ಎರಡು ಧ್ರುವಗಳ ನಡುವೆ (ಕತೆ )

ನನ್ನ  ಕನ್ನಡಕವನ್ನ  ತೆಗೆದು  ಕಣ್ಣೀರು  ಒರೆಸಿಕೊಂಡು ವಾರಿಜಾಳನ್ನು  ನೋಡಿದೆ.  ಶಿವರಾಮು ಹಾಗೂ  ವಾರಿಜ ಒಂದು ಕಾಲದಲ್ಲಿ   ಎಷ್ಟೊಂದು  ಹತ್ತಿರ  ಇದ್ದವರು  ನಂತರ   ಅದೆಷ್ಟು  ದೂರ ಆಗಿಬಿಟ್ಟರು! ಅವಳು ಅಲ್ಲಿ ಬೆಂಗಳೂರಿನಲ್ಲಿ  ,  ಇವನು  ಈ  ಹಳ್ಳಿಯಲ್ಲಿ   ಬದುಕನ್ನು   ಸವೆಸಿಬಿಟ್ಟರು.  ಇವತ್ತು ವಾರಿಜ  ಶಿವರಾಮುವಿಗೆ ಮತ್ತೆ  ಇಷ್ಟು  ಹತ್ತಿರದಲ್ಲಿದ್ದಾಳೆ  ಆದರೆ ಅವರು  ಮೊದಲಿನಂತೆ  ಒಂದಾಗಿರಲು   ಸಾಧ್ಯವಿಲ್ಲ,  ಯಾಕೆಂದರೆ  ಶಿವರಾಮು ಕಣ್ಣೆದುರಿಗಿನ  ಚಿತೆಯಲ್ಲಿ  ಸುಟ್ಟು ಬೂದಿಯಾಗುತ್ತಿದ್ದಾನೆ!  ಇದಕ್ಕೆಲ್ಲ  ಸಾಕ್ಷಿಯಾಗಿ ನಾನು  ನಿಂತಿದ್ದೇನೆ!!  ಹೀಗೆಲ್ಲ  ಯೋಚಿಸುತ್ತ  ಕಣ್ಣೆದುರಿಗೆ   ಧಗಧಗಿಸುತ್ತಿದ್ದ  ಬೆಂಕಿ  ಜ್ವಾಲೆಯನ್ನೇ  ನೋಡುತ್ತಾ  ನಿಂತಿದ್ದೆ .ವಾರಿಜ ಕೂಡ  ತದೇಕಚಿತ್ತವಾಗಿ  ಚಿತೆಯನ್ನೇ  ನೋಡುತ್ತಾ  ನಿಂತಿದ್ದಳು.ಎಲ್ಲವೂ  ಮುಗಿದು ಹೋಗಿ  ಕಣ್ಣೀರಷ್ಟೇ ಆಕೆಯಲ್ಲಿ  ಉಳಿದಿತ್ತು. ನಮ್ಮ  ಕಣ್ಣೆದುರಿಗೆ   ಉರಿಯುತ್ತಿದ್ದ   ಬೆಂಕಿ ಮಾತ್ರ  ಯಾವ  ಭಾವನೆಗಳ  ತಾಕಲಾಟವೂ  ಇಲ್ಲದೆ ತನ್ನ  ಪಾಡಿಗೆ  ತಾನು    ನಮ್ಮ  ಬದುಕಿನ  ಭಾಗವಾಗಿದ್ದ  ಶಿವರಾಮುವನ್ನು  ನಮ್ಮ ಪಾಲಿನ  ನೆನಪಾಗಿ  ಬದಲಾಯಿಸುತ್ತಿತ್ತು. 
                     **********
               ನಾನು ಹಾಗೂ  ಶಿವರಾಮು ಗೆಳೆಯರು  ಎಂದಷ್ಟೇ  ಹೇಳಿದರೆ  ಅದು  ನಮ್ಮ  ಸಂಬಂಧವನ್ನು ಸರಿಯಾಗಿ  ತಿಳಿಸಿದಂತೆ  ಆಗುತ್ತದೆ  ಎಂದು  ನನಗನ್ನಿಸುವುದಿಲ್ಲ.  ನಾವಿಬ್ಬರು  ಪರಸ್ಪರರ  ಅಂತರಂಗವನ್ನು  ಅರಿತವರು. ಒಂದೇ  ಊರಿನಲ್ಲಿ  ಹುಟ್ಟಿ,  ಒಟ್ಟಿಗೆ  ಆಡಿ  ಬೆಳೆದವರು  ನಾವು. ಅಡಿಕೆ  ತೋಟದ   ನೆರಳಿನಲ್ಲಿ  ನಮ್ಮ  ಜೀವನ ಸಾಗಿತ್ತು. ಹುಡುಗಾಟದ  ವಯಸ್ಸಿನಲ್ಲಿ  ಅಷ್ಟಿಷ್ಟು  ಶಿಕ್ಷಣ ದಕ್ಕಿತು. ಹೊಯ್ದಾಟದ  ವಯಸ್ಸಿನಲ್ಲಿ  ಮದುವೆಯಾಗಿ,  ಮಕ್ಕಳು  ಹುಟ್ಟುವದರೊಂದಿಗೆ  ಅವನ  ಸಂಸಾರದ  ನೊಗದ  ಜೊತೆಗೆ  ಬದುಕು  ಚಲಿಸುತ್ತಿತ್ತು. ನಾನು  ಮದುವೆಯಾಗಬಾರದೆಂದು  ತೀರ್ಮಾನಿಸಿ  ಹಾಗೆಯೇ  ಉಳಿದೆ
             ಶಿವರಾಮುವಿನ     ಕೂಡು   ಕುಟುಂಬದಲ್ಲಿ  ಬೆಳೆದಿದ್ದ  ಕಾರಣದಿಂದಾಗಿ   'ಹಿರಿಯರು  ಹೇಳಿದಂತೆ  ಕಿರಿಯವರು  ಕೇಳುವುದು' ಅನ್ನುವ  ತತ್ವವೊಂದು  ಸಹಜವಾಗಿಯೇ ಅವನಲ್ಲಿ ಬಂದಿತ್ತು. ಬೇಕಾಬಿಟ್ಟಿ   ಎನ್ನುವ  ವರ್ತನೆ  ಅವನಲ್ಲಿರಲಿಲ್ಲ.  ಅವನ 'ಶಿಸ್ತಿನ 'ಕಾರಣದಿಂದಾಗಿ ಕೆಲವರಿಗೆ ದೊಡ್ಡಸ್ತಿಕೆಯ  ಮನುಷ್ಯನಂತೆ  ಕಾಣುತ್ತಿದ್ದ. ವಾಸ್ತವದಲ್ಲಿ  ಅವನು  ಹಾಗಿರಲಿಲ್ಲ. ತುಂಬಾ  ದಯಾವಂತ ಹಾಗೂ  ಮುಗ್ಧ ಆತ.ಆತನ ಈ ಗುಣದ ಕಾರಣದಿಂದಾಗಿ ಯೇ  ನನ್ನ  ಅವನ  ಸ್ನೇಹ  ಏರ್ಪಟ್ಟಿದ್ದಷ್ಟೇ  ಅಲ್ಲದೆ  ಘಟ್ಟಿಯಾಗಿ  ಬೆಳೆದಿದ್ದು. 
                   ************
         ''ಸುಬ್ಬಣ್ಣ.....ಸುಬ್ಬಣ್ಣ....ಹೇಗಿದ್ದೀಯ.....ಚೆನ್ನಾಗಿದ್ದೀಯಾ?''
            ನನ್ನ  ಯೋಚನೆಯಲ್ಲಿ  ಶಿವರಾಮು  ಸಂಚರಿಸುತ್ತಿರುವಾಗ  ಯಾರೋ  ಕರೆದದ್ದು  ಕೇಳಿ  ತಿರುಗಿದೆ. ವಾರಿಜ ಹತ್ತಿರ ಬಂದು ಮಾತಾಡಿಸುತ್ತಿದ್ದಳು.ಅವಳ ಧ್ವನಿಯಲ್ಲಿನ  ಅಳು  ಹಾಗೆಯೇ  ಇತ್ತು.
            ''ನಾನು  ಚೆನ್ನಾಗಿದ್ದೀನಿ ವಾರಿಜ....ನೀನು  ಹೇಗಿದ್ದೀಯ....ತುಂಬಾ  ವರ್ಷಗಳೇ  ಆಗಿಹೋಯ್ತು ನಿನ್ನನ್ನ ನೋಡಿ" ಅಪ್ರಯತ್ನವಾಗಿ ಈ ಮಾತುಗಳು ನನ್ನ ಬಾಯಿಯಿಂದ  ಬಂದವು.
           "ನಾನು ಚೆನ್ನಾಗಿಯೇ ಇದ್ದೀನಿ. ಗಂಡ, ಇಬ್ಬರು ಮಕ್ಕಳು  ಅಂತ  ಸಂಸಾರವೂ ಚೆನ್ನಾಗಿಯೇ ಇದೆ. ಆದರೆ, ಕೊನೆಗೂ  ಅಪ್ಪನನ್ನ  ಮತ್ತೆ  ಭೇಟಿ ಮಾಡಲಿಕ್ಕೆ ಆಗಲಿಲ್ಲ ಅನ್ನೋ  ಕೊರಗು ಮಾತ್ರ ಹಾಗೆಯೇ  ಉಳಿದುಹೋಯ್ತು  ಸುಬ್ಬಣ್ಣ..." ಎನ್ನುತ್ತಾ  ಉಮ್ಮಳಿಸಿದಳು .  ನಿಜವಾಗಿಯೂ ಶಿವರಾಮು  ಈಗಲೂ ಇವಳಿಗೆ ಅಷ್ಟೊಂದು  ಹತ್ತಿರದಲ್ಲಿದ್ದಾನಾ  ಅನ್ನಿಸಿತು.  ತಕ್ಷಣವೇ 'ಎಷ್ಟಂದರೂ  ಮಗಳಲ್ಲವೇ' ಅನ್ನಿಸಿತು.
             ಅವಳ  ಪಕ್ಕದಲ್ಲೇ  ಇದ್ದ  ಹುಡುಗಿಯನ್ನು  ಗಮನಿಸಿ   ಕೇಳಿದೆ. '' ಇವಳು... ಮಗಳಾ...?''
             ಸ್ವಲ್ಪ  ಸಾವರಿಸಿಕೊಂಡಂತೆ ವಾರಿಜ  ಹೇಳಿದಳು "ಹೌದು  ಸುಬ್ಬಣ್ಣ... ಇವಳು  ರಕ್ಷಾ.... ಇನ್ನೊಬ್ಬ ಇವಳ ಅಣ್ಣ ರಂಜಿತ್...ಮಕ್ಕಳನ್ನ, ನನ್ನ ಗಂಡನನ್ನ ಕರ್ಕೊಂಡು ಬಂದು ಅಪ್ಪನಿಗೆ  ತೋರಿಸ್ಬೇಕು  ಅಂತ  ತುಂಬಾ  ಇತ್ತು.ಕೊನೆಗೂ  ಅದು ಆಗಲೇ  ಇಲ್ಲ". ಎಲ್ಲವನ್ನು ಹಸನುಗೊಳಿಸಿ,  ಎಲ್ಲವು ಸರಿಯಾಗಬೇಕೆಂಬ ತುಡಿತ ವಾರಿಜಾಳ ಲ್ಲೂ ಇತ್ತು ಎನ್ನುವುದು  ಮನದಟ್ಟಾಗಿ 'ಅಯ್ಯೋ' ಎನ್ನಿಸಿತು. ಅಷ್ಟರಲ್ಲಿ ದಹನ ಕಾರ್ಯ   ಮುಗಿಸಿ ಚಿದಂಬರ ಬಂದು ಆಕೆಯನ್ನು  ಮನೆಗೆ  ಕರೆದಾಗ  ಸ್ವಲ್ಪ ಅನುಮಾನ ಮಾಡಿ ''ನಂತರ  ಬರ್ತೀನಣ್ಣ''  ಅಂದಳು.ಅವನ  ಮನೆಗೆ  ಹೋಗೋದಕ್ಕೆ ಆಕೆಗೆ  ಹಿಂಜರಿಕೆ  ಇದ್ದಂತೆ  ಕಾಣುತ್ತಿತ್ತು.ಅವನು ಒಮ್ಮೆ ಅವಳನ್ನು ಮತ್ತೊಮ್ಮೆ ನನ್ನನ್ನು ನೋಡಿ  ಅಲ್ಲಿಂದ  ಹೊರಟ.  ಅಲ್ಲಿದ್ದ  ಜನರು ಕೂಡ ನಿದಾನವಾಗಿ  ಚದುರತೊಡಗಿದರು.  ಎಲ್ಲರೂ ಮುಂದೆ ಮುಂದೆ ನಡೆಯುತ್ತಿದ್ದರು.ನಾನು,ವಾರಿಜ ಹಾಗೂ ಅವಳ ಮಗಳು  ಮಾತ್ರ  ಸ್ವಲ್ಪ ಹಿಂದಿನಿಂದ ನಡೆಯತೊಡಗಿದೆವು. ಅಲ್ಲೊಂದು  ಮೌನ  ನೆಲೆಯಾಯಿತು.  ಶಿವರಾಮುವಿನ ನಿಧನದ  ಸುದ್ದಿ  ತಿಳಿದು  ತಕ್ಷಣವೇ  ಹೊರಟು ಬಂದಿದ್ದ ಆಕೆಗೂ  ತಕ್ಷಣಕ್ಕೆ  ಎಲ್ಲಿಗೆ  ಹೋಗಬೇಕು,  ಏನು  ಮಾಡಬೇಕು ಎನ್ನುವ  ಸ್ಪಷ್ಟ  ನಿರ್ಧಾರ ಇರಲಿಲ್ಲ. ಹಾಗೆಯೇ  ನಡೆದು  ಬರುತ್ತಾ   ಮೌನವನ್ನು ಮುರಿದು ರಕ್ಷಾಳಲ್ಲಿ     ನಾನು  ಕೇಳಿದೆ  "ಏನು  ಪುಟ್ಟಿ..  ಏನ್  ಓದ್ತಾ  ಇದ್ದೀಯ ನೀನು..?".
                 ''ಪಿ  ಯು  ಸಿ  ಆಯ್ತು,  ಮೆಡಿಕಲ್  ಮಾಡಬೇಕಂತ  ಇದ್ದೀನಿ  ಸರ್  ''ಅಂದಳು  ಸಣ್ಣಗೆ  ನಗುತ್ತಾ. 'ಓಹ್...ನೀನೂ  ಅಮ್ಮನಂತೆ  ಡಾಕ್ಟರ್  ಆಗ್ತೀಯಾ......  ಆಗ್ಲಿ... ಒಳ್ಳೆದಾಗಲಿ' ಎಂದೆ. ನಾನು  ಸಹಜವಾಗಿಯೇ  ಅಂದಿದ್ದೆ. ಆದರೆ  ವಾರಿಜ  ನನ್ನ  ಮಾತಿನಲ್ಲಿ  ಏನಾದರೂ  ಕುಹಕವನ್ನು   ಗ್ರಹಿಸಿಬಿಟ್ಟರೆ  ಎನ್ನಿಸಿತು,  ಆದರೆ  ವಾರಿಜ  ನನಗೇನೂ  ಹೊಸಬಳಲ್ಲ  ಎನ್ನುವುದು  ನೆನಪಾಗಿ  ಮಾತನ್ನು  ಮುಂದುವರೆಸಿದೆ.   ''ನಿನ್ನನ್ನೂ  ಡಾಕ್ಟರ್ ಆಗಿ  ನೋಡಬೇಕು   ಅಂತ  ಶಿವರಾಮು  ತುಂಬಾ  ಆಸೆಪಟ್ಟ, ವಾರಿಜ.  ನನ್ನ ಹತ್ತಿರ ಯಾವಾಗ್ಲೂ ಹೇಳ್ತಿದ್ದ. ಡಾಕ್ಟ್ರು, ಮೇಷ್ಟ್ರು ಆಗೋದು ತುಂಬಾ ಪುಣ್ಯದ ಕೆಲಸ. ಮಗಳನ್ನ ಡಾಕ್ಟರ್ ಮಾಡ್ತೀನಿ ಅದೆಷ್ಟು ಬೇಕಾದ್ರು  ಖರ್ಚಾಗಲಿ, ಅದೆಲ್ಲಿಗೆ ಬೇಕಾದ್ರೂ ಕಳಸೋದಾಗ್ಲಿ  ತೊಂದ್ರೆ ಇಲ್ಲ.ಮಗಳು ಡಾಕ್ಟರ್ ಆಗಿ ಊರಿಗೆ  ಉಪಕಾರಿಯಾಗಬೇಕು, ಅದಕ್ಕೆ ಈಗ್ಲಿಂದಾನೆ ತಯಾರಿ ಮಾಡ್ತಾ  ಇದ್ದೀನಿ ಅಂತಿದ್ದ .ಆ ಬಗ್ಗೆ ದೊಡ್ಡ ಕನಸಿತ್ತು ಅವನಿಗೆ' ಇಷ್ಟು ಹೇಳುತ್ತಿದ್ದಂತೆ  ನನ್ನ ಕಣ್ಣುಗಳು ತೇವವಾಗಿಬಿಟ್ಟವು.ಹೆಚ್ಚಿನ  ಯಾವ  ಮಾತನ್ನೂ  ಆಡಲಾಗದೆ   ನಾವು  ಸುಮ್ಮನೆ   ಹೆಜ್ಜೆ  ಹಾಕಿದೆವು.
                    *********
                ಬಡಬಡನೆ ಬರುತ್ತಿದ್ದ ಶಿವರಾಮುವಿನ   ಮುಖದಲ್ಲಿದ್ದ  ಉಲ್ಲಾಸವನ್ನು ಗಮನಿಸಿದಾಗ 'ಹೆಣ್ಣು ಮಗುವೇ ಹುಟ್ಟಿದೆ ' ಎನ್ನುವ ಅಂದಾಜು  ಬಂತು.  'ಏನೋ,  ಮಗಳು  ಹುಟ್ಟಿದಾಳಾ?' ನಾನು  ಸಂತೋಷದಿಂದಲೇ ಕೇಳಿದೆ.'ಹೌದು' ಎನ್ನುತ್ತಾ  ಬಂದ. ಮೊದಲನೇ  ಮಗು  ಹೆಣ್ಣಾಗುತ್ತದೆ ಎಂದುಕೊಂಡರೂ  ಆಗಿರಲಿಲ್ಲ.ಈಗ  ಅವನ ಕಾತರದ   ಕನಸು  ನನಸಾಗಿತ್ತು. ನಮ್ಮ  ಕಾಲದಲ್ಲಿ  ಹೆಣ್ಣುಮಗುವಿಗಾಗಿ ಅಷ್ಟೊಂದು ಹಂಬಲಿಸಿದವನುಇವನೊಬ್ಬನೇ  ಇರಬೇಕು. ಮಗಳ  ವಿಷಯದಲ್ಲಿ  ಎಷ್ಟೊಂದು ಮಮತೆ  ಇತ್ತೆಂದರೆ,ವಾರಿಜ  ಸಣ್ಣ  ಹುಡುಗಿಯಾಗಿದ್ದಾಗ  ಅವಳ  ಆಟ ಪಾಠಗಳನ್ನು  ನೋಡುತ್ತಾ  ನೋಡುತ್ತಾ   'ದೊಡ್ಡವಳಾದಮೇಲೆ  ಮಗಳನ್ನ   ಮದುವೆ ಮಾಡಿ ಬೇರೆಯವರ  ಮನೆಗೆ  ಕಳುಹಿಸಿಕೊಡಬೇಕಲ್ಲ...'  ಎಂದು  ಯೋಚಿಸುತ್ತಲೇ ಅವನ ಕಂಗಳಲ್ಲಿ ನೀರು  ತುಂಬಿಕೊಳ್ಳಲು ಶುರುವಾಗುತ್ತಿತ್ತು .ನಾನೇ  ಎಷ್ಟೋಬಾರಿ  ಅವನ ಈ  ರೀತಿ ನೋಡಿ  ನಕ್ಕಿದ್ದೇನೆ, ಸಮಾಧಾನಿಸಿದ್ದೇನೆ. ಹಾಗಿದ್ದರೂ  ಮಕ್ಕಳಿಬ್ಬರಿಗೂ  ಪ್ರಾರಂಭದಿಂದಲೇ  ಶಿಸ್ತು,  ಜವಾಬ್ದಾರಿ ಕಲಿಸಿದ್ದ. ಆ ಶಿಸ್ತಿನ ಕಾರಣದಿಂದಾಗಿಯೇ  ಇರಬೇಕು ಓದಿನಲ್ಲಿ  ಇಬ್ಬರು  ಮಕ್ಕಳೂ  ಚೆನ್ನಾಗಿಯೇ  ಇದ್ದರು. ಅದರಲ್ಲೂ  ಈ ಹುಡುಗಿ  ವಾರಿಜ  ತುಂಬಾ  ಚೂಟಿ. ಅವಳ  ಆಟ  ಪಾಠದ  ದಿನಗಳನ್ನು ಕಣ್ಣಾರೆ ನೋಡಿದ್ದೇನಲ್ಲ.ನಮ್ಮೆಲ್ಲರ ಕಣ್ಮಣಿಯೆ ಆಗಿದ್ದಳು ಅವಳು.
            ಮಗಳನ್ನ  ಡಾಕ್ಟರ್  ಮಾಡಬೇಕೆನ್ನುವ  ಶಿವರಾಮುವಿನ  ಆಸೆಯಂತೆ  ವೈದ್ಯಕೀಯ ಓದಿಗಾಗಿ  ವಾರಿಜ  ಬೆಂಗಳೂರಿಗೆ  ಹೋದಳು. ಮನೆಯಕಡೆ  ಉತ್ತಮವಾಗಿಯೇ  ಇದ್ದ  ಕೃಷಿಯನ್ನ ನೋಡಿಕೊಳ್ಳಲು  ಮಗ  ಚಿದಂಬರ  ಊರಿನಲ್ಲೇ  ಉಳಿದುಕೊಂಡ. ನಮ್ಮ  ಊರಿನ  ಹುಡುಗಿ  ಡಾಕ್ಟರಿಕೆಯಂತಹ  ದೊಡ್ಡ  ವಿಷಯ  ಓದಲು  ಹೋದದ್ದು  ಅದೇ  ಮೊದಲು.  ಊರಿನ ಹಲವು    ಜನರು, ಶಿವರಾಮುವಿನ  ಕೆಲ  ಸಂಬಂಧಿಕರು   ಎಲ್ಲಾ  'ಹುಡುಗಿಗೆ  ಯಾಕೆ  ಡಾಕ್ಟರಿಕೆಯೆಲ್ಲ?  ಶಿವರಾಮು ಇದರಲ್ಲೂ  ದೊಡ್ಡಸ್ತಿಕೆ  ತೋರಿಸ್ತಾನೆ.  ಸುಮ್ಮನೆ  ಮದುವೆ  ಮಾಡಿ ಕಳಿಸೋದು ಬಿಟ್ಟು....' ಎಂದು  ಮಾತಾಡಿಕೊಂಡರು. ಆದರೆ  ಶಿವರಾಮು  ಅದಕ್ಕೆಲ್ಲ  ತಲೆಕೆಡಿಸಿಕೊಳ್ಳಲಿಲ್ಲ. ಅವನಿಗೆ  ಮಗಳನ್ನು  ಡಾಕ್ಟರ್  ಆಗಿ  ನೋಡುವ  ತವಕವೊಂದೇ  ಇತ್ತು.  ಇಡೀ  ಊರಿಗೆ  ಡಾಕ್ಟರಿಕೆ ಓದುವ ಏಕೈಕ ಹೆಣ್ಣಾಗಿದ್ದ ತನ್ನ  ಮಗಳ  ಬಗ್ಗೆ   ತುಂಬಾ  ಹೆಮ್ಮೆ  ಇತ್ತು. 
              ********
               "ವಾವ್! ಇಲ್ಲಿ  ವಾತಾವರಣ  ಎಷ್ಟು  ಚೆಂದ  ಇದೆ  ಅಲ್ವಾ. ಎಲ್ಲಕಡೆ  ಹಸಿರಾಗಿದೆ.  ಎಷ್ಟೊಂದು  ಮರಗಿಡಗಳು, ಗದ್ದೆ,ಪೈರು ಎಲ್ಲಾ  ತುಂಬಾ  ಖುಷಿ ಕೊಡತ್ತೆ .ನಮ್ಮ  ಸಿಟಿಯಲ್ಲಂತೂ  ಎಷ್ಟು  ಕೆಟ್ಟದಾಗಿರತ್ತೆ  ಗಾಳಿ. ರಸ್ತೆ ಯಾವಾಗಲೂ  ಟ್ರಾಫಿಕ್ ಜಾಮ್ ಆಗಿರತ್ತೆ.ನಂಗಂತೂ  ಸ್ವಲ್ಪಾನೂ ಇಷ್ಟ ಆಗಲ್ಲ.  ಅಲ್ಲಿಗೆ ಹೋಲಿಸಿದರೆ ಇದು ಸ್ವರ್ಗ,ಅದು ನರಕ.ಇಲ್ಲೆ ಇದ್ದುಬಿಡೋಣ ಅನ್ನಿಸ್ತಾ ಇದೆ ನಂಗೆ" ಈ ಹಳ್ಳಿಗಾಡನ್ನ ಮೊದಲಬಾರಿಗೆ ನೋಡುತ್ತಿದ್ದ ಆ ಚಿಕ್ಕ ಹುಡುಗಿ ರಕ್ಷಾ ದೊಡ್ಡ  ಉದ್ಘಾರದೊಂದಿಗೆ ಹೇಳಿದಳು. ಇದನ್ನು ಕೇಳುತ್ತಲೇ ಯೋಚನೆಯಲ್ಲಿಯೇ ಕಳೆದುಹೋಗಿದ್ದ ನಾನು ಯೋಚನೆಯಿಂದ  ವಾಪಾಸಾದೆ. ಆ  ಹುಡುಗಿಯ ಮಾತಿಗೆ ನಾನು "ಹಾ ಪುಟ್ಟಿ, ಹಳ್ಳಿ ಜೀವನ  ಸುಂದರವೇ. ಇಲ್ಲಿ ಗಡಿಬಿಡಿಯಲ್ಲಿ  ಬದುಕಬೇಕಾದ ಅನಿವಾರ್ಯತೆ ಇರೋದಿಲ್ಲ. ಜೀವನವನ್ನು ಆರಾಮವಾಗಿ ಕಳೀಬಹುದು. ಇವೆಲ್ಲ ನಿನ್ನ ಅಮ್ಮ ಚಿಕ್ಕ ಹುಡುಗಿಯಾಗಿದ್ದಾಗ ಓಡಾಡಿದ  ಜಾಗ. ಹಾಗೆ ನೋಡಿದರೆ  ಆಗ  ಇನ್ನಷ್ಟು  ಮರಗಳಿದ್ದವು. ಈಗ ಬಹಳಷ್ಟು  ಮರಮಟ್ಟುಗಳೆಲ್ಲ ಖಾಲಿಯಾಗಿ ಹೋಗಿವೆ. ಊರು  ಬಹಳಷ್ಟು  ಬದಲಾಗಿದೆ. ಜೀವನದಲ್ಲಿ  ಎಲ್ಲವೂ  ಹಾಗೇನೇಯಮ್ಮ  ,  ಬದಲಾಗುತ್ತಲೇ  ಇರತ್ತೆ" ಎಂದು  ಆಕೆಯನ್ನೇ ನೋಡುತ್ತಾ ಸಹಜವಾಗಿ ಹೇಳಿದೆ .
           ನನ್ನ  ಮಾತು  ವಾರಿಜಳಿಗೆ  ಬೇರೆ  ರೀತಿಯಲ್ಲಿ  ಧ್ವನಿಸಿತು. ಆಕೆ  ನನ್ನನ್ನೇ  ನೋಡುತ್ತಾ  ಹೇಳಿದಳು, "ನನ್ನ  ವಿಷಯದಲ್ಲಿ  ಹಾಗೆ  ಆಗಲೇ ಇಲ್ಲವಲ್ಲ   ಸುಬ್ಬಣ್ಣ.  ಅಪ್ಪ  ನನ್ನನ್ನ  ತಿರಸ್ಕರಿಸಿ  ಬಿಟ್ಟ.  ಒಮ್ಮೆ  ನಾನು  ಅವನ  ನಂಬಿಕೆ  ಕಳೆದುಕೊಂಡಮೇಲೆ  ಕೊನೆವರೆಗೂ  ಅವನು  ಬದಲಾಗಲೇ  ಇಲ್ಲ. ಮತ್ತೆ ನನ್ನನ್ನ ನೋಡಲೂ ಇಲ್ಲ. ವರ್ಷಗಳು  ಉರುಳಿದವು, ನನಗೆ  ಮಕ್ಕಳು    ಹುಟ್ಟಿದರು,  ಬೆಳೆದು ದೊಡ್ಡವರಾದರು. ಆದರೆ ಇದ್ಯಾವುದು ಕೂಡ  ಅಪ್ಪನನ್ನ  ಬದಲಾಯಿಸಲಿಲ್ಲ.   ಅವನ  ಕೋಪ ,  ಸಿಟ್ಟು,  ಹಠ ಕಡಿಮೆಯಾಗಲಿಲ್ಲ.  ದಿನಕಳೆದಂತೆ  ಅವೆಲ್ಲ  ದ್ವೇಷವಾಗಿ  ಬದಲಾಯಿತು. ಒಮ್ಮೆಯೂ  ಬಾ  ಅಂತ ಕರೆಯಲೂ ಇಲ್ಲ. ನಾನೇ  ಬರಬೇಕೆಂದುಕೊಂಡರೂ  ಅಪ್ಪ  ಒಪ್ಪಲಿಲ್ಲ.  ನಾನು  ಮನೆ ಬಿಟ್ಟು  ಹೋಗುವಾಗ  ಅಪ್ಪನನ್ನ  ನೋಡಿದ್ದೇ ಕೊನೆ,  ಆಮೇಲೆ  ಅವನನ್ನು  ನೋಡಲೂ  ಆಗಲಿಲ್ಲ.  25 ವರ್ಷಗಳು  ಅಪ್ಪ  ಇದ್ದೂ  ನಾನು ಇಲ್ಲಿಗೆ  ಕಾಲಿಡದಷ್ಟು    ತಿರಸ್ಕೃತಳಾಗಿದ್ದೆ.  ಈಗ ಇಲ್ಲಿ  ಬಂದಿದ್ದರೂ  ಅಪ್ಪ  ಇಲ್ಲ. ಏನೇನೆಲ್ಲ  ಇದೆ  ನನ್ನ  ಜೀವನದಲ್ಲಿ, ಆದರೆ  ಅದು   ಯಾವುದೂ  ನನ್ನ  ಈ  ಕೊರಗನ್ನ  ನಿವಾರಿಸೋದಿಲ್ಲ'' ದಟ್ಟ ವಿಷಾದ  ಅವಳ  ಧ್ವನಿಯಲ್ಲಿತ್ತು.  ಅಷ್ಟು  ಹೇಳುತ್ತಿದ್ದಂತೆ  ಆಕೆಗೆ  ದುಃಖ ಉಮ್ಮಳಿಸಿಬಂತು. ಅಳಲು  ಆರಂಭಿಸಿದಳು.  ತಕ್ಷಣ  ಆಕೆಯ  ಮಗಳು  ರಕ್ಷಾ ಅಮ್ಮನ  ತಲೆಯನ್ನು ತನ್ನ  ಎದೆಗೆ  ಒತ್ತಿಕೊಂಡು  ''ಅಮ್ಮಾ,  ಕೂಲ್ ಡೌನ್'' ಎನ್ನುತ್ತಾ  ಸಮಾಧಾನ  ಮಾಡತೊಡಗಿದಳು. ವಾರಿಜಾಳ  ಮಾತು  ಕೇಳುತ್ತಿದ್ದ  ನನಗೆ  ಆ  ದಿನಗಳು  ನೆನಪಾದವು.
             ****************
            ಬಾಯಲ್ಲಿ  ಎಲೆ ಅಡಿಕೆ   ತುರುಕುತ್ತಾ  ಶಿವರಾಮು  ಹೇಳಿದ "ವಾರಿಜಾಳ  ಜಾತಕವನ್ನ  ಹೊರಗೆ ಹಾಕೋಣ  ಅಂತ  ಇದ್ದೀನಿ.  ಈಗಿಂದ ಹುಡುಕೋಕೆ  ಹಿಡಿದರೆ  ಅವಳ ಓದು ಮುಗಿಯೋ  ಹೊತ್ತಿಗೆ ಒಳ್ಳೆ  ಸಂಬಂಧ  ಸಿಗಬಹುದು.  ಹುಡುಗನೂ ಡಾಕ್ಟರ್  ಆಗಿರಬೇಕು" ಅಷ್ಟು ಹೇಳಿ ನನ್ನ  ಕಡೆಗೆ  ನೋಡಿದ,  ಅಭಿಪ್ರಾಯ  ಕೇಳುವಂತೆ. "ಸರಿ, ನಂಗು ಒಂದು  ಜಾತಕ ಕೊಡು. ಹಾಗಂತ ತುಂಬಾ ಗಡಿಬಿಡಿ  ಮಾಡಬೇಡ. ನಮ್ಮ  ವಾರಿಜಾಗೆ  ಒಳ್ಳೆ  ಗಂಡೇ  ಸಿಕ್ತಾನೆ" ಎಂದೆ. 
               ಅದಾಗಿ ಎರಡು ದಿನಕ್ಕೆ ಶಿವರಾಮು  ತಕ್ಷಣ ಬಾ ಅಂತ ಸಾಯಂಕಾಲದ ಹೊತ್ತಿಗೆ ಕರೆ  ಕಳಿಸಿದ.ಆವತ್ತು ಬೆಳಗ್ಗೆ ವಾರಿಜ ಬೆಂಗಳೂರಿಂದ    ಬರ್ತಾಳೆ ಅಂತ ಹೇಳಿದ್ದ ಹಾಗಾಗಿ ಕರೆ ಕಳಿಸಿದ್ದಾನೆ  ಅಂದುಕೊಂಡು ಅವನ ಮನೆಗೆ ಹೋದೆ.ಅವನ ಮನೆ ಜಗುಲಿಯ ಬಾಗಿಲು  ದಾಟಿ  ಒಳಬರುತ್ತಿದ್ದಂತೆ  ವಾತಾವರಣ ಏನೋ  ಗಂಭೀರವಾಗಿರುವ ವಿಚಾರ ಅರಿವಿಗೆ ಬಂತು.ಶಿವರಾಮು ಖುರ್ಚಿಯಲ್ಲಿ  ಕುಳಿತಿದ್ದ. ಮುಖದಲ್ಲಿ  ಕೋಪ ಕೊತಕೊತನೆ ಕುದಿಯುತ್ತಿತ್ತು. ಶಿವರಾಮುವಿನ ಹೆಂಡತಿ ,ನನಗೆ 'ಅತ್ತಿಗೆ'ಕಣ್ಣೀರು ಹಾಕುತ್ತಿದ್ದಳು .ಚಿದಂಬರ ಅನ್ಯಮನಸ್ಕನಾದಂತೆ ಬೇರೆ ಏನೋ ಮಾಡುತ್ತಿದ್ದ. ವಾರಿಜ ಮೂಲೆಯಲ್ಲಿ   ತಲೆಬಗ್ಗಿಸಿ ಅಳುತ್ತಿದ್ದಳು.ನಾನು ಶಿವರಾಮುವಿನ ಹತ್ತಿರ ಹೋಗಿ ''ಏನು ವಿಷಯ ಶಿವರಾಮು'' ಎಂದು ಕೇಳಿದೆ. ಶಿವರಾಮುವಿನ ಮುಖದಲ್ಲಿ ಸಿಟ್ಟಿದ್ದರೂ ಮಾತಿನಲ್ಲಿ ಕೂಗಾಟ,ರೇಗಾಟ ಇರಲಿಲ್ಲ. ಗಂಭೀರನಾಗಿ  ''ತಪ್ಪು ನನ್ನದೇ. ತುಂಬಾ ಪ್ರೀತಿಯಿಂದ ಬೆಳೆಸಿದೆ. ಮಗಳು ಡಾಕ್ಟರಾಗಲಿ  ಅಂತ ಯೋಚಿಸಿದ್ದು ನನ್ನ ತಪ್ಪು. ಹೈಸ್ಕೂಲ್  ಮುಗಿತಾ  ಇದ್ದಂತೆ  ಮದುವೆ  ಮಾಡಿಬಿಟ್ಟಿದ್ದರೆ ಇವತ್ತು ಸಮಸ್ಯೆಯೇ ಇರುತ್ತಿರಲಿಲ್ಲ. ನಾನು  ಇವಳಿಗೆ  ಗಂಡು ಹುಡುಕುತ್ತ  ಇದ್ರೆ,  ಇವಳು ಯಾರನ್ನೋ  ಪ್ರೀತಿಸ್ತಾ ಇದಾಳಂತೆ. ಜಾತಿ  ಅಲ್ಲ ಕುಲ ಅಲ್ಲ, ಯಾವನೋ ಏನೋ.ನಗುವವರ  ಮುಂದೆ ಎಡವಿ ಬಿದ್ದಹಾಗೆ ಆಯ್ತು ನನ್ನ ಪರಿಸ್ಥಿತಿ. ಇವಳಿಗೆ ಎಷ್ಟು ಹೇಳಿದರು ಅರ್ಥ ಆಗ್ತಾ ಇಲ್ಲ.  ಒಂದೇ ಹಠ ಮಾಡ್ತಾ ಇದ್ದಾಳೆ ''ಎಂದ ಶಿವರಾಮು.
                ಅವನ ಕಾಳಜಿ ಮಗಳಿಗೆ ಅರ್ಥವಾಗುವಂತಿರಲಿಲ್ಲ. ಹಾಗಾಗಿ ನಾನೆ ಅಳುತ್ತಿದ್ದ ವಾರಿಜಾಳ  ಹತ್ತಿರ ಹೋಗಿ ತಲೆ ನೇವರಿಸುತ್ತಾ ಕೇಳಿದೆ, ''ಏನು  ವಾರಿಜ ಇದು? ಎಲ್ಲರೂ ನಿನ್ನಮೇಲೆ ಬೇರೆಯದೇ  ಆಸೆ  ಇಟ್ಕೊಂಡಿದ್ದಾರೆ. ನೀನು  ತಿಳಿದವಳು, ಸ್ವಲ್ಪ  ವಾಸ್ತವವಾಗಿಯೂ ಯೋಚನೆ ಮಾಡ್ಬೇಕಮ್ಮ. ನೀನು  ಡಾಕ್ಟರ್ ಆಗಿ ಬಂದು ದೊಡ್ಡ  ಹೆಸರು  ಮಾಡ್ಬೇಕು ಅಂತ ಎಲ್ಲರೂ  ಬಯಸ್ತಾ  ಇದ್ದಾರೆ. ಹಾಗೆ ಹಠ ಮಾಡ್ಬೇಡ ಪುಟ್ಟಿ" 
             ತಲೆ  ಎತ್ತಿ  ನನ್ನ  ಕಡೆ  ನೋಡಿದಳು  ವಾರಿಜ,  ಕಣ್ಣುಗಳು  ಕೆಂಪಾಗುವಷ್ಟು  ಅತ್ತಿದ್ದಳು. 'ಸುಬ್ಬಣ್ಣ,   ನನ್ನ  ಜೊತೆ  ಓದ್ತಾ  ಇರೋ  ಹುಡುಗನನ್ನ  ನಾನು  ಇಷ್ಟಪಟ್ಟಿದ್ದೀನಿ.  ಅವನ  ತಂದೇನು  ಡಾಕ್ಟರ್. ತುಂಬಾ  ಒಳ್ಳೆಯವ್ರು.  ಅವರದ್ದೇ  ನರ್ಸಿಂಗ್  ಹೋಂ  ಇದೆ. ಅವನನ್ನ  ಮದುವೆ  ಆದರೆ  ಯಾರ  ಆಸೆನೂ  ನಿರಾಸೆಯಾಗಲ್ಲ.  ನಾನು  ದೊಡ್ಡ  ನರ್ಸಿಂಗ್  ಹೋಮಲ್ಲಿ  ಡಾಕ್ಟರ್  ಆಗಿರ್ತೀನಿ.  ಅವನ  ಜಾತಿ  ಬೇರೇನೆ . ಆದರೆ  ಅವನನ್ನ  ಬಿಟ್ಟು  ನಂಗೆ  ಇರೋಕಾಗೊದಿಲ್ಲ  ಸುಬ್ಬಣ್ಣ.  ಯಾವ  ಜಾತಿಯಾದರೇನು  ಸುಬ್ಬಣ್ಣ,  ಎಲ್ಲರೂ  ಇರೋದು  ಒಂದೇ  ರೀತಿನೇ  ಅಲ್ವಾ?  ಯಾರನ್ನೋ  ಇಷ್ಟಪಟ್ಟಮೇಲೆ ಇನ್ಯಾರನ್ನೋ  ಹೇಗೆ  ಮದುವೆ  ಆಗೋದು? ನಾನು  ಅವನನ್ನೇ  ಮದುವೆ  ಆಗ್ತೀನಿ,  ಬೇರೆ  ಮದುವೆ ನಂಗೆ  ಇಷ್ಟ  ಇಲ್ಲ. ನನ್ನ ಬಗ್ಗೆ   ನಿಜವಾದ  ಕಾಳಜಿ  ಇರೋರು ಯಾರೂ  ನನ್ನನ್ನ  ತಡೆಯೋದಿಲ್ಲ'' ವಾರಿಜಾಳ  ಧ್ವನಿಯಲ್ಲಿ  ಅಳು ಇತ್ತು,  ಜೊತೆಗೆ  ದೃಢ   ನಿರ್ಧಾರವೂ  ಇತ್ತು.  ನನಗೆ  ಅರ್ಥ  ಆಯಿತು,  ಮಾತನಾಡುತ್ತಿರುವುದು  ನಾನು  ಮೊದಲಿನಿಂದ  ನೋಡಿದ  ಆ    ವಾರಿಜ  ಅಲ್ಲ. ಬೆಂಗಳೂರಿನಲ್ಲಿ  ಡಾಕ್ಟರಿಕೆ  ಓದುತ್ತಿರುವ  ವಾರಿಜ  ಇವಳು. ನಾನು  ಹೆಚ್ಚೇನು ಹೇಳುವಂತಿರಲಿಲ್ಲ.  ಸುಮ್ಮನಾದೆ.
                ಅವಳ  ಒತ್ತಾಯಕ್ಕೆ  ಕಟ್ಟುಬಿದ್ದು  ಆ  ಹುಡುಗನೊಡನೆಯೇ  ಅವಳ ಮದುವೆ ಆಯಿತು.  ಶಿವರಾಮುವಾಗಲಿ, ಮನೆಯ  ಯಾರೊಬ್ಬರಾಗಲಿ  ಮದುವೆಯ ಕಡೆ  ಮುಖ  ಹಾಕಲಿಲ್ಲ. ಅದೆಷ್ಟೋ  ದಿನಗಳ  ತನಕ  ಮನೆಯಲ್ಲಿಯೇ  ಅಜ್ಞಾತವಾಸ  ನಡೆಸಿಬಿಟ್ಟರು. ಊರವರ ಬಾಯಿಗೆ ತುತ್ತಾದರು. ಶಿವರಾಮು  ಹೆಚ್ಚುಹೆಚ್ಚು  ಅಂತರ್ಮುಖಿಯಾದ.  ಯಾವಾಗಲೂ  ಮಗಳು,  ಮಗಳು  ಎನ್ನುತ್ತಿದ್ದವ  ಈಗ  ಮಗಳ ವಿಚಾರ  ಮಾತನಾಡುವುದನ್ನೇ  ಬಿಟ್ಟುಬಿಟ್ಟ.ಸ್ವಲ್ಪ  ದಿನಕ್ಕೆ  ಮತ್ತೆ  ಎಲ್ಲ   ಮೊದಲಿನಂತಾಗುತ್ತದೆ  ಎನ್ನುವ  ನಿರೀಕ್ಷೆಯೆಲ್ಲ  ಸುಳ್ಳಾಯಿತು.
                  *********
                ಹೀಗೆ ಹಳೆಯ   ಘಟನೆಯನ್ನೆಲ್ಲ  ನೆನಪಿಸಿಕೊಳ್ಳುತ್ತಾ    ಸಾಗುತ್ತಿರುವಾಗ  ಶಿವರಾಮು ಇತ್ತೀಚಿಗೆ  ಕೊಟ್ಟ  ಆ  ಡೈರಿ  ನೆನಪಾಯಿತು.
            ಆವತ್ತೊಂದುದಿನ  ಡೈರಿ  ತೆಗೆದುಕೊಂಡು  ನನ್ನ  ಮನೆಗೆ  ಬಂದವನು '' ಇದರಲ್ಲಿ  ಎಲ್ಲವನ್ನು ಬರೆದಿಟ್ಟಿದ್ದೇನೆ.ಇದು ನಿನ್ನ ಕೈಲೇ ಇರಲಿ ಮುಂದೆ ಬೇಕಾಗತ್ತೆ"ಎಂದ.ಹೀಗೆ ಮುಖ್ಯವಾದದ್ದು ಎನ್ನಿಸಿದ್ದನ್ನು ಕೆಲವೊಮ್ಮೆ  ನನಗೆ  ತಂದು  ಕೊಡುವಷ್ಟು  ನಂಬಿಕೆ ಅವನಿಗೆ  ನನ್ನಮೇಲಿತ್ತು.
                     ''ಏನೋ  ಇದು? ಮುಂದೆ  ಬೇಕು  ಅಂತ ನಂಗೆ ಕೊಡ್ತಿದೀಯಾ.ನಾನು ಮಧ್ಯದೆಲ್ಲಾದ್ರೂ ಮೇಲೆ ಹೋಗಿಬಿಟ್ರೆ ?'' ಕೇಳಿದೆ. ಸುಮ್ಮನೆ  ಕೇಳಿದ್ದಲ್ಲ.ಜವಾಬ್ದಾರಿ  ನನ್ನ ಮೇಲಿದೆಯಲ್ಲ  ಅನ್ನಿಸಿತು.''ನಿಂಗೆ ಇದನ್ನ ಕೊಟ್ಟಿರುವ ವಿಷಯ ಚಿದಂಬರನಿಗೂ ಗೊತ್ತು'' ಅಂದ. ''ಏನಿದೆಯೋ  ಈ ಡೈರಿಯಲ್ಲಿ'' ಅವನ  ಹತ್ತಿರ  ಹೋಗಿ  ಆತ್ಮೀಯತೆಯಿಂದ ಕೇಳಿದೆ. ಅಂತರ್ಮುಖಿಯಾದಂತೆಲ್ಲ ಅವನು  ಹೀಗೆ ಏನಾದರೂ  ಬರೆಯುವುದು ಹೆಚ್ಚಾಗಿತ್ತು. ''ಇನ್ನೇನು ಬರೀಲಿ, ಮಗಳಿಗೆ ಅಪ್ಪನ ಮಾತುಗಳು'' ಎಂದಷ್ಟೇ  ಹೇಳಿ  ಸುಮ್ಮನಾದ .ಅಲ್ಲಿಗೆ ಆ ಡೈರಿಯನ್ನ ವಾರಿಜಳಿಗೆ ತಲುಪಿಸುವ ಜವಾಬ್ದಾರಿ ನನಗೆ  ವಹಿಸಿದ  ಎಂಬುದನ್ನ ಅರ್ಥಮಾಡಿಕೊಂಡೆ. ಅವನು ಹೋದನಂತರ  ಡೈರಿಯನ್ನ ಓದಲಾ  ಅಂದುಕೊಂಡೆ. ''ಇಲ್ಲ,ಮಗಳಿಗೆ ಬರೆದದ್ದುಅಂತ ಕೊಟ್ಟ ಡೈರಿಯನ್ನ ನಾನು ಓದಿದರೆ  ಶಿವರಾಮುವಿನ ನಂಬಿಕೆಗೆ ದ್ರೋಹ  ಮಾಡಿದಂತೆ  ಆಗುತ್ತದೆ'' ಅನ್ನಿಸಿತು.ಆ  ಡೈರಿಯನ್ನ ತೆಗೆದುಕೊಂಡು ಹೋಗಿ ನನ್ನ ಟ್ರಂಕಿನ ಒಳಗಡೆ  ಇಟ್ಟವನಿಗೆ ಆಮೇಲದು ಮರೆತೇ ಹೋಗಿತ್ತು.
                  *********
                  ''ವಾರಿಜ, ನಡೆ ನಮ್ಮನೆಗೆ ಹೋಗೋಣ.  ಏನೋ ಒಂದು ವಿಷಯ ಇದೆ'' ಅಂದೆ.  ''ಯಾಕೆ  ಸುಬ್ಬಣ್ಣ, ಮನೆಯಲ್ಲಿ  ಅಣ್ಣನ  ಮನೆಯೋರು ಕಾಯ್ತಿರ್ತಾರೆ.'
                 ''ಏನೂ ಆಗೋದಿಲ್ಲ , ಬಾ. ಒಂದು  ವಿಷಯ ಇದೆ'' ಎಂದು  ಹೇಳಿ ಅವಳನ್ನ  ಒತ್ತಾಯ ಪೂರ್ವಕವಾಗಿ ನನ್ನ ಮನೆಯ ಕಡೆ  ತಿರುಗಿಸಿದೆ.  ನಾವು  ನಡೆಯುತ್ತಿದ್ದ  ದಾರಿಯ  ಎಡಬದಿಗೆ  ಮುನ್ನಡೆದರೆ  ಶಿವರಾಮುವಿನ  ಮನೆ. ಬಲಕ್ಕೆ  ತಿರುಗಿ ಸ್ವಲ್ಪ  ದೂರ  ನಡೆದರೆ  ಸ್ವಲ್ಪ  ಎತ್ತರಕ್ಕೆ  ನನ್ನ  ಮನೆ.  
                ಮನೆಗೆ  ಬಂದವನೇ ಟ್ರಂಕಿನಲ್ಲಿದ್ದ  ಡೈರಿಯನ್ನು  ವಾರಿಜಾಗೆ  ಕೊಟ್ಟು  ಹೇಳಿದೆ "ಶಿವರಾಮು ಇದನ್ನ ನಿನಗೇ ಕೊಡು  ಅಂತ  ಆವತ್ತೊಂದು  ದಿನ  ಕೊಟ್ಟಿದ್ದ . ಅದರಲ್ಲಿ  ಏನಿದೆ  ಅಂತ   ನನಗೂ   ಗೊತ್ತಿಲ್ಲ.  ನಿಂಗೆ  ಕೊಟ್ಟು  ನನ್ನ  ಜವಾಬ್ದಾರಿಯಿಂದ ಮುಕ್ತನಾಗ್ತಾ  ಇದ್ದೀನಿ'' ಎಂದೆ.
             ಶಿವರಾಮುವಿನ  ಮಾತಿಗಾಗಿ  ಬಹಳ  ವರ್ಷಗಳಿಂದ  ಕಾಯುತ್ತಿದ್ದ  ವಾರಿಜ  ಅದು  ಶಿವರಾಮುವಿನ  ಡೈರಿ  ಎಂದದ್ದೇ,ತಕ್ಷಣ  ತೆಗೆದುಕೊಂಡು ಅಲ್ಲೇ ಕುಳಿತು ಓದತೊಡಗಿದಳು  ವಾರಿಜ. ಅವಳ ಪಕ್ಕದಲ್ಲಿಯೇ ಮಗಳೂ  ಕುಳಿತಳು. 
            ''ಮಗಳೇ  ವಾರಿಜ,
                  ಇಲ್ಲಿರುವುದೆಲ್ಲ  ನನ್ನ  ಮನದ  ಮಾತುಗಳು.  ನಾನಿಲ್ಲದಿರುವಾಗ  ನನ್ನ  ಮನದ  ಮಾತು   ಓದಬೇಕಾದ  ಪರಿಸ್ಥಿತಿ  ಬಂದಿದೆ .  ನೀನು  ಇದ್ದಾಗಲೇ,  ನೀನು  ಇಲ್ಲ  ಎಂದು  ತಿಳಿದುಕೊಂಡು  ಬದುಕಬೇಕಾದ  ಪರಿಸ್ಥಿತಿ   ನನಗೂ ಇತ್ತು.  ನಾನು  ಹಾಗೇ  ಬದುಕಿದೆ. ನೀನು  ನಿನ್ನಿಷ್ಟದಂತೆ  ಮದುವೆಯಾಗಿ  ಹೋದಮೇಲೆ,  ನಾನು  ತುಂಬಾ  ಯಾತನೆಪಟ್ಟೆ.  ನಿನ್ನಮೇಲೆ  ಅಷ್ಟೊಂದು  ಪ್ರೀತಿ,  ಮಮತೆ  ಇತ್ತು  ನನಗೆ.  ಹಾಗಿದ್ದರೂ  ನಾನು  ಮತ್ತೆ  ನಿನ್ನನ್ನು  ನೋಡಲು  ಬಯಸಲಿಲ್ಲ. ಯಾಕೆಂದರೆ   ನಾನು  ನಿನ್ನ  ಮೇಲೆ  ತೋರಿದ  ಪ್ರೀತಿ,  ವಾತ್ಸಲ್ಯವನ್ನು  ನೀನು  ತೊರೆದುಹೋದ ರೀತಿ  ನನ್ನಲ್ಲೊಂದು  ಶಾಶ್ವತ  ಗಾಯ  ಮಾಡಿಬಿಟ್ಟಿದೆ. ನನಗೆ  ನಿನ್ನಮೇಲೆ  ಬೇಸರ  ಇದೆಯೇ   ವಿನಃ  ದ್ವೇಷ  ಇಲ್ಲ.  ನೀನು  ನನ್ನ  ಮುದ್ದಿನ  ಮಗಳು. ನಿನ್ನ  ಮೇಲೆ  ದ್ವೇಷಪಡುತ್ತೇನ  ನಾನು?  ಮೊದಲು  ಪ್ರೀತಿಯಿಂದ  ನೋಡಿಕೊಂಡು  ನಂತರ  ದ್ವೇಷಿಸುತ್ತೇನೆಂದರೆ  ಆ  ಪ್ರೀತಿಗೇನಾದರೂ  ಅರ್ಥ  ಇದೆಯಾ?  ನಾವೆಲ್ಲರೂ  ನಿನ್ನನ್ನು  ಹುಟ್ಟಿನಿಂದಲು  ಅಷ್ಟೊಂದು  ಪ್ರೀತಿಸಿದ್ದೆವು.  ಆದರೆ  ನಮ್ಮ  ಅಷ್ಟುವರ್ಷದ  ಪ್ರೀತಿ  ನಿನಗೆ  ಏನೂ  ಅನ್ನಿಸಲೇ  ಇಲ್ಲ. ಹಠಕ್ಕೆ  ಬಿದ್ದು  ಮದುವೆ ಮಾಡಿಕೊಂಡೆ. ಸಂಬಂಧಗಳು  ಚೆನ್ನಾಗಿರಬೇಕೆಂದರೆ  ಕುಟುಂಬದ  ಎಲ್ಲರಿಗು  ತಮ್ಮ ಜವಾಬ್ದಾರಿಗಳ  ಅರಿವಿರಬೇಕು,  ಹಾಗೆಯೇ  ನಡೆದುಕೊಳ್ಳಬೇಕು.  ಒಂದೆರಡು  ವರ್ಷಗಳಲ್ಲಿ  ಸಿಕ್ಕವನಿಗಾಗಿ  ನಮ್ಮ ಅಷ್ಟುವರ್ಷದ  ಸಂಬಂಧವನ್ನ ಆರಾಮವಾಗಿ  ಬಿಟ್ಟು  ಹೊರಡುವಷ್ಟು  ವಿವೇಕ  ಶೂನ್ಯೆ  ಆಗಿಬಿಟ್ಟೆಯಲ್ಲ  ನೀನು  ಎನ್ನುವ  ಕೊರಗು ನನ್ನನ್ನು  ತುಂಬಾ ಕಾಡಿತು. ನಾವು  ನಿನ್ನಬಗ್ಗೆ  ಕಟ್ಟಿಕೊಂಡ  ಕನಸು,  ನಿರೀಕ್ಷೆಗಳ  ಬಗ್ಗೆ  ನಿನಗೆ  ಯಾವ  ಕಾಳಜಿಯೂ  ಇರದೇಹೋಯಿತಲ್ಲ  ಎನ್ನುವ  ಯೋಚನೆ ಮನಸ್ಸಲ್ಲಿ ಸ್ಥಿರವಾಗಿ  ಬಿಂತುಬಿಟ್ಟಿತು. . ನೀನು  ಹಾಗೆ  ಹೋದ  ನಂತರದಿಂದ ನಾವು  ಊರಿನ ಜನರ  ಮಾತಿಗೆ  ಆಹಾರವಾಗಿ  ಅಷ್ಟು  ವರ್ಷದಿಂದ ಗಳಿಸಿದ್ದ  ಗೌರವವೆಲ್ಲ  ಮಣ್ಣುಪಾಲಾಯಿತು. ಎಲ್ಲಾ ಸಂಬಂಧಗಳೂ ಸುಳ್ಳೆನಿಸತೊಡಗಿತು.ನನ್ನಷ್ಟಕ್ಕೆ ನಾನಿರುವುದೇ  ಸತ್ಯ ಅಂತ ತುಂಬಾ ಅನ್ನಿಸೋದಕ್ಕೆ ಪ್ರಾರಂಭ ಆಯ್ತು.  ನಿನ್ನ ಅಮ್ಮ ನಿಧನವಾದ  ನಂತರವಂತೂ ನಾನು ಪೂರ್ಣ ನನ್ನಷ್ಟಕ್ಕೆ ನಾನೇ ಆಗಿಬಿಟ್ಟೆ. ಎಲ್ಲಾದರೂ ಆ  ಸುಬ್ಬನನ್ನು  ಅಪರೂಪಕ್ಕೆ  ಭೇಟಿ ಮಾಡಿತ್ತೇನಷ್ಟೆ. ನೀನು ಬದುಕಿನಲ್ಲಿ ನಿನ್ನ  ಗಂಡ  ಮಕ್ಕಳೊಂದಿಗೆ  ಸುಖದಿಂದ ಇದ್ದೀಯ ಎಂಬ ವಿಷಯ ನನ್ನ ಕಿವಿಗೆಬಿದ್ದದ್ದು ತುಂಬಾ  ಸಂತೋಷ. ನೀನು  ಯಾವಾಗಲೂ ನಗುತ್ತಿರಮ್ಮ .ನಿನ್ನ  ಕೆಡುಕನ್ನು  ನಾನು ಎಂದಿಗೂ ಬಯಸುವುದಿಲ್ಲ .ಇನ್ನುಮುಂದೆ  ನಿನಗೆ ಈ ತವರುಮನೆ ತೆರೆದೇ ಇರುತ್ತದೆ,ಯಾಕೆಂದರೆ ಚಿದಂಬರ ನನ್ನಷ್ಟು ಕಠಿಣ ಹೃದಯದವನಲ್ಲ.ಅಲ್ಲದೆ ನಾನು ಇಲ್ಲವಾದಮೇಲೂ ನನ್ನ ಭಾವನೆಗಳು,ಸಿಟ್ಟು ನೋವು ಪ್ರೀತಿ ಇವೆಲ್ಲ ಇರಬೇಕು ಎನ್ನುವ ಹಂಬಲ ನನಗಿಲ್ಲ.ನನ್ನ ನಂತರ ನಿಮ್ಮ ಜೀವನ  ನಿಮ್ಮದು. ನೀವೆಲ್ಲ ಸುಖವಾಗಿರಿ"
ಇಂತಿ  ನಿನ್ನ  ತಂದೆ
ಶಿವರಾಮು
             ಡೈರಿಯ  ಬರಹವನ್ನು  ಓದಿ ವಾರಿಜ  ಕಣ್ಣೀರಾದಳು.  ಆ  ಬರಹಕ್ಕೆಯೇ  ''ಅಪ್ಪಾ '' ಅನ್ನುತ್ತಾ  ಮುತ್ತಿಟ್ಟಳು.  ಬರೆದದ್ದನ್ನು  ನಾನೂ  ಓದಿ  ಭಾವುಕನಾದೆ .
             ಅಷ್ಟೇ  ಹೊತ್ತಿಗೆ ಚಿದಂಬರನ  ಮನೆಯಿಂದ   ವಾರಿಜಾಗೆ   ಬರುವಂತೆ ಕರೆ ಬಂತು ''ಸುಬ್ಬಣ್ಣ..... ಇಪ್ಪತ್ತೈದು ವರ್ಷಗಳ ನಂತರ ನನ್ನ ತವರು ಮನೆಗೆ  ಹೋಗ್ತಿದ್ದೀನಿ. ನನ್ನ  ಅಪ್ಪನೇ  ಬಾ  ಎಂದಿದ್ದಾನೆ. ಹೋಗಿಬರ್ತೀನಿ...." ಎನ್ನುತ್ತಾ  ಪತ್ರವನ್ನು   ಎದೆಗವಚಿಕೊಂಡು,  ಕಣ್ಣೀರು ಒರೆಸಿಕೊಂಡಳು.  ನಾನು  ಆಕೆಯ  ತಲೆಯನ್ನು  ಸವರಿ ಹನಿಗಣ್ಣಾಗಿ ನೋಡಿದೆ. ಅವಳು ಮಗಳೊಡನೆ  ಹೊರಟಳು. ನಾನುಅಲ್ಲೇ  ಇದ್ದ ಖುರ್ಚಿಯಲ್ಲಿ  ಕುಳಿತೆ.
             'ಸಂಬಂಧಗಳನ್ನು  ಅಷ್ಟು  ಸುಲಭವಾಗಿ  ತುಂಡರಿಸಲಾಗುವುದಿಲ್ಲ, ಯಾವ ದೂರಗಳೂ  ಅದನ್ನು  ದೂರೀಕರಿಸುವುದಿಲ್ಲ' ಅಂದುಕೊಂಡೆ. 
             ''ಅದು ಹೌದೋ.....ಸುಬ್ಬ....' ಎಂದು ಶಿವರಾಮು  ನುಡಿದಂತಾಯ್ತು.
                       {•••••••••••••••}

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸವೆದ ಕಲ್ಲಿನ ಹಿಂದೆ (ಕಥೆ)

ಇಬ್ಬಗೆಯ ನೀತಿ ಏಕೆ?

ಬೆಳಕು ಬಿದ್ದೊಡನೆ (ಕಥೆ )