ದುರ್ಗಾಸ್ತಮಾನ:ಅಸ್ತಮಿಸಿದ ದುರ್ಗದಲ್ಲಿ ಉದಯಿಸಿದ ಕೃತಿಸೂರ್ಯ
ಇತಿಹಾಸವೇ ಹಾಗೆ; ಸತ್ಯದ ಸುತ್ತಲೂ ಹಲವಾರು ಅಂತೆ ಕಂತೆಗಳು, ಉದ್ದೇಶ ಪೂರ್ವಕ ತಿರುಚುಗಳು, ತಪ್ಪಾಗಿ ಅರ್ಥೈಸಿ ಮಾಡಿದ ಅನರ್ಥಗಳು ಇವೆಲ್ಲ ಗುರುತಿಸಲು ಆಗದಷ್ಟು ಕರಗಿ ಒಂದಾಗಿ ಇತಿಹಾಸವೊಂದು ರಚನೆಯಾಗಿರುತ್ತದೆ. ಇತಿಹಾಸದ ಅಧ್ಯನಯನದ ಹೆಸರಿನಲ್ಲಿ ಇದನ್ನೇ ನಾವು ತಲೆಮಾರಿನಿಂದ ತಲೆಮಾರಿಗೆ ವರ್ಗಾಯಿಸುತ್ತಿರುತ್ತೇವೆ. ಆ ನಂತರ ಹೀಗೆಲ್ಲ ಒಂದುಗೂಡಿದ ಅಂಶಗಳನ್ನು ಪ್ರತ್ಯೇಕಿಸುತ್ತಾ, ಅಧ್ಯಯನ ನಡೆಸುತ್ತಾ ವಾದ ವಿವಾದ ಮಾಡುತ್ತ,ಚರ್ಚೆ ನಡೆಸುತ್ತ ವಿದ್ವಾಂಸರೆನಿಸಿಕೂಂಡವರು ತಮ್ಮ ಅಸ್ತಿತ್ವವನ್ನು ಸಾಬೀತು ಮಾಡುತ್ತಲೇ ಇರುತ್ತಾರೆ. ಐತಿಹಾಸಿಕ ಘಟನೆಗಳಿಗೆ ಕಾರಣರಾದವರಷ್ಟೆ ನಿಜವಾದದನ್ನು ಕಣ್ಣೆದುರಿಗಿರಿಸಬಲ್ಲರು. ಆದರೆ ಅವರೇ ಕಣ್ಣೆದುರಿಗಿಲ್ಲವೆಂದಾದಾಗ ಅವರೊಡನೆ ವಾಸ್ತವವೂ ಮರೆಯಾಗಿ ಕಲ್ಪನೆಗಳನ್ನೇ ವಾಸ್ತವವಾಗಿಸುವ ನಿರಂತರ ಪ್ರಯತ್ನಗಳು ಹೊಟ್ಟೆಪಾಡಾಗಿ ನಡೆಯುವುದು ತಪ್ಪಿಸಲು ಸಾಧ್ಯವಿಲ್ಲವೇನೋ.
ವಿಷಯ ಹೀಗಿದ್ದರೂ ಕೆಲವರು ಇತಿಹಾಸದ ಯಾವುದೋ ಘಟನೆಯಿಂದ ಪ್ರಭಾವಿತರಾಗಿ, ಅದನ್ನು ತಮ್ಮ ಹೃದಯದಲ್ಲಿ ಧರಿಸಿ, ಇರುವ ದಾಖಲೆ ಸಾಕ್ಷಿಗಳನ್ನು ಪರಿಶೀಲಿಸಿ ನಿಜವನ್ನು ಪ್ರಕಟಪಡಿಸಲು ಹೆಣಗುತ್ತಿರುತ್ತಾರೆ. ಹೀಗೆ ಸತ್ಯವನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಪ್ರಕಟಪಡಿಸುವುದರ ಹಿಂದೆ ಆಳವಾದ ಪ್ರಯತ್ನ ಬೇಕಿರುವಾಗ , ಇತಿಹಾಸದ ಮಗ್ಗುಲೊಂದನ್ನು ಕಾದಂಬರಿಯ ರೂಪದಲ್ಲಿ ತರುವುದು ಅದಿನ್ನೆಷ್ಟು ಕಠಿಣ!....
ಅಂತಹದ್ದೊಂದು ಸಾರ್ಥಕ ಪ್ರಯತ್ನಕ್ಕೆ ಉದಾಹರಣೆ 'ದುರ್ಗಾಸ್ತಮಾನ'. ತ ರಾ ಸುಬ್ಬರಾಯರು ತಮ್ಮ ಹಲವು ಕಾದಂಬರಿಗಳಿಂದ ಜನಪ್ರಿಯರಾಗಿದ್ದರೂ ಕನ್ನಡ ಸಾರಸ್ವತ ಲೋಕದಲ್ಲಿ ಅವರನ್ನು ಅಮರಗೊಳಿಸಿದ್ದು ಚಿತ್ರದುರ್ಗದ ಕೊನೆಯ ದೊರೆ ವೀರಮದಕರಿ ನಾಯಕನ ಬಗೆಗೆ ಬರೆದ ಕಾದಂಬರಿ ದುರ್ಗಾಸ್ತಮಾನ. ಕಾದಂಬರಿಯೊಂದು ಕೇವಲ ಘಟನೆಗಳ ವಿವರಣೆಯಂತಿದ್ದರೆ ರುಚಿಸುವುದಿಲ್ಲ. ಅಲ್ಲಿರುವ ಪಾತ್ರಗಳ ಜೀವಂತಿಕೆಯಿಂದ ಘಟನೆಗಳು ಜರುಗಿ ಕಥೆ ಮುನ್ನಡೆಯುತ್ತಿರಬೇಕು. ಆ ಅನುಭವವನನ್ನು ನೀಡುವ ಕಾದಂಬರಿ ದುರ್ಗಾಸ್ತಮಾನ . ಇತಿಹಾಸದ ಹೆಸರುಗಳಾಗಿ ನಾವು ಕೇಳಿದವರೆಲ್ಲ ಇಲ್ಲಿ ತಮ್ಮ ವ್ಯಕ್ತಿತ್ವಗಳಿಂದ ಕಾಣಿಸಿಕೊಳ್ಳುತ್ತಾರೆ. ಓದುಗ ಪಾತ್ರಗಳ ಪ್ರತಿಯೊಂದು ನಡೆನುಡಿಗೂ ಪ್ರತ್ಯಕ್ಷ ಸಾಕ್ಷಿಯಾಗುತ್ತಾನೆ.
ತ ರಾ ಸು ಅವರು ಕಾದಂಬರಿಯ ಮುನ್ನುಡಿಯಲ್ಲಿಯೆ ತಾವು ಸಾಧ್ಯವಾದಷ್ಟರ ಮಟ್ಟಿಗೆ ಇತಿಹಾವನ್ನೇ ಅನುಸರಿಸಿದ್ದೇನೆ. ಯಾವುದೆಲ್ಲ ದಾಖಲೆಯಿಲ್ಲದ ಕಪೋಲ ಕಲ್ಪನೆ ಎಂದೆನಿಸುತ್ತದೆಯೋ ಅವೆಲ್ಲವನ್ನೂ ಕೈ ಬಿಟ್ಟಿದ್ದೇನೆ ಎನ್ನುತ್ತಾರೆ. ಅದರಲ್ಲಿ ವಿಶೇಷವಾಗಿ ಕಳ್ಳಿ ನರಸಪ್ಪ ಚಿತ್ರ ದುರ್ಗಕ್ಕೆ ದ್ರೋಹ ಮಾಡಿದ ಎನ್ನುವ ಮಾತನ್ನು ಸಾರಾಸಗಟಾಗಿ ತಿರಸ್ಕರಿಸುವ ತ ರಾ ಸು ಆತನ ರಾಜ್ಯ ನಿಷ್ಠೆಗೆ ಯಾವುದೇ ಸಂದೇಹ ವ್ಯಕ್ತಪಡಿಸುವುದಿಲ್ಲ. ಹೀಗಾಗಿ ಆತ ದುರ್ಗಕ್ಕೆ ದ್ರೋಹ ಬಗೆಯಬೇಕಾದ ಸಂದರ್ಭ ಬಂದಾಗ ವಿಷಕುಡಿದು ಪ್ರಾಣ ಬಿಡುವಂತೆ ಚಿತ್ರಿಸುತ್ತಾರೆ. ಇಂತಹದೇ ಇನ್ನೊಂದು ಅಂಶ ಮದಕರಿನಾಯಕ ಶತ್ರು ಸೈನಿಕರ ತಲೆಯ ಆಸನದ ಮೇಲೆ ಕುಳಿತು ರುಧಿರಾಭಿಷೇಕ ಮಾಡಿಸಿಕೊಂಡ ಎಂಬ ಮಾತು.ಇದನ್ನೂ ಪುರಸ್ಕರಿಸದೆ ತಳ್ಳಿ ಬಿಡುತ್ತಾರೆ. ಆದರೂ ಇದರ ಬಗ್ಗೆ ಎಲ್ಲೂ ವಿರೊಧವಿದ್ದಂತೆ ಕಾಣುವುದಿಲ್ಲ. ಏಕೆಂದರೆ ತರಾಸು ಅವರು ಲಭ್ಯ ದಾಖಲೆಗಳ ಪರಿಶೀಲನೆಯ ಸಾಕ್ಷಿಯೊಂದಿಗೇ ಕಾದಂಬರಿ ಬರೆದಿರುವುದೇ ಕಾರಣವಾಗಿದೆ.
ಕಾದಂಬರಿಯನ್ನು ಓದಿ ಮುಗಿಸಿದಾಗ ಹೈದರಾಲಿಯ ರಾಜ್ಯದಾಹ ಹಾಗು ಕುಠಿಲ ನೀತಿಯ ವ್ಯಕ್ತಿತ್ವದ ಪ್ರತಿರೂಪವಾಗಿ ಕಾಣುವ ಆತನ 'ಲವಂಡಿಕೆ' ಎನ್ನುವ ಉದ್ಘಾರ ಮನಸ್ಸಿನಲ್ಲಿ ನೆಲೆ ನಿಲ್ಲುತ್ತದೆ. ಕಾದಂಬರಿಯ ಪ್ರಾರಂಬದಲ್ಲಿ ಕಾಣಿಸಿಕೊಳ್ಳುವ ಓಬವ್ವ ನಾಇಗತಿ, ಕಳ್ಳಿ ನರಸಪ್ಪ, ಮುನಿಸಿಕೂಂಡು ಹೋಗುವ ಮುರುಘಾ ಶರಣರು, ಕೈ ಕಳೆದುಕೊಂಡರೂ ಮಾಡಿದ ಸಹಾಯದ ನೆನಪು ಕಳೆದುಕೊಳ್ಳದ ಸರ್ದಾರ್ ಖಾನ್, ಆಶ್ರಯದಾತನ ಉಳಿವಿಗಾಗಿ ಜೀವನೀಡುವ ಗುದುಗುತ್ತೆ. ಬೇರೊಬ್ಬರ ಸೊತ್ತಾಗಲು ಬಯಸದೆ ನೀರಿನ ಹೊಂಡಕ್ಕೆ ಹಾರಿ ಜೀವ ಕಳೆದುಕೊಳ್ಳುವ ಮದಕರಿನಾಯಕನ ಹೆಂಡತಿಯರು, ಶತ್ರಗಳ ತಲೆಒಡೆದು ರಾಜ್ಯ ಕಾಯ್ದ ಓಬವ್ವ, ಹೀಗೆ ಹಲವು ಪಾತ್ರಗಳು ಕಥೆಯ ಓಘಕ್ಕೆ ಅನುವು ನೀಡುವುದಲ್ಲದೆ ವಿಭಿನ್ನ ವ್ಯಕ್ತಿತ್ವ ಹಾಗೂ ಮೌಲ್ಯಗಳ ಪ್ರತಿನಿಧಿಗಳಾಗಿ ಕಾಣಿಸಿಕೊಳ್ಳುತ್ತವೆ.
ತನಗೆ ಸೋಲು ಖಚಿತವೆಂದು ಗೊತ್ತಿದ್ದರೂ ಖಡ್ಗಹಿಡಿದು ರಣಕಹಳೆ ಮಾಡುತ್ತ ಯುದ್ದರಂಗಕ್ಕೆ ಹೊರಡುವ ಮದಕರಿನಾಯಕ ಶತ್ರು ಸೈನಿಕರ ರುಂಡ ಚೆಂಡಾಡುತ್ತಾನೆ. ಕೈ ಮೀರಿ ಹೋದ ಪರಿಸ್ತಿತಿಯಲ್ಲಿಯೂ ಕೆಚ್ಚೆದೆಯಿಂದ ಹೋರಾಡುವ ಆತನ ಮೇಲೆ ಮುಗಿಬಿದ್ದು ಕೊಚ್ಚುವ ಶತ್ರು ಸೈನಿಕರ ಘಾತಕ್ಕೆ ತನ್ನೊಂದು ತೋಳು ಕತ್ತರಿಸಿ ಬಿದ್ದು, ಶರೀರದ ತುಂಬೆಲ್ಲ ಖಡ್ಗಾಘಾತದಿಂದ, ಶತ್ರು ಸೈನಿಕರ ಗುಂಡಿನ ದಾಳಿಗೆ ಸಿಲುಕಿ ಜರ್ಜರಿತ ವಾಗಿದ್ದರೂ ಮುನ್ನುಗ್ಗಿ ಕೋಟೆಯ ಮೇಲೆ ಹಾರಾಡುತ್ತಿರುವ ಹೈದರಾಲಿಯ ದ್ವಜವನ್ನು ತೆಗೆದು ಹಾಕಿ ನೆಲಕ್ಕುರುಳುತ್ತಾನೆ.ನಂಬಿದವರು ಮಾಡಿದ ವಿಶ್ವಾಸದ್ರೋಹದ ಕಾರಣದಿಂದ ಪತನದ ಹಾದಿ ಹಿಡಿಯುವ ಮದಕರಿ ನಾಯಕನೊಡನೆ ಇದ್ದು ಇದನ್ನೆಲ್ಲ ಕಣ್ಣಾರೆ ಕಂಡೂ ಏನೂ ಮಾಡಲಾಗದೆ ಮಮ್ಮಲ ಮರುಗುವ ಸ್ಥಿತಿ ಓದುಗನದ್ದಾಗುತ್ತದೆ.
ಐತಿಹಾಸಿಕ ವಾಗಿ ನೋಡಿದರೆ ಮದಕರಿನಾಯಕ ಮರಣ ಹೊಂದಿದ ರೀತಿಯ ಬಗ್ಗೆ ಬೇರೆ ಬೇರೆ ಅಭಿಪ್ರಾಯಗಳಿದೆಯಾದರೂ, ಆತ ಯಾವ ಕ್ಷಣದಲ್ಲೂ ಹೈದರಾಲಿಗೆ ತಲೆಬಾಗಲಿಲ್ಲ-ಆತನ ಅಡಿಯಾಳಾಗಲಿಲ್ಲ ಎಂಬುದು ನಿರ್ವಿವಾದ. ಮದಕರಿ ನಾಯಕನ ಮರಣಾನಂತ ಚಿತ್ರದುರ್ಗವೇನೂ ವಿಜಯನಗರದಂತೆ ಮರೆಯಾಗಿ ಹೋಗಲಿಲ್ಲ. ಆದರೆ ಚಿತ್ರದುರ್ಗದ ಪಾಳೆಯಗಾರರ ವೀರ ಸ್ವಾಭಿಮಾನಿ ಆಳ್ವಿಕೆ ಮತ್ತೆಂದೂ ಕಾಣಲಿಲ್ಲ. ಹೀಗಾಗಿ ಮದಕರಿ ನಾಯಕನ ದುರಂತ ಅಂತ್ಯ 'ದುರ್ಗಾಸ್ತಮಾನ'ವೇ ಹೌದು.
670 ಪುಟಗಳ ಈ ಕಾದಂಬರಿಯನ್ನು ಮದಕರಿ ನಾಯಕನ ಬಗ್ಗೆ ಬರೆದರೂ ತ ರಾ ಸು ಅವರು ಮದಕರಿ ನಾಯಕನಿಗೆ ಸಲ್ಲದ ಹೀರೋ ಪಟ್ಟ ಕಟ್ಟಲು ಪ್ರಯತ್ನಿಸುವುದಿಲ್ಲ, ಬದಲಾಗಿ ಕಥೆಯೇ ನಾಯಕನಾಗಿರುವಂತೆ ನೋಡಿಕೋಳ್ಳುತ್ತಾರೆ. ಚಿತ್ರದುರ್ಗದ ಮಣ್ಣಿನ ಮಗನೇ ಆಗಿರುವ ತ ರಾ ಸು ಅವರಿಗೆ ಚಿತ್ರ ದುರ್ಗದ ನಾಯಕರ ಬಗ್ಗೆ ಅದರಲ್ಲಿಯೂ ಮದಕರಿ ನಾಯಕನ ಬಗ್ಗೆ ಅಭಿಮಾನವಿದ್ದರೂ ಅದು ಅಂಧಾಭಿಮಾನವಾಗಿಲ್ಲದಿರುವುದು ಕಾದಂಬರಿಯ ಜೀವಾಳ. ಕಾದಂಬರಿ ಓದಿ ಮುಗಿಸಿದಾಗ, ತ ರಾ ಸು ಅವರ ಅದ್ಭುತ ಬರವಣಿಗೆಯೇ ಹೀರೋ ಎಂಬುದು ಅರಿವಾಗುತ್ತದೆ.ಆ ಮೂಲಕ 'ದುರ್ಗಾಸ್ತಮಾನ'ವೇ ಹೀರೋ ಆಗುತ್ತದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ