ಬೇಡಿಕೊಳ್ಳುವುದ ಬೇಡಿಕೊಳ್ಳದೆ(ಕಥೆ)

           "ಶ್ರೀನಿವಾಸ....ಶ್ರೀನಿವಾಸ. ...." ಕ್ಷೀಣ ಸ್ವರದಲ್ಲಿ ಕೂಗಿದಳು ಸಾವಿತ್ರಮ್ಮ. ಕೆಲವು ಕ್ಷಣಗಳ ನಂತರ ಮತ್ತದೇ ಕೂಗು "ಶ್ರೀನಿವಾಸ..... ಶ್ರೀನಿವಾಸ". ಅದು ಅವಳ ಅನಿವಾರ್ಯವೂ ಆಗಿತ್ತು. ತನ್ನೆಲ್ಲ ಅಗತ್ಯತೆಗಳಿಗೆ ಇದ್ದೊಬ್ಬ ಮಗನನ್ನೇ ಕೂಗಬೇಕಿತ್ತು. ಸಾವಿತ್ರಮ್ಮ ಮಲಗಿದ್ದ ಕೊಣೆಯಿಂದ ಕೂಗಳತೆ ದೂರದಲ್ಲಿಯೆ ಇದ್ದ ಕೊಟ್ಟಿಗೆಯ ಕೆಲಸವನ್ನು ಮುಗಿಸುತ್ತಿದ್ದ ಶ್ರೀನಿವಾಸನಿಗೆ ತಾಯಿಯ ಕ್ಷೀಣವಾದ ಕೂಗು ಮೊದಲಿಗೆ ಕೇಳಿಸಲಿಲ್ಲ. ಎರಡನೇ ಬಾರಿಗೆ ಕೇಳಿಸಿತು. ಮಾಡುತ್ತಿದ್ದ ಕೊಟ್ಟಿಗೆ ಕೆಲಸವನ್ನು ತಕ್ಷಣ ಬಿಟ್ಟುಬರಲಾಗದೆ ಅಲ್ಲಿಂದಲೇ " ಸುಷ್ಮಾ. .. ಅಜ್ಜಿ ಯಾಕೋ ಕೂಗುತ್ತಿದ್ದಾರೆ ನೋಡು" ಎಂದು ಕೂಗಿಕೊಂಡ.  ಜಗುಲಿಯ ಪಕ್ಕದಲ್ಲಿನ ತನ್ನ ರೂಮಿನಲ್ಲಿ ಪರಿಕ್ಷೆಗಾಗಿ ಓದಿಕೊಳ್ಳುತ್ತಿದ್ದ ಸುಷ್ಮಾ ಅಲ್ಲಿಂದಲೇ " ಹಾ... ನೋಡ್ತೇನೇ ಅಪ್ಪಾ" ಎಂದು ಕೂಗಿದವಳೇ ನೇರ ಅಜ್ಜಿಯ ರೂಮಿಗೆ ಬಂದಳು. ರೂಮಿಗೆ ಪ್ರವೇಶ ಮಾಡುತ್ತಲೇ ಮೂಗುಮುಚ್ಚಿಕೊಳ್ಳುವಂತಾಯ್ತು. ಸಾವಿತ್ರಮ್ಮನ ಮುಖದಲ್ಲಿದ್ದ ಅಸಹನೆ ನೋಡಿದಾಗ ಅವಳಿಗೆ ವಿಷಯ ಅರ್ಥವಾಯಿತು. "ಅಮ್ಮ.... ಅಜ್ಜಿಯನ್ನು ನೋಡು ಬಾ. ಗಬ್ಬು ವಾಸನೆ ತಡೀಲಿಕ್ಕಾಗ್ತಾ ಇಲ್ಲ" ಎಂದು ದೊಡ್ಡ ದನಿಯಲ್ಲಿ ಹೇಳಿ, ಮುಂದಿನ ಜವಾಬ್ದಾರಿಯನ್ನೆಲ್ಲ  ಅಮ್ಮನಿಗೆ ವರ್ಗಾಯಿಸಿ ಒಂದು ಕ್ಷಣವೂ ನಿಲ್ಲದೆ ತನ್ನ ಕೋಣೆಗೆ ಓಡಿದಳು.
            ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಶಕುಂತಲಾಳಿಗೆ ಪರಿಸ್ಥಿತಿ ಅಪರಿಚಿತವೇನಲ್ಲ. ಹೂರಗಡೆ ಒಣಗಿಸಿಟ್ಟಿದ ಹಳೆಯ ಬಟ್ಟೆ, ಒಂದು ಬಕೇಟ್ ನೀರಿನೊಂದಿಗೆ ಸಾವಿತ್ರಮ್ಮನ ಕೋಣೆಯೊಳಕ್ಕೆ ಬಂದು " ಅತ್ತೆ.. ನಾನು ಬಂದಿದ್ದೇನೆ". ಹೀಗೆ ಹೇಳಿದ್ದರ ಅರ್ಥ ತಿಳಿದ ಸಾವಿತ್ರಮ್ಮ ಅಲ್ಲಿಯೆ ಸ್ವಲ್ಪ  ಪಕ್ಕಕ್ಕೆ ಜರುಗುವಂತೆ ಹೊರಳಲು ಯತ್ನಿಸಿದಳು. ಶಕುಂತಲ ಸಾವಿತ್ರಮ್ಮನ ಹಿಂಬಾಗವನ್ನೆಲ್ಲ ಒದ್ದೆ ಬಟ್ಟೆಯಿಂದ ಒರೆಸಿ, ಅಡಿಯಲ್ಲಿದ್ದ ವಸ್ತ್ರವನ್ನು ತೆಗೆದು ಬೇರೊಂದು ವಸ್ತ್ರವನ್ನು ಹಾಕಿ ' ಈಗ ಮಲಗಿ' ಎನ್ನುತ್ತ ಮೊದಲಿನ ಅಡಿವಸ್ತ್ರವನ್ನೆತ್ತಿಕೊಂಡು ಬಚ್ಚಲಿಗೆ ಹೋದಳು. ಆ ಗಬ್ಬು ವಾಸನೆಯ ಅಸಹ್ಯ ಸ್ಥಿತಿ ಅವಳ ಮುಖದಲ್ಲಿ ಗೋಚರಿಸುತ್ತಿತ್ತು. ತೊಳೆಯ ಬೇಕಾದ ಬಟ್ಟೆಯನ್ನು ಅಲ್ಲಿರಿಸಿ ಸೋಪಿನಿಂದ ಕೈತೊಳೆಯುತ್ತ ಗೊಣಗಿಕೂಂಡಳು-" ನನ್ನ ಜೀವಮಾನವೆಲ್ಲ ಈ ಸೇವೆಯೇ ಆಗಿಹೋಯ್ತು. ಎಷ್ಟುದಿನ ಮಾಡಬೇಕೋ ಈ ಹೇಲು ಉಚ್ಚೆ ಬಳಿಯುವ ಕೆಲಸ. ದೇವ್ರೇ ಸಾಕಪ್ಪ...... ನಾನಾದ್ರೂ ಎಷ್ಟೂ ಅಂತ ಈ ಕೆಲಸ ಮಾಡಲಿ. ಒಂದು ನೆಮ್ಮದಿ ಇಲ್ಲ, ಒಂದು ಸಂತೋಷ ಇಲ್ಲ. ನನ್ನ ಕರ್ಮ" ಎನ್ನುತ್ತ ಅಡುಗೆ ಮನೆಯ ಕಡೆಗೆ ನಡೆದಳು.
        ಆಗಷ್ಟೇ ಕೊಟ್ಟಿಗೆ ಕೆಲಸ ಮುಗಿಸಿ ಕೈಕಾಲು ತೊಳೆದು ಒಳಗೆ ಬಂದ ಶ್ರೀನಿವಾಸನಿಗೆ ಶಕುಂತಲೆಯ ಗೊಣಗಾಟ ಕೇಳಿಸಿತು. ಅದೇನು ಅವನಿಗೆ ಹೊಸತೂ ಆಗಿರಲಿಲ್ಲ. ಅವನೂ ಎಷ್ಟೊ ಬಾರಿ ಹೇಳಿದಂತೆಯೇ ಈಗಲೂ ಹೇಳಿದ - " ಶಕುಂತಲಾ, ನಿನಗೆ ಎಷ್ಟು ಸಾವಿರ ಬಾರಿ ಹೇಳಿದ್ದೀನಿ. ಮಾಡುವಷ್ಟು ಕೆಲಸವನ್ನು ಶ್ರದ್ಧೆಯಿಂದ ಮಾಡು.ಯಾಕೆ ಗೊಣಗ್ತೀಯ? ನೀನು ಗೊಣಗಿದ ತಕ್ಷಣ ನಿನು ಮಾಡಬೇಕಾದ ಕೆಲಸ ಆಗಿಹೋಗ್ತದೆಯ? ಗೊಣಗೋದರಿಂದ ನಿನ್ನ ನೆಮ್ಮದಿ ಹಾಳಾಗ್ತದೆ. ಉಳಿದವರಿಗೂ ಕಿರಿಕಿರಿ." ಆತ ಇನ್ನೂ ಮುಂದುವರೆಸುವುದರಲ್ಲಿದ್ದ. ಅಷ್ಟರಲ್ಲಿ ಶಕುಂತಲ ಮದ್ಯೆ ಬಾಯಿಹಾಕಿ "ಆಯ್ತು..ಗೊತ್ತಾಯ್ತು.. ಈಗ ನೀವು ಸ್ನಾನಕ್ಕೆ ಹೋಗಿ. ಇನ್ನೂ ದೇವರ ಪೂಜೆ ಆಗಿಲ್ಲ." ಎಂದು ಆತನ ಉಪದೇಶದ ಮಾತುಗಳನ್ನ ಅಲ್ಲಿಗೆ ನಿಲ್ಲಿಸಿ ಆತನನ್ನು ಸಾಗಹಾಕಲು ಅಲ್ಲೇ ಪಕ್ಕದ ಬಾಗಿಲಿನಮೇಲಿದ್ದ ಟವೆಲ್ಲನ್ನು ನೀಡಿದಳು.
     ಸುಮಾರು 22 ವರ್ಷಗಳ ಹಿಂದೆ ಶಕುಂತಲ ಶ್ರೀನಿವಾಸ ನನ್ನು ಮದುವೆಯಾಗಿ ಬಂದಾಗ ಪರಿಸ್ಥಿತಿ ಹೀಗಿರಲಿಲ್ಲ. ಅತ್ತೆ ಸೊಸೆ ಎಂದರೆ ಅಮ್ಮ ಮಗಳುಎಂಬಂತೆಯೇ ಇದ್ದರು. ಈ ಅತ್ತೆ ಸೊಸೆಯರನ್ನು ನೋಡಿ ಊರಿನ ಅದೆಷ್ಟು ಅತ್ತೆ ಸೊಸೆಯಂದಿರು ಹೊಟ್ಟೆಕಿಚ್ಚುಪಟ್ಟುಕೊಂಡಿದ್ದರೋ ಲೆಕ್ಕವಿಲ್ಲ. ಹಾಲುಸಕ್ಕರೆಯಂತೆ ಎನ್ನಬಹುದಾದ ಅವರ ಬಾಂಧವ್ಯಕ್ಕೆ ಹುಳಿ ಹಿಂಡಬೆಕೆಂದು ಲೋಡುಗಟ್ಟಲೆ ನಿಂಬೆಹಣ್ಣು ಇಟ್ಟುಕೊಂಡು ಪ್ರಯತ್ನಿಸಿದರೂ ಕೂಡ ಯಾವ ಪ್ರಯತ್ನವೂ ಫಲನೀಡಲಿಲ್ಲ. ಹಾಲು ಮೊಸರಾಗಲೇ ಇಲ್ಲ.  ಈಗೊಂದು ಐದಾರು ವರ್ಷಗಳ ಹಿಂದೆ ಸಾವಿತ್ರಮ್ಮ ಜಾರಿಬಿದ್ದದ್ದೇ ನೆಪವಾಗಿ ಹಾಸಿಗೆ ಹಿಡಿಯಬೇಕಾಯಿತು. ಆಗಲೂ ಮಗಳಂತ ಸೊಸೆ ಅತ್ತೆಯ ಸೇವೆಯಲ್ಲೇನೂ ಕೊರತೆ ಮಾಡಲಿಲ್ಲ. ದಿನದಿಂದ ದಿನಕ್ಕೆ ಸಾವಿತ್ರಮ್ಮ ಸುದಾರಣೆಯಾಗುವ ಬದಲು ಮತ್ತಷ್ಟು ಕೃಶವಾಗುತ್ತಲೇ ಹೋದಳು. ಕುಳಿತುಕೊಳ್ಳಲೂ ಆಗದು. ಮಲಗಿದಲ್ಲಿಯೇ ಎಲ್ಲವೂ ಎನ್ನುವ ಪರಿಸ್ಥಿತಿ  ಅವಳದ್ದಾಯಿತು. ತನ್ನ ದೈನಂದಿನ ಕೆಲಸಗಳ ಜೊತೆ ಸಾವಿತ್ರಮ್ಮ ನ ಎಲ್ಲಾ ಕೆಲಸಗಳ ಹೊರೆಯೂ ಸೇರಿ ಶಕುಂತಲ ಬೆಳಗಿನಿಂದ ಸಂಜೆಯವರೆಗೂ ಕೆಲಸದಲ್ಲೇ ಮುಳುಗಿಹೋಗುವಂತಾಯ್ತು. ಅವಳ ಪಾಲಿಗೆ ಅಕ್ಕ-ಅಣ್ಣ ಬಂಧುಗಳು, ನೆಂಟರಿಷ್ಟರ ಭೇಟಿ ಇವೆಲ್ಲ ಅವರೆ ಯಾರಾದರೂ ಇವರ ಮನೆಗೆ ಬಂದಾಗಲಷ್ಟೆ ಎಂದಾಯ್ತು. ತಾನೇನು ಸುಖಪಟ್ಟೆ ಎಂದು ಕೇಳಿದರೆ ಏನೂ ಇಲ್ಲ ಅಂತ ಅವಳಿಗೆ ಮತ್ತೆ ಮತ್ತೆ ಅನ್ನಿಸತೊಡಗಿ ಎಲ್ಲ ಕೆಲಸದಲ್ಲಿಯೂ ಗೊಣಗಾಟ ಇದ್ದದ್ದೇ ಆಯಿತು.
      ಕೊಟ್ಟಿಗೆ ಕೆಲಸದ ಮುಗಿಸಿದ ನಂತರವೇ ಸ್ನಾನ, ಆ ನಂತರವೇ ದೇವರ ಪೂಜೆ. ಹೀಗಾಗಿ ದೇವರಿಗೆ ಪೂಜೆ ಭಾಗ್ಯ ಸಿಗುವುದು ಹನ್ನೊಂದು ಹನ್ನೆರೆಡು ಗಂಟೆಗೇ. ಇದು ಶ್ರೀನಿವಾಸನ ಪ್ರತಿದಿನದ ಕಥೆ. ಪೂಜೆಗೆ ಕುಳಿತರೂ ಮುಗಿಯಲು ಮುಕ್ಕಾಲೊಂದು ತಾಸೇ ಬೇಕು. ಕಲಿತಷ್ಟು ಮಂತ್ರವನ್ನು ಸ್ವರಯುಕ್ತವಾಗಿ ಹೇಳಿ ಪೂಜೆ ಮುಗಿಸದಿದ್ದರೆ ಅವನಿಗೆ ನೆಮ್ಮದಿಯೇ ಇಲ್ಲ. ಅವನ ಪೂಜಾ ಮಂತ್ರವೆಲ್ಲ ಮುಂಬಾಗದ ಜಗಲಿಯ ಪಕ್ಕದ ರೂಮಿನಲ್ಲಿಯೇ ಮಲಗಿದ್ದ ಸಾವಿತ್ರಮ್ಮನ ಕಿವಿಗೆ ಬೀಳುತ್ತಲೇ ಇತ್ತು.   ಒದ್ದೇ ಬಟ್ಟೆಯಲ್ಲಿ ಮೈ ಒರೆಸಿಕೊಳ್ಳುವುದೇ  ಸ್ನಾನವಾಗಿರುವ ಸಾವಿತ್ರಮ್ಮ ದೇವರ ಪೂಜೆಯ ಸಮಯದಲ್ಲಿ ಪೂಜೆಯ ಮಂತ್ರ ಕೇಳುತ್ತಲೇ ತಲ್ಲೀನಳಾಗಿ, ಮಲಗಿದ್ದಲ್ಲಿಂದಲೇ ದೇವರಿಗೆ ಮನದಲ್ಲಿಯೇ ನಮಸ್ಕರಿಸುತ್ತಿದ್ದಳು. ತಾನು ಮೊದಲು ಇದ್ದ ಸ್ಥಿತಿ ನೆನಪಾಗಿ, ದೇವರ ಪೂಜೆಯಾಗುವಾಗಲೂ ಜೀವಂತ ಶವದಂತೆಯೇ ಮಲಗಿರುವ ಇಂದಿನ ಸ್ಥಿತಿಗೆ ಮಮ್ಮಲ ಮರುಗುತ್ತಿದ್ದಳು. ಮಲಗಿದಲ್ಲಿಯೇ ಮಲಗಿ ಮೈತುಂಬಾ ಆಗಿದ್ದ ಹುಣ್ಣುಗಳ ನೋವು ಒಂದುಕಡೆಯಾದರೆ, ಪರಿಹರಿಸಲಾಗದ ದುಸ್ಥಿತಿಯ ನೋವು ಅನುಭವಿಸುತ್ತಿದ್ದ ಮನಸ್ಸು ಇನ್ನೊಂದುಕಡೆ. ಆ ನೋವನ್ನೆಲ್ಲ ತನ್ನಷ್ಟಕ್ಕೆ ತಾನೇ ಅನುಭವಿಸಬೇಕಿತ್ತಷ್ಟೆ.
    'ಸುಷ್ಮಾ. ... ಊಟಕ್ಕಾಯ್ತು.. ಬಾ' ಪೂಜೆ ಮುಗಿಸಿ  ಪಂಜೆಯುಟ್ಟುಕೊಳ್ಳುತ್ತಾ ಬಂದ ಶ್ರೀನಿವಾಸ ಮಗಳನ್ನು ಕರೆದ. ಈ ಕರೆಗಾಗಿ ಕಾಯುತ್ತಿದ್ದ ಸುಷ್ಮಾ ಸರಸರನೆ ಬಂದಳು. ಅವರುಗಳ ಎದುರು ಅಡುಗೆಯನ್ನಿಟ್ಟು, ಅತ್ತೆಗೆ ಊಟ ಮಾಡಿಸಲಿಕ್ಕಾಗಿ ಬಂದಳು ಶಕುಂತಲ.
          'ಅತ್ತೇ...... ಊಟ ಮಾಡಿ, ಎದ್ದೇಳಿ' ತುತ್ತು ಕಲೆಸುತ್ತ ಶಕುಂತಲ ಹೇಳಿದಳು. ಮುಖ ಕೆಳಗೆ ಹಾಕಿಕೊಂಡು ಮಲಗಿದ್ದ ಅತ್ತೆ ಮಾತಾಡಲಿಲ್ಲ, ತಿರುಗಲೂ ಇಲ್ಲ. ' ಅತ್ತೇ.... ಈ ಕಡೆ ತಿರುಗಿ. ಊಟ ಮಾಡಿ' ಎನ್ನುತ್ತ  ನಿಧಾನವಾಗಿ ಆಕೆಯ ಮುಖವನ್ನು ತಿರುಗಿಸಿದಳು. ಅತ್ತೆ ಅಳುತ್ತಿದ್ದಾರೆ! ಕಣ್ಣಿನಿಂದ ನೀರು ಧಾರೆಯಾಗಿ ಸುರಿಯುತ್ತಿದೆ!! ಹಾಸಿಗೆ ಹಿಡಿದು ಇಷ್ಟು ವರ್ಷವಾದರೂ ಅತ್ತೆ ಅತ್ತಿದ್ದನ್ನು ಕಂಡಿರಲಿಲ್ಲ. ನೋವು, ಸಂಕಟಗಳು ಆಕೆಯ ಮುಖದಲ್ಲಿ ವ್ಯಕ್ತವಾಗುತ್ತಿದ್ದರೂ ಆಕೆ ಕಣ್ಣೀರು ಸುರಿಸಿ ಅತ್ತಿದ್ದನ್ನು ಶಕುಂತಲ ಕಂಡಿರಲಿಲ್ಲ. ' ಏನಾಯ್ತು ಅತ್ತೆ...  ಯಾಕೆ ಅಳ್ತಿದ್ದೀರಿ? ನೋವಾಗ್ತಾ ಇದೆಯಾ? ಏನಾಯ್ತು?' ಶಕುಂತಲ ಗಾಬರಿಯಿಂದ ಕೇಳಿದಳು. ಸಾವಿತ್ರಮ್ಮನ ಕಣ್ಣೀರ ಧಾರೆಯ ಹೊರತಾಗಿ ಮತ್ತೇನೂ ಉತ್ತರ ಬರಲಿಲ್ಲ.          
        'ರೀ... ಊಟ ಆಯ್ತಾ... ಬನ್ನಿ. ಅತ್ತೆ ಯಾಕೋ ಅಳ್ತಾ ಇದ್ದಾರೆ' ತಾನಿದ್ದಲ್ಲಿಂದಲೇ ಕೇಳಿದಳು. ಈ ಮಾತು ಕೇಳಿ ಶ್ರೀನಿವಾಸ, ಸುಷ್ಮಾ ಇಬ್ಬರು ಅಷ್ಟಕ್ಕೇ ಊಟ ಮುಗಿಸಿ ಓಡಿಬಂದರು.  ಶ್ರೀನಿವಾಸ ಅಮ್ಮನ ಪಕ್ಕದಲ್ಲಿ ಕುಳಿತು  ಆಕೆಯ ತಲೆ ನೇವರಿಸುತ್ತಾ  ' ಯಾಕಮ್ಮ... ಏನಾಯ್ತು? ಯಾಕೆ ಅಳ್ತಾ ಇದ್ದೀಯ. ಏನಾಗ್ತಾ ಇದೆಯಮ್ಮ' ಪ್ರೀತಿ, ಕಾಳಜಿ, ಗಾಬರಿಯಿಂದ ಕೇಳಿದ.  ತನ್ನ ಸುತ್ತ ನಿಂತಿದ್ದ ಸೊಸೆ, ಮಗ , ಮೊಮ್ಮಗಳ ಮುಖವನ್ನು ನೋಡುತ್ತ ಹೇಳಿದಳು ' ಏನಿಲ್ಲ ಶ್ರೀನಿವಾಸ. ನನ್ನ ಬಗ್ಗೆ ಯೋಚಿಸುತ್ತಾ ಇದ್ದೆ. ನೀನು ಮಂತ್ರ ಹೇಳ್ತಾ ಇದ್ಯಲ್ಲ. "ಅನಾಯಾಸೇನ ಮರಣಂ, ವಿನಾ ದೈನ್ಯೇನ ಜೀವನಂ.ದೇಹಿಮೇ ಕೃಪಯಾ ಶಂಭೋ ತ್ವಯಿಭಕ್ತಿಂ ಚ ನಿಶ್ಚಲಾಂ" ಅದೇ ನಾನು ಬೇಡಿಕೊಳ್ಳಬೇಕಾದದ್ದಾಗಿತ್ತು, ಆದರೆ ಬೇಡಿಕೊಳ್ಳಲೇ ಇಲ್ಲ. ಮನೆ, ಮಾರು ಮಕ್ಕಳು ಸಂಸಾರ ಅಂತ ಎಷ್ಟೆಷ್ಟೋ ಬೇಡಿಕೊಂಡೆ. ಅದರಲ್ಲಿ ಎಷ್ಟೆಷ್ಟೋ ನೆರವೇರಿದವು. ಅವುಗಳನ್ನು ಬೇಡಿಕೋಳ್ಳುವಾಗ ಒಂದು ದಿನವೂ ನಾನು ನಿಜವಾಗಿ ಬೇಡಿಕೊಳ್ಳಬೇಕಾದದ್ದು ಯಾವುದು ಅಂತ ಯೋಚಿಸಲಿಲ್ಲ. ಇವತ್ತು ಇಲ್ಲಿ ಹೀಗೆ ಮಲಗಿ ಮೈಯೆಲ್ಲ ಹುಣ್ಣಾಗಿ ಸ್ವತಃ ಕೈಯನ್ನು ಅಲುಗಾಡಿಸಲು ಆಗಿದೆ ನಿಮಗೆಲ್ಲ ಭಾರವಾಗಿ ಬಿದ್ದುಕೊಂಡಿರುವಾಗ ನಾನು ಬೇಡಿಕೊಳ್ಳೋಕೆ ಮರೆತಿದ್ದು ನೆನಪಾಗ್ತಾಇದೆ. ಅನಾಯಾಸವಾದ ನೋವಿಲ್ಲದ ಸಾವು, ಧೈನ್ಯ ಇಲ್ಲದ ಸ್ವತಂತ್ರ ಜೀವನ, ಭಗವಂತನಲ್ಲಿ ನಿಶ್ಚಲ ಭಕ್ತಿ ಇವಿಷ್ಟೆ ನಾವು ಬೇಡಬೇಕಾದದ್ದು. ಆದರೇನು ಮಾಡೋದು? ಈ ಸತ್ಯ ಗೊತ್ತಾಗಿದ್ದು ಈ ಪರಾಧೀನ ಜೀವನ ಸಿಕ್ಕಿದಮೇಲೆ. ಶಕುಂತಲ, ನಿನ್ನ ದಿನವೆಲ್ಲ ನನ್ನ ಸೇವೆಯಲ್ಲೇ  ಕಳೆದು ಹೋಗ್ತಾ ಇದೆ. ನಾನು ನಿನ್ನ ಸುಖನೆಲ್ಲ ಕಿತ್ಗೊಂಡೆ. ನಿಮಗೆಲ್ಲ ಭಾರವಾಗಿ ಬದುಕಿರೋದು ನಂಗೂ ಇಷ್ಟ ಇಲ್ಲ. ಆದರೇನು ಮಾಡಲಿ? ನಾನು ಬೇಡಲಿಲ್ಲ, ಅವನು ಕೊಡಲಿಲ್ಲ".ಉಮ್ಮಳಿಸಿ ಬರುತ್ತಿದ್ದ ಅಳುವಿನ ನಡುವೆ ಕ್ಷೀಣ ಸ್ವರದಲ್ಲಿ ಎಲ್ಲವನ್ನೂ ನಿಖರವಾಗಿ ನುಡಿದಳು ಸಾವಿತ್ರಮ್ಮ.   
      ಶ್ರೀನಿವಾಸ,  ಶಕುಂತಲ, ಸುಷ್ಮಾ ಎಲ್ಲರಿಗೂ ತಾವ್ಯಾವತ್ತೂ ಕಲ್ಪಿಸಿಕೊಂಡಿರದಿದ್ದ ಸಾವಿತ್ರಮ್ಮ ಕಂಡಳು. ಅವರ ಕಂಗಳಲ್ಲೂ ನೀರು ತುಂಬಿತು.

ಕಾಮೆಂಟ್‌ಗಳು

  1. ತುಂಬ ಚೆನ್ನಾಗಿದೆ ನನ್ನ ಅಜ್ಜಿಯ ನೆನಪಾಯಿತು . ಅವರಿಗೂ ಇದೆ ಪರಿಸ್ಥಿತಿ ಇತ್ತು. ನಮ್ಮದು ತುಂಬು ಕುಟುಂಬವಾದ್ದರಿಂದ ತಾಯಿ , ದೊಡಮ್ಮ, ಅಕ್ಕ ಯಾರಾದರೂ ಅಜ್ಜಿಯನ್ನು ನೋಡಿಕೊಳ್ಳುತ್ತಿದ್ದರು.

    ಪ್ರತ್ಯುತ್ತರಅಳಿಸಿ
  2. ನಿಮ್ಮ ಕಮೆಂಟ್ ಗೆ ಧನ್ಯವಾದಗಳು. .. ವೃದ್ದಾಪ್ಯದಲ್ಲಿ ಈ ಪರಿಸ್ಥಿತಿಯಲ್ಲಿದ್ದ ಒಬ್ಬರನ್ನು ನೋಡಿದ್ದೆ. ಆವತ್ತನಿಂದ ಮಿಸುಕಾಡುತ್ತಿದ್ದ ಯೋಚನೆ ಈ ಕಥೆಯಾಗಿ ಬಂತು.

    ಪ್ರತ್ಯುತ್ತರಅಳಿಸಿ
  3. yes sir..really heart touching ...youngers should be more responsible to take care of our elders

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸವೆದ ಕಲ್ಲಿನ ಹಿಂದೆ (ಕಥೆ)

ಇಬ್ಬಗೆಯ ನೀತಿ ಏಕೆ?

ಬೆಳಕು ಬಿದ್ದೊಡನೆ (ಕಥೆ )