ಸವೆದ ಕಲ್ಲಿನ ಹಿಂದೆ (ಕಥೆ)

    

ವೀರಗಲ್ಲು
ಸಾಗರದಿಂದ ರೈಲ್ವೇ ಹಳಿಯ ಮೇಲೆಯೇ ತಾಳಗುಪ್ಪ ಕಡೆಗೆ   ಸುಮಾರು 8 ಕಿ ಮಿ ನಡೆದರೆ ನಿಮಗೆ ಸಿಗುವ  ರೈಲ್ವೆ ನಿಲ್ದಾಣದಲ್ಲಿ 'ಕಾನಲೆ' ಎಂದು ದೊಡ್ಡ ಫಲಕದಲ್ಲಿ ಬರೆದಿರುವುದು ಗೋಚರಿಸುತ್ತದೆ. ಅದರರ್ಥ ನೀವೀಗ ಕಾಣುತ್ತಿರುವುದು ಕಾನಲೆ ಊರಿನ ರೈಲ್ವೇ ನಿಲ್ದಾಣ. ಬ್ರಿಟೀಷರ ಕಾಲದ ಈ ರೈಲು ಮಾರ್ಗ ಈಗ ಬ್ರಾಡ್ ಗೇಜ್ ಆಗಿ ಪರಿವರ್ತನೆಯಾಗಿದೆ. ಹಿಂದೆ  ಇಲ್ಲಿ ಒಂದು ಸಣ್ಣ ರೈಲು ನಿಲ್ದಾಣ ಇತ್ತು ಮತ್ತು ರೈಲು ನಿಲುಗಡೆಯೂ ಇತ್ತು. ಈಗ ಇಲ್ಲಿ ಹೊಸ ರೈಲು ನಿಲ್ದಾಣ ಮಾಡಲಾಗಿದೆ ಹಾಗೂ ಈ ನಿಲ್ದಾಣದಲ್ಲಿ ಯಾವುದೇ ರೈಲನ್ನೂ ನಿಲ್ಲಿಸುತ್ತಿಲ್ಲ! ಆ ನಿಲ್ದಾಣದಲ್ಲಿ  ನೀವು ಸಾಗಿ ಬಂದ  ಕಡೆಯಿಂದಲೇ ಬಲಕ್ಕೆ ನೋಡಿದರೆ ಸಾಗರದಿಂದ ಬಂದಂತಹ ಡಾಂಬರು ಹಾದಿಯೊಂದು ರೈಲ್ವೆ ಮಾರ್ಗವನ್ನೇ ದಾಟಿ ಮುಂದುವರೆದಿರುವುದು ಕಾಣುತ್ತದೆ. ಅದು ಮಂಡಗಳಲೆ, ಕಾಗೋಡು, ಮಾಸೂರಿನ ಮೂಲಕ ಸೊರಬ ಸೇರುತ್ತದೆ. ಅಲ್ಲದೆ ಆ ಹಾದಿಯ ಬಲಕ್ಕೆ  ತೆರೆದುಕೊಳ್ಳುವ ದಾರಿಯಲ್ಲಿ ಮುಂದುವರೆದರೆ ನಿಮಗೆ ಸಿಗುವುದು ವರದಾನದಿ. ಅದರಾಚೆ ಇರುವ ಅದರಂತೆ ಊರನ್ನು ದಾಟಿ ನಾಲ್ಕಾರು ಕಿಲೋಮಿಟರುಗಳಲ್ಲಿ ಇತಿಹಾಸ ಪ್ರಸಿದ್ಧ ಕೆಳದಿ ಊರಿಗೆ ನೀವು ತಲುಪುತ್ತೀರಿ.  ನಿಲ್ದಾಣದಿಂದ ಎಡಕ್ಕೆ ನೋಡಿದರೆ  ಹಸಿರು ಹುಲ್ಲಿನ ಚಿಕ್ಕ ಬಯಲು ಹಾಗೂ ನಡುವಲ್ಲಿಯೇ ಇರುವ, ಸಾಗರದಿಂದ ಬಂದ ಡಾಂಬರು ರಸ್ತೆ ಹಾಗೂ ಡಾಂಬರು ರಸ್ತೆಯ ಬಲಕ್ಕೆ ತಿರುಗಿ ಕಾನಲೆ ಊರೊಳಕ್ಕೆ ಸಾಗುವ ಮಣ್ಣು ರಸ್ತೆಯೊಂದು ಗೋಚರಿಸುತ್ತದೆ. ಈ ಡಾಂಬರು ರಸ್ತೆ ಹಾಗೂ ಮಣ್ಣು ರಸ್ತೆ ಟಿಸಿಲೊಡೆದು ಬೇರಾಗುವ ನಡುವಿನ ಪ್ರದೇಶದಲ್ಲಿ ನೆಟ್ಟಿರುವ ಚಪ್ಪಡಿಕಲ್ಲಿನಂತ  ಒಂದು ಕಲ್ಲನ್ನು ಕಾಣಬಹುದು. ಸೂಕ್ಷ್ಮವಾಗಿ ನೋಡಿ, ಅದು ಚಪ್ಪಡಿಕಲ್ಲಲ್ಲ. ಅದೊಂದು ವೀರಗಲ್ಲು. ಕೆಳದಿ  ಇಲ್ಲಿಂದ ಸಮೀಪ ಎಂದು ಈಗಷ್ಟೇ ಹೇಳಿದೆ. ಹಾಗಾಗಿ ಈ ವೀರಗಲ್ಲಿಗೂ ಆ ಕೆಳದಿಗೂ ಏನಾದರೂ ಸಂಬಂಧವಿದೆಯೆಂದು ನೀವು ಊಹಿಸಿದರೆ, ನಿಮ್ಮಲ್ಲಿರುವ ಇತಿಹಾಸಪ್ರಜ್ಞೆಯನ್ನು ನಾನು ಗೌರವಿಸಲೇ ಬೇಕಾಗುತ್ತದೆ. ಈಗ ಮತ್ತೊಮ್ಮೆ ಕಾನಲೆ ರೈಲ್ವೇ ಸ್ಟೇಷನ್ನಿಗೆ ಬನ್ನಿ. ಸ್ಟೇಷನ್ನಿನಿಂದ ನೇರವಾಗಿ ಎದುರು ನೋಡಿದಾಗ ಕಣ್ಣೆದುರಿಗೆ ವಿಶಾಲವಾದ ಗದ್ದೆಬಯಲು ಕಾಣಿಸುತ್ತದೆ. ಮಳೆಗಾಲದಲ್ಲಿ ಹಸಿರನ್ನು ಹೊದ್ದ ಆ ಗದ್ದೆ ಬಯಲನ್ನು ನೋಡುವುದೇ ಕಣ್ಣಿಗೆ ಹಬ್ಬ. ಅಲ್ಲಿ ರೈತಾಪಿ ಜನರುಗಳು ಗದ್ದೆ ನೆಟ್ಟಿಯೋ, ಕೊಯ್ಲೋ, ಹೂಟಿಯೋ, ಒಕ್ಕಲೊ ಹೀಗೆ ಒಂದಲ್ಲ ಒಂದು ಕೆಲಸವನ್ನು ಯಾವಾಗಲೂ ಮಾಡುತ್ತಿರುವುದನ್ನು ನೀವು ಕಾಣುತ್ತೀರಿ.  ಆ ಗದ್ದೆ ಬಯಲು, ಈ ರೈಲ್ವೆ ನಿಲ್ದಾಣ, ಅದರ ಇಕ್ಕೆಲಗಳನ್ನೂ ಒಳಗೊಂಡಂತೆ ಇರುವ ವಿಶಾಲ ಪ್ರದೇಶ ಇಂದು ಕೇವಲ  ಸಹಜ ಭೂಮಿಯಾಗಷ್ಟೇ ಕಂಡರೂ ಅದರ ಇತಿಹಾಸ ಅಷ್ಟು ತಣ್ಣಗೆ ಹೇಳಿ ಬಿಡಬಹುದಾದಷ್ಟು ಸರಳವೇನಾಗಿರಲಿಲ್ಲ.  ಊಹಿಸದಿದ್ದಷ್ಟು ದೊಡ್ಡ ಯುದ್ದವೊಂದು ಆ ಪ್ರದೇಶದಲ್ಲಿ ನಡೆದಿತ್ತು, ರಕ್ತ ಪ್ರವಾಹವೇ ಹರಿದಿತ್ತು.  ತುಂಡು ತುಂಡಾದ ದೇಹಗಳು ಅಲ್ಲೆಲ್ಲ ಚೆಲ್ಲಾಪಿಲ್ಲಿಯಾಗಿ ಚದುರಿ ಬಿದ್ದಿದ್ದವು. ಗೊತ್ತೇ ಇಲ್ಲದ ಅಂದು ನಡೆದಿದ್ದ ಆ ಭಯಂಕರ ಯುದ್ಧವೊಂದಕ್ಕೆ ಈ ಪ್ರದೇಶ ರಣಭೂಮಿಯಾಗಿತ್ತು ಎಂದರೆ ನೀವು ನಂಬಲೇಬೇಕು. ಇನ್ನೆಷ್ಟು ದಿನ ಈ ವಿಚಾರವನ್ನು ಬಚ್ಚಿಡಬೇಕು? ಇಲ್ಲ...ಇದನ್ನೀಗ ಬಿಚ್ಚಿಡಲೇಬೇಕು.


ಕಾನಲೆಯ ರೈಲ್ವೆ ನಿಲ್ದಾಣದ ಫಲಕ
             * * * *
"ಆಶ್ರಯ ಬೇಡಿ ಬಂದವರಿಗೆ ಆಶ್ರಯ ಕೊಡುವುದು ನಮ್ಮ ಧರ್ಮ. ಅದರಿಂದ ಅಪಾಯವಾಗುತ್ತದೆ ಎಂಬ ಕಾರಣಕ್ಕೆ ಬೇಡಿದವರನ್ನು ದೂರ ತಳ್ಳಿದರೆ ಅದೆಂತಹ ಬಾಳು?. ಅದಕ್ಕೆ ಬದಲಾಗಿ ಬರಬಹುದಾದ ಅಪಾಯವನ್ನು ಎದುರಿಸಲು ಸಕಲರೀತಿಯಲ್ಲಿಯೂ ಸಜ್ಜಾಗುವುದರಲ್ಲಿಯೇ ನಮ್ಮ ವೀರತನ,   ರಾಜಧರ್ಮ ಇದೆ ಎಂದು ನನ್ನ ಭಾವನೆ" ಚೆನ್ನಮ್ಮಾಜಿ ಗಂಭೀರವಾಗಿಯೇ ಹೇಳಿದಳು.
                 " ಅದು ಹೇಳಿದಷ್ಟು ಸುಲಭವಲ್ಲ ಚೆನ್ನಮ್ಮಾ. ನಮ್ಮ ಮೇಲೆ ದಾಳಿ ಮಾಡುವುದು ಯಾವುದೊ ಚಿಕ್ಕ ಪಾಳೆಗಾರನ ಸೈನ್ಯವಲ್ಲ. ಅದು ಅಲಂಗೀರ ಔರಂಗಜೇಬನ ಸೈನ್ಯ. ಅವರ ಸೈನ್ಯ ಒಂದು ಮಹಾ ಸಾಗರ. ಅವರೆದುರು ನಮ್ಮ ಸೈನ್ಯ ನಿಲ್ಲುತ್ತದೆಯೆ? ಯಾರಿಗೋ ಆಶ್ರಯ ನೀಡಲು ಹೋಗಿ ನಾವೇ ವಿನಾಶವನ್ನು ಮೈಮೇಲೆಳೆದುಕೊಂಡಂತೆ ಆಗುತ್ತದೆ" ಸಿದ್ದಪ್ಪ ಶೆಟ್ಟಿ ಮಗಳಿಗೆ ವಾಸ್ತವವನ್ನು ವಿವರಿಸಲು ಪ್ರಯತ್ನಿಸಿದನು.
                " ಇದೇನಿದು ಅಪ್ಪಾಜಿ..... ಏನೆಂದು ನುಡಿಯುತ್ತಿದ್ದೀರಿ?... ರಾಜಾರಾಮರಿಗೆ ಆಶ್ರಯ ನೀಡಿದರೆ ಯಾರಿಗೋ ಆಶ್ರಯ ನೀಡಿದಂತೆಯೆ? ಛತ್ರಪತಿ ಶಿವಾಜಿ ಮಹಾರಾಜರ ಮಗನಿಗೆ ಆಶ್ರಯ ನೀಡಿದರೆ ಯಾರಿಗೋ ಆಶ್ರಯ ನೀಡಿದಂತೆಯೇ?  ಔರಂಗಜೇಬನ ಆಟಾಟೋಪಗಳನ್ನು ತುಳಿದು ಸ್ವರಾಜ್ಯ ಸ್ಥಾಪಿಸಿ ರಕ್ಷಿಸಿದವರು ಛತ್ರಪತಿಗಳು. ಅವರ ಮಗ ಛತ್ರಪತಿಯಾಗಿ ಆಳಬೇಕಾದವರು, ತಲೆ ತಪ್ಪಿಸಿಕೊಂಡು ಓಡಿಬರಬೇಕಾದಂತಹ ಪರಿಸ್ಥಿತಿ ಬಂದ ಬಗ್ಗೆ ನನಗೆಷ್ಟು ಕಳವಳ ಇದೆ ಗೊತ್ತೆ. ಎಲ್ಲರಂತೆ ನಾವೂ ಅವರನ್ನು ದೂರ ತಳ್ಳಿದರೆ ಅವರ ಪರಿಸ್ಥಿತಿ ಏನಾಗಬೇಕು? ಅವರ ಸಹೋದರ ಸಂಬಾಜಿಯವರಂತೆ ಅವರೂ ಕೊಲೆಯಾಗಿ ಹೋಗುತ್ತಾರಷ್ಟೆ. ಈ ಪರಿಸ್ಥಿತಿಯಲ್ಲಿ ಅವರನ್ನು ರಕ್ಷಿಸಲು ಆಗಲಿಲ್ಲವೆಂದರೆ ಮತ್ತೇಕೆ ಬೇಕು ಈ  ಮಹಾರಾಣಿಪಟ್ಟ? ಏನೇ ಬಂದರೂ ರಾಜಾರಾಮರನ್ನು ಹೊರಟು ಹೋಗಿರೆಂದು ನಾನು ಹೇಳಲಾರೆ" ಮನಸ್ಸನ್ನು ಮಾತಿನಲ್ಲಿ ತೋರಿದಳು ಚೆನ್ನಮ್ಮಾಜಿ.

ಛತ್ರಪತಿ ಶಿವಾಜಿ ಮಹಾರಾಜ
   "ನಿನ್ನ ಮನಸ್ಸು ನನಗೆ ಅರ್ಥವಾಗುತ್ತದೆ ಚೆನ್ನಮ್ಮ. ಆದರೂ ರಾಜ್ಯದ ಹಾಗೂ ಪ್ರಜೆಗಳ ದೃಷ್ಟಿಯಿಂದ ನೋಡಿದಾಗ ಇದೆಲ್ಲ ಬೇಕೆ?" ಸಿದ್ದಪ್ಪ ಶೆಟ್ಟಿ ಕೇಳಿದನು.
         " ನಮ್ಮ ರಾಜ್ಯ ಹಾಗೂ ಪ್ರಜೆಗಳ ಬಗ್ಗೆ ನನಗಾವ ಅನುಮಾನವೂ ಇಲ್ಲ. ಈ ರಾಜ್ಯ ಕೇವಲ ರಾಣಿಯದಷ್ಟೇ ಅಲ್ಲ, ಪ್ರಜೆಗಳಿಗೂ ಸೇರಿದ್ದು ಎಂಬುದನ್ನು ನಾನು ಬಲ್ಲೆ. ಮಕ್ಕಳಿಲ್ಲದ ನನಗೆ ಆ ಕೊರಗೇ ಬಾರದಂತೆ ನೋಡಿಕೊಂಡವರು ನನ್ನ ಪ್ರಜೆಗಳು. ಈ ಸಂದರ್ಭದಲ್ಲಿ ಅವರು ಹೇಡಿಗಳಂತೆ ವರ್ತಿಸಲಾರರು ಎಂಬ ಭರವಸೆ ನನಗಿದೆ. ನೀವು ಚಿಂತಿಸಬೇಕಾದ ಅಗತ್ಯವಿಲ್ಲ ಅಪ್ಪಾಜಿ" ಚನ್ನಮ್ಮಾಜಿ ತಂದೆಗೆ ಭರವಸೆಯಿಂದ ಹೇಳಿದಳು.
        " ನಿನಗಿಷ್ಟು ನಂಬಿಕೆಯಿದ್ದಾಗ ನಾನು ಹೆಚ್ಚಿನದೇನನ್ನೂ ಹೇಳಲಾರೆ. ಮಹಾರಾಣಿಯವರ ಇಚ್ಚೆಯಂತೆ ಆಗಲಿ" ಎಂದು ಮಂತ್ರಿಯಾಗಿ ನುಡಿದು ಅಲ್ಲಿಂದ ಹೊರಟನು ಸಿದ್ದಪ್ಪ ಶೆಟ್ಟಿ. 
                      *****
              " ಹೌದೆ ! ಅಲ್ಲಿಯವರೆಗೂ ಬಂದುಬಿಟ್ಟಿದ್ದಾರೆಯೇ ಅವರು?" ಯೋಚನೆಯ ಮುಖ ಮುದ್ರೆಯಲ್ಲಿ ಕೇಳಿದಳು  ಚೆನ್ನಮ್ಮಾಜಿ. 
              " ಹೌದು ಮಹಾರಾಣಿ. ವನವಾಸಿಯಿಂದ ಚಂದ್ರಗುತ್ತಿ ಮಾರ್ಗವಾಗಿ  ಬಂದು ಕೆಳದಿಯನ್ನು ಮುತ್ತಿಗೆ ಹಾಕಬೇಕು. ಅದು ನಮ್ಮ ಮೊದಲ ರಾಜಧಾನಿಯಾಗಿದ್ದುದರಿಂದ ಅದನ್ನು ನಾಶ ಮಾಡಿದರೆ ನಮ್ಮ ಬಲ ಸಹಜವಾಗಿಯೇ  ಕುಗ್ಗುತ್ತದೆ. ಆಗ ಬಿದನೂರು ಸುಲಭವಾಗಿ ಕೈವಶವಾಗುತ್ತದೆ ಎಂಬ ಯೋಚನೆ ಅವರದ್ದು" ಸೇನಾಧಿಪತಿ ತನಗೆ ಬಂದ ಗುಪ್ತಚರ ಮಾಹಿತಿಯನ್ನು ವಿವರವಾಗಿ ತಿಳಿಸಿದ.  ಯೋಚಿಸುತ್ತಿದ್ದ ಚೆನ್ನಮ್ಮಾಜಿ ಸಿದ್ದಪ್ಪ ಶೆಟ್ಟಿಯ ಕಡೆಗೆ ' ಈಗೇನು ಮಾಡಿದರೆ ಸೂಕ್ತ?' ಎಂದು ಕೇಳುವಂತೆ ನೋಡಿದಳು. 
                 "  ರಾಜಧಾನಿ ಬಿದನೂರಿಗೆ ಬಂದ ನಂತರ ಕೆಳದಿ ಪ್ರಾಂತ್ಯ ಮೊದಲಿನಷ್ಟು ಭದ್ರವಾಗಿ ಉಳಿದಿಲ್ಲ ಎಂಬುದು ನಿನಗೇ ತಿಳಿದಿದೆಯಲ್ಲ" ಮಗಳ ಕಡೆ ನೋಡುತ್ತ ಹೇಳಿದ ಸಿದ್ದಪ್ಪ ಶೆಟ್ಟಿ. 
                 ತಂದೆಯ ಮುಖವನ್ನೇ ದಿಟ್ಟಿಸುತ್ತಿದ್ದ ಚೆನ್ನಮ್ಮಾಜಿ ನೋಟ ತಿರುಗಿಸಿ ಪಕ್ಕದ ಕಿಟಕಯಿಂದ ಹೊರಗೆ ನೋಡುತ್ತ ಗಂಭೀರ ಧ್ವನಿಯಲ್ಲಿ " ನನಗೆ ಹಾಗನ್ನಿಸುವುದಿಲ್ಲ ಅಪ್ಪಾಜಿ. ಕೆಳದಿ ಪ್ರಾಂತ್ಯದ ಮೇಲ್ವಿಚಾರಣೆ ನೋಡಿಕೊಳ್ಳುತ್ತಿರುವ ವೀರಮ್ಮ ಸಾಧಾರಣ ಹೆಣ್ಣಲ್ಲ. ಹೇಗೆ ನನ್ನ ಪತಿ ದೇವರಾದ ಸೋಮಶೇಖರ ನಾಯಕರು ರಾಜ್ಯಾಡಳಿತವನ್ನು ಮರೆತು ಮಾನಿನಿಯ ದಾಸರಾದಾಗ ನಾನು ಈ ರಾಜ್ಯದ ಆಡಳಿತ ವಹಿಸಿಕೊಂಡು ಸಂಭವನೀಯ ಅರಾಜಕತೆಯನ್ನು ಮೆಟ್ಟಿಹಾಕಬೇಕಾಯಿತೋ ಹಾಗೆಯೇ ವೀರಮ್ಮ ಕೂಡ ಪತಿ ಚೆಲುವ ನಾಯಕ ಜವಾಬ್ದಾರಿಯಿಂದ ವಿಮುಖನಾದಾಗ ಕೆಳದಿಯ ದೇಖರೇಖಿನ ಹೊಣೆ ಅವಳೇ ಹೊತ್ತಳು. ಅವಳ ಮೇಲ್ವಿಚಾರಣೆಯಲ್ಲಿ ಕೆಳದಿ ನಗರ ಹಾಗೂ ಪ್ರಾಂತ್ಯಗಳೆರಡೂ ಸುಖ ಶಾಂತಿಯಿಂದ ಇವೆ. ಆಕೆಯ ವೀರತನವೂ ಕಡಿಮೆಯೇನಲ್ಲ. ಔರಂಗಜೇಬನ ಸೈನ್ಯ ಕೆಳದಿಯ ಮೇಲೆ ಆಕ್ರಮಣ ಮಾಡುವ ಯೋಜನೆ ಹಾಕಿಕೊಂಡಿದ್ದರೆ ನಾವು  ತುಂಬಾ ಭಯಪಡಬೇಕಾದ ಅಗತ್ಯವೇನಿಲ್ಲ ಎಂದೆನಿಸುವುದಿಲ್ಲವೆ?" ಎಂದು ಕೇಳಿದಳು.
               " ನಿನಗಿರುವ ಈ ವಿಶ್ವಾಸ ನನಗಿಲ್ಲ. ನನ್ನ ಈ ಅವಿಶ್ವಾಸಕ್ಕೆ ಇಳಿಯುತ್ತಿರುವ ನನ್ನ ವಯಸ್ಸೂ ಕಾರಣವಿರಬಹದು" ಎಂದು ನಿಟ್ಟುಸಿರು ಬಿಟ್ಟನು ಸಿದ್ದಪ್ಪ ಶೆಟ್ಟಿ.
                           ****
            "ವೀರಮ್ಮಾ, ಮಹಾರಾಣಿಯವರು ಈ ಜರೂರು ಪತ್ರದೊಂದಿಗೆ ನನ್ನನ್ನೇ  ಕಳುಹಿಸಿದ್ದಾರೆ" ಮನೆಯ ಒಳಕ್ಕೆ ಬಂದು ಆಸೀನನಾಗುತ್ತ ಹೇಳಿದ ಸೀನಪ್ಪ ನಾಯಕ.  " ಬಿದನೂರು ಸೈನ್ಯದ ಸೇನಾಧಿಪತಿಯವರೇ ಬಂದಿದ್ದಾರೆಂದಮೇಲೆ ಏನೋ ಮಹತ್ವದ  ವಿಚಾರ ಇರಲೇಬೇಕು. ಏನೆಂದು ಓದಿರಿ ಸೀನಪ್ಪಣ್ಣ" ಮಂದಹಾಸದ ಮುಖ ಮುದ್ರೆಯಲ್ಲಿ ಹೇಳಿದಳು ವೀರಮ್ಮ.
                       ಸೀನಪ್ಪನಾಯಕ ಚೆನ್ನಮ್ಮಾಜಿಯ ಆ ಪತ್ರವನ್ನು ಬಿಚ್ಚಿ ಓದಲು ತೊಡಗಿದ " ಕೆಳದಿ ಸಾಮ್ರಾಜ್ಯಾಧಿಪತಿಗಳ ಕುಲದೇವರಾದ ಶ್ರೀರಾಮೇಶ್ವರ ದೇವರನ್ನು ಸ್ಮರಿಸುತ್ತಾ    ಕೆಳದಿ ಪ್ರಾಂತ್ಯ ದೇಖರೇಖಿ  ವೀರಮ್ಮನಿಗೆ   ಬಿದನೂರಿನಿಂದ ಮಹಾರಾಣಿ ಚೆನ್ನಮ್ಮಾಜಿ ಬರೆದಿರುವ ಪತ್ರ. ದೆಹಲಿಯ ಬಾದ್ ಷಾಹ ನ ಸೈನ್ಯ ಕೆಳದಿಯಮೇಲೆ ಆಕ್ರಮಣಕ್ಕಾಗಿ  ಧಾವಿಸಿ ಬರುತ್ತಿದೆ. ಅಜಂಶಾಹಾನ ನೇತೃತ್ವದಲ್ಲಿ ಮುನ್ನುಗ್ಗುತ್ತಿರುವ ಸೇನೆಯನ್ನು ಈಗ ಕೆಳದಿಯಲ್ಲಿ ಲಭ್ಯವಿರುವ ಸೇನೆಯ ಸಹಾಯದಿಂದ 'ಕಾನುನೆಲೆ'ಯಲ್ಲಿ ತಡೆದು ನಿಲ್ಲಿಸಿ ಯುದ್ದಮಾಡುವುದು. ಇನ್ನೆರೆಡು ದಿನಗಳಲ್ಲಿ ಬಿದನೂರಿನಿಂದ ಸೈನ್ಯ ಬಂದು ತಮ್ಮನ್ನು ಸೇರಿಕೊಳ್ಳುತ್ತದೆ. ಈ ವಿಷಯ ಕುರಿತಂತೆ ತಕ್ಷಣವೇ ಕಾರ್ಯಪ್ರವೃತ್ತರಾಗುವುದು". 
                ಏಕಚಿತ್ತದಿಂದ  ಆಲಿಸುತ್ತಿದ್ದ ವೀರಮ್ಮ ಹೇಳಿದಳು  " ಸೀನಪ್ಪಣ್ಣ, ಔರಂಗಜೇಬ ದೆಹಲಿಗೆ ಬಾದಷಾಹಾ ಇರಬಹುದು, ಹಾಗೆಂದ ಮಾತ್ರಕ್ಕೆ ಕೆಳದಿಯೇನು ಅವನ ಉಂಬಳಿ ಅಲ್ಲ.  ಅವನ ಸೈನ್ಯಕ್ಕೆ ದಕ್ಷಿಣದ ಈ ವೀರಭೂಮಿಯ ಖಡ್ಗಾಗಾಥದ ಔತಣದ ರುಚಿ ತೋರಿಸೋಣ". ಅವಳ ಮಾತು ಅವಳಲ್ಲಿದ್ದ ಕೆಚ್ಚನ್ನು ಪ್ರಕಟಪಡಿಸಿತು. ಅವಳ ತೀಕ್ಷ್ಣ ದೃಷ್ಟಿ ಎದುರಿನ ಗೋಡೆಗೆ ನೇತು ಹಾಕಿದ್ದ ಖಡ್ಗವನ್ನೆ ನೋಡುತ್ತಿತ್ತು.
                          ******
               ಎರಡು ಫಿರಂಗಿ ,  ಪುಟ್ಟ ಸೈನ್ಯ ಹಾಗೂ ಅಶ್ವದಳದೊಂದಿಗೆ ಕೆಳದಿಯ ಸೈನ್ಯ ಕಾನುನೆಲೆಯನ್ನು ತಲುಪಿತು.  ಅಜಂಶಾಹಾನ ಸೈನ್ಯ ವನವಾಸಿಯಿಂದ ಚಂದ್ರಗುತ್ತಿ, ಸಿದ್ದಾಪುರ ಮಾರ್ಗವಾಗಿ ಮುಂದುವರೆದು ಬರುತ್ತಿತ್ತು.  ಮಲೆನಾಡಿನ ಬೆಟ್ಟ-ಗುಡ್ಡ, ದಟ್ಟ ಕಾಡಿನಲ್ಲಿ  ಸುಲಭವಾಗಿ ಮುಂದುವರೆಯಲಾರದೆ ಪದೇ ಪದೇ ದಾರಿತಪ್ಪಿ ಎತ್ತೆತ್ತಲೋ ಸಾಗುತ್ತ  ಇದ್ದದ್ದರಿಂದ ಅವರು ತಿಳಿದಷ್ಟು ಬೇಗನೆ ಮುಂದುವರೆಯಲು ಆಗಲಿಲ್ಲ.  ಹೀಗೆ ಪ್ರಯಾಸಪಟ್ಟು ಅಂತೂ ಕಾನುನೆಲೆ ತಲುಪಿದರು. ಮರೆಯಲ್ಲಿದ್ದ ವೀರಮ್ಮ " ಸೈನಿಕರೇ, ಆಕ್ರಮಣ ಮಾಡಿ" ಎಂದು ಕೂಗಿದಾಗ ಪೊದೆ, ಗಿಡ , ಮರಗಳ ಹಿಂದೆ ಅವಿತುಕೊಂಡಿದ್ದ ಕೆಳದಿ ಸೈನ್ಯ ಒಮ್ಮೆಲೆ ದಾಳಿಮಾಡಿತು.  ಧುತ್ತೆಂದು ಪ್ರತ್ಯಕ್ಷವಾಗಿ ಚಲಿಸತೊಡಗಿದ ಕೆಳದಿಗರ ಖಡ್ಗಕ್ಕೆ ದೆಹಲಿ ಬಾದಷಾಹನ ಹಲವು   ಸೈನಿಕರ ರುಂಡಗಳು ಕತ್ತರಿಸಿ ಬಿದ್ದವು. ಜೊತೆ ಜೊತೆಯೇ ಮರೆಯಲ್ಲಿಂದ ಹಾರಿ ಬರುತ್ತಿದ್ದ ಫಿರಂಗಿ ಗುಂಡಿನ ದಾಳಿಗೆ ಅದೆಷ್ಟೋ ಸೈನಿಕರ , ಕುದುರೆಗಳ ಪ್ರಾಣಪಕ್ಷಿ ಹಾರಿಹೋಯಿತು.  ಕುದುರೆಯನ್ನೇರಿ ತನ್ನ ಕತ್ತಿಯನ್ನು ರೊಯ್ಯನೆ ಸುತ್ತಲೂ ಬೀಸುತ್ತ ಶತ್ರು ಸೈನಿಕರ  ಕೈ ಕಾಲು ಕತ್ತನ್ನು ಕತ್ತರಿಸಿ ಹಾಕುತ್ತ ಮುನ್ನಡೆಯುತ್ತಿದ್ದ ವೀರಮ್ಮ ರಣ ಚಂಡಿಯಂತೆಯೇ ತೋರುತ್ತಿದ್ದಳು. ಹೀಗಿದ್ದರೂ ಔರಂಗಜೇಬನ ಮಹಾ ಸೈನ್ಯ  ಸ್ವಲ್ಪ ಸಾವರಿಸಿಕೊಂಡು ಪ್ರತಿದಾಳಿಯನ್ನು  ಸಂಘಟಿಸಿತು. ಪುಟ್ಟ ಕೆಳದಿ ಸೈನ್ಯ ಆ ಸೈನ್ಯದೆದುರು ಗೆಲ್ಲುವ ಸಾಧ್ಯತೆಯೇನೂ ಇರಲಿಲ್ಲ. ಆದರೂ ತಮ್ಮಿಂದ ಸಾಧ್ಯವಾದಷ್ಟು ಶತ್ರು ತಲೆಗಳನ್ನು ಕೆಳದಿ ಸೈನಿಕರು  ಉರುಳಿಸುತ್ತಲೇ ಇದ್ದರು. ಶತ್ರುಗಳ ತಲೆ ಕತ್ತರಿಸುತ್ತ, ಅವರ ಕುದುರೆಗಳ ಕಾಲು ಕತ್ತರಿಸಿ ಮುಗ್ಗರಿಸಿ ಬೀಳುವಂತೆ ಮಾಡುತ್ತ  ರಣರಂಗದ ತುಂಬೆಲ್ಲ ಸಂಚರಿಸುತ್ತಿದ್ದಳು ವೀರಮ್ಮ. ಸರಕ್ಕೆಂದು ಬಂದ ಈಟಿಯೊಂದು ಆಕೆಯ ಬೆನ್ನಿನೊಳಕ್ಕೆ  ತೂರಿತು. ತಕ್ಷಣವೇ ತಿರುಗಿ ಈಟಿ ತೂರಿದ ಆ ಸೈನಿಕನ ಶಿರವನ್ನು ಕಚಕ್ಕನೆ ಕತ್ತರಿಸಿದಳು. ವೀರಮ್ಮನ ಪರಿಸ್ಥಿತಿ ಕಂಡು ಕೆಳದಿಯ ಸೈನಿಕರು ಬೆದರಿದರು. " ಸೈನಿಕರೇ ಹೆದರಬೇಡಿ, ನನಗೇನೂ ಆಗಿಲ್ಲ. ಯುದ್ಧ ಮುಂದುವರೆಸಿ. ಶತ್ರುಗಳನ್ನು ತರಿದು ಹಾಕಿ" ಎಂದು ಕೂಗುತ್ತಾ, ಅಕ್ಕ ಪಕ್ಕ ಕತ್ತಿ ಬೀಸುತ್ತಲೇ ಕುದುರೆಯಿಂದ  ಕೆಳಕ್ಕೆ ಬಿದ್ದಳು ವೀರಮ್ಮ. ಅವಳ ದೇಹ ಅವಳದೇ ರಕ್ತದ ಮಡುವಿನಲ್ಲಿ ಬಿದ್ದಿತ್ತು.  ಕೆಲವೇ ನಿಮಿಷಗಳಲ್ಲಿ ಕೆಳದಿಯ ಪಡೆ ನಿಶ್ಯೇಷವಾಯಿತು. 'ಕಾನುನೆಲೆ'ಯ ತುಂಬಾ ದಿಕ್ಕಾಪಾಲಾಗಿ ಹರಡಿಕೊಂಡು ಬಿದ್ದಿದ್ದ ಕೆಳದಿ ಹಾಗೂ ದೆಹಲಿ ಸೈನಿಕರ ಶವಗಳಿಂದಾಗಿ ಸಂಪೂರ್ಣ ವಾತಾವರಣವೇ ಬೀಭತ್ಸಕರವಾಗಿತ್ತು. ಮುಂದುವರೆದ ಔರಂಗಜೇಬನ ಮೊಘಲ್ ಸೇನೆ ಕೆಳದಿಗೆ ಹೋಗಿ ಅಲ್ಲಿಂದ ಬಿದನೂರಿನ ಕಡೆಗೆ ಸಾಗಿತು.

ಕಾನುನೆಲೆಯ ಯುದ್ಧ
         *****
  " ಮಹಾರಾಣಿಯವರೇ, ಇದೇ ಜಾಗದಲ್ಲಿ ವೀರಮ್ಮನವರು  ವೀರ ಗತಿಯನ್ನು ಪಡೆದದ್ದು. ಆ ತಾಯಿ ಭಾಗ್ಯಶಾಲಿ. ರಣರಂಗದಲ್ಲಿ ನಾಡಿನ ರಕ್ಷಣೆ ಮಾಡುತ್ತಲೇ ಅಸುನೀಗಿದರು. ಒಬ್ಬ ಸೈನಿಕನಾಗಿದ್ದರೂ ನನಗೆ ಆ ಭಾಗ್ಯ ಸಿಗಲೇ ಇಲ್ಲ" ಹೋರಾಟದಲ್ಲಿ ಗಾಯಗೊಂಡು ಬದುಕಿ ಉಳಿದ ಸೈನಿಕನೊಬ್ಬ ರೋಧಿಸುತ್ತಾ ಹೇಳಿದ. ಕಾನುನೆಲೆಯ ಆ ರಣಾಂಗಣವನ್ನು, ಕಾಡುಮೃಗಗಳಿಗೆ ಆಹಾರವಾಗಿ ಅರ್ದಂಬರ್ಧ ಉಳಿದಿದ್ದ ವೀರರ ಶವಗಳನ್ನು ನೋಡುತ್ತ ಗದ್ಗದ ಕಂಠದಲ್ಲಿ ಚೆನ್ನಮ್ಮ " ಔರಂಗಜೇಬನ ಸೈನ್ಯದಮೇಲೆ ವಿಜಯ ಸಾಧಿಸಿದೆವು. ಆದರೆ ವೀರಮ್ಮನನ್ನೂ, ಈ ವೀರ ಸೈನಿಕರನ್ನು ಉಳಿಸಿಕೊಳ್ಳಲು ಆಗಲೇ ಇಲ್ಲ. ದೇಶಕ್ಕೆ ಅಪಾಯ ಒದಗಿದಾಗ ಹೋರಾಡುತ್ತ ಮಡಿದ ಇವರು ಧನ್ಯರು.  ಇವರುಗಳ ಖಡ್ಗಾಗಾಥಕ್ಕೆ ಸಿಲುಕಿ ತತ್ತರಿಸಿದ್ದ ಔರಂಗಜೇಬನ ಸೈನ್ಯವನ್ನು ಗೆಲ್ಲುವುದು ನಮಗೇನೂ ಕಷ್ಟವಾಗಲಿಲ್ಲ. ಈ ವಿಜಯದ ನಿಜವಾದ ರೂವಾರಿಗಳು ಇವರೆ. ವೀರಮ್ಮನಂತಹ ವೀರ ಮಹಿಳೆಯಿರುವ ರಾಜ್ಯಕ್ಕೆ ಶತ್ರುಗಳು ಏನೂ ಮಾಡಲಾರರು. ರಾಜನಿಷ್ಠೆಯಿಂದ ಬದುಕಿ, ಮಡಿದ ವೀರಮ್ಮಳ ಪುತ್ರ ಬಸವಪ್ಪನಾಯಕ ಅನಾಥನಾಗಿದ್ದಾನೆ. ಆದರೆ  ನಾಡಿಗಾಗಿ ಮಡಿದ ಈ ವೀರ ವನಿತೆಯ ಪುತ್ರ ಅನಾಥನಾಗಿ ಇರಬಾರದು. ಸಂತಾನವಿಲ್ಲದ ನಾನು ಅವನನ್ನು ದತ್ತು ತೆಗೆದುಕೊಳ್ಳುತ್ತಿದ್ದೇನೆ. ಅಲ್ಲದೆ ರಾಜ್ಯ ರಕ್ಷಣೆಗಾಗಿ ಮಡಿದ ವೀರಮ್ಮಳ ಹಾಗೂ  ವೀರ ಸೈನಿಕರ ನೆನಪಿಗಾಗಿ, ಅವರ ತ್ಯಾಗ ಶೌರ್ಯದ ನೆನಪು ಚಿರಸ್ಥಾಯಿಯಾಗಿ ಇರುವಂತೆ ಈ ರಣಾಂಗಣದಲ್ಲಿಯೇ ಒಂದು ವೀರಗಲ್ಲನ್ನು ಸ್ಥಾಪಿಸುವ ತೀರ್ಮಾನ ಮಾಡಿದ್ದೇನೆ. ಕಾನುನೆಲೆಯ ಈ ಜಾಗಕ್ಕೆ ಬರುವ ಪ್ರತಿಯೊಬ್ಬರಿಗೂ ಇವರುಗಳ ಶೌರ್ಯ ಮತ್ತೆ ಮತ್ತೆ ಸ್ಮರಣೆಯಾಗುತ್ತ ಚಿರ ಪ್ರೇರಣೆಯಾಗಿ ಇರಬೇಕು" ಎಂದು ಜೊತೆಯಲ್ಲಿದ್ದ ಬಾಲಕ ಬಸವಪ್ಪನಾಯಕನ ತಲೆ ನೇವರಿಸುತ್ತಾ ಹೇಳಿದಳು.
                             *****
             ನೋಡಿ, ಭೂತಕಾಲದ ಗರ್ಭದಲ್ಲಿ ಏನೇನೆಲ್ಲ ಅಡಗಿರುತ್ತದೆ!   ಇಂದು ಕಾನಲೆಯ ರೈಲ್ವೆ ನಿಲ್ದಾಣದ ಈ ಪ್ರದೇಶದಲ್ಲಿ ಓಡಾಡುವ ಒಬ್ಬನಿಗೂ ಈ ವಿಷಯದ ಅರಿವೇ ಇಲ್ಲ. ಅಷ್ಟೇ ಅಲ್ಲ, ಇಂತಹದ್ದನ್ನು ಗುರುತಿಸುವ ಆಸಕ್ತಿ, ಕುತೂಹಲ ಯಾವುದೂ ಇಲ್ಲ. ಶೌರ್ಯ, ಸಾಹಸಗಳ ಸ್ಮರಣೆಗಾಗಿ ನಿಲ್ಲಿಸಿದ ಆ ವೀರಗಲ್ಲು ಇಂದು ಸುತ್ತಮುತ್ತಲಿನ ರೈತಾಪಿ ಜನರಿಗೆ ಕತ್ತಿ, ಕುಡುಗೋಲು ಮಸೆದು ಚೂಪಾಗಿಸುವ ಮಸೆಗಲ್ಲಾಗಿ ಬದಲಾಗಿದೆ. ತಾವು  ಭವ್ಯ ಇತಿಹಾಸದ ನೆತ್ತಿಯಮೇಲೆಯೇ ಕತ್ತಿ ಮಸೆಯುತ್ತಿದ್ದೇವೆ ಎಂಬ ಅರಿವೇ ಇಲ್ಲದೆ ಜನ ತಮ್ಮ  ಕತ್ತಿ- ಕುಡುಗೋಲು  ಮಸೆಯುತ್ತಾರೆ.  ಅದರ ' ಸರಕ್....ಸರಕ್' ಸದ್ದಿನ ನಡುವೆ ವೀರಗಲ್ಲಿನ ರೋಧನ ಯಾರಿಗೂ ಕೇಳುವುದೇ ಇಲ್ಲ.
          
( ನನ್ನ ಕಾನಲೆಯ ರೈಲ್ವೇ ನಿಲ್ದಾಣದ ಬಳಿ ಒಂದು ವೀರಗಲ್ಲು/ಮಾಸ್ತಿಗಲ್ಲು ಇದೆ. ಅದರ ಇತಿಹಾಸ ತಿಳಿದವರು ಯಾರೂ ಇಲ್ಲ. ಆ ಕಲ್ಲನ್ನೇ ವಸ್ತುವಾಗಿಟ್ಟುಕೊಂಡು  ಈ  ಕಾಲ್ಪನಿಕ ಕಥೆ ಬರೆದಿದ್ದೇನೆ)
ಚಿತ್ರಕೃಪೆ:ಗೂಗಲ್

ಕಾಮೆಂಟ್‌ಗಳು

  1. ಕಲ್ಪನೆಯಾದರೂ ಸರಿ..
    ಅದ್ಭುತವಾಗಿ ಬರೆದ ಬರಹ ಇದು.
    ಮೆಚ್ಚಿದೆ.

    ಪ್ರತ್ಯುತ್ತರಅಳಿಸಿ
  2. ಧನ್ಯವಾದಗಳು. ..ಕಲ್ಪನೆಗೆ ಪೂರಕವಾದ ಇತಿಹಾಸ ಇದ್ದದ್ದು ಅದೃಷ್ಟ

    ಪ್ರತ್ಯುತ್ತರಅಳಿಸಿ
  3. ತುಂಬಾ ಸೊಗಸಾಗಿದೆ ಸರ್,, ನಿಮ್ಮ ಇತಿಹಾಸ ಪ್ರಜ್ಞೆ ಜೊತೆಗೆ ಬಳಸಿದ ಭಾಷೆ, ಶ, ಕತೆ ಹೆಣೆಯುವ ಶೈಲಿ ಅದ್ಭುತ ಸರ್..ವಂದನೆಗಳು

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬೆಳಕು ಬಿದ್ದೊಡನೆ (ಕಥೆ )

ಇಬ್ಬಗೆಯ ನೀತಿ ಏಕೆ?