ಮತ್ತೆ ಪರಿತಾಪವೊಂದೇ......

ಹೊತ್ತು ಮುಳುಗುವ ಮುನ್ನ ಮಾಡಿಬಿಡು ಕೆಲಸಗಳ
ಇಲ್ಲದಿದ್ದರೆ ಮತ್ತೆ ಅವಕಾಶ ಸಿಗದು
ತಂದೆ ತಾಯ್ಗಳ ಸೇವೆ ಇಂದೆ ನೀ ಮಾಡು
ನಾಳೆ ನಿನಗಾ ಭಾಗ್ಯ ಸಿಗುವ ಭರವಸೆಯಿಲ್ಲ.

ಗರ್ಭದಲಿ ನೀನಿರುವೆ ಎಂದು ತಿಳಿದಾ ಕ್ಷಣವೆ
ಮುಡಿಪಿಟ್ಟರು ತಮ್ಮ ಬಾಳು ನಿನಗಾಗಿ
ಅವರ ಮನಸು ಹಾಗು ಹಲವು ಕನಸುಗಳೆಲ್ಲ
ನಿನ್ನ ಏಳಿಗೆಗಾಗಿ, ನಿನ್ನ ಜೀವಿತಕಾಗಿ

ನೂರು ಸಾಲದ ಹೊರೆಯು ನಿನ್ನ ಶಿಕ್ಷಣಕಾಗಿ
ಬಾಗಿ ಬೇಡಿತು ಕೈಯಿ ನಿನ್ನ ರಕ್ಷಣೆಗಾಗಿ
ಗಡಿಬಿಡಿಯ ನಡುವೆ ನೀ ನೆನೆ ಅದನು ಕ್ಷಣ ಹೊತ್ತು
ತುಂಬಿ ಬಂದರೆ ಹೃದಯ ಚೆನ್ನಾಯ್ತು ಗೆಳೆಯ

ನಿನ್ನ ಬಾಲ್ಯದ ಆಟ, ಜೊತೆಗೆ ಎಷ್ಟೊಂದು ಹಠ!
ಪ್ರೀತಿಯಲಿ ಸಹಿಸಿದರು ಅವರು ಅದನೆಲ್ಲ
ನಿನ್ನ ಬೇಡಿಕೆಗಳು ಅವರ ಕೈಗೆಟುಕದಿರೆ
ಅವರ ಕಣ್ಣೀರು ನಿನಗೆ ಕಾಣಲೆ ಇಲ್ಲ

ಇಂದು ನೀ ನಿಂತಿರುವೆ ನಿನ್ನ ಕಾಲ್ಗಳ ಮೇಲೆ
ಅವರ ಕಾಲ್ಗಳ ನೋಡು ಎಷ್ಟು ಬಲಹೀನ
ಗೊಡ್ಡು ಜೀವಗಳೆಂದು ದೂರ ತಳ್ಳಲು ಬೇಡ
ಅವರ ಆ ವೃದ್ದಾಪ್ಯ ನಾಳೆ ನಿನಗೂ ಇಹುದು

ಕಣ್ಣು ಕಾಣುವುದಿಲ್ಲ, ಕಿವಿಯು ಕೇಳುವುದಿಲ್ಲ
ಜರ್ಜರಿತ, ನಿಶ್ಯಕ್ತ,ಸೊರಗಿರುವ ದೇಹ
ಕೈಸಾಗದಾ ಹೊತ್ತು, ಜೀರ್ಣವಾಗದು ತುತ್ತು
ಇದ ನೋಡಿ ನೋಡದಂತಿರಬೇಡ ನೀನು

ಮುದಿತನದಿ ಬಯಸುವರು ನಿನ್ನ ಆಸರೆಯನ್ನು
ಮನದಲ್ಲೆ ಗೊಣಗೊಣಗಿ ಕುದಿಯಬೇಡ
ನಿನ್ನ ಜೀವನ ಅವರು ನಿನಗೆ ಕೊಟ್ಟಿರುವ ವರ
ನಿನಗೆ ಶಾಪವೆ ಹೌದು ಅವರ ಕಣ್ಣೀರು

ಕೈ ಹಿಡಿದು ನಡೆಸು, ಕಾಲ್ಮುಟ್ಟಿ ನಮಿಸು
ಅವರ ಸೇವೆಯ ಭಾಗ್ಯ ನಿನಗೆ ದೊರಕಿರುವಾಗ
ಕಡೆಗಣಿಸಿ, ಮೈಮರೆತು ಗೊರಕೆ  ಹೊಡೆದರೆ ನೀನು
ನಾಳೆ ನಿನಗುಳಿಯುವುದು ಪರಿತಾಪವೊಂದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬೆಳಕು ಬಿದ್ದೊಡನೆ (ಕಥೆ )

ಸವೆದ ಕಲ್ಲಿನ ಹಿಂದೆ (ಕಥೆ)

ಇಬ್ಬಗೆಯ ನೀತಿ ಏಕೆ?