ಪೋಸ್ಟ್‌ಗಳು

ಜಿ ವಿ ಅತ್ರಿಯ ನೆನಪಿನಲ್ಲಿ...

ಇಮೇಜ್
ಗಣೇಶ ವಿಜಯ್ ಕುಮಾರ್ ಅತ್ರಿ ಎನ್ನುವ ಹೆಸರನ್ನು ಕೇಳಿದವರು ಅಷ್ಟೊಂದು ಇರಲಿಕ್ಕಿಲ್ಲ. ಆದರೆ ಅದೇ ಹೆಸರನ್ನೇ ಚಿಕ್ಕದಾಗಿ 'ಜಿ ವಿ ಅತ್ರಿ' ಅಂದ ತಕ್ಷಣ ಕನ್ನಡ ನಾಡಿನ ಸಂಗೀತ ಪ್ರೇಮಿಗಳ ಕಣ್ಮುಂದೆ ಎತ್ತರದ ನಿಲುವಿನ, ಹೊಳೆಯುವ ಕಂಗಳ,  ನಗುಮುಖದ ಆ ಯುವಕನ ಚಿತ್ರ ಹಾದು ಹೋಗುತ್ತದೆ.  ಅತ್ರಿಯವರ ಮಧುರ ಕಂಠದಿಂದ ಮೂಡಿಬಂದ ಹಾಡುಗಳೆಷ್ಟೋ ಕಿವಿಯಲ್ಲಿ ಅನುರಣನಗೊಳ್ಳುತ್ತವೆ.       1964ರ ಮೇ 21ರಂದು ಜನಿಸಿದ ಅತ್ರಿ ಈಗ ನಮ್ಮೊಡನೆ ಇದ್ದಿದ್ದರೆ 53 ವರ್ಷದವರಾಗಿರುತ್ತಿದ್ದರು.  ಬಾಲ್ಯದಿಂದಲೇ ಸಂಗೀತದಲ್ಲಿ ಆಸಕ್ತಿಹೊಂದಿದ್ದ ಅತ್ರಿ ಸಂಗೀತ ಕ್ಷೇತ್ರದಲ್ಲಿ ಮಿಂಚಿನಂತೆ ಬಂದು ಮರೆಯಾಗಿ ಹೋದವರು.  2000ನೇ ಇಸವಿಯ ಎಪ್ರಿಲ್ 30ರಂದು ಶೃಂಗೇರಿಯಲ್ಲಿ ತುಂಗಾ ನದಿಯಲ್ಲಿ ಸ್ನಾನಮಾಡುವಾಗ ನಡೆದ ದುರಂತದಲ್ಲಿ ಅತ್ರಿ ಪತ್ನಿ ಹಾಗೂ ಪುತ್ರ ಸೇರಿದಂತೆ  ಕುಟುಂಬದ ಐದು ಜನ ಸದಸ್ಯರೊಂದಿಗೆ ಮುಳುಗಿ ಅಸುನೀಗಿದರು. ಈ ದುರಂತ ಸಂಭವಿಸುವಾಗ ಅವರಿಗಿನ್ನೂ 36ರ ಎಳೆ ವಯಸ್ಸು.  ಆದರೆ ಆ ಹೊತ್ತಿಗಾಗಲೇ ಅತ್ರಿಯವರ 200ಕ್ಕೂ ಹೆಚ್ಚು  ಆಡಿಯೋ ಕೆಸೆಟ್ಗಳು ಬಿಡುಗಡೆಯಾಗಿದ್ದವೆಂದರೆ ಅವರು ಅದಿನ್ನೆಂತಹ ಪ್ರತಿಭೆಯಾಗಿದ್ದರು! ಸಂಗೀತ ಜಗತ್ತಿಗಾದ ನಷ್ಟ ಅದಿನ್ನೆಂತದ್ದು!!   ಬೆಂಗಳೂರಿನ ಶೇಷಾದ್ರಿ ಗವಾಯಿಯವರಲ್ಲಿ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಅಭ್ಯಸಿಸಿದ್ದ ಅತ್ರಿ ಸುಗಮ ಸಂಗೀತದ ಕ್ಷೇತ್ರದ ಕಡೆ ವಿಶೇಷ ಗಮನ ಹರಿಸಿದ್ದರು. ತಮ್ಮ ಧ್ವನಿಯ

ಕಳೆದು ಹೋಯಿತು..

ಇಮೇಜ್
ಅಂದು ತಾಷ್ಕಂಟಿನಲಿ ಕಳೆದುಕೂಂಡೆವು ನಾವು ಅತಿ ವಿರಳ, ಬಹು ಸರಳ ರತ್ನವೊಂದ. ವರುಷ ಐವತ್ತೊಂದು ಕಳೆದು ಹೋದರು ಕೂಡ  ಪಡೆಯದಾದೆವು ಮರಳಿ ಅಂತದ್ದೊಂದ. ಸಾಮಾನ್ಯರಲ್ಲಿ ಅತಿ ಸಾಮಾನ್ಯನಾಗಿ ಎತ್ತರದ ಪದವಿಯಲಿ ಈ ಜನಾನುರಾಗಿ ಕುಳಿತು ಆಳಿದರು ಹದಿನೇಳು ತಿಂಗಳು ನೆನಪಾಗಿ ಅರಳುವುದು ಸಂತಸದಿ ಕಂಗಳು ಶತ್ರುಗಳು ಬಂದು ಮುತ್ತಿಗೆಯ ಹಾಕಿದರು ಒಂದಿನಿತು ಕೂಡ ಅಳುಕಲಿಲ್ಲ ಇವರು ಆಯುಧಕೆ ಆಯುಧದೆ ಕೊಡುವೆವುತ್ತರವೆಂದು ಸಾರಿದರು ಅತಿಘೋರ ಸಮರವಂದು ದೇಶದೊಳಿತಿಗೆ ಮಾಡಿ ಉಪವಾಸವೆಂದು ತಮ್ಮಿಂದಲೇ ಅದನು ಜಾರಿಯಲಿ ತಂದು ಗೆದ್ದರು ದೇಶ ವಾಸಿಗಳ ಹೃದಯ ಎಂದೆಂದಿಗೂ ಅದುವೆ ಅವರಾಲಯ ವಾಮನಾಕಾರದಲಿ ಕಣ್ಣ ಕೋರೈಸುವುದು ಸರಳತೆಯ ಹಿಂದಿರುವ ದಿವ್ಯ ಪ್ರಕಾಶ ಪಾದಕೆರಗಿ ಒಮ್ಮೆ ನಮಿಸಬೇಕಿದೆ ಅದಕೆ ಎಂದಾದರೊಂದುದಿನ ಸಿಕ್ಕರವಕಾಶ. ( ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ೫೨ನೇ ಪುಣ್ಯ ತಿಥಿ: ದಿನಾಂಕ ೧೧-೦೧-೨೦೧೮)

ಕಾಲ-ಯಾನ

ಕಣ್ಣಿಗೆ ಕಾಣದೆ ಸಾಗುತಲಿರುವ ಅದೃಶ್ಯ ಪಯಣಿಗ ಕಾಲ ಸಾಗಿದೆ ಇಲ್ಲಿಂದಲ್ಲಿಗೆ ಆದರೂ ಇಲ್ಲ ಕಾಲೂ ಬಾಲ. ನೂರಾಸೆಗಳ ಕುದುರೆಯ ಹತ್ತಿ ಹಿಡಿತವೆ ಇಲ್ಲದೆ ಸಾಗುತಲಿಹೆವು ಸರಿಯುತಲಿಹ ಈ ಕಾಲದ ಜೊತೆಯಲೆ ಎತ್ತೆತ್ತೆತ್ತಲೊ ಹೋಗುತಲಿಹೆವು. ಕಾಲದ ಜೊತೆಯಲೆ ಕಾಲವ ಕಳೆದು ಕಳೆದೇ ಹೋದರೂ ನಾವು ಈ ಕಾಲದ ಕಾಲಿಗೆ ಸುಸ್ತೂ ಇಲ್ಲ ಕಾಡುವುದಿಲ್ಲ ನೋವು ನಿಲ್ಲದೆ ಸಾಗುತ ಹೋಗುವುದೆಲ್ಲಿಗೆ ? ನಿಲ್ಲಯ್ಯ ನೀ ಕೊಂಚ ಎಂದರೂ ಕಾಲಕೆ ನಿಲುಗಡೆಯಿಲ್ಲ ಯಾಕೋ ಈ ದಾವಂತ!?

ಎದೆಯೊಳಗಿನ ಮಳೆ.....

ಭೋರ್ಗರೆವ ಮಳೆ ನನ್ನೊಳಗೆ ಬೆಚ್ಚನೆ ಮುಚ್ಚಿಹ ಪದರನು ಸಡಿಲಿಸಿ ಒಳಗಣ ನೆನಪನು ಕೆದಕುತಿದೆ ನೂರಾಸೆಯ ಒಡಲನು ತಟ್ಟುತಿದೆ ಭಿರುಬೀಸಿನ ಈ ಮಳೆಯ ಆರ್ಭಟಕೆ ಮನದ ಸಂಯಮವೆ ಹಾರುತಿದೆ ಸಶಕ್ತವಲ್ಲದ ಕದವನು ಒಡೆದು ಮನದೊಳಗೆಯೆ ಜಲ ನುಗ್ಗುತಿದೆ ತಲೆ ಎತ್ತಿದ ಹಳೆ ನೆನಪುಗಳೆಲ್ಲ ಹೊಸದೆಂಬಂತೆಯೆ ತೋರುತಿವೆ ಬಣ್ಣ ಬಣ್ಣದಲಿ ಕಂಗೊಳಿಸುತ ಇವು ರಂಗಿನ ಲೋಕವ ಸೃಷ್ಟಿಸಿವೆ ನೆನಪುಗಳಾಳದ ಬೇರಿನ ಅಂಚಲಿ ಆಸೆಗಳೆಷ್ಟೋ ಚಿಮ್ಮುತಿವೆ ಚಿಮ್ಮುವ ಆಸೆಯ ಹೊಮ್ಮುವ ಪ್ರವಾಹ ನನ್ನನೆ ಎಲ್ಲಿಗೊ ಒಯ್ಯುತಿದೆ.

ಮಧುರ ನೆನಪಲಿ....

ಮರೆತೆ ಹೋಗದು ಭಾವಕೊಲಿದಿಹ ಮಾತಿಗೊಲಿಯದ ಪದಗಳು ಸ್ವಚ್ಛವಾಗಿಯೆ ಮೂಡಿ ಬಂದಿಹ ನುಡಿಯಲಾಗದ ನುಡಿಗಳು ಮೌನದಲಿ ಸವಿ ಸವಿಯಬೇಕಿಹ ಸಿಹಿಯ ಮೀರಿದ ಸಿಹಿಯದು ಕಿವಿಯ ತಲುಪದು ಹೃದಯ ಕೇಳುವ ಹೃದಯಗಾನದ ಸವಿಯದು ಯಾವ ಕಾರಣವೆಂಬುದಿಲ್ಲದೆ ಮೂಡಿ ಬಂತೆಲೆ ಸುಮ್ಮನೆ ಬಂದು ಹೋಗುತ ನೀಡಿ ಹೋಗಿದೆ ಮರೆಯಲಾರದ ನೆನಪನೆ ಇಂದು ಕುಳಿತೆಡೆ, ಒರಗಿ ಕೊಂಡೆಡೆ ನೆನಪಾಯ್ತು  ಆ ಹಿತ ಒಮ್ಮೆಲೆ ನುಡಿಯಲಾರದೆ ಪದಗಳಲಿ ಹಿತವನು ನಗು ನಗುವೆ ಸುಕಾಸುಮ್ಮನೆ

ರಂಗ ವಿಚಾರ (ಕಥೆ)

ಇಮೇಜ್
        'ಶ್ರೀ......ಗುರುಗಣಾಧಿಪತಯೇ......... ನಮಃ....... ಸಕಲ ಕಾರ್ಯ........ವಿಜಯೀ ಭವ..........' ಕಂಚಿನ ಕಂಠದಲ್ಲಿ ಈ ಗಾನ  ಕೇಳಿಬರುತ್ತಲೇ ಗುಜುಗುಜು ಸದ್ದಿನ ಜನಸ್ತೋಮವೆಲ್ಲ ಸ್ತಬ್ಧವಾಯಿತೆಂದೇ ಅರ್ಥ.  ಆ ಧ್ವನಿಗೆ  ಮಂತ್ರ ಮುಗ್ಧನಾಗದ ಯಕ್ಷಗಾನ ಪ್ರೇಮಿಯೇ ಇಲ್ಲ. ಆ ಅದ್ಭುತ ಕಂಠವನ್ನು ಆಲಿಸದ ಯಕ್ಷಪ್ರೇಮಿ ಯಾರಾದರೂ ಇದ್ದಾನೆಂದು ಹೇಳಿದರೆ ಆತ ನಿಜವಾದ ಯಕ್ಷಾಭಿಮಾನಿಯೇ ಅಲ್ಲ ಎನ್ನುವುದು ನನ್ನ ಅಭಿಮತ. ಎತ್ತರದ ಧ್ವನಿಯಲ್ಲಿ ಒಂದು ಸ್ವಲ್ಪವೂ ಕೊಂಕಿಲ್ಲದಂತೆ ಹಾಡುತ್ತಾ ವಿವಿಧ ಮಜಲುಗಳಲ್ಲಿ ತೆರೆದುಕೊಳ್ಳುವ  ಆ ಶೈಲಿಯೇ ಅನುಪಮ. ಯಕ್ಷಲೋಕದ ಹಲವು ತಾರೆಗಳಲ್ಲಿ ಈ ಧ್ವನಿಯ ಗಾರುಡಿಗನನ್ನು ದ್ರುವತಾರೆ ಎಂದು  ಕರೆಯುವುದರಲ್ಲಿ ಯಾವುದೇ ಅತಿಶಯ ಇಲ್ಲ ಎಂಬುದು  ಅವರ ಭಾಗವತಿಕೆಯನ್ನು ಕೇಳಿದ ಪ್ರತಿಯೊಬ್ಬನಿಗೂ ಅನ್ನಿಸುವ ಪ್ರಾಮಾಣಿಕ ಅನಿಸಿಕೆ. ನಾನು ಯಾರ ಬಗ್ಗೆ ಬರೆಯುತ್ತಿದ್ದೇನೆ ಎಂದು ಈಗಾಗಲೇ ತಿಳಿದಿರಬೇಕಲ್ಲ...ಹೌದು ನಾನು ಬರೆಯುತ್ತಿರುವುದು  ಗುಜ್ಜೂರು ರಾಮ ಭಂಡಾರಿಯವರ ಬಗ್ಗೆಯೇ.              ನನಗೆ ಯಕ್ಷಗಾನದ ಖಯಾಲಿ ತುಂಬಾ ಇದೆ. ಆಗೀಗ ಅಲ್ಲಿಲ್ಲಿ ಸಣ್ಣ ಪುಟ್ಟ ವೇಷಗಳನ್ನು ಹಾಕಿದ ಉದಾಹರಣೆಗಳೂ ಇವೆ. ಈ ಘಟ್ಟದ ಕೆಳಗಿನ ಪ್ರದೇಶದವರಿಗೆ ಯಕ್ಷಗಾನದಲ್ಲಿ ಆಸಕ್ತಿಯಿರುವದು ಒಂದು ವಿಶೇಷವೆನಲ್ಲ. ಹಾಗಾಗಿ ನನಗೆ ಯಕ್ಷಗಾನದಲ್ಲಿ ಆಸಕ್ತಿ ಇರುವುದರಲ್ಲಿ ದೊಡ್ಡಸ್ತಿಕೆಯೇನೂ ಇಲ್ಲ. ನನ್ನ ಊರಿನ ಆಸ

ಬೆಳಕು ಬಿದ್ದೊಡನೆ (ಕಥೆ )

ಇಮೇಜ್
      ಸು ತ್ತಲೂ ದಟ್ಟ ಕಾಡು. 'ಟಿರ್..ಟಿರ್....ಟಿರ್...ಟಿರ್' ರಸ್ತೆಯ ಅಕ್ಕಪಕ್ಕದ ಮರಗಳಿಂದ ಹುಳಗಳು ಮಾಡುತ್ತಿದ್ದ ಸದ್ದು ರಾತ್ರಿಯ  ಮೌನವನ್ನು ಸೀಳಿ ಕಿವಿಗೆ ತಾಗುತ್ತಿತ್ತು.  ಕಾಡಿನ ಮಧ್ಯೆ ಅಂಕುಡೊಂಕಾಗಿ ಹಾದುಹೋಗಿದ್ದ ನಿರ್ಜನವಾದ ಕಚ್ಚಾ ರಸ್ತೆಯಲ್ಲಿ  ಅವರಿಬ್ಬರೂ ಸರಸರನೆ ಹೆಜ್ಜೆ ಹಾಕುತ್ತಾ ಮುಂದೆ ಸಾಗುತ್ತಿದ್ದರು. ತುಂಬಾ ದೂರದಿಂದ ನಡೆಯುತ್ತಿದ್ದುದರಿಂದ ಆ ತಂಗಾಳಿ ತೀಡುತ್ತಿದ್ದ ವಾತಾವರಣದಲ್ಲೂ ಅವರ ಮೈಯೆಲ್ಲ ಬೆವರಿತ್ತು. "ಇನ್ನೆಷ್ಟು ದೂರ ನಡೀಬೇಕು?" ನಡೆನಡೆದು ಆಯಾಸಗೊಂಡಿದ್ದ ಲಕ್ಷ್ಮಣ ಕೇಳಿದ. "ಇನ್ನು ಸ್ವಲ್ಪವೇ ದೂರ, ಮನೆ ಬಂದೇ ಬಿಡುತ್ತದೆ" ಈಗಾಗಲೆ ಮೂರು ನಾಲ್ಕು ಬಾರಿ ಹೇಳಿದ್ದನ್ನೇ ಮತ್ತೆ ಹೇಳಿದ ಮಂಜಯ್ಯ. "ಇದನ್ನೇ ಆವಾಗಿನಿಂದ ಹೇಳುತ್ತಾ ಇದ್ದೀಯ. ನಿನಗಾದರೂ ಗೊತ್ತಿದೆಯೋ ಇಲ್ವೋ ನಿಜವಾಗಿಯೂ ಎಷ್ಟು ದೂರ ಅಂತ" ಕೇಳಿದ  ಲಕ್ಷ್ಮಣ.  " ಹಗಲಲ್ಲಾದರೆ ದಾರಿ ಸಾಗಿದ್ದೇ ಗೊತ್ತಾಗೋದಿಲ್ಲ ಎಷ್ಟು ದೂರ ಬಂದು ತಲುಪಿದ್ದೀವಿ ಅಂತ ಆರಾಮಾಗಿ ಗೊತ್ತಾಗ್ತದಪ್ಪ. ಈ ರಾತ್ರಿಯಲ್ಲಿ ಹೇಗೆ ಹೇಳೋದು? ಕೈಯ್ಯಲ್ಲಿರೊ  ಲಾಟೀನಿನ ಬೆಳಕಲ್ಲಿ ಮುಂದೆರಡು ಮಾರು ಬಿಟ್ಟು ಬೇರೆನು ಕಾಣ್ತದೆ? ಅಂದಾಜು ಮೇಲೆ ಮಾತಾಡ್ತಾ ಇದ್ದೀನಿ.   ಬಾ ಇಲ್ಲೇ ಸ್ವಲ್ಪ ದೂರ ಹೋದರೆ ಆಯ್ತು" ಸರಸರನೆ ನಡೆಯುತ್ತಲೇ ಇರುವ ಸಮಸ್ಯೆಯನ್ನು ಹೇಳಿದ ಮಂಜಯ್ಯ.         ಲಾಟೀನಿನ ಬೆಳಕನ್