆ ಅಧಿಕಾರ ಸ್ಥಾನ ಸಿಕ್ಕಾಗ, ಲಂಗು ಲಗಾಮಿಲ್ಲದೆ ಜಾನುವಾರನ್ನು ಹುಲ್ಲುಗಾವಲಿನಲ್ಲಿ ಬಿಟ್ಟಂತಾಯಿತು. ಕಡು ಸ್ವಾರ್ಥ, ಭ್ರಷ್ಟ ರಾಜಕಾರಣಕ್ಕೆ ಶ್ರೀಕಾರ ಹಾಕಿದವರೇ ಇವರು. ಅದರ ಫಲವಾಗಿ ಇವತ್ತು ರಾಜಕೀಯವೇ ಕೊಚ್ಚೆಗುಂಡಿಯಾಗಿದೆ. ಒಳ್ಳೆಯವರ್ಯಾರೂ ರಾಜಕೀಯಕ್ಕೆ ಬರುವುದಕ್ಕೆ ಇಷ್ಟಪಡುತ್ತಿಲ್ಲ.. ಭ್ರಷ್ಟರು ಏನು ಮಾಡಿದರೂ ರಾಜಕೀಯದಿಂದ ಹೋಗುತ್ತಿಲ್ಲ. ಅಧಿಕಾರಸ್ಥಾನದಲ್ಲಿ ಇರುವವರ ಕತೆಯೇ ಹೀಗಾದರೆ ಇನ್ನು ದೇಶದ ಯಾವ ಮೂಲೆಯಲ್ಲಿ , ಯಾವ ಭಾಗದಲ್ಲಿ ಪ್ರಾಮಾಣಿಕತೆ ಇರುತ್ತದೆ.? ಇಷ್ಟೆಲ್ಲ ಭ್ರಷ್ಟರ ನಡುವೆ ಒಬ್ಬಿಬ್ಬರು ಪ್ರಾಮಾಣಿಕರಿದ್ದರೆ ಏನು ಪ್ರಯೋಜನ? ಇಂತಹ ವಾತಾವರಣದಲ್ಲಿ ಬೆಳೆಯುತ್ತಿರುವ ಮಕ್ಕಳು ಹೇಗಾಗಬಹುದು.? ದೇಶದ ಪರಿಸ್ಥಿತಿ ಇನ್ನು ಯಾವ ಹಂತಕ್ಕೆ ಹೋಗಬಹುದು? 
 
                 ಈ ನಡುವೆ ಭಯೋತ್ಪಾದನೆ, ನಕ್ಸಲಿಸಂಗಳು ದೆಶವನ್ನು ಹಿಂಡಿ ಹಿಪ್ಪೆ ಮಾಡುತ್ತಿವೆ. ಕೊಲೆಯೆಂಬುದು ಕಾಸಿಗಿಂತ ಅಗ್ಗ ಎನ್ನುವಂತಾಗಿದೆ. ಅಂದಿನ ಹೋರಾಟ ದೇಶವನ್ನು ಒಗ್ಗೂಡಿಸಿದರೆ, ಈ ಹೋರಾಟ ವಿಚ್ಚಿದ್ರಕಾರಿಯಾಗಿದೆ. ಇವುಗಳ ಹಿಂದೆ ಕೆಲಸ ಮಾಡುತ್ತಿರುವುದು ಕೂಡ ಭ್ರಷ್ಟ,(ಸಂಪೂರ್ಣ)ಸ್ವಾರ್ಥ ಮನಸ್ಸು. ನಮ್ಮ ಹಿಂದಿನವರು ಕಂಡ ಕನಸಿನ ಅರಿವು ಇಲ್ಲದಿರುವುದೇ ನಾವು ಇಂದು ನೋಡುತ್ತಿರುವ,ವಾಸಿಸುತ್ತಿರುವ ಭಾರತಕ್ಕೆ ಕಾರಣ. ಇಂತಹ ದೇಶವೊಂದನ್ನು ಜಗತ್ತಿನ ಸೂಪರ ಪವರ್ಮಾಡುವ ಕನಸನ್ನು ಕಲಾಂರಂತಹ ದೇಶ ಪ್ರೇಮಿಗಳು ಕಾಣುತ್ತಿದ್ದಾರೆ. ಆದರೆ, ಅದು ಸಾಧ್ಯವಾಗುವುದು ಆಗ ಮಾತ್ರ- ಯಾವಾಗ 'ಭಾರತ'ದೇಶ "ಭಾರತ ಮಾತೆ"ಯಾಗುತ್ತಾಳೋ, ಆಗ.

ಕಾಮೆಂಟ್‌ಗಳು

  1. ಚೆನ್ನಾಗಿ ಬರದ್ದೆ ಗಿರೀಶಣ್ಣ.. ಆದರೆ ಪ್ಯಾರಾ ಆದ ಮೇಲೆ ಸ್ವಲ್ಪ ಜಾಗ ಬಿಟ್ಟು ಆಮೇಲೆ ಮುಂದಿನ ಪ್ಯಾರಾ ಬರದಿದ್ರೆ ಓದಕ್ಕೆ ಸ್ವಲ್ಪ ಚೊಲೋ ಆಗ್ತಿತ್ತೇನೋ ಅನಿಸ್ತಾ ಇದ್ದು ನಂಗೆ .. :-)

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬೆಳಕು ಬಿದ್ದೊಡನೆ (ಕಥೆ )

ಸವೆದ ಕಲ್ಲಿನ ಹಿಂದೆ (ಕಥೆ)

ಇಬ್ಬಗೆಯ ನೀತಿ ಏಕೆ?