ನಮ್ಮ ಶಾಸ್ತ್ರೀಜಿ. ...
ವಾಮನ ಶರೀರದಲಿ ಅಪರಿಮಿತ ಧೀರ
ಭಾರತದ ವರಪುತ್ರ ಲಾಲ ಬಹದ್ದೂರ.
ಸರಳತೆಯೆ ಉಸಿರಾಗಿ, ಸಜ್ಜನಿಕೆ ಹೆಸರಾಗಿ
ಜನರ ಮನಮಂದಿರದಿ ನೆಲೆ ನಿಂತೆ ನೀನು
ವೈಭೋಗವಿಲ್ಲದಿಹ ತ್ಯಾಗ ಜೀವನದಲ್ಲಿ
ವೈಭವದಿ ಮೆರೆದಂತ ನಿಜಯೋಗಿ ನೀನು
ಪೀಚು ಪೀಚಾಗಿರುವ ನೀನೆಂತ ವ್ಯಕ್ತಿ?
ಮೈತಳೆದು ಬಂದಿರುವ ನಿಜ ದೇಶ ಭಕ್ತಿ!
ಹೊರಗಣ್ಣಿನಲಿ ನೀನು ತುಂಬ ನಿಃಶಕ್ತ
ಅಂತರಂಗದಲೆಂಥ ಅಪರಿಮಿತ ಶಕ್ತ!
ನಿನ್ನ ಕಾಯವ ನೋಡಿ,ಮನದಿ ಕುಹಕವ ಮಾಡಿ
ನಿನ್ನ ವಿನಯವ ನೋಡಿ, ಆಡಿಕೊಂಡರು ಕೂಡಿ
ಮುಟ್ಟಿಕೊಳಬೇಕಾಯ್ತವರು ತಮ್ಮನ್ನೆ ತಾವು
ಅರಿತುಕೊಂಡರು ಕೊನೆಗೆ ಮಂದಮತಿಗಳಾಗಿಹೆವು.
ದೌರ್ಭಾಗ್ಯ ನಮ್ಮಯ ಹೆಗಲೇರಿ ಬಂತು
ಆ ದಿನವೆ ತಾಷ್ಕೆಂಟಿನಲಿ ಸಹಿಯು ಬಿತ್ತು
ಏನಾಯ್ತು? ಯಾಕಾಯ್ತು? ಗೊತ್ತಾಗದಂತೆ
ಆ ರಾತ್ರಿ ನೀ ತೊರೆದೆ ಈ ಜಗದ ಸಂತೆ
ನನ್ನ ಸ್ಮರಣೆಯ ಪುಟದಿ ಚಿರ ನೆನಪು ನೀನು
ಉಸಿರಿರುವವರೆಗೆ ನಾ ನಿನ ಮರೆವೆನೇನು?
ದೀಪದಂತಿಹೆ ನೀನು ಭರತಮಾತೆಯ ಗುಡಿಗೆ
ಶಿರ ಬಾಗಿ ನಮಿಸುವೆನು ಶಾಸ್ತ್ರಿ ನಿನ್ನಡಿಗೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ