ಆ ಒಂದು ದಿನ. (ಕಥೆ )

   ಸಣ್ಣ ಧ್ವನಿಯಲ್ಲಿ  ರಿಂಗಣಿಸುತ್ತಿರುವ  ಮೊಬೈಲನ್ನು ತೆಗೆದುಕೊಂಡು ಕಿವಿಗಿಟ್ಟುಕೊಂಡ ಧನಂಜಯ .ರಾತ್ರಿ ಮಲಗಿದ್ದೆ 2 ಗಂಟೆಗೆ. ಕಣ್ಣು ತೆರೆಯಲು  ಮನಸ್ಸು  ಒಪ್ಪುತ್ತಿರಲಿಲ್ಲ.  ಗಾಢ ನಿದ್ದೆಯ ಮಂಪರು ಕಣ್ಣಿನಲ್ಲಿದ್ದರೂ, ಬಂದ ಫೋನು ಯಾರದ್ದೆಂದು ರಿಂಗ್ ಟೋನಿನಿಂದ ಗೊತ್ತಾಯಿತು.  
    'ಹಲೋ... ಈಗಷ್ಟೇ ಮಲಗಿದ್ದಲ್ವಾ?...ಮತ್ತೆ  ಫೋನಿಗೆ ಬಂದ್ಯಾ......  ನಿಂಗೆ..  ನಿದ್ದೆ....' ನಿದ್ದೆಯ ಸೆಳೆತದಲ್ಲಿ  ಧನಂಜಯ ಮಾತು ಮುಂದುವರೆಸುತ್ತಿರುವಾಗಲೇ  ಅವನ ಮಾತು ತುಂಡರಿಸಿ ಸ್ವಾತಿ ಹೇಳಿದಳು. 
' ನನ್ನ ಮಾತು ಸರಿಯಾಗಿ ಕೇಳಿಸ್ಕೊ. ನಾನು ನಿನ್ ಜೊತೆ  ಮಾಡ್ಕೊಂಡ   ಎಂಗೇಜ್ಮೆಂಟನ್ನ  ಮುರ್ಕೊಳ್ತಾ ಇದೀನಿ. ನಂಗೆ  ನಿನ್ನ  ಮದ್ವೆ ಆಗೋಕೆ ಇಷ್ಟ ಇಲ್ಲ. ನಂಗೆ ಇನ್ಮೇಲೆ ಫೋನ್ ಮಾಡ್ಬೇಡ.  ಕನ್ವಿನ್ಸ್  ಮಾಡೋಕು ಬರ್ಬೇಡ. ಗುಡ್ ಬೈ' ಇಷ್ಟು ಹೇಳುತ್ತಿದಂತೆ ಫೋನ್ ಕಟ್  ಆಯಿತು.ತಕ್ಷಣಕ್ಕೆ  ಏನಾಗುತ್ತಿದೆಯೆಂದೇ  ಗೊತ್ತಾಗಲಿಲ್ಲ  ಧನಂಜಯನಿಗೆ. ಲಗುಬಗೆಯಿಂದ   ಸ್ವಾತಿಯ ನಂಬರ್ಗೆ ಮತ್ತೆ  ಫೋನ್  ಮಾಡಿದ, ಆದರೆ  ಅವಳ ನಂಬರ್ ಸ್ವಿಚ್ ಆಫ್  ಆಗಿತ್ತು.

ನಿದ್ದೆಯ ಮಂಪರಿನಲ್ಲಿದ್ದವನ  ನಿದ್ದೆ ಒಮ್ಮೆಲೇ ಹಾರಿಹೋಯಿತು. ಪಕ್ಕದಲ್ಲಿದ್ದ  ಗಡಿಯಾರ ನೋಡಿದ.  ಬೆಳಗಿನ ಆರುಗಂಟೆ. ಮತ್ತೆ ಮತ್ತೆ ಫೋನ್ ಮಾಡಿ ನೋಡಿದನಾದರೂ ಆಕೆಯ  ಫೋನ್  ಸ್ವಿಚ್  ಆಫ್  ಸ್ಥಿತಿಯಿಂದ  ಹೊರ ಬಂದಿರಲಿಲ್ಲ. ಪದೇ ಪದೇ 'ಸ್ವಿಚ್ ಆಫ್ 'ಎನ್ನುವುದು  ಸ್ವಾತಿ ಅವನನ್ನು ತಿರಸ್ಕರಿಸಿದ್ದನ್ನು  ಒತ್ತಿ  ಒತ್ತಿ  ಹೇಳುವಂತೆ ಇತ್ತು.  ಅದನ್ನು  ಕೇಳುತ್ತ ಹೋದಂತೆ  ಧನಂಜಯನ ಮನಸ್ಸಿಗೆ  ಸಂಕಟದ ಅನುಭವವಾಗತೊಡಗಿತು.
     ಪ್ರತಿ  ರಾತ್ರಿಯಂತೆ  ಕಳೆದ ರಾತ್ರಿ ಕೂಡ ಅವರಿಬ್ಬರೂ ತುಂಬಾ ಹೊತ್ತಿನವರೆಗೂ  ಮೆಸೇಜ್  ಮಾಡಿಕೊಂಡಿದ್ದರು. ಪ್ರತಿದಿನವೂ   ಅವತ್ತಿನ  ದಿನ  ಏನೇನಾಯ್ತು ,  ಯಾಕಾಯ್ತು,  ಎಲ್ಲಾಯ್ತು ಅಂತಾ ನ್ಯೂಸ್  ರಿಪೋರ್ಟರ್  ತರ  ಜಗತ್ತಿನ ಆಗು ಹೋಗುಗಳೆಲ್ಲದರ ವರದಿ ಮಾಡುತ್ತಿದ್ದಳು ಸ್ವಾತಿ . ಆ  ಅಣ್ಣನ ಮಗ ಹಾಗೆ ಮಾಡಿದ,  ಈ ಅಕ್ಕನ ಮಗಳು ಹೀಗೆ ಮಾಡಿದಳು ಅಂತಾ ಕುಟುಂಬಸ್ಥರ ಕತೆ ಹೇಳುತ್ತಿದ್ದಳು.  ಎಲ್ಲದಕ್ಕೂ  ಧನಂಜಯನಿಂದ ಸುಮ್ಮನೆ  ಓಹೋ...,  ಹೌದಾ,  ಆಮೇಲೆ ಅಂತ ರಿಪ್ಲೆ  ಬರ್ತಿತ್ತು .   ಒಂದು ಹಂತಕ್ಕೆ  ಅವಳಿಗೂ ಬೇಸರ ಬಂದು ನೀನೂ ಏನಾದ್ರು ಹೇಳು ಅಂದಾಗ ಅವನು ಒಂದಷ್ಟು  ರಮ್ಯವಾಗಿ ಮತ್ತೊಂದಷ್ಟು ಕೊಳಕಾಗಿ ಮಾತಾಡುತ್ತಿದ್ದ. ಅವಕ್ಕೆಲ್ಲ ಅವಳು  ಛೀ...ಇಶ್ಶೀ.... ಥೂ.... ಕೊಳಕು ಅಂತೆಲ್ಲ ಹೇಳುತ್ತಾ, ನಗುತ್ತಾ   ಸಮಯ ಸಾಗಿಹೋಗುತ್ತಿತ್ತು.   ನಿನ್ನೆ ರಾತ್ರಿಯೂ ಹೀಗೆ  ಆಗಿ ಕೊನೆಯಲ್ಲಿ ಗುಡ್ ನೈಟ್ ವಿನಿಮಯ ಆಗಿ ಮಲಗುವ ಹೊತ್ತಿಗೆ ಮಧ್ಯರಾತ್ರಿ  ಕಳೆದಿತ್ತು.  ಹೀಗಿದ್ದವಳು ಬೆಳಗ್ಗೆ ಮಾತ್ರ ಅದೆಷ್ಟು ನಿಷ್ಕರುಣೆಯಿಂದ ನಿನ್ನನ್ನು  ಬಿಟ್ಟು  ಹೋಗ್ತೀನಿ  ಅಂತ  ಹೇಳಿ ,  ಕಾರಣವನ್ನೂ ತಿಳಿಸದೇ ಫೋನ್ ಇಟ್ಟುಬಿಟ್ಟಳು!  ಧನಂಜಯನಿಗೆ ಜಗತ್ತೇ ಸುಳ್ಳು ಅನ್ನುವ  ಅನುಭವವಾಗತೊಡಗಿತ್ತು.
ಸಾಗರದ ಹತ್ತಿರದ ಹಳ್ಳಿಯ ಧನಂಜಯನಿಗೆ,  ಶಿರಸಿಯ ಸ್ವಾತಿ  ಪರಿಚಯವಾದದ್ದು ಬೆಂಗಳೂರಿಗೆ ಬಂದಮೇಲೆಯೇ.  ಇಬ್ಬರೂ  ಐ ಟಿ ಕ್ಷೇತ್ರದಲ್ಲಿ  ಇಂಜಿನಿಯರ್ಗಳು. ಒಂದು ವಾರಾಂತ್ಯದ ದಿನ ಬೆಂಗಳೂರಿನ ಯಾವುದೊ ಯಕ್ಷಗಾನಕ್ಕೆ  ಹೋಗಿದ್ದಾಗ     ಅಕಸ್ಮಾತ್  ಆಗಿ  ಧನಂಜಯ ಬೀಳಿಸಿಕೊಂಡ  ಪರ್ಸನ್ನು ಸ್ವಾತಿ ಗಮನಿಸಿ ಅವನಿಗೆ  ತೆಗೆದು  ಕೊಟ್ಟಳು.  ಆಗ ನಡೆದ ಮಾತುಕತೆಯಲ್ಲಿ  ಅವಳಿಗೆ ಸಾಗರದಲ್ಲಿ ಚಿಕ್ಕಮ್ಮನ ಮನೆ  ಇದೆ ಅನ್ನುವ  ವಿಷಯ ಅವನಿಗೆ ಗೊತ್ತಾಗಿ,  ಆ ಚಿಕ್ಕಮ್ಮನ ಗಂಡನ ಸೋದರತ್ತೆಯ  ಗಂಡನ ತಂಗಿಯ ಮೊಮ್ಮಗ ಇವನು ಎನ್ನುವ ವಿಷಯ ಬೆಳಕಿಗೆ  ಬಂತು ! ಇಷ್ಟರ  ಮಟ್ಟಿಗಿನ  ನೆಂಟಸ್ತನ  ಇದ್ದಮೇಲೆ ಸಹಜವಾಗಿಯೇ ಮಾತುಕತೆ ಮುಂದುವರೆಯಿತು.  ಅವರಿಬ್ಬರ ಆಫೀಸ್ ಕೂಡ ಸಮೀಪದಲ್ಲೇ  ಇದ್ದದ್ದರಿಂದ ಆಗಾಗ ಎದುರುಬದರಾಗುತ್ತಿದ್ದರು. ನಾಲ್ಕಾರು ತಿಂಗಳುಗಳ ಕಾಲಮುಂದುವರಿದ  ಈ ಪರಿಚಯ,  ಭೇಟಿ,  ಮಾತುಕತೆ  ನಿದಾನವಾಗಿ  ಅವರಿಬ್ಬರ  ಮನಸ್ಸುಗಳನ್ನು ಹತ್ತಿರವಾಗಿಸಿತು. ಒಂದು  ದಿನ ಧನಂಜಯ ಪ್ರೀತಿಯನ್ನು  ಬಾಯಿಬಿಟ್ಟು ಹೇಳಿಯೇ ಬಿಟ್ಟ.  ಸ್ವಾತಿಯೂ  ಒಪ್ಪಿದಳು.  ತಮ್ಮ ತಮ್ಮ ಮನೆಗಳಲ್ಲಿ  ಅವರಿಬ್ಬರೂ ಹೇಳಿ, ಮನೆಗಳವರೂ  ಒಪ್ಪಿದರು. ಈಗ ಎರಡು ವಾರಗಳ  ಹಿಂದೆ  ಅವರ ನಿಶ್ಚಿತಾರ್ಥ  ನಡೆದು,  ಮುಂದಿನ ಮೇ   ತಿಂಗಳಲ್ಲಿ ಮದುವೆಯೆಂದು ನಿಶ್ಚಯವಾಯಿತು.
ಧನಂಜಯ ಮತ್ತೆರೆಡುಬಾರಿ ಪ್ರಯತ್ನಿಸಿದ. ಈಗ ಫೋನ್ ರಿಂಗಾಯಿತಾದರೂ,  ಅವಳು ಫೋನನ್ನು  ಎತ್ತಿಕೊಳ್ಳಲಿಲ್ಲ.  ' ಏನಾಯ್ತು ನಿಂಗೆ?  ಸಮಸ್ಯೆ ಏನು ಅಂತಾ ಹೇಳಿದ್ರೆ ತಾನೇ ಅರ್ಥ ಆಗೋದು? ' ಅಂತಾ ಒಂದು ವಾಟ್ಸಾಪ್  ಮೆಸೇಜ್ ಹಾಕಿದ. ಸ್ವಲ್ಪ ಹೊತ್ತಿಗೆ ಆ ಮೆಸ್ಸೇಜ್ ಅವಳು ಓದಿದ್ದಕ್ಕೆ ಸಾಕ್ಷಿಯಾಗಿ ರೈಟ್ ಮಾರ್ಕ್ ಕಾಣಿಸಿಕೊಂಡಿತಾದರೂ ಅವಳಿಂದ  ಉತ್ತರ ಬರಲಿಲ್ಲ.
ಧನಂಜಯನಿಗೆ ಅವಳ ಈ ರೀತಿ ಕೋಪ ಉಂಟುಮಾಡಿತು.ಉತ್ತರಿಸದೆ  ಇದ್ದರೆ  ಕತ್ತೆ ಬಾಲ  ಕುದುರೆ ಜುಟ್ಟು ಅಂದುಕೊಂಡ. ಆದರೂ ಅವಳಾಡಿದ ಮಾತುಗಳು   ನೆನಪಾದವು. ಅವನ ಕೈ  ಕಾಲುಗಳು ನಡುಗತೊಡಗಿತು .   'ಎಷ್ಟು  ಸುಲಭವಾಗಿ ಹೇಳಿಬಿಟ್ಟಳು !' ಅನ್ನಿಸಿತು .
ಗಡಿಯಾರ  ನೋಡಿದಾಗ 7: 30 ರ ಹತ್ತಿರ ಆಗಿತ್ತು.  ಅವನು ಸ್ನಾನ  ಇತ್ಯಾದಿಗಳನ್ನು ಮುಗಿಸಿಬಂದ.  ಆದರೆ ಅವೆಲ್ಲವು  ಯಾಂತ್ರಿಕವಾಗಿ ನಡೆದವು.  ಅವನ ಒಳಗೆ ಮಿಸುಕಾಡುತ್ತಿದ್ದ ಸಂಕಟ ಅವನನ್ನು  ಆವರಿಸುತ್ತಿತ್ತು .  ತಲೆಯಲ್ಲಿ  ಯಾವುದೊ ಭೋರ್ಗರೆತದಂತಹ  ಅನುಭವ ಆಗುತ್ತಿತ್ತು.   ಬಂದವನೇ  ಕುರ್ಚಿಯಲ್ಲಿ ಕುಳಿತು   ಮತ್ತೊಮ್ಮೆ  ಸ್ವಾತಿಗೆ  ಫೋನ್ ಮಾಡಿದಾಗಲೂ ಸಿಕ್ಕಿದ್ದು  ಕೇವಲ  ರಿಂಗಿನ  ಪ್ರತಿಕ್ರಿಯೆಯಷ್ಟೇ
          ಮನೆಗೆ ಫೋನ್ ಮಾಡಿ ವಿಷಯ ತಿಳಿಸೋಣ  ಅಂತ ನೋಡಿದ. ಆದರೆ   ಅಲ್ಲಿನ ನೆಟ್ವರ್ಕ್  ಸಮಸ್ಯೆಯಿಂದಾಗಿ ಫೋನ್ ಹೋಗಲಿಲ್ಲ.  ಏನು  ಮಾಡಬೇಕೆಂದು ತೋರದೆ  ಸುಮ್ಮನೆ ಎತ್ತಕಡೆಗೋ  ನೋಡುತ್ತಾ ಕುಳಿತ. ಆ ಮೌನದಲ್ಲಿ ಅವಳು ಆಡಿದ ಆ ಮಾತುಗಳೇ ಮತ್ತೆ ಮತ್ತೆ ಕಾಡತೊಡಗಿದವು. ಅವನಿಗೆ  ಕಣ್ಣುಗಳು  ತೇವವಾದಂತೆ  ಅನ್ನಿಸಿತು.  ಕಣ್ಣನ್ನೊಮ್ಮೆ  ಒರೆಸಿಕೊಂಡ... ಹೌದು... ತೇವವಾಗಿದೆ !. ಹೌದೆನ್ನಿಸಿದೊಡನೆ  ಮತ್ತಷ್ಟು  ಕಣ್ಣೀರು  ದಳದಳನೆ  ಇಳಿಯಿತು. 'ಛೆ ಇದೇನಾಯ್ತು  ನನ್ನ ಜೀವನದಲ್ಲಿ, ಇವಳೆಲ್ಲಿಂದ  ಬಂದ್ಲು  ಹೀಗೆ  ಮಾಡಿ ಹೋಗೋಕೆ.  ಇಷ್ಟು ದಿನ ನಾಟಕ  ಮಾಡಿಕೊಂಡೆ ಇದ್ದಳ..?!.   ಬೇಡ ಅಂದ್ರೆ ಅವತ್ತೇ ಹೇಳಬಹುದಿತ್ತಲ್ಲ.....' ಹಾಗೆ ಯೋಚನೆ ತಲೆಯಲ್ಲಿ ಬಂದೊಡನೆ    ಫೋನ್  ಕೈಗೆತ್ತಿಕೊಂಡ. ಫೋನ್ ಮಾಡಬೇಕೆಂದುಕೊಂಡು  ಕಾಲ್  ಮಾಡಿದ. ಅವಳು  ರಿಸೀವ್  ಮಾಡಲಿಲ್ಲ. ವಾಟ್ಸಾಪ್  ಮೆಸೇಜನ್ನು   ಟೈಪಿಸಿದ - 'ಇಷ್ಟು  ದಿನ ಕೇವಲ ನಾಟಕ ಮಾಡಿದ್ದ ನೀನು?  ಭಾವನೆಗಳ ಜೊತೆ ಆಟ ಆಡ್ತೀಯ? ನಿಂಗೆ ಬೇಡ ಅಂತಾ ಆಗಿದ್ರೆ  ಮೊದಲೇ ಹೇಳೋಕಾಗಲ್ವ? ಹೊಟ್ಟೆಗೆ ಏನು ತಿಂತೀಯಾ?'
ಸ್ವಲ್ಪ  ಹೊತ್ತಿಗೆ  ವಾಟ್ಸಪ್ಪ್  ರಿಂಗಣಿಸಿತು.  ಸ್ವಾತಿಯ  ಮೆಸೇಜ್,  ಲಗುಬಗೆಯಿಂದ  ಓಪನ್ ಮಾಡಿದ -'   ಉಪ್ಪಿಟ್, ಮೊಸರನ್ನ,  ಚಿತ್ರಾನ್ನ,  ಇಡ್ಲಿ,  ವಡೆ  ಇತ್ಯಾದಿ ತಿಂತೀನಿ...!  ' ಅನ್ನುವ ಮೆಸೇಜ್ ಜೊತೆಗೊಂದು ಸ್ಮೈಲೀ.

ಧನಂಜಯನಿಗೆ  ರೇಗಿ  ಹೋಯಿತು. ತಕ್ಷಣ ಫೋನ್  ಮಾಡಿದ.ಯಥಾ ಪ್ರಕಾರ ಅದು ವ್ಯರ್ಥವಾಯ್ತು.  ನಂತರ ವಾಟ್ಸಾಪ್  ಮೆಸೇಜ್  ಮಾಡಿದ-'ಏನ್ ಆಟ  ಆಡ್ತಿದೀಯಾ?  ಫೋನ್ ರಿಸೀವ್  ಮಾಡು.' ಆ   ಮೆಸೇಜ್ಜಿಗೂ  ಪ್ರತ್ಯುತ್ತರ ಬರಲಿಲ್ಲ.
ಪಕ್ಕದಲ್ಲಿ  ಫೋನ್ ಇಡಬೇಕೆಂದು  ಹೊರಟಾಗ  ಅವನ ಗಮನ  ಅವಳ  ವಾಟ್ಸಾಪ್  ಡಿ  ಪಿ  ಯ ಕಡೆ ಹೋಯಿತು. ನಿನ್ನೆಯವರೆಗೂ ಇದ್ದ ಅವನ ಫೋಟೋ ಬದಲು  ಹೂವಿನ ಚಿತ್ರ ಬಂದಿದೆ. ವಾಟ್ಸಾಪ್ಹ್   ಸ್ಟೇಟಸ್-
' ಮೂರ್ಖರಾಗುವವರು  ಇರುವಾಗ  ಮುರ್ಖರನ್ನಾಗಿಸುವವರು  ಇರುತ್ತಾರೆ' ಅಂತ  ಬದಲಾಗಿತ್ತು.
ಈ ಮೆಸೇಜನ್ನು  ಓದಿದೊಡನೆ  ಧನಂಜಯ  ಗಳಗಳನೆ  ಅತ್ತುಬಿಟ್ಟ. 'ಪ್ರೀತಿಯ ನಾಟಕ ಮಾಡಿ   ಮುರ್ಖನನ್ನಾಗಿಸಿದ್ದಕ್ಕೆ  ಸಂಭ್ರಮ ಪಡುತ್ತಿದ್ದಾಳೆ....!. ಛೆ ಎಷ್ಟು  ನೀಚ ಹೆಣ್ಣು.....' ಅವನ ಹೃದಯ ರೋಧಿಸಿತು. 

ಕೆಲವು  ಕ್ಷಣಗಳ  ನಂತರ   ಮತ್ತೊಮ್ಮೆ  ವಾಟ್ಸಾಪ್  ರಿಂಗಣಿಸಿತು. ತೆರೆದು  ನೋಡಿದ - ' ಮೂರ್ಖರ  ದಿನದ  ಹಾರ್ಧಿಕ  ಶುಭಾಶಯಗಳು. ಸ್ವಲ್ಪ  ಕ್ಯಾಲೆಂಡರ್  ನೋಡು,  ಇವತ್ತು  ಡೇಟ್  ಎಷ್ಟು ಅಂತ ಮೂರ್ಖಾಗ್ರೇಸರ...!'
' ಹೊ.... ಇವತ್ತು  ಏಪ್ರಿಲ್  ಒಂದು... !' ಆಗು ಹೋಗುಗಳೆಲ್ಲ  ಒಮ್ಮೆಲೆ  ಹೊಳೆದಂತಾಯಿತು  ಅವನಿಗೆ. ನೋವಿನಿಂದ ನರಳುತ್ತಿದ್ದ  ಅವನ  ಮನಸ್ಸು  ಒಮ್ಮೆಲೆ  ಹಗುರಾಯ್ತು.  ಸಂಕಟಪಡುತ್ತಿದ್ದ  ಹೃದಯ  ಶಾಂತವಾಯ್ತು. ತಕ್ಷಣ  ಫೋನ್ ಎತ್ತಿ  ಕಾಲ್  ಮಾಡಿದ. ಆ ಕಡೆಯಿಂದ ' ಗುಡ್  ಮಾರ್ನಿಂಗ್,  ಮೂರ್ಖೇಶ್ವರ. ಇವತ್ತು  ಪಿ ಜಿ ಯಲ್ಲಿ  ತಿಂಡಿ ತಿನ್ಲಿಲ್ಲ. ಎಷ್ಟಂದ್ರೂ  ನಿಮ್ಮ  ಸ್ಪೆಷಲ್  ದಿನ ಅಲ್ವಾ?   ನೀವೇ ಕೊಡ್ಸಿ .  ಹೋಟೆಲ್ನಲ್ಲಿ  ಕಾಯ್ತಿರ್ತೀನಿ.' ಅಂತ  ಹೇಳಿ   ಫೋನ್  ಇಟ್ಟಳು.
ಧನಂಜಯ ಹೋಟೆಲ್ಲನ್ನು  ಪ್ರವೇಶಿಸಿದ.  ಬಲಬದಿಯ  ಕಿಟಕಿ  ಪಕ್ಕದಲ್ಲಿ   ಕುಳಿತಿದ್ದ  ಸ್ವಾತಿ ನಗುತ್ತಿದ್ದಳು. ಅವಳ ಪಕ್ಕ   ಹೋಗಿ  ಕುಳಿತುಕೊಂಡು  ಹೇಳಿದ  ' ಎಷ್ಟು  ಹೆದರಿಸಿಬಿಟ್ಟೆ. ಪಾತಾಳಕ್ಕೆ  ಕುಸಿದಂತೆ  ಆಗೋಯ್ತು. ಇನ್ನುಮೇಲೆ  ಈ ತರ  ನಾಟಕ  ಮಾಡಿದ್ರೆ ನೋಡು' ಹೇಳುತ್ತಲೇ ಅವನ  ಕಣ್ಣಿನಿಂದ  ನೀರು ಜಿನಿಗಿತು. ಅದನ್ನು  ನೋಡಿ  ಸ್ವಾತಿಯ  ಕಣ್ಣಲ್ಲೂ  ನೀರು  ಮೂಡಿತು.  ಸ್ವಾತಿ ಅವನ ಕಿವಿಯಲ್ಲಿ  ಮೆಲ್ಲನೆ  ಹೇಳಿದಳು. ' ಅಯ್  ಲವ್  ಯೂ..., ದಯವಿಟ್ಟು  ನನ್ನ ಕ್ಷಮಿಸು.  ನಂಗೊತ್ತು  ನಿಂಗೇನು  ಸಂಕಟ  ಆಗಿದೆ ಅಂತ.   ಅದಕ್ಕೆ ನಂಗೆ  ಏನು ಶಿಕ್ಷೆ  ಕೊಟ್ಟರು ಸ್ವೀಕರಸ್ತೀನಿ'.  ಧನಂಜಯ  ಆಕೆಯ  ಹಣೆಗೆ  ಹಿತವಾದ  ಮುತ್ತು    ಕೊಟ್ಟ.  ಅವಳು  ಅವನ ಕೆನ್ನೆಗೆ  ಮುತ್ತಿಕ್ಕಿದಳು.  ಆ ದಿನ ಅವರನ್ನು  ಮತ್ತಷ್ಟು  ಬೆಸೆಯಿತು.
(ಇದು  ಸಂಪೂರ್ಣ  ಕಾಲ್ಪನಿಕ  ಕತೆ )
 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸವೆದ ಕಲ್ಲಿನ ಹಿಂದೆ (ಕಥೆ)

ಇಬ್ಬಗೆಯ ನೀತಿ ಏಕೆ?

ಬೆಳಕು ಬಿದ್ದೊಡನೆ (ಕಥೆ )