ಧನ್ಯ ಜೀವನಕ್ಕೆ ಬರೆದ ಮುನ್ನುಡಿ
ವರದಹಳ್ಳಿಯ ಶ್ರೀಧರ ಸ್ವಾಮಿಗಳು ಅಪರಿಚಿತರೇನಲ್ಲ. ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬಂದವರು. ದೇಶದಾದ್ಯಂತ ಸಂಚರಿಸಿ ಜನರಲ್ಲಿ ಧರ್ಮಜಾಗೃತಿ ಮಾಡಿದವರು, ಅಧ್ಯಾತ್ಮ ಅಭೀಪ್ಸೆಯನ್ನು ಜಾಗೃತಗೊಳಿಸಿದವರು. 20ನೇ ಶತಮಾನದಲ್ಲಿ ಭಾರತ ಕಂಡ ಶ್ರೇಷ್ಠ ಸಂತರಲ್ಲಿ ಇವರೂ ಒಬ್ಬರು.
ಮಹಾರಾಷ್ಟ್ರದ ಸಜ್ಜನಗಡದಲ್ಲಿ ರಾಷ್ಟ್ರಗುರು ಎಂದೇ ಖ್ಯಾತರಾದ, ಶಿವಾಜಿ ಮಹಾರಾಜರಿಗೆ ಮಾರ್ಗದರ್ಶನ ಮಾಡಿದ ಶ್ರೀ ಸಮರ್ಥ ರಾಮದಾಸರನ್ನೇ ತಮ್ಮ ಗುರುಗಳೆಂದು ಸ್ವೀಕರಿಸಿ, ಗುರುಸೇವೆ ಮಾಡಿ ಪರಮಾತ್ಮ ಸಾಕ್ಷಾತ್ಕಾರ ಮಾಡಿಕೊಂಡವರು ಶ್ರೀಧರ ಸ್ವಾಮಿಗಳು. ಅವರು ಅಲ್ಲಿ ಸಾಧಕರಾಗಿ ಸಲ್ಲಿಸಿದ ಸೇವೆಯ ಕಿರು ಪರಿಚಯ ಇಲ್ಲಿದೆ
ಶ್ರೀಧರ ಸ್ವಾಮಿಗಳು ಸಾಧಕರಾಗಿ ಸಜ್ಜನಗಡದಲ್ಲಿದ್ದಾಗ ಬೆಳಗಿನ ಜಾವ ಮೂರು ಗಂಟೆಗೆ ಎದ್ದರೆ ರಾತ್ರಿ ಹನ್ನೊಂದು ಗಂಟೆಯವರೆಗೆ ಅವಿಶ್ರಾಂತ ಗುರುಸೇವೆಯಲ್ಲಿಯೇ ಮುಳುಗಿರುತ್ತಿದ್ದರು. ಬೆಳಿಗ್ಗೆ ಎದ್ದ ತಕ್ಷಣ ಸ್ವಲ್ಪಹೊತ್ತು ಆತ್ಮಚಿಂತನೆ ಮಾಡಿ ಶ್ರೀರಾಮ ಸಮರ್ಥರನ್ನು ಗುರುಭಾವನೆಯಿಂದ ಅಲ್ಲಿಯೇ ಅಭಿನಮಿಸುತ್ತಿದ್ದರು. ಆನಂತರ ಶ್ರೀರಾಮದೇವರ ಗರ್ಭಗುಡಿಯಮುಂದಿರುವ ಸಭಾಮಂಟಪವನ್ನು ಮತ್ತು ದೇವಸ್ಥಾನದ ಎದುರು ಗುಡಿಸಿ, ಗೋಮಯ ನೀರು ಚಿಮುಕಿಸಿ ಸ್ನಾನಕ್ಕೆ ಹೋಗುತ್ತಿದ್ದರು. ಹಾಗೆ ದೇಹಧರ್ಮಗಳನ್ನೆಲ್ಲಾ ಮುಗಿಸಿ ಸ್ನಾನಮಾಡಿ ಬರಬೇಕಾದರೆ ನಾಲ್ಕುಘಂಟೆಯಾಗುತ್ತಿತ್ತು. ಬಂದವರು ಶ್ರೀಸಮರ್ಥರ ಶಯನಗೃಹ ಮತ್ತು ಗರ್ಭಗುಡಿಯ ಒಳಗೆ ಗುಡಿಸಿ ಊದುಬತ್ತಿ ಹಚ್ಚಿಟ್ಟು ಸರಿಯಾಗಿ ನಾಲ್ಕೂವರೆಘಂಟೆಗೆ ಕಾಕಡಾರತಿಗೆ ಪ್ರಾರಂಭ ಮಾಡುತ್ತಿದ್ದರು. ಎಲ್ಲಾಕಡೆಯ ಕಾಕಡಾರತಿ ಮುಗಿಯಬೇಕಾದರೆ ಐದುಘಂಟೆಯಾಗುತ್ತಿತ್ತು. ಆಮೇಲೆ ಎಲ್ಲರಿಗೂ ನೈವೇದ್ಯದ ಹಾಲು,ಬೆಣ್ಣೆ, ಸಕ್ಕರೆ ಪ್ರಸಾದವನ್ನು ಹಂಚಿ, ಶ್ರೀರಾಮದೇವರ ಹಾಗೂ ಸಮರ್ಥರ ಸಮಾಧಿಯ ಗರ್ಭಗುಡಿಯ ನೆಲವನ್ನು ಒದ್ದೆಬಟ್ಟೆಯಿಂದ ಒರೆಸುತ್ತಿದ್ದರು. ಅಮೃತಶಿಲೆಯ ನೆಲವನ್ನು ಒರೆಸಿ ರಂಗೋಲಿ ಹಾಕಿ ಶ್ರೀರಾಮ-ಆಂಜನೇಯ,ಗಣಪತಿ, ಈ ಎಲ್ಲಾ ದೇವತೆಗಳ ಹಾಗೂ ಸಮರ್ಥರ ಸಂಕ್ಷಿಪ್ತ ಫೂಜೆಯನ್ನು ಮುಗಿಸಿ ಈ ಎಲ್ಲಾದೇವರಲ್ಲಿಯೂ ತಮ್ಮ ಪರಮಾರ್ಥ ಯಶಸ್ಸಿಗೆ ಬೇಡಿಕೊಡು ನಮಸ್ಕಾರಗಳನ್ನು ಹಾಕುತ್ತಿದ್ದರು. ಹಾಗೆಯೇ (ಮೂರೂ ಹೊತ್ತು) ಶ್ರೀ ಸಮರ್ಥರು, ಶ್ರೀ ಸಮರ್ಥರ ಶಯನಗೃಹ ಹಾಗೂ ಶ್ರೀರಾಮನ ಮುಂದೆ ನಮಸ್ಕಾರ ಹಾಕುತ್ತಿದ್ದರು, ತಮ್ಮ " ಪರಮಾರ್ಥ ನಿರ್ವಿಘ್ನವಾಗಿ ಸಾಗಲಿ" ಎಂದು ಬೇಡಿಕೊಳ್ಳುತ್ತಿದ್ದರು. ಹೀಗೆ ಎಲ್ಲಾಕಡೆ ನಮಸ್ಕಾರ ಹಾಕಿದ ನಂತರ ಗಂಧ ತೇಯಲು ಕುಳಿತುಕೊಳ್ಳುತ್ತಿದ್ದರು. ಗಂಧ ತೇಯಲು ಕುಳಿತರೆಂದರೆ ಒಂದು ಮುಸುಂಬಿ ಹಣ್ಣಿನಷ್ಟು ಅಥವ ಸಿಪ್ಪೆ ಸುಲಿದ ತೆಂಗಿನಕಾಯಿಯಷ್ಟು ಗಂಧದ ಉಂಡೆಮಾಡಿಟ್ಟೇ ಮೇಲೇಳುತ್ತಿದ್ದರು. ನಂತರ ಎರಡು ಕೊಡಗಳನ್ನು ತೆಗೆದುಕೊಂಡು ನೀರುತರಲು ಕೆರೆಗೆ ತೆರಳುತ್ತಿದ್ದರು. ಅಲ್ಲಿ ಸಂಧ್ಯಾವಂದನೆ ಹಾಗೂ ಸ್ವಲ್ಪಮಟ್ಟಿಗಿನ ಜಪ ಮುಗಿಸಿ ಮೇಲೆ ಅಭಿಷೇಕಕ್ಕೆ ಹಾಗೂ ಅಡುಗೆಮನೆಗೆ ನೀರುತುಂಬುವ ಕಾರ್ಯಕ್ಕೆ ತೊಡಗುತ್ತಿದ್ದರು.
ಶ್ರೀಧರರು ಬೆಳಗಿನ ಸಂಧ್ಯಾವಂದನೆ ಮುಗಿಸಿ ಅಡುಗೆಗೆ ಹಾಗೂ ಅಭಿಷೇಕಕ್ಕೆ ನೀರುತುಂಬಿಸಲು ಪ್ರಾರಂಭಿಸುತ್ತಿದ್ದರು. ಸುಮಾರು ೨೫-೩೦ ಕೊಡ ನೀರು ತುಂಬಬೇಕಾಗುತ್ತಿತ್ತು. ಅಷ್ಟುಹೊತ್ತಿಗೆ ಬೆಳಗಿನ ಏಳೂವರೆ ಎಂಟುಘಂಟೆ ಆಗಿರುತ್ತಿತ್ತು. ಆ ನಂತರ ಶ್ರೀಧರರು ಫಲಾಹಾರ ಸ್ವೀಕರಿಸುತ್ತಿದ್ದರು. ತಾರುಣ್ಯದ ದೇಹ, ಅಲ್ಲದೆ ಸೇವೆಯ ಪರಿಶ್ರಮವೂ ಇದ್ದುದ್ದರಿಂದ ತಿಂದಷ್ಟೂ ಭಸ್ಮವಾಗಿಬಿಡುತ್ತಿತ್ತು. ಫಲಹಾರವಾಗಿ ನೆಲಗಡಲೆ ಸಿಗುತ್ತಿತ್ತು. ಪರಿಸ್ಥಿತಿಯ ಬದಲಾವಣೆಯಿಂದ ಜೋಳ, ಗೋದಿ ತಿನ್ನಬೇಕಾಯಿತು. ಅದೂ ಸಿಗದಿದ್ದಾಗ ದೇವರ ಮುಂದಿನ ಪೆಟ್ಟಿಗೆಯ ಅಕ್ಕಿಯನ್ನು ತಿನ್ನಬೇಕಾಯಿತು.( ಶ್ರೀಧರರಿಗೆ ತೊಂದರೆ ಕೊಡಬೇಕೆಂಬ ದುರುದ್ದೇಶದ ಜನರಿಂದ ಈ ಪರಿಸ್ಥಿತಿ ಒದಗಿಬಂತು) ಹೀಗೆ ಫಲಾಹಾರವನ್ನು ಮುಗಿಸಿ ಶ್ರೀಧರರು ಹೂವು ತುಳಸಿ ತರಲು ಹೊರಡುತ್ತಿದ್ದರು. ಎಲ್ಲಾಕಡೆಗಳಿಂದ ಹೂಗಳನ್ನು ಕೊಯ್ದುಕೊಂಡು ಬರುವ ಹೊತ್ತಿಗೆ ೯-೧೦ಘಂಟೆಯಾಗುತ್ತಿತ್ತು. ಹಾಗೆ ಬಂದವರು ಶ್ರೀರಾಮ, ಶ್ರೀ ಸಮರ್ಥರು ಹಾಗೂ ಸಮರ್ಥರ ಶಯನಗೃಹ ಈ ಮೂರುಕಡೆ ಅವರುಗಳಿಗೆ ಕುಡಿಯಲು ನೀರು ಬೇಕಾಗುತ್ತದೆಯೆಂಬ ಭಾವನೆಯಿಂದ ಮೂರು ತಂಬಿಗೆಗಳನ್ನು ಚೆನ್ನಾಗಿ ತಿಕ್ಕಿ ತೊಳೆದು ಅವುಗಳಲ್ಲಿ ಬಟ್ಟೆಯಿಂದ ಸೋಸಿದ ನೀರನ್ನು ತುಂಬಿಡುತ್ತಿದ್ದರು. ಅನಂತರ ಮತ್ತೊಮ್ಮೆ ಸಭಾಮಂಟಪ ಗುಡಿಸಿ, ಅಡುಗೆಮನೆಯ ಕಡೆ ಏನಾದರೂ ಕೆಲಸವಿದ್ದರೆ ಮಾಡಿ ಮಧ್ಯಾಹ್ನದ ಸ್ನಾನಕ್ಕೆ ತೆರಳುತ್ತಿದ್ದರು. ಮಧ್ಯಾಹ್ನದ ಸ್ನಾನ ಸಂಧ್ಯಾದಿಗಳನ್ನು ಮುಗಿಸಿ ೧೧ ಘಂಟೆಗೆ ಗುಡಿಗೆ ಬಂದು ಕುಂಡದ ಅಭಿಷೇಕದ ನೀರನ್ನು ಮೊಗೆದು ಮೇಲಿನ ಅಭಿಷೇಕದ ನೀರು ಹರಿದುಹೋಗುವ ಮೋರಿಯಲ್ಲಿ ಸುರಿಯುತ್ತಿದ್ದರು. ನಂತರ ಗರ್ಭಗುಡಿಯ ನೆಲವನ್ನು ಒದ್ದೆ ಬಟ್ಟೆಯಿಂದ ಒರೆಸುತ್ತಿದ್ದರು. ಆ ನಂತರ ದೇವರ ಬಟ್ಟೆಯನ್ನು ತೊಳೆಯಲು ಕೆರೆಗೆ ಹೋಗುತ್ತಿದ್ದರು. ಮೊದಲು ಆ ಬಟ್ಟೆಗೆ ಗುರುಭಾವನೆಯಿಂದ ನಮಸ್ಕರಿಸುತ್ತಿದ್ದರು. ಆ ನಂತರ " ಜಡವಾದರೂ ಗುರುಸೇವೆಯ ಭಾಗ್ಯ ಪಡೆದ ನೀನು ಧನ್ಯ" ಎಂಬ ಪವಿತ್ರ ಭಾವದಿಂದ ಬಟ್ಟೆ ಒಗೆಯುವ ಕಲ್ಲಿಗೆ ನಮಸ್ಕರಿಸಿ ಬಟ್ಟೆ ತೊಳೆಯುತ್ತಿದ್ದರು. ನಂತರ ಅವುಗಳನ್ನು ಒಣಗಲುಹಾಕಿ, ನೈವೇದ್ಯಗಳ ಎಡೆಯನ್ನು ಬಡಿಸಲು ಅಡುಗೆಮನೆಗೆ ಹೋಗುತ್ತಿದ್ದರು.ನಂತರ ದೇವರ ಮಹಾನೈವೇದ್ಯ ಹಾಗೂ ಮಂಗಳಾರತಿ ಹೊತ್ತಿಗೆ ದೇವರ ಗುಡಿಯಲ್ಲಿ ಹಾಜರಿರುತ್ತಿದ್ದರು. ೧೨ ಘಂಟೆಯ ಹೊತ್ತಿಗೆ ಆರತಿಯಾದ ನಂತರ ಆರತಿಗಳನ್ನೆಲ್ಲ ಚೊಕ್ಕಮಾಡುತ್ತಿದ್ದರು. ನಂತರ ಅಡುಗೆ ಮನೆಗೆ ಬಂದು ಊಟಕ್ಕಾಗಿ ಎಲೆಹಾಕಿ, ಬಂದ ಜನರಿಗೆಲ್ಲ ಬಡಿಸಿ, ಎಲೆಗಳನ್ನು ತೆಗೆದು ಸಾರಿಸಿ ಮತ್ತೊಮ್ಮೆ ಸ್ನಾನಕ್ಕೆ ಹೋಗುತ್ತಿದ್ದರು. ಸ್ನಾನ ಮುಗಿದ ನಂತರ ಸಾಮಾನ್ಯ ಎರಡುಘಂಟೆ ಹೊತ್ತಿಗೆ ಮಠದಿಂದ ಮಧುಕರಿ ತಂದು ದೇವರಿಗೆ ನೈವೇದ್ಯ ತೋರಿಸಿ ಆ ಮಧುಕರಿ ಪ್ರಸಾಧವನ್ನು ಒಂದು ವಸ್ತ್ರದಲ್ಲಿ ಕಟ್ಟಿ ಕೇಶವಾದಿ ನಾಮಗಳಿಂದ ಕೆರೆಯ ನೀರಿನಲ್ಲಿ ೨೪ ಸಲ ಮುಳುಗಿಸಿ ತೆಗೆದು ಅದನ್ನು ಅಲ್ಲಿಯೇ ಇದ್ದ ಔದುಂಬರ ವೃಕ್ಷಕ್ಕೆ ಕಟ್ಟಿ ತೂಗು ಹಾಕುತ್ತಿದ್ದರು.
ಶ್ರೀಸಮರ್ಥರ ಚರಣಸ್ಪರ್ಶವಾದ 'ಸೊನಾಳೆ' ಕೆರೆಯಲ್ಲಿ ೨೪ ಬಾರಿ ಮುಳುಗಿಸಿದ ಮಧುಕರಿ ಗಂಟನ್ನು ಹತ್ತಿರದ ಔದುಂಬರ ವೃಕ್ಷಕ್ಕೆ ಕಟ್ಟಿ ತೂಗುಹಾಕಿದ ನಂತರ ಎಲ್ಲಾ ದೇವರಿಗೂ ಮಧ್ಯಾಹ್ನದ ನಮಸ್ಕಾರ ಹಾಕಿ ಬರಲು ಶ್ರೀಧರರು ಹೋಗುತ್ತಿದ್ದರು. ವಾಪಾಸು ಬಂದವರು ಮಧುಕರಿಯನ್ನು ಕೆಳಗಿಳಿಸಿ ಅದನ್ನು ಮೂರು ಭಾಗ ಮಾಡಿ ಗೋ ಮಾತೆಗೆ, ಜಲಚರಗಳಿಗೆ ಒಂದೊಂದು ಭಾಗವನ್ನು ತೆಗೆದಿಟ್ಟು ಉಳಿದೊಂದು ಭಾಗ ಪ್ರಸಾಧವನ್ನು ಸ್ವೀಕರಿಸುತ್ತಿದ್ದರು. ಹಬ್ಬದ ದಿವಸಗಳಲ್ಲಿ ಅನ್ನದ ಜೊತೆಗೆ ಭಕ್ಷ್ಯಗಳು ಕೂಡ ಇದ್ದರೆ, ಭಕ್ಷ್ಯಗಳನ್ನು ಅಲ್ಲಿಯೇ ಬಿಟ್ಟು ಅನ್ನ ರೊಟ್ಟಿ ಮಾತ್ರ ತರುತ್ತಿದ್ದರು. ಪ್ರಸಾದವನ್ನು ಸ್ವೀಕರಿಸುವುದಕ್ಕೂ ಮೊದಲು ಅನ್ನಪೂರ್ಣೆಗೂ, ಪ್ರಸಾದಕ್ಕೂ ನಮಸ್ಕರಿಸುವ ಪದ್ದತಿ ಇಟ್ಟುಗೊಂಡಿದ್ದರು. ಈ ಪ್ರಸಾಧ ಸ್ವೀಕರಿಸುವುದರಿಂದ ನನ್ನ ಬ್ರಹ್ಮಚರ್ಯ ಅಸ್ಖಲಿತವಾಗಿ ಉಳಿಯಲಿ, ಜ್ಞಾನ ವೈರಾಗ್ಯ ಬೆಳೆಯಲಿ, ಜಗತ್ತನ್ನು ಉದ್ಧರಿಸುವ ಯೋಗ್ಯತೆ ಬರಲಿ ಎಂದು ಅನ್ನಪೂರ್ಣೆಯಲ್ಲಿ ಬೇಡಿಕೊಳ್ಳುತ್ತಿದ್ದರು. ತ್ರಿಮೂರ್ತಿಗಳನ್ನೂ, ಅಷ್ಟದಿಕ್ಪಾಲಕರನ್ನೂ, ಸಜ್ಜನಗಡ ಕ್ಷೇತ್ರವನ್ನೂ ಅಭಿನಮಿಸಿ ಪ್ರಸಾದ ಸ್ವೀಕರಿಸುವ ಪರಿಪಾಠ ಇತ್ತು. ಭೋಜನ ಮಾಡುವಾಗ ಕಣ್ಣು ಮುಚ್ಚಿ ಧ್ಯಾನ ಮಾಡುತ್ತಾ ಒಂದೊಂದು ತುತ್ತನ್ನೂ ಹದಿಮೂರು ಬಾರಿ ತ್ರಯೋದಶಾಕ್ಷರ ಮಂತ್ರದ ಜಪವಾಗುವವರೆಗೆ ಜಗಿಯುತ್ತಾ ಬಳಿಕ ನುಂಗುವ ನಿಯಮ ಇಟ್ಟುಕೊಂಡಿದ್ದರು. ಅನ್ನದಿಂದಲೇ ಮನಸ್ಸಾಗುವುದರಿಂದ ಪವಿತ್ರತೆಯಿಂದ, ಆದಷ್ಟು ಏಕಾಗ್ರ ಮನಸ್ಸಿನಿಂದ ಪ್ರಸಾದಗ್ರಹಣ ಮಾಡುತ್ತಿದ್ದರು. ಪ್ರಸಾದ ಭೋಜನ ಮಾಡಿ ಮುಗಿಸುವ ಹೊತ್ತಿಗೆ ಸಾಯಂಕಾಲದ ಪೂಜೆಗೆ ಸಿದ್ಧತೆ ಮಾಡುವ ಸಮಯವಾಗಿರುತ್ತಿತ್ತು. ಸಾಯಂಕಾಲದ ಪೂಜೆಗೆ ಹೂವು ತುಳಸಿ ತರಲು ಕೆಳಗಿನ ಊರುಗಳಿಗೆ, ಹೊಳೆಯ ಅಂಚಿನ ಭಾಗಗಳಿಗೆ ಹೋಗುತ್ತಿದ್ದರು.
ಸಂಜೆಯ ಪೂಜೆಗಾಗಿ ಹೂವು ತುಳಸಿ ಕೊಯ್ಯಲು ಹೋಗುವಾಗ ಕೆಲವೂಮ್ಮೆ ಗೋಡಸೆ ನಾರಾಯಣ ಬುವಾ ಎಂಬುವವರು ಜೊತೆಯಲ್ಲಿ ಬರುತ್ತಿದ್ದರು.ಹೋಗುವಾಗ-ಬರುವಾಗ ಅವರು ಶ್ರೀ ಸಮರ್ಥರ ಚರಿತ್ರೆ, ಶ್ರೀ ಕಲ್ಯಾಣ ಸ್ವಾಮಿಗಳ ಸೇವೆಯಕ್ರಮವನ್ನು ವಿವರಿಸಿ ಹೇಳುತ್ತಿದ್ದರು. ಶ್ರೀಧರರು ಉತ್ಸಾಹದಿಂದ ಆಲಿಸಿ ಕೇಳುತ್ತಿದ್ದರು. ದಾರಿಯಲ್ಲಿ ಸಾಗುವಾಗ ಯಾರಾದರೂ ಮುದುಕರು ಅಶಕ್ತರು ಇದ್ದರೆ ಅವರ ಗಂಟು ಮೂಟೆಗಳನ್ನು ಶ್ರೀಧರರು ತಾವು ಹೊತ್ತುಕೊಂಡು ಬರುತ್ತಿದ್ದರು. ಹೂವು ತುಳಸಿ ಕೊಯ್ದುಕೊಂಡು ಗಡಕ್ಕೆ ವಾಪಾಸಾದ ನಂತರ ಸಭಾ ಮಂಟಪವನ್ನು ಗುಡಿಸಿ ಯಾರಾದರೂ ಮಾಲೆ ಮಾಡುವವರಿದ್ದರೆ ಅವರಿಗೆ ಹೂವು ತುಳಸಿ ನೀಡಿ ತಾವು ಸಾಯಂಕಾಲದ ಸ್ನಾನಕ್ಕೆ ಹೋಗುತ್ತಿದ್ದರು. ಮಾಲೆ ಮಾಡಲು ಯಾರೂ ಇಲ್ಲದಿದ್ದರೆ ತಾವೇ ಮಾಡಿಟ್ಟು ಸ್ನಾನಕ್ಕೆ ಹೋಗುತ್ತಿದ್ದರು. ತರುವಾಯ ಸಾಯಂ ಸಂಧ್ಯಾದಿಗಳನ್ನು ಮುಗಿಸಿ, ಗರ್ಭಗುಡಿಗಳನ್ನು , ಸಮರ್ಥರ ಶಯನ ಗೃಹವನ್ನು ಗುಡಿಸಿ ಅಲ್ಲಿಯ ಬಟ್ಟೆಗಳನ್ನು ತೆಗೆದು, ತಾವೇ ತೊಳೆದು ಒಣಗಿಸಿದ ಬೇರೆ ವಸ್ತ್ರಗಳನ್ನು ಹಾಕಿ ಶಯ್ಯೆಯನ್ನು ಹೂಗಳಿಂದ ಅಲಂಕರಿಸಿ ಧೂಪ ಅಥವ ಊದುಬತ್ತಿ ಹಚ್ಚಿಟ್ಟು ಮಂಗಳಾರತಿಯ ಕಡೆಗೆ ಹೋಗುತ್ತಿದ್ದರು. ಮಂದಿರದ ಆರತಿಯಾದ ನಂತರ ಮಂದಿರದ ಹೊರಗಿರುವ ಪರಿಕ್ರಮದ ಆವರಣದ ದೇವರುಗಳ ಆರತಿ ಮುಗಿಸಿ ಶಯನಗೃಹಕ್ಕೆ ತೆರಳಿ ಅಲ್ಲಿಯ ಆರತಿಯನ್ನೂ ಮುಗಿಸಿ ನಗರ ಮಾರುತಿಯ ಆರತಿಯನ್ನು ಮಾಡಲು ತೆರಳುತ್ತಿದ್ದರು. ಆರತಿ ಸಂದರ್ಭದಲ್ಲಿ ಭಕ್ತಿಯಿಂದ ಭಜನೆ ಮಾಡುತ್ತ ಇರುತ್ತಿದ್ದರು. ಅಲ್ಲಿಯ ಆರತಿ ಮುಗಿಸಿ ವಾಪಾಸಾದವರು ಗುಡಿಯಲ್ಲಿ ಸಮರ್ಥ ಸಂಪ್ರದಾಯದ ಯಾರಾದರೂ ಹಿರಿಯರಿದ್ದರೆ ಅವರಲ್ಲಿ ದಾಸಬೋಧೆಯನ್ನು ಓದಲು ಪ್ರಾರ್ಥಿಸಿ ತಾವು ಎಲ್ಲರ ಜೊತೆ ಶ್ರವಣ ಮಾಡುತ್ತಿದ್ದರು. ಯಾರೂ ಓದುವವರು ಇಲ್ಲದಿದ್ದಾಗ ತಾವೇ ಶ್ರವಣ ಮಾಡುತ್ತಿದ್ದರು. ದಾಸಬೋಧ ಸತ್ಸಂಗದ ಆರತಿಮುಗಿಸಿ ಅಡುಗೆಮನೆಯ ಕಡೆಗೆ ಬಡಿಸುವ ಕೆಲಸಕ್ಕೆ ಹೋಗುತ್ತಿದ್ದರು. ಏನೂ ಕೆಲಸವಿಲ್ಲದ ಸಂದರ್ಭದಲ್ಲಿ ಆ ಪ್ರಶಾಂತ ಪರಿಸರದ ಸಮರ್ಥರ ಸಮಾಧಿಹತ್ತಿರ ಸ್ವಲ್ಪ ಹೊತ್ತು ಧ್ಯಾನ ಮಾಡುತ್ತಿದ್ದರು. ಆ ನಂತರ ಜನರ ಓಡಾಟದಿಂದ ಮಾಸಿದ ಅಮೃತ ಶಿಲೆಯ ನೆಲವನ್ನು ಒದ್ದೇ ಬಟ್ಟೆಯಿಂದ ಒರೆಸಿ , ಶಯನಾರತಿಯನ್ನು ಮಾಡಿ ಬಾಗಿಲುಗಳಿಗೆ ಬೀಗ ಹಾಕಿ ನೆಲಗಡಲೆ ಫಲಾಹಾರ ಮಾಡಿ ವಿಶ್ರಮಿಸುತ್ತಿದ್ದರು. ಯಾರಾದರೂ ಮುದುಕರು ನಡೆದುಕೊಂಡು ಬಂದವರಿದ್ದರೆ ಅವರ ಕಾಲುಗಳನ್ನು, ಸೊಂಟವನ್ನು ಒತ್ತಿಕೊಟ್ಟು ಹನ್ನೊಂದುಗಂಟೆಗೆ ವಿಶ್ರಮಿಸುತ್ತಿದ್ದರು.
ಹೀಗೆ ಬೆಳಗಿನಿಂದ ರಾತ್ರೆಯವರೆಗೂ ಸ್ವಲ್ಪವೂ ಬೇಸರವಿಲ್ಲದೆ ಉತ್ಸಾಹದಿಂದ, ಒಂದೇ ಮನಸ್ಸಿನಿಂದ , ಪೂರ್ಣ ಗುರುಭಕ್ತಿಯಿಂದ,ಶ್ರದ್ಧೆಯಿಂದ ಎಲ್ಲ ಸಾಧಕರಿಗೂ ಮಾದರಿಯಾದ ಗುರುಸೇವೆ ಶ್ರೀಧರರಿಂದ ನಡೆಯುತ್ತಿತ್ತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ