ಸಾಗಿ ಬಂದ ತೀರ ( ಕಥೆ )

          ರತ್ಚಂದ್ರ  ಕಾಫಿ ಹೀರುತ್ತಾ ಕುರ್ಚಿಯಲ್ಲಿ  ಕುಳಿತಿದ್ದ ಬಲಗೈಯಲ್ಲಿ ಯಾವುದೋ ಪುಸ್ತಕ  ಇತ್ತು. ತುಂಬಾ ಆಳವಾಗಿ ಅದರಲ್ಲಿಯೇ ಮುಳುಗಿದ್ದ. "ಮಾಮ...ಮಾಮ...ಇಲ್ನೋಡು" ಕುಣಿ ಕುಣಿಯುತ್ತಾ ಬಂದ ಶಾಶ್ವತಿ ಶರತ್ಚಂದ್ರನ ತೊಡೆಯಮೇಲೆಯೇ ಕುಳಿತಳು. " ಇದೇನು ಪುಟ್ಟಿ, ಇದೆಲ್ಲಿಂದ ತಂದೆ ಲೋಟನ? ಅಮ್ಮ  ಏನಾದ್ರೂ ತರೊದಕ್ಕೆ ಲೋಟ ಕೊಟ್ಟು ಕಳಿಸಿದ್ರ" ಶರತ್ಚಂದ್ರ ಸಹಜವಾಗಿಯೇ ಕೇಳಿದ ಆಕೆಯನ್ನು ದಿಟ್ಟಿಸುತ್ತ. " ಇಲ್ಲ ಮಾಮ, ಇದು ನಂಗೆ ಬಹುಮಾನ ಬಂದ ಲೋಟ. ಇವತ್ತು ನಾನು ಹಾಡಲ್ಲಿ ಫಸ್ಟ್ ಬಂದೆ. ಅದಕ್ಕೆ ಕೊಟ್ಟಿದ್ದು" ಹೆಮ್ಮೆಯಿಂದ ತೋರಿಸುತ್ತ ಹೇಳಿದಳು. "ಹೌದ...! ಜಾಣೆ ನೀನು. ಯಾವಾಗಲೂ ಹೀಗೆ ಬಹುಮಾನ ತಗೋಳತಾನೇ ಇರಬೇಕು ನೀನು" ಆಕೆಯನ್ನು ಮುದ್ದಿಸುತ್ತ ಹೇಳಿದ. ಬಹುಮಾನವಾಗಿ ಬಂದ ಚಿಕ್ಕ ಲೋಟಕ್ಕೆ ಅವಳು ಪಡುತ್ತಿರುವ ಖುಷಿ ನೋಡಿ ಶರತ್ಚಂದ್ರನಿಗೂ ಖುಷಿಯಾಯಿತು. " ಹೋಗು, ಅಜ್ಜಿಗೆ ತೋರಿಸು ಹೋಗು"  ಎಂದು ಶರತ್ಚಂದ್ರ ಹೇಳುವುದರೊಳಗಾಗಿ ಶಾಶ್ವತಿ ಕೆಳಗಿಳಿದು ಅಡುಗೆಮನೆಯ ಕಡೆಗೆ ಓಡಿದಳು " ಅಜ್ಜೀ" ಎಂದು ಕೂಗುತ್ತ. 
       ಶರತ್ಚಂದ್ರ ಆಕೆಯ ಕಡೆಗೇ ನೋಡುತ್ತ ಮನಸ್ಸಿನಲ್ಲಿಯೇ ಅಂದುಕೊಂಡ  " ಎಷ್ಟು ಚುರುಕಿನ ಹುಡುಗಿ. ಸಾವಿರ ಮಾತು ಪಟಪಟ ಆಡ್ತಾನೇ ಇರ್ತಾಳೆ. ಹಾಡು ಶೇಡಿ ಅಂತೇನೇ ಇದ್ರೂ 'ನಾನು ನಾನು' ಅಂತ ಓಡಿ ಬರ್ತಾಳೆ. ಶಾಲೆಯಿಂದ ಬಂದವಳೇ ಮಾಮ ಎನ್ನುತ್ತ ಓಡಿ ಬಂದಳು ಅಂತಾನೇ ಅರ್ಥ. ಈ ಪೋಲಿಯೋ ಒಂದು ಅವಳ ಕಾಲನ್ನು  ತಿನ್ನದಿದ್ದಿದ್ದರೆ..... ಆದರೆ  ಆ ಅಂಗಊನತೆಯೇ ಇಲ್ಲ ಎನ್ನುವಂತೆ ಕುಣಿಯುತ್ತಾಳಲ್ಲ....." ಆಕೆಯ ಬಗೆಗಿನ ಶರತ್ಚಂದ್ರನ ಯೋಚನೆಯೆಲ್ಲ ಕೊನೆಗೆ ಆಕೆಯ  ಪೋಲಿಯೋ ಪೀಡಿತ ಕಾಲಿನ ಬಗ್ಗೆಯೇ ಬಂದು ತಲುಪುತ್ತಿತ್ತು.
            ಶಾಶ್ವತಿಯ ಬಗ್ಗೆ ಯೋಚಿಸುತ್ತ ಉಲ್ಲಸಿತನಾಗಿದ್ದ ಶರತ್ಚಂದ್ರನ ಮುಖ ಒಮ್ಮೆಲೆ  ಬದಲಾವಣೆಯಾಯಿತು. ಮುಖದಲ್ಲಿದ್ದ ಆ ನಗು ಮಾಯವಾಗಿ ಕಸಿವಿಸಿಯ ಲಕ್ಷಣಗಳು ಮೂಡಿದವು. ಶಾಶ್ವತಿ ಹೀಗೆ ಬಂದು ಬಹುಮಾನವನ್ನೋ ಮತ್ತೇನನ್ನೋ  ತೋರಿಸಿದಾಗ, ತನ್ನ ಸಾಧನೆಯ ಕಥೆ ಹೇಳಿದಾಗಲೆಲ್ಲ ಆ ಹಳೆಯ ನೆನಪು ಧುತ್ತೆಂದು ಅವನ ಸ್ಮೃತಿ ಪಟಲದಲ್ಲಿ ಮೂಡಿ ನಿಲ್ಲುತಿದ್ದವು. " ಆ ಮಗು ಇದ್ದಿದ್ದರೆ ಈಗ ಶಾಶ್ವತಿಯಷ್ಟೇ ದೊಡ್ಡದಿರುತ್ತಿತ್ತಲ್ಲ. ಈ ಶಾಶ್ವತಿಯಂತೆಯೇ ಕುಣಿ ಕುಣಿಯುತ್ತ ಇರಲು ಅವಳಿಗೂ ಆಗುತ್ತಿತ್ತು. ಪಕ್ಕದ ಮನೆಯ ಮಗು ಶಾಶ್ವತಿಯನ್ನ ನೋಡಿಯೇ ಇಷ್ಟು ಸಂತೋಷಪಡುತ್ತಿರುವ ನಾನು, ನನ್ನದೇ ಮಗಳನ್ನು ನೋಡಿ ಇನ್ನೆಷ್ಟು ಆನಂದಪಡುತ್ತಿದ್ದೆ!  ಆದರೆ ನಾನು ಮಾಡಿದ್ದೇನು.....ನನ್ನ ಹೃದಯದ ಮೇಲೆ  ಅಳಿಸಲಾಗದ ಬರೆ ನಾನೇ ಎಳೆದುಕೊಂಡೆ. ನನ್ನ ಉಸಿರಿರುವ ವರೆಗೂ ಕಾಡುವ  ನೋವನ್ನು  ನಾನೇ ಬರಮಾಡಿಕೊಂಡೆ....." ತನ್ನ ಮನಸ್ಸು ನುಡಿಯುತ್ತಿದ್ದ ಈ ಮಾತುಗಳನ್ನು ಕೇಳಿಸಿಕೊಳ್ಳುತ್ತಲೇ ಇದ್ದ ಶರತ್ಚಂದ್ರನ ಕಣ್ಣುಗಳಲ್ಲಿ ನೀರು ತುಂಬಿಕೊಂಡಿತು.
            ಸಾಮಾನ್ಯ ಕುಟುಂಬದಿಂದ ಬೆಳೆದು ಬಂದಿದ್ದ ಶರತ್ಚಂದ್ರ ಕಷ್ಟಪಟ್ಟು ಓದಿ,ಶಿವಮೊಗ್ಗದಲ್ಲಿ ಸಹಕಾರಿ ಬ್ಯಾಂಕಿನಲ್ಲಿ ಕೆಲಸಗಿಟ್ಟಿಸಿಕೊಂಡನೆಂಬಷ್ಟು ಹೊತ್ತಿಗೆ ತಾಳಗುಪ್ಪದಲ್ಲಿದ್ದ ತಂದೆ ತೀರಿಕೊಂಡರು. ತಂದೆ, ತಾಯಿಗಳಿಗೆ ಒಬ್ಬನೇ ಮಗನಾಗಿದ್ದನಲ್ಲದೆ ವಿಶೇಷ ಆಸ್ತಿಪಾಸ್ತಿಯೂ ಇರಲಿಲ್ಲ.  ಇದ್ದ ಚಿಕ್ಕ  ಭೂಮಿಯನ್ನೂ ಮಾರಿ ತಾಯಿ ಜಾನಕಿಯೊಂದಿಗೆ ಪೇಟೆಗೇ ಬಂದು  ವಾಸಿಸತೊಡಗಿದ. ಇನ್ನು ಸೈಟ್ ಖರೀದಿ, ಸ್ವಂತ ಮನೆ ಕಟ್ಟುವುದು, ಮದುವೆಯಾಗುವುದು ಹೀಗೆ ದೊಡ್ಡ ದೊಡ್ಡ ಜವಾಬ್ದಾರಿಗಳೆಲ್ಲ ಆತನ ಭುಜಗಳ ಮೇಲೆ ಇದ್ದವು. ಆತನ ನೌಕರಿಗೆ ಬರುತ್ತಿದ್ದ ಸಂಬಳದಿಂದಲೇ ಆತ ಇಷ್ಟನ್ನೂ ಮಾಡಿ ನಿಭಾಯಿಸಿ ತೋರಿಸಬೇಕಾದ ಅನಿವಾರ್ಯತೆ ಅವನಿಗಿತ್ತು. ಆ ಹೊತ್ತಿಗೇ ಅವನಿಗೆ ಕಾರ್ಗಲ್ ಹತ್ತಿರದ ಸಂಬಂಧ ಬಂದಿದ್ದು. ಆತನ ಪರಿಸ್ಥಿತಿ ತಿಳಿದರೂ ಜೀವನಕ್ಕೇನೂ ತೊಂದರೆ ಇಲ್ಲ ಎಂದಾದಮೇಲೆಯೇ ಸುಗುಣಳ ತಂದೆ ತಾಯಿ ಇವನಿಗೆ ಕನ್ಯೆಯನ್ನು ಧಾರೆ ಎರೆದು ಕೊಟ್ಟರು. ಬದುಕಿನ ಕಷ್ಟಸುಖಗಳ ಅರಿವು ಸುಗುಣಾಳಿಗೂ ಇದ್ದದ್ದರಿಂದ ಗಂಡ- ಹೆಂಡತಿ, ಅತ್ತೆ- ಸೊಸೆ ಸಂಬಂಧ ಹಿತವಾಗಿಯೇ ಇತ್ತು.
          ' ಟಿಂ ಟಿಣ ಟಿಣ ಟಿಂಗ್ ಟಿಂಗ್...ಟಿಂ ಟಿಣ ಟಿಣ ಟಿಂಗ್ ಟಿಂಗ್....' ಕಪಾಟಿನ ಪಕ್ಕದ ಸ್ವಿಚ್ನಲ್ಲಿ  ಚಾರ್ಜ್ ಮಾಡಲು ಇಟ್ಟಿದ್ದ ಮೊಬೈಲು  ಕೂಗತೊಡಗಿತು. ತನ್ನ ಯೋಚನೆಯಲ್ಲಿಯೇ ಕಳೆದು ಹೋಗಿದ್ದ ಶರತ್ಚಂದ್ರನಿಗೆ ಮೊಬೈಲ್ ಸದ್ದ ಕೇಳಿದಾಗ ಎಚ್ಚರವಾಯಿತು. ಕಣ್ಣೆದುರಿಗೆ ಶಾಶ್ವತಿ " ಟಾಟ ಮಾಮ..." ಎಂದು ಹೇಳಿ ಹೋದದ್ದನ್ನೂ ಆತ ಗಮನಿಸಿರಲಿಲ್ಲ. ಹತ್ತಿರ ಹೋಗಿ ಫೋನ್ ತೆಗೆದುಕೊಂಡ.  ಸುಧನ್ವನ ಫೋನು. ' ಹಲೋ....ಹೇಳು ಸುಧನ್ವ' ಎಂದು ಫೋನನ್ನು ಕಿವಿಗಿಟ್ಟು ಹೇಳಿದ. ' ಬಾವ...ಅಕ್ಕನಿಗೆ ಹೆರಿಗೆ ನೋವು  ಶುರು ಆಗಿದೆ ಅನ್ಸತ್ತೆ. ಸಾಗರಕ್ಕೆ ಕರ್ಕೊಂಡು ಹೋಗ್ತಾ ಇದ್ದೀವಿ. ನೀನು ತಕ್ಷಣ ಬಂದ್ರೆ ಒಳ್ಳೇದಿತ್ತು. ಡಾಕ್ಟ್ರ ಪ್ರಕಾರ ಇನ್ನೂ ಒಂದು ವಾರ ಲೇಟ್ ಆಗಬೇಕಿತ್ತಲ್ಲ, ಆದರೆ ಇವಳು ಈಗಲೇ ನೋವು ಅಂತ ಹೇಳ್ತಿದ್ದಾಳೆ. ಪರಿಸ್ಥಿತಿ ಏನಂತ ಗೊತ್ತಾಗ್ತಾ ಇಲ್ಲ....." ಸುಧನ್ವನ ದ್ವನಿಯಲ್ಲಿದ್ದ ದುಗುಡವನ್ನು ಶರತ್ಚಂದ್ರ ಗುರುತಿಸಿ  " ಆಯ್ತು.. ನಾನೀಗಲೇ ಹೊರಡುತ್ತೀನಿ" ಎಂದು ಫೋನ್ ಕಟ್ ಮಾಡಿದ. ಕ್ಯಾಲೆಂಡರ್ ಕಡೆ ನೋಡಿದಾಗ ನಾಳೆ ನಾಲ್ಕನೇ ಶನಿವಾರ ಅಂತ ಗೊತ್ತಾಗಿ, ರಜೆ ಕೇಳುವ ಪ್ರಮೇಯ ಇಲ್ಲ ಅಂತ ನೆನಪಾಯ್ತು. ಕೆಲವೇ ಕ್ಷಣಗಳಲ್ಲಿ  ತಯಾರಾಗಿ, ತಾಯಿಗೆ ವಿಷಯ ತಿಳಿಸಿ ಹೊರಡುತ್ತ ಹೇಳಿದ " ಅಮ್ಮ. .. ಮನೆಕಡೆ ಹುಷಾರು...". ಬಾಗಿಲ ಬಳಿ ಬಂದಿದ್ದ ಜಾನಕಿ ಹೇಳಿದಳು " ನೀನು ಹುಷಾರು..."
        ಶಿವಮೊಗ್ಗದಿಂದ ಸಾಗರಕ್ಕೆ ಹಲವಾರು ಬಸ್ಸುಗಳು. ಬಸ್ ಸ್ಟ್ಯಾಂಡಿನಲ್ಲಿದ್ದ ಯಾವುದೋ ಒಂದು ಬಸ್ಸು ಹಿಡಿದು ಕುಳಿತ. ಕಂಡೆಕ್ಟರ್ ಗೆ ಟಿಕೇಟಿನ ಹಣವನ್ನು ಕೊಟ್ಟು ಟಿಕೆಟ್ ಜೇಬಿಗಿಳಿಸಿದ. ದೃಷ್ಟಿ ಕಿಟಕಿಯಿಂದ ಹೊರ ನೋಡುತ್ತಾ ಇತ್ತು. ಮನಸ್ಸು ಆತನಿಗೆ ಅರಿವಿಲ್ಲದಂತೆ ಯೋಚನಾಮಗ್ನವಾಗಿತ್ತು. "ದೇವರೇ..... ಎಲ್ಲವೂ ಸುಸೂತ್ರವಾಗಿ ಆಗಲಿ.  ಇನ್ನೊಮ್ಮೆ ಆ ತಪ್ಪನ್ನು ಮಾಡುವುದೇ ಇಲ್ಲ. ರಾಕ್ಷಸನಂತೆಯೇ ವರ್ತಿಸಿದೆನಲ್ಲ ಆವತ್ತು" ತಟಕ್ಕನೆ ಅವನ ಕಣ್ಣಿನಿಂದ ಎರಡು ಹನಿ ಜಾರಿತು. ಬಸ್ಸಿನಲ್ಲಿದ್ದೇನೆಂಬ ಅರಿವಾಗಿ ಕಣ್ಣೀರನ್ನು ತಕ್ಷಣ ಒರೆಸಿಕೊಂಡ." ನನ್ನ ಪರಿಸ್ಥಿತಿಯೂ ಹಾಗೇ ಇತ್ತಲ್ಲ.  ಭವಿಷ್ಯ ಎಂಬುದು ಕಣ್ಣೆದುರು ಬ್ರಹ್ಮಾಂಡ ಬಂಡೆಯಾಗಿ ನಿಂತಿತ್ತು...."
     ಐದು ವರ್ಷದ ಹಿಂದೆ ಜಾಗ ಖರೀದಿ ಮಾಡಿ ಸೂರು ಮಾಡಿಕೊಳ್ಳಬೇಕೆಂಬ ದೊಡ್ಡ ಅನಿವಾರ್ಯತೆ ಬಹಳವಾಗಿ ಇತ್ತು. ಅದಕ್ಕಾಗಿಯೇ ಸಾಲ ಮಾಡಿ ಸೈಟನ್ನೂ ಖರೀದಿ ಮಾಡಿ ಮನೆಯ ಪ್ಲಾನನ್ನೂ ಮಾಡಿಯಾಗಿತ್ತು.  ಆ ಹೊತ್ತಿಗೇ ಸುಗುಣ ಬಸುರಿಯಾಗಿ ತವರುಮನೆಗೆ ಹೋದದ್ದು. ಎಷ್ಟೊಂದು ಖುಷಿಯಾಗಿತ್ತು ಆತನಿಗೆ ಆಗ. ಆಕೆಯನ್ನು  ಆಸ್ಪತ್ರೆಗೆ ಸೇರಿಸಿದ್ದಾರೆಂದು ತಿಳಿದು ಶರತ್ಚಂದ್ರ ಹೋಗುವ ಹೊತ್ತಿಗೆ ಮಗುವಿನ ಜನನ  ಆಗಿತ್ತು. ಆದರೆ ಅತ್ತೆ ಮಾವ ಯಾರ ಮುಖದಲ್ಲೂ ಗೆಲುವಿರಲಿಲ್ಲ. ಆತನೂ ಮಗುವನ್ನು ನೋಡಿದ. ಹೆಣ್ಣು ಮಗು, ಆದೂ ವಿಕಲಾಂಗ! ಎಡಗಾಲು ಮೊಣಕಾಲಿನ ಕೆಳಗೆ ಇಲ್ಲವೇ ಇಲ್ಲ!. ಮಗುವನ್ನೇ ನೋಡುತ್ತಿದ್ದ ಶರತ್ಚಂದ್ರ. ತಾನಿರುವ ಪರಿಸ್ಥಿತಿಯಲ್ಲಿ ಈ ರೀತಿಯ ಮಗು. ಆತನಲ್ಲಿ ಮಮತೆಯ ಯಾವ ಸೆಲೆಯೂ ಮೂಡಲಿಲ್ಲ. 'ಈ ಮಗುವಿದ್ದರೆ ನನ್ನ ಜೀವಮಾನವೆಲ್ಲ ಕಾಲಿಗೆ ಕಲ್ಲು ಕಟ್ಟಿಕೊಂಡಂತೆಯೇ. ಯಾವ ಹೆಜ್ಜೆಯೂ ಸಹಜವಾಗಿ ಇರುವುದಿಲ್ಲ. ಒಂದಿಷ್ಟು ಜಾಗ ಕೊಂಡುಕೊಂಡು ಮನೆ ಕಟ್ಟಲಿಕ್ಕೇ ಒದ್ದಾಟ ಮಾಡಬೇಕಾದ ನಾನು ನಾಳೆ ಈ ಕುಂಟು ಮಗುವಿನ  ಜೀವನಕ್ಕೆ ಏನು ಮಾಡಲಿ? ಅಂಗಾಂಗ ನೆಟ್ಟಗಿರುವ ಮಕ್ಕಳ ಪಾಲನೆ ಪೋಷಣೆಯೇ ಕಷ್ಟ. ಇನ್ನು ಈ ಕುಂಟ ಮಗು!!' ಈ ತರದ ನಕಾರಾತ್ಮಕ ಯೋಚನೆಗಳೇ ಆತನ ತಲೆಯನ್ನು ತುಂಬಿಕೊಂಡವು. ಮಾವ ಹೊರಗೆಲ್ಲೋ ಹೋಗಿದ್ದರು. ಅತ್ತೆ ಬಟ್ಟೆ ಚೀಲದಲ್ಲಿ ಏನೋ ಹುಡುಕುತ್ತಿದ್ದರು. ಅಕ್ಕ ಪಕ್ಕದ ಹಾಸಿಗೆಯವರು ಅವರವರ ಕೆಲಸದಲ್ಲಿ ನಿರತರಾಗಿದ್ದರು. ಸುಗುಣಳೂ ನಿದ್ರಿಸುತ್ತಿದ್ದಳು.  ತಕ್ಷಣವೇ ನಿದ್ರಿಸುತ್ತಿದ್ಧ ನವಜಾತ ಶಿಶುವನ್ನೆತ್ತಿ ತನ್ನ ತೊಳುಗಳ ಎಡೆಯಲ್ಲಿ ಗಟ್ಟಿಯಾಗಿ ಅವುಚಿಕೊಂಡ.  ಸ್ವಲ್ಪ ಮಿಸುಕಾಡಲೂ ಆವಕಾಶವಿಲ್ಲದೆ ಮಗು ಉಸಿರಾಟ ನಿಲ್ಲಿಸಿತು. ಹೀಗೆ ಶರತ್ಚಂದ್ರನ ಮೊದಲ ಮಗು 'ಉಸಿರಾಟದ ತೊಂದರೆಯಿಂದ' ಹುಟ್ಟಿದ ಸ್ವಲ್ಪ ಹೊತ್ತಿಗೆ ಸತ್ತುಹೋಯಿತು.
           "ಸಾಗರ ಲಾಸ್ಟ್ ಸ್ಟಾಪ್ ಇಳ್ಕೋಳಿ..." ಕಂಡೆಕ್ಟರ್ ಕೂಗಿದ್ದನ್ನು ಕೇಳಿ ಎಲ್ಲರೂ ಎದ್ದು ಲಗೇಜು ತೆಗೆಯುವುದು ಅದೂ ಇದೂ ಅಂತ ದಡಬಡ ಸದ್ದು ಮಾಡತೊಡಗಿದರು. ಶರತ್ಚಂದ್ರನೂ  ವಾಸ್ತವಕ್ಕೆಮರಳಿ ಫೋನ್ ನಂಬರ್ ಡಯಲ್ ಮಾಡುತ್ತಾ   ಬಸ್ ಇಳಿದ. " ಹಲೋ.....ಸುಧನ್ವ.  ಯಾವ ಆಸ್ಪತ್ರೆ?". "ವಂದನಾ ಆಸ್ಪತ್ರೆ ಬಾವ. ಡೆಲಿವರಿ ಆಗಿದೆ ಬನ್ನಿ.  ಫಸ್ಟ ಫ್ಲೋರ್. ಬನ್ನಿ " ಸುಧನ್ವ ಹೇಳಿದ. ಆಟೋ ಹತ್ತಿ ಕೆಲವು ನಿಮಿಷಗಳಲ್ಲಿ ಆಸ್ಪತ್ರೆಗೆ ತಲುಪಿ, ಮಹಡಿಯಲ್ಲಿದ್ದ ವಾರ್ಡ್ಗೂ ಬಂದ. ಮನೆಯವರು ಯಾರೂ ತುಂಬಾ ಸಂತೋಷವಾಗಿದ್ದಂತೆ ತೋರಲಿಲ್ಲ. ಸುಗುಣ ಇವನನ್ನೇ ನೋಡ ತೊಡಗಿದಳು. " ಏನು ಮಗು?" ಶರತ್ಚಂದ್ರ ಕೇಳಿದ. "ಗಂಡುಮಗು... ಬಾವ ... ಆದರೆ ಮಗುವಿಗೆ ಎರಡೂ ಕಾಲುಗಳೂ ಇಲ್ಲ" ಸುಧನ್ವ ನಿರಾಸೆಯ ಧ್ವನಿಯಲ್ಲಿ ಹೇಳಿದ.
          ಸುಧನ್ವನ ಮಾತು ಕೇಳಿ ದಂಗಾದ ಶರತ್ಚಂದ್ರ ಆತನನ್ನೇ ಕ್ಷಣಕಾಲ ದಿಟ್ಟಿಸಿ ನೋಡಿದ.ನಂತ ಮೆಲ್ಲಗೆ ಮಗುವಿನ ಬಳಿ ಹೋಗಿ, ಅದರ ಹಣೆಗೊಂದು ಮುತ್ತಿಟ್ಟ.
  
(ಈ ಕಥೆ ಕೇವಲ ಕಾಲ್ಪನಿಕ. ಯಾರಿಗಾದರೂ ಸಂಬಂಧಿಸಿದ್ದೆನ್ನಿಸಿದರೆ ಅದು ಕಾಕತಾಳೀಯ ಮಾತ್ರ)
ಚಿತ್ರ: ವಾಟ್ಸಾಪ್ ಕೃಪೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸವೆದ ಕಲ್ಲಿನ ಹಿಂದೆ (ಕಥೆ)

ಇಬ್ಬಗೆಯ ನೀತಿ ಏಕೆ?

ಬೆಳಕು ಬಿದ್ದೊಡನೆ (ಕಥೆ )