ಕೃತಘ್ನನ ಕೃತಜ್ಞತೆ.
ನಿ:ಶಕ್ತಿಯಿಂದ ಮುಂದೆ ಹೆಜ್ಜೆಯಿಡಲಾರದೆ ಸುಸ್ತಾಗಿ ಮರಕ್ಕೆ ಒರಗಿ ನಿಂತ ವೃದ್ಧನಂತೆ ಕಾಣುತ್ತಿರುವ ಈ ಸೈಕಲ್ ನೆಪಮಾತ್ರಕ್ಕಷ್ಟೇ ಬದುಕಿಕೊಂಡಿದೆ. ಜೀವನದುದ್ದಕ್ಕೂ ದುಡಿದು ದಣಿದ, ದುಡಿಮೆಯಾಚೆಗೆ ಜೀವನವನ್ನೇ ಕಾಣದೆ ಜೀವನದ ಕೊನೆಯಲ್ಲಿ ಯಾರಿಗೂ ಬೇಡವಾಗಿ, ಕಣ್ಣೆದುರಿದ್ದೂ ಎಲ್ಲರಿಂದಲೂ ಉಪೇಕ್ಷೆಗೊಳಗಾದ ವ್ಯಕ್ತಿಯ ಪರಿಸ್ಥಿತಿ ಅದರದ್ದು. ವೃದ್ದಾಪ್ಯದಲ್ಲಿ ತಂದೆತಾಯಂದಿರನ್ನು ಕಡೆಗಣಿಸಿ ಭಂಡತನದಿಂದ ಓಡಾಡಿಕೊಂಡಿರುವ ಮಕ್ಕಳಂತೆ ಸೈಕಲ್ಲಿನ ಈ ಪರಿಸ್ಥಿತಿಯನ್ನು ಕಂಡೂ ಕಾಣದಂತೆ ಇರುವ ಜಗಭಂಡ ನಾನು. ತನ್ನ ಜೀವನವನ್ನು ನನಗಾಗಿಯೇ ಸವೆಸಿದ ಆ ಸೈಕಲ್ಲಿನ ಬಗ್ಗೆ ಯಾವ ಕೃತಜ್ಞತೆಯನ್ನೂ ತೋರದೆ ನಿರ್ಲಜ್ಜನಾಗಿ ಬದುಕುತ್ತಿದ್ದೇನೆ. ಇಂದು ನನ್ನ ಕಾಲಮೇಲೆ ನಾನು ನಿಂತಿದ್ದೇನೆ. ಆದರೆ ಒಂದಾನೊಂದು ಕಾಲದಲ್ಲಿ ನನ್ನ ಸಂಪೂರ್ಣ ಭಾರವನ್ನು ತಾನು ಹೊತ್ತು ನನ್ನನ್ನು ಮುನ್ನಡೆಸಿದ್ದು ಈ ಸೈಕಲ್ !
ಸರಿಯಾಗಿ ೧೬ ವರ್ಷಗಳ ಹಿಂದೆ ಈ ಸೈಕಲ್ ನನ್ನ ಬಾಳಿನಲ್ಲಿ ಪ್ರವೇಶಿಸಿತು. ನಾನು ಆಗ ಸಿದ್ದಾಪುರದ ಎಂ ಜಿ ಸಿ ಕಾಲೇಜಿನಲ್ಲಿ ಡಿಗ್ರಿ ಓದುತ್ತಿದ್ದೆ. ಮನೆಯಿಂದ ತಾಳಗುಪ್ಪದ ವರೆಗೆ ಸೈಕಲ್ ತುಳಿದು ಅಲ್ಲಿಂದ ಬಸ್ಸಿನ ಪ್ರಯಾಣ. ಮನೆಗೆ ವಾಪಾಸಾಗುವುದೂ ಕೂಡ ಇದೇ ರೀತಿಯಲ್ಲಿ. ಒಟ್ಟಾರೆ ೧೦ ಕಿಮಿಯ ಸೈಕಲ್ ಸವಾರಿ ನನ್ನ ಪ್ರತಿನಿತ್ಯದ ಪಾಡಾಗಿತ್ತು. ಮೊದಲು ಒಂದು ಸೈಕಲ್ ಇದ್ದರೂ, ಅದು ನನಗೆ ಗಿಡ್ಡವಾಗಿದ್ದರಿಂದ ಬೆನ್ನು ನೋವು ಬರುತ್ತಿತ್ತು. ನಂಗೊಂದು ೨೪ ಇಂಚಿನ ಸೈಕಲ್ ಬೇಕು ಅಂತ ಅಪ್ಪನ ಎದುರಲ್ಲಿ ಬೇಡಿಕೆ ಇಟ್ಟೆ . ಹೊಸ ಸೈಕಲ್ಲಿಗೆ ಸಾವಿರದ ಮೇಲಿದ್ದದ್ದರಿಂದ, ಅವನ ಬಜೆಟ್ಟಿಗನುಗುಣವಾಗಿ ಅಪ್ಪ ಸೆಕೆಂಡ್ ಹ್ಯಾಂಡ್ ಸೈಕಲ್ಲಿನ ಹುಡುಕಾಟದಲ್ಲಿ ತೊಡಗಿದ. ಕೊನೆಗೆ ತಾಳಗುಪ್ಪದ ಶ್ರೀಧರ ಶೆಟ್ರ ಹತ್ತಿರ ಇದ್ದ ಈ ಹರ್ಕ್ಯುಲೆಸ್ ಸೈಕಲ್ಲು ೨೫೦ರೂಪಾಯಿಗೆ ಖರೀದಿಯಾಗಿ ಮನೆ ಪ್ರವೇಶಿಸಿತು.
ಅಂದಿನಿಂದ 'ನಾನುಂಟು, ನನ್ನ ಸೈಕಲ್ ಉಂಟು' ಅಂತಾಗಿತ್ತು. ಪ್ರತಿನಿತ್ಯ ತಾಳಗುಪ್ಪಕ್ಕೆ ೨೦ ನಿಮಿಷದಲ್ಲಿ ತಲುಪಬೇಕಿತ್ತು. ಐದು ನಿಮಿಷ ಲೇಟ್ ಆದರೂ ಸಾಗರ-ಯಲ್ಲಾಪುರ ಬಸ್ಸು ಮಿಸ್ಸಾಗಿ ಮತ್ತೊಂದು ಬಸ್ಸು ಬರುವವರೆಗೂ ಕಾಯುವ ಪಡಿಪಾಟಲು ಇರುತ್ತಿತ್ತು ಹಾಗಾಗಿ ನನ್ನ ಸೈಕಲ್ಲಿನದು ಯಾವಾಗಲೂ ನಾಗಾಲೋಟ. ಜಲ್ಲಿರಸ್ತೆ, ಗದ್ದೆಯ ಸಣ್ಣ ಹಾಳಿ( ಜಾರಿಬಿದ್ದರೆ ನೀರು ಹರಿಯುವ ತೋಡಿ), ಧೂಳನ್ನೇ ಹೊದ್ದು ಮಲಗಿದ್ದ ರಸ್ತೆ ಇಲ್ಲೆಲ್ಲ ಕುದುರೆಯಂತೆ ಜಿಗಿಯುತ್ತ, ಚಂಗನೆ ಎಗರುತ್ತ ನನ್ನ ಸೈಕಲ್ ತಾಳುಪ್ಪದ ಕಡೆ ಓಡುತ್ತಿತ್ತು. ಮಳೆಗಾಲದಲ್ಲಂತೂ ಅದ್ಭುತ! ಜಾರುತ್ತ ಬೀಳುತ್ತ, ಏಳುತ್ತ, ಬರುವುದು ಸಹಜವಾಗಿತ್ತು. ಒಂದುಕೈಲಿ ಸೈಕಲ್ ಹ್ಯಾಂಡ್ಲು, ಮತ್ತೊಂದು ಕೈಲಿ ಛತ್ರಿ ಹಿಡಿದು ಗದ್ದೆ ಬಯಲಿನಲ್ಲಿ ಎದುರುಮುಖ ಬೀಸುವ ಗಾಳಿಗೆ ಎದೆಯೊಡ್ಡಿ ಛಲ ಬಿಡದ ತ್ರಿವಿಕ್ರಮನಂತೆ ನರಬಿಗಿದು ಪೆಡಲು ತುಳಿಯುತ್ತಿದ್ದೆ. ಹಾಗೆ ತಾಳಗುಪ್ಪಕ್ಕೆ ಬಂದು ಸೈಕಲ್ಲನ್ನು ಅರಳಿ ಮರದ ಕೆಳಗೆ , ಅಪರೂಪಕ್ಕೊಮ್ಮೆ ಮೂಗಿಮನೆ ಮಿಲ್ಲಿನಲ್ಲಿ ಒಗೆದು ಬಸ್ ಸ್ಟಾಂಡಿನೆಡೆಗೆ ಮುಖ ಮಾಡುತ್ತಿದ್ದೆ. ಹೀಗೆ ೨೦೦೨ ರಿಂದ ೨೦೦೫ ರ ವರೆಗೆ ನನ್ನ ಡಿಗ್ರಿ ಪಯಣ ಈ ಸೈಕಲ್ಲಿನ ಉಪಕಾರದಲ್ಲಿಯೇ
ಆಮೇಲೆ ನಾನು ತೆರಳಿದ್ದು ಕುಮಟಾ ಕಮಲಾ ಬಾಳಿಗ ಕಾಲೇಜಿಗೆ. ಸೈಕಲ್ಲಿನ ಹಾಗೂ ನನ್ನ ಬಾಂಧವ್ಯ ಸೈಕಲ್ಲನ್ನು ಅಲ್ಲಿಗೂ ಕರೆತಂದಿತು. ನಾನಿದ್ದ ಹೆಗಡೆಯಿಂದ ಕಾಲೇಜಿಗೆ ಸುಮಾರು ೨ ಕಿಮಿಯ ನನ್ನ ಪ್ರಯಾಣ ಈ ಸೈಕಲ್ಲಿನಲ್ಲಿಯೇ. ಅಲ್ಲದೆ ಕುಮಟಾ, ಮಿರ್ಜಾನು, ಹಳಕಾರು ಅಂತೆಲ್ಲ ಆಸುಪಾಸಿನ ಊರುಗಳಿಗೆಲ್ಲ ಇದರಮೇಲೆ ಓಡಾಟ. ಹೀಗೆ ಒಂದು ವರ್ಷ ಅಲ್ಲಿ ಕಳೆದಾದಮೇಲೆ ಊರಿಗೆ ವಾಪಾಸಾಗುವಾಗ ಬಸ್ಸಿನಮೇಲೆ ಈ ಸೈಕಲ್ಲನ್ನೂ ಹೇರಿಕೊಂಡು ಬಂದೆ. ಆಮೇಲೆ ನಾನು ದುಡಿಮೆಯ ಹಿಂದೆ ಬಿದ್ದು ಬೆಂಗಳೂರು ಸೇರಿದೆ. ಸೈಕಲ್ ಮನೆಯಲ್ಲಿಯೇ ಆಯಿತು. ಈಗ ಅಪ್ಪ ಅದರ ಸವಾರನಾದ.
ಕೇವಲ ಓದಿಗಷ್ಟೇ ಅಲ್ಲ, ನನ್ನ ಇತರೆ ಎಲ್ಲ ಹಡಬಿಟ್ಟಿ ತಿರುಗಾಟಕ್ಕೂ ಒದಗುತ್ತಿದ್ದ ಈ ಸೈಕಲ್ಲಿನ ಹಣೆಬರಹ ನಿದಾನವಾಗಿ ಬದಲಾಯಿತು. ಅಪ್ಪನ ಹೆವಿಡ್ಯೂಟಿ ಬಂದ ನಂತರ ಅಪ್ಪ ಸೈಕಲ್ಲೇರುವುದನ್ನು ಕಡಿಮೆಮಾಡಿ ಕ್ರಮೇಣ ನಿಲ್ಲಿಸಿಯೇಬಿಟ್ಟ. ಮನೆಯೆದುರು ಠೀವಿಯಿಂದ ಇರುತ್ತಿದ್ದ ಸೈಕಲ್ ಮನೆಯ ಪಕ್ಕಕ್ಕೆ ಹೋಯಿತು. ಛಲಿ, ಮಳೆ ಬಿಸಿಲಿನ ಆಘಾತಕ್ಕೆ ಸಿಲುಕಿ ಜರ್ಜರಿತವಾಗತೊಡಗಿತು. ಆ ಹೊತ್ತಿಗೆ ನಂಗೂಂದು ದುಡಿಮೆ ಅಂತಾಗಿ ಬೇರೆ ಊರಿನಲ್ಲಿದ್ದೆ. ಮೊದಲೆಲ್ಲ ಮನೆಗೆ ಬಂದಾಗ ಸೈಕಲ್ ಏರುತ್ತಿದ್ದವನು ಈಗ ಅಪ್ಪನ ಹೆವಿಡ್ಯೂಟಿ ಏರತೊಡಗಿದೆ. ಯಾವ ಸೈಕಲ್ ನನ್ನದಾಗಿತ್ತೋ ಅದು ಮನೆಯ ಪಕ್ಕದ ಕಂಪೌಂಡಿಗೆ ಒರಗಿ ವೃದ್ದಾಪ್ಯವನ್ನು ಆಹ್ವಾನಿಸುತ್ತ ಸೊರಗತೊಡಗಿತ್ತು. ಆಮೇಲಾಮೇಲೆ ನನ್ನದೇ ಬೈಕು, ಕಾರು ಬಂದಿತು. ಒಂದಾನೊಂದು ಕಾಲದಲ್ಲಿ ನನ್ನದು ಎನ್ನುವ ಹೆಮ್ಮೆಯ ಸೈಕಲ್ ಹರಗಣವಾಯಿತು. ಒಮ್ಮೆ ಆ ಪಕ್ಕಕ್ಕೆ ಮತ್ತೊಮ್ಮೆ ಈ ಪಕ್ಕಕ್ಕೆ ಎತ್ತಿ ತಂದಿಡುತ್ತ, ಎಸೆಯುತ್ತ ಇರುವುದು ಸಾಮಾನ್ಯವಾಯಿತು. ಈಗ ಸೈಕಲ್ಲಿಗೆ ಯಾವ ತ್ರಾಣವೂ ಇಲ್ಲ ರಿಮ್ಮಿಗಾಗಲಿ, ಚೈನಿಗಾಗಲಿ ತಾಕತ್ತಿಲ್ಲ. ಏನೊಂದು ಇಲ್ಲದೆ ಅಸ್ತಿಪಂಜರವಾಗಿದೆ. ಅದರಿಂದ ಉಪಕೃತನಾದ ನಾನು ತಿಂದುಂಡು ಮೈ ಬೆಳೆಸಿದ್ದೇನೆ. ನಾಲ್ಕು ಹೆಜ್ಜೆಯ ದಾರಿಗೂ ಬೈಕೋ, ಕಾರೋ ಬೇಕು ಎನ್ನುತ್ತೇನೆ.
ಇಂದು ಮನೆಯ ಪಕ್ಕ ಕಣ್ಣು ಹಾಯಿಸಿದಾಗ ಅಲ್ಲಿ ಸೈಕಲ್ ಇರುವುದು ಅರಿವಿಗೆ ಬಂತು, ಇಷ್ಟು ದಿನ ಕಾಣುತ್ತಿದ್ದರೂ ಅರಿವಿಗೆ ಬಂದಿರಲಿಲ್ಲ!. ಇದೇನಾ ನಾನು ಓಡಿಸುತ್ತಿದ್ದ ಸೈಕಲ್ ಎನ್ನಿಸಿತು.ಆ ಸೈಕಲ್ಲಿಗೇನಾದರೂ ಜೀವವಿದ್ದಿದ್ದರೆ ನನ್ನನ್ನು ಖಂಡಿತಾ ಶಪಿಸುತ್ತಿತ್ತು, ಅದರ ಇಂದಿನ ಸ್ಥಿತಿಗೆ ಕಣ್ಣೀರಿಡುತ್ತಿತ್ತು ಎಂದು ಊಹಿಸಿಕೊಂಡೆ, ನಾನೆಷ್ಟು 'ಕೃತಘ್ನ' ಎನ್ನಿಸಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ