ಮುಳುಗಡೆಯಾಗದ ನೆನಪುಗಳು...

   
    ನಿನ್ನೆ ಅಂದರೆ 17/04/2018ರಂದು ಬರಬಳ್ಳಿಗೆ ಹೋಗಿ ಬಂದೆ. ಬಹಳ ದಿನಗಳಿಂದ ಹೋಗಬೇಕು ಅಂತ ಅಂದ್ಕೊಂಡಿದ್ರೂ ನಿನ್ನೆ ಅವಕಾಶ ಆಯ್ತು. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ದಟ್ಟ ಕಾಡುಗಳ ನಡುವೆ ಇದ್ದ ಪುಟ್ಟ ಹಳ್ಳಿ ಬರಬಳ್ಳಿ, ನನ್ನ ಅಮ್ಮನ ತವರೂರು. ಬರಬಳ್ಳಿಯಲ್ಲೇ ನಾನು ಹುಟ್ಟಿದ್ದು. ಬಾಲ್ಯದ ದಿನಗಳಲ್ಲಿ ಬೇಸಿಗೆ ರಜಾ ಬಂದೊಡನೆ ಅಮ್ಮನೊಂದಿಗೆ ಹೋಗಿ ನಲಿದಾಡುತ್ತಿದ್ದ ಸ್ವರ್ಗ ಅದು. ಕಾಳಿ ನದಿಯ ದಡದ ಉದ್ದಗಲಗಳಲ್ಲಿ ಹರಿಡಿಕೊಂಡಿದ್ದ ಊರು ಬರಬಳ್ಳಿ. ವನದೇವತೆಯ ಅಧಿಕೃತ ಆವಾಸ ಎನ್ನುವಂತಿದ್ದ ಆ ಕಗ್ಗಾಡಿನ ಊರಿನಲ್ಲಿ ಚದುರಿಕೊಂಡಿದ್ದ ಅಡಿಕೆ ಹಾಗೂ ತೆಂಗಿನ ಮರಗಳ ಹೊರತಾಗಿ ಉಳಿದ ಮರಗಳೆಲ್ಲ ನೈಸರ್ಗಿಕವಾಗಿಯೇ ಬೆಳೆದುಕೊಂಡಿದ್ದವು. ಉಳಿದೆಲ್ಲ ಮರಗಳು ಎಂದರೆ- ಹಲಸು, ಮಾವು, ಬಾಳೆ, ಸಪೋಟ, ಸೀತಾಫಲ, ಪೇರಲ ,ಪನ್ನೇರಲ, ನೇರಲ ಹೀಗೆ ಕಂಡು ಕೇಳಿದ ಹಣ್ಣುಗಳೆಲ್ಲ  ಬೇಕಾಬಿಟ್ಟಿ ಸಿಗುತ್ತಿದ್ದ ಊರದು. ಇವತ್ತು ಬೆಂಗಳೂರಿನಂತಹ ನಗರಗಳಲ್ಲಿ ಹಲಸಿನ ಸೊಳೆಯೊಂದಕ್ಕೆ ಐದೂ ಆರೋ ರೂಪಾಯಿ ಕೊಡಬೇಕಾಗಿರಬಹುದು. ಆದರೆ ಬರಬಳ್ಳಿಯಲ್ಲಿ ಹಲಸು ತಿಂದು ಮಿಕ್ಕಿ ಕೊಳೆತು ಹೋಗುವುದು ಅತ್ಯಂತ ಸಹಜವಾಗಿತ್ತು. ಹಲಸೊಂದೇ ಅಲ್ಲ. ಎಲ್ಲ ಹಣ್ಣುಗಳ ಕತೆಯೂ ಹೀಗೆಯೇ!. ಹಪ್ಪಳ ,ಪಾಯಸ, ಉಕಡಾಪು, ಹುಳಿ, ಪಲ್ಯ, ಉಪ್ಪಿನಕಾಯಿ, ಗೊಜ್ಜು ಮತ್ತೊಂದು ಮಗದೊಂದು ಹೀಗೆ ಅಡುಗೆಯಲ್ಲೆಲ್ಲ ಹಲಸು, ಮಾವು, ಬಾಳೆಕಾಯಿಗಳದ್ದೇ ಕಾರುಬಾರು.   
   ಬಹಳಷ್ಟು ಜನರಿಗೆ ಕಲ್ಪನೆಯೇ ಬರಲಿಕ್ಕಿಲ್ಲ, ಬರಬಳ್ಳಿಯಲ್ಲಿ ಪ್ರತಿಮನೆಯಲ್ಲಿಯೂ ದಿನದ ಇಪ್ಪತ್ತನಾಲ್ಕುಗಂಟೆ ದಬದಬನೆ  ಅಬ್ಬಿ ನೀರು ಸುರಿಯುತ್ತಿರುತ್ತಿತ್ತು. ಊರಿನಲ್ಲಿದ್ದ ವಾಸಂತಿಕೆರೆಯಿಂದ ಸೆಲೆಯೊಡೆದು ಬರುತ್ತಿದ್ದ ಶುದ್ಧ ನೀರು ಕಾಲುವೆಗಳ ಮೂಲಕ ಹಾದು ಅಡಿಕೆ ದಬ್ಬೆಯ ಹರಣಿಗಳ ಮೂಲಕ ಪ್ರತಿ  ಮನೆಗೆ ಸರಬರಾಜಾಗುವ ನೈಸರ್ಗಿಕ ವ್ಯವಸ್ಥೆ ಅಲ್ಲಿತ್ತು. ಆ ಅಬ್ಬಿಯ ಧಾರೆಗೆ ಮೈಕೊಟ್ಟು ಮೀಯುತ್ತಿದ್ದ ದಿನಗಳ ಹಿತವಾದ ನೆನಪು ನನಲ್ಲಿ ಈಗಲೂ ಇದೆ. ಹಾಗಾದರೆ ಅಲ್ಲಿ ಬಾವಿ, ಬೋರ್ವೆಲ್ ಏನೂ ಇರಲಿಲ್ವ ಅಂತ ಯೋಚಿಸಬೇಡಿ ಮತ್ತೆ..! ಭೂಮಿಯೊಡಲನ್ನ  ಸೀಳಿ ನೀರು ತರುವ ಯಾವ ಅಗತ್ಯವೂ ಅಲ್ಲಿರಲಿಲ್ಲ.
   
    ನನ್ನ ಬಾಲ್ಯದ ಆಟ, ಹುಡುಗಾಟ, ಮೆಚ್ಚಿನ ಬಸ್ಸಾಟ  ಎಲ್ಲ  ಆ ಹಸಿರಿನ ಮರಗಳ ನಡುವೆಯೇ ನಡೆಯುತ್ತಿತ್ತು. ನನ್ನಣ್ಣ, ಚಿಕ್ಕಮ್ಮನ ಮಗ, ಮಾವನ ಮಕ್ಕಳು ಹೀಗೆ ನನ್ನ ಜೊತೆಯೇ  ಬೆಳೆದ, ಬರಬಳ್ಳಿಯಲ್ಲಿ ನಲಿದ ಹಲವರಿದ್ದಾರೆ. ಅವರೆಲ್ಲರೂ ಆ ನಿಸರ್ಗದ ಸವಿಯುಂಡ ಭಾಗ್ಯಶಾಲಿಗಳು ಎನ್ನುತ್ತೇನೆ.  ಬರಬಳ್ಳಿಯ ಅಕ್ಕಪಕ್ಕ  ಬಾರೆ, ಕಳಚೆ , ಹೆಬ್ಬಾರ ಕುಂಬ್ರಿ, ಕೊಡಸಳ್ಳಿ , ವಡ್ಡಿ, ಸಾತೊಡ್ಡಿ  ಅಂತೆಲ್ಲ ಬೇರೆ ಬೇರೆ ಊರುಗಳಿದ್ದರೂ ನನಗೆ ಕಳಚೆ, ಸಾತೊಡ್ಡಿಯ  ಹೊರತಾಗಿ ಬೇರೆ ಯಾವ ಊರನ್ನೂ ನೋಡಿದ ನೆನಪು ಕಾಣಿಸುತ್ತಿಲ್ಲ.  ಚಿಕ್ಕವನಿದ್ದಾಗ ಅಮ್ಮನ ಗುಮ್ಮನಾಗಿದ್ದ ನನಗೆ ಹಾಗೆಲ್ಲ ಬೇರೆ ಊರುಗಳಿಗೆ ಹೋಗುವ ಪ್ರಸಂಗ ಬಂದದ್ದೇ ಕಡಿಮೆ. ಈ ವಿಷಯದಲ್ಲಿ ನನ್ನಣ್ಣ ನನಗೆ ಸಂಪೂರ್ಣ ತದ್ವಿರುದ್ದ. ಜೊತೆ ಸಿಕ್ಕಿದರೆ ಎಲ್ಲಿ ಬೇಕಾದರೂ ತಿರುಗುವ ನಂಬರ್ ಒನ್ ತಿರುಬಿಕ್ಕೆ ಆಗಿದ್ದ  ಅವನು.
     
ಆಧುನಿಕತೆಯ ಆಕ್ರಮಣವಾಗಿರದಿದ್ದ ಬರಬಳ್ಳಿಯಲ್ಲಿ  ಕರೆಂಟ್ ಸಂಪರ್ಕ ಕೆಲವರ ಮನೆಯಲ್ಲಿ ಇತ್ತು. ಮಣ್ಣಿನ ಗೋಡೆಯ ಮನೆಗಳೇ ಹೆಚ್ಚು.  ಜಗಲಿಯಲ್ಲಿ ಕುಳಿತುಕೊಳ್ಳಲು ಮಣ್ಣುಪೀಠ ಇರುವುದು ಸಾಮಾನ್ಯವಾಗಿತ್ತು. ಹಳೆಯದಾದ ನನ್ನ ಅಜ್ಜನ ಮನೆಯಲ್ಲಿ   ಮೊದಲೆಲ್ಲ ಕರೆಂಟ್ ಇರಲಿಲ್ಲ. ಆಮೇಲೆ ಯಾವಾಗಲೋ ಕರೆಂಟ್ ಬಂದ ನೆನಪು ನನಗೆ. ಹೊಗೆಯುಗುಳುತ್ತಿದ್ದ ಚಿಮಣಿದೀಪದಲ್ಲಿಯೇ ರಾತ್ರಿಗಳು ಕಳೆಯುತ್ತಿದ್ದವು‌. ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಒಂದು ಪಿಲಿಪ್ಸ್ ರೇಡಿಯೊ ಇತ್ತು, ಯಾವಾಗಲೂ ಅದು ' ಇದು ಆಕಾಶವಾಣಿ ಧಾರವಾಡ ಕೇಂದ್ರ' ಎನ್ನುತ್ತಿತ್ತು. ಹೊರಜಗತ್ತಿನ ಆಗು ಹೋಗುಗಳನ್ನು ತಿಳಿಯಲು ಇದ್ದದ್ದು ಆಕಾಶವಾಣಿಯ ವಾರ್ತೆಗಳು ಹಾಗೂ ಪ್ರದೇಶ ಸಮಾಚಾರಗಳು ಮಾತ್ರ.  
 ನಿಸರ್ಗ ಜೀವನವೇ ಇದ್ದ ಅಲ್ಲಿ  ಒಂದು ಕೈಮುಷ್ಟಿ ಗಾತ್ರದ ಕುರ್ಲಿ(ಏಡಿ)ಗಳು ಅಬ್ಬಿಯ ಆಸುಪಾಸಿನಲ್ಲೆಲ್ಲ ಆರಾಮಾಗಿ ಓಡಾಡುತ್ತಿದ್ದವು‌. ಆಗಾಗ ಮನೆಯೊಳಗೆ ಹಾವು, ಚೇಳು ನುಗ್ಗುವುದು ಸಾಮಾನ್ಯವಾಗಿತ್ತು. ಅವುಗಳನ್ನು ಕಂಡು ಹೌಹಾರುತ್ತಿದ್ದದ್ದು ಈಗಲೂ ನೆನಪಿದೆ ನನಗೆ. ಊರಿನ ಸುತ್ತಲೂ ಇದ್ದ ದಟ್ಟ ಕಾಡಿನಲ್ಲಿ ಹುಲಿ, ಕಾಡು ಕೋಣ, ನರಿ, ಹೆಬ್ಬಾವು, ಬೇರೆ ಬೇರೆ ಹಕ್ಕಿಪಕ್ಷಿಗಳು ವಾಸವಾಗಿದ್ದವು.
     ಊರಿನಲ್ಲಿದ್ದ ಗಣಪತಿ ದೇವಸ್ಥಾನ ( ಬರಬಳ್ಳಿಯ ಜನ ಅದಕ್ಕೆ ಮೊಠ ಎನ್ನುತ್ತಿದ್ದರು) ಊರಿನ ಕೇಂದ್ರಭಾಗವಾಗಿತ್ತು, ಬರಬಳ್ಳಿಗರ ಶ್ರದ್ಧಾಕೇಂದ್ರವಾಗಿತ್ತು.  ಅಲ್ಲಿ ನಡೆಯುತ್ತಿದ್ದ ಕಾರ್ತಿಕ ಮಾಸದ ರಾತ್ರಿ ಜರುಗುತ್ತಿದ್ದ ಕಾರ್ತಿಕ ಉತ್ಸವಕ್ಕೆ  ನನ್ನಜ್ಜನ ಮನೆಯಿಂದ ಹೋಗುತ್ತಿದ್ದರು. ರಾತ್ರಿ  ತೋಟದ ಮದ್ಯದ ದಾರಿಯಲ್ಲಿ ಬೆಳಕಿಗಾಗಿ 'ಸೂಡಿ' ( ಅಡಿಕೆ ಸೋಗೆಗೆ ಬೆಂಕಿ ಹಚ್ಚಿಕೊಂಡು ದಾರಿದೀಪವಾಗಿ ಬಳಸುವುದು) ಮಾಡಿಕೊಂಡು ಹೋಗುತ್ತಿದ್ದದ್ದು ಈಗಲೂ ನನ್ನ ಕಣ್ಣಮುಂದೆ ಕಟ್ಟಿದೆ.  ಮಳೆಗಾಲದ ಪ್ರಾರಂಭದ ತನಕ  ದೇವಸ್ಥಾನದವರೆಗೆ ವಾಹನಗಳು ಬರಬಹುದಾಗಿತ್ತು. ಮಳೆಗಾಲ ಪ್ರಾರಂಭವಾದೊಡನೆ  ಸಾತೊಡ್ಡಿಯ ಮುಂದೆ ಯಾವ ವಾಹನವೂ ಬರುತ್ತಿರಲಿಲ್ಲ. ಬರಬಳ್ಳಿಯವರು ಯಲ್ಲಾಪುರ ಹೋಗುವಾಗ ಸಾತೊಡ್ಡಿಯವರೆಗೆ ಬಂದೇ ಬಸ್ಸನ್ನ ಹತ್ತಬೇಕಿತ್ತು. ಮದ್ಯದಲ್ಲಿಯೇ ಮೈತುಂಬಿ ಹರಿಯುತ್ತಿದ್ದ ಕಾಳಿ ನದಿ ಹಾಗೂ  ಸಣ್ಣ ಹೊಳೆಯ ಸಂಗಮದ ಕಿರಿದಾದ ಪ್ರದೇಶದಲ್ಲಿ ಸರ್ಕಸ್ ಮಾಡುತ್ತಾ ದಾಟಬೇಕಿತ್ತು. ಹಾಗೆ ಭಯದಿಂದ ದಾಟುತ್ತಿದ್ದ ನೆನೆಪು ನನಗಿದೆ.
      ಸುಮಾರು 1996-97 ರ ಹೊತ್ತಿಗ ಕಾಳಿನದಿಗೆ ಕೊಡಸಳ್ಳಿ  ಎಂಬಲ್ಲಿ ಅಣೆಕಟ್ಟು  ನಿರ್ಮಾಣದ ಕೆಲಸ ಪ್ರಾರಂಭವಾಯಿತು. ಅಣೆಕಟ್ಟು ನಿರ್ಮಾಣವಾದರೆ ಕಾಳಿನದಿಯ ಹಿನ್ನೀರಿನಲ್ಲಿ ಬರಬಳ್ಳಿ ಮುಳುಗಡೆಯಾಗುತ್ತದೆ ಎಂದು  ಅಷ್ಟುದಿನ ಊರವರ ಮನಸ್ಸಿನಲ್ಲಿ ಆಡುತ್ತಿದ್ದ  ಗುಮ್ಮ ನಿಜವಾಯಿತು.  ಮುಳುಗಡೆಯವರ ಪುನರ್ವಸತಿಯಾಗಿ ನೀಡಿದ್ದ ಹೆಗ್ಗಾರಿನ ಕಡೆಗೆ ಒಂದೊಂದೇ ಕುಟುಂಬಗಳು ತೆರಳತೊಡಗಿದವು. ಇಲ್ಲಿಯ ಈ ಸಮೃದ್ಧ, ಸ್ವರ್ಗ ಸದೃಶ ಭೂಮಿಯನ್ನು ಬಿಟ್ಟು, ಹೆಗ್ಗಾರಿನ ಬೊಳು ಬೆಟ್ಟಗಳಲ್ಲಿ ಮತ್ತೊಮ್ಮೆ   ಜೀವನವನ್ನು ನೆಲೆ ನಿಲ್ಲಿಸುವ ಅನಿವಾರ್ಯತೆ ಅವರಿಗೆ  ಎದುರಾಗಿತ್ತು. ಸುಮಾರು 2002ನೇ ಇಸವಿಯವರೆಗೂ ನನ್ನ ಮಾವನೊಬ್ಬ ಬರಬಳ್ಳಿಯಲ್ಲಿಯೇ ಇದ್ದ. ಅವನ ಮನೆಯವರೆಗಿನ್ನೂ ನೀರು ಬಂದು ತಲುಪಿರಲಿಲ್ಲ. ಆ ಹೊತ್ತಿಗೊಮ್ಮೆ ನಾನು ಬರಬಳ್ಳಿಗೆ ಹೋಗಿದ್ದೆ. ಅದೇ ಕೊನೆ ಆ ನಂತರ ನಾನು ಬರಬಳ್ಳಿಗೆ ಹೋಗಿರಲೇ ಇಲ್ಲ.
  ಇತ್ತೀಚೆಗೆ  ಬರಬಳ್ಳಿಯನ್ನೊಮ್ಮೆ ನೋಡಬೇಕು ಅನ್ನಿಸುತ್ತಿತ್ತು. ಬೆಳೆದು ನಿಂತ ಜಂಜಡದ ಬದುಕಿನಲ್ಲಿ ಕಳೆದು ಹೋದ ಬಾಲ್ಯದ ದಿನಗಳ ಹಂಬಲವಾಗುತ್ತಿತ್ತು. ಹೀಗೆ ನನ್ನ ಮನಸ್ಸಿನಲ್ಲಿ ಬಂದ ವಿಚಾರ ವಿನಿಮಯವಾಗಿ ನನ್ನಣ್ಣ, ವಿನಯ( ಚಿಕ್ಕಮ್ಮನ ಮಗ),  ಶ್ರೀಕಾಂತ( ವಿನಯನ ಊರಿನವನು) ಬರಬಳ್ಳಿಗೆ ಹೊರಟೆವು ನನ್ನ ನ್ಯಾನೋ ಕಾರಿನಲ್ಲಿ. ಮನೆಯಿಂದ ನನಗೆ ಒಟ್ಟು 260 ಕಿ ಮಿ ಪ್ರಯಾಣ ಆಗುತ್ತಿತ್ತು. ಕಾನಲೆಯಿಂದ ಸಿದ್ದಾಪುರ, ಶಿರಸಿ, ಯಲ್ಲಾಪುರ ,ವಜ್ರಳ್ಳಿ, ಕಳಚೆ ಮಾರ್ಗವಾಗಿ ಬರಬಳ್ಳಿ ತಲುಪಿದೆವು. ಕಳಚೆಯಿಂದ ಬರಬಳ್ಳಿಯ ದಾರಿ ನನ್ನ ನ್ಯಾನೋಗೆ ಕಠಿಣ ಸವಾಲಾಗಿತ್ತು. ಸವಾಲನ್ನು ಎದುರಿಸಿ ನ್ಯಾನೋ ಗೆದ್ದಿತು.
  ನಾನು ಬಾಲ್ಯದಲ್ಲಿ  ಕಂಡಿದ್ದ ಬರಬಳ್ಳಿ ಈಗ ಇಲ್ಲ.  ಊರಿನ ಬಹುಪಾಲು ಮುಳುಗಿಹೋಗಿದೆ. ಸ್ವಲ್ಪ ಎತ್ತರದ ಭಾಗ ಉಳಿದಿದೆಯಾದರೂ ಜನರ ಸಂಪರ್ಕವೇ ಇಲ್ಲದ ಕಗ್ಗಾಡಾಗಿದೆ. ಹಾಗಿದ್ದರೂ ಇಲ್ಲಿ ಈಗಲೂ ವಾಸವಾಗಿರುವ ಬಾರೇ ಶಿವರಾಮ ಬಾವ ಹಾಗೂ  ಅವನ ತಂಗಿ 'ಬೆಟ್ಟದ ಜೀವಗಳೇ' ಆಗಿದ್ದಾರೆ.  ಹಳೆ ನೆನಪಿನ ಖುಷಿಯಲ್ಲಿ ಬರಬಳ್ಳಿಗೆ ಹೋಗಿ ನೋಡಿದೆ. ನಾನು ಹುಟ್ಟಿದ, ಆಟವಾಡಿದ, ಸುಂದರ ಬಾಲ್ಯವನ್ನು ಕಳೆದ ನನ್ನಜ್ಜನ ಮನೆ ಮುಳುಗಿಹೋಗಿ  ಯಾವ ಕುರುಹೂ ಇಲ್ಲದಂತಾಗಿದೆ. ಆ ಜಾಗದ ಸಮೀಪ ನಿಂತು ನೋಡಿದರೆ ಅದೆಷ್ಟೋ ಮನೆ, ಮರ ಮಟ್ಟಗಳನ್ನು ತನ್ನೊಳಗೆ ನುಂಗಿಕೊಂಡಿರುವ ಅಪಾರ ಜಲರಾಶಿ ಕಾಣಿಸುತ್ತದೆ. ನಾನು ಮೇಲೆಲ್ಲ ವರ್ಣಿಸಿದ್ದೆಲ್ಲ ಸುಳ್ಳು ಎನ್ನುವಂತೆ ಮಾಡುತ್ತದೆ. ನನ್ನಜ್ಜನ ಮನೆಯಿದ್ದ ಜಾಗದಿಂದ ಸ್ವಲ್ಪ ಮೆಲಕ್ಕೆ ನನ್ನ ಮಾವನ ಮನೆ ಇತ್ತು. ಪೂರ್ಣ ಅಲ್ಲಿಯವರೆಗೆ ಕಾಳಿನದಿಯ ಹಿನ್ನೀರು ತಲುಪುವುದಿಲ್ಲ ಹಾಗಾಗಿ ಮಾವನ ಮನೆ ಮುಳುಗಡೆಯಾಗಿಲ್ಲ. ಆದರೆ  ಮಾವನ ಮನೆಯ ಅಳಿದುಳಿದ ಕಂಬಗಳು, ಉದುರಿಬಿದ್ದ ಗೋಡೆಗಳು ಎಷ್ಟೋ ಶತಮಾನಗಳ ಹಿಂದೆ ಇಲ್ಲಿ ವಸತಿಯಿದ್ದಿತ್ತು ಎನ್ನುವ ಭ್ರಮೆಯನ್ನುಂಟುಮಾಡುತ್ತವೆ. 
    ಬಾಲ್ಯದದಿನಗಳು ಬರಬಳ್ಳಿಯಲ್ಲಿ ಮತ್ತೊಮ್ಮೆ ನೆನಪಾಗಬಹುದೆಂಬ ಆಸೆಯಿಂದ ಬಂದ ನನಗೆ  ಆ ಯಾವ ಸ್ಮೃತಿಯೂ ಗೋಚರಿಸಲಿಲ್ಲ. ನನ್ನೊಳಗಿನ ಸ್ಮೃತಿಗೆ ಆ ತರದ ಯಾವ ಹಂಗೂ ಇಲ್ಲವೆನ್ನಿ.  ಆದರೆ  ಬರಬಳ್ಳಿ ಏನಾಗಿದೆಯೆಂಬ  ವಾಸ್ತವದ ಅರಿವು ಚೆನ್ನಾಗಿ ಆಯಿತು. ಸಮೃದ್ಧವಾದ ಜೀವಂತ ಬರಬಳ್ಳಿ  ಈಗಿಲ್ಲ. ಎಲ್ಲೆಲ್ಲೂ ನೀರಿದೆ, ಆದರೆ ಬರಬಳ್ಳಿ ಬರಡಾಗಿದೆ.

ಕಾಮೆಂಟ್‌ಗಳು

  1. ಬರಬಳ್ಳಿ ಭೇಟಿಯ ಅನುಭವ ಚೆನ್ನಾಗಿದೆ ಆದರೆ ಮುಳುಗಡೆಯ ಬೇಸರ ಜೊತೆಗೆ!

    ಪ್ರತ್ಯುತ್ತರಅಳಿಸಿ
  2. ಧನ್ಯವಾದಗಳು... ಬರಬಳ್ಳಿಯಲ್ಲಿ ಕಳೆದ ಬಾಲ್ಯದ ಅನುಭವ ಇನ್ನೂ ಅದ್ಭುತ.... ಆ ಅನುಭವವನ್ನು ಪದಗಳು ವರ್ಣಿಸಿಯಾವು ಅಂತ ನನಗೆ ಅನ್ನಿಸುತ್ತಿಲ್ಲ.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬೆಳಕು ಬಿದ್ದೊಡನೆ (ಕಥೆ )

ಸವೆದ ಕಲ್ಲಿನ ಹಿಂದೆ (ಕಥೆ)

ಇಬ್ಬಗೆಯ ನೀತಿ ಏಕೆ?