ಮಹಾಭಾರತ ಕಥಾ

            'ಯದಾ ಯದಾ ಹಿ ಧರ್ಮಸ್ಯ, ಗ್ಲಾನಿರ್ಭವತಿ ಭಾರತ' ಎಂದು ಆರಂಭವಾಗಿ ' ಸಂಭವಾಮಿ ಯುಗೇ ಯುಗೇ....' ಎಂದು ಮುಗಿಯುತ್ತಿದ್ದ ಮಹೇಂದ್ರ ಕಪೂರ್ ಅವರ ಧ್ವನಿಯಲ್ಲಿದ್ದ  ಗೀತೆಯೊಂದಿಗೆ ಪ್ರಾರಂಭವಾಗುತ್ತಿದ್ದ 'ಮಹಾಭಾರತ' ಹಿಂದಿ ಧಾರಾವಾಹಿ 1988ರ ಹೊತ್ತಿಗೆ ದೇಶದಾದ್ಯಂತ ಜನಪ್ರಿಯವಾಗಿತ್ತು. ವ್ಯಾಸರ ಮಹಾಭಾರತವನ್ನಾಧರಿಸಿಯೇ ಮೂಡಿ ಬಂದಿದ್ದ ಧಾರಾವಾಹಿ ಅದು.  ಸುಮಾರು 2 ವರ್ಷಗಳ ಕಾಲ 94 ಎಪಿಸೋಡ್ಗಳಲ್ಲಿ ಪ್ರಸಾರವಾಗಿದ್ದ ಧಾರಾವಾಹಿ ಆ ದಿನಗಳಲ್ಲಿ ಅತ್ಯಂತ  ಹೆಚ್ಚು ಟಿ ಆರ್ ಪಿ ಗಳಿಸಿದ ಹೆಮ್ಮೆ ಹೊಂದಿತ್ತು.  ಧಾರಾವಾಹಿ ಪ್ರಸಾರವಾಗುತ್ತಿದ್ದ ಸಮಯದಲ್ಲಿ ರಸ್ತೆಗಳೆಲ್ಲ ಖಾಲಿಯಿರುತ್ತಿದ್ದವಂತೆ ಎಂದರೆ ಅದರ ಜನಪ್ರಿಯತೆ ಎಷ್ಟಿತ್ತು ಎಂದು ತಿಳಿಯಬಹುದು. ನಮಗೆಲ್ಲ ಟಿ ವಿ ಎಂಬುದು ಒಂದು ಮಾಯಾಪೆಟ್ಟಿಗೆಯಾಗಿ, ಸುಲಭವಾಗಿ ಕೈಗೆಟುಕದ ವಸ್ತುವಾಗಿದ್ದ ಕಾಲ ಅದು. ನನ್ನೂರಿನಲ್ಲೆಲ್ಲೂ ಟಿ ವಿ ಇರಲಿಲ್ಲ. ನಂತರದ ದಿನಗಳಲ್ಲಿ ಧಾರವಾಹಿಯ ಬಗ್ಗೆ ಕೇಳಿ ಕುತೂಹಲಿಯಾಗಿದ್ದ ನಾನು ನೋಡಬೇಕೆಂದುಕೊಂಡಿದ್ದೆ . ಈಗ ಸಂಪೂರ್ಣ ಧಾರವಾಹಿಯ ಎಂಟು ಡಿವಿಡಿಗಳನ್ನು ನೋಡಿದ ಮೇಲೆ ಖಂಡಿತವಾಗಿಯೂ ' ಮಹಾಭಾರತ' ಧಾರಾವಾಹಿ ಒಂದು ಅದ್ಭುತ ನಿರ್ಮಾಣ ಎನ್ನಿಸುತ್ತಿದೆ.
            ಈ ಧಾರಾವಾಹಿ ಹಾಗೂ ರಮಾನಂದ ಸಾಗರ್ ಅವರ ರಾಮಾಯಣ ಇವೆರಡೂ ನಿರ್ಮಾಣವಾಗಲು ರಾಜೀವ್ ಗಾಂಧಿ ಕಾರಣ ಎಂಬ ಅಂತರ್ಜಾಲದ ಬರಹವೊಂದನ್ನು ಓದಿದೆ.  ರಾಜಕೀಯ ಹಿನ್ನೆಲೆ ಏನಿತ್ತೋ ಗೊತ್ತಿಲ್ಲ. ಆದರೆ ಅಲ್ಲಿಯವರೆಗೂ ಡಾಕ್ಯುಮೆಂಟರಿ, ಆಗೀಗ ಸಿನಿಮಾಗಳನ್ನು ತೋರಿಸುತ್ತಿದ್ದ ದೂರದರ್ಶನ    ಈ ಧಾರವಾಹಿಗಳಿಂದಾಗಿ ಬದಲಾಗಿ ಮನರಂಜನೆಯ ಮುಂಚೂಣಿಗೆ ಬಂದಿದ್ದು ಸತ್ಯ.
            ಧಾರಾವಾಹಿಯ ನಿರ್ಮಾಪಕರಾದ ಬಿ ಆರ್ ಚೋಪ್ರಾ ಹಾಗೂ ರವಿ ಚೋಪ್ರಾ ಕೂಡ ಊಹಿಸದಿದ್ದಷ್ಟು ಬೃಹತ್ ಯಶಸ್ಸನ್ನು ' ಮಹಾಭಾರತ' ಪಡೆಯಲು ಹಲವಾರು ಕಾರಣಗಳಿವೆ. ಧಾರಾವಾಹಿಯ ಯಶಸ್ಸಿನ ಪ್ರಮುಖ ಕಾರಣ ಪಾತ್ರಗಳಿಗೆ ನಟರ ಆಯ್ಕೆ ಹಾಗೂ ಅವರ ಅಭಿನಯ.  ಈ ನಟರುಗಳು ಪ್ರಸಿದ್ಧರೇನಾಗಿರಲಿಲ್ಲ, ಆದರೆ ಅಪ್ಪಟ ಪ್ರತಿಭೆಗಳಾಗಿದ್ದರೆಂಬುದು ಧಾರಾವಾಹಿ ನೋಡಿದಾಗ  ಅರಿವಾಗುತ್ತದೆ.ಪ್ರಮುಖ ಪಾತ್ರಗಳಾದ ದೃತರಾಷ್ಟ್ರನಾಗಿ ಗಿರಿಜಾ ಶಂಕರ್, ಗಾಂಧಾರಿಯಾಗಿ ರೇಣುಕಾ ಇಸ್ರಾನಿ, ಗಂಗಾ ದೇವಿಯಾಗಿ ಕಿರಣ್ ಜುನೇಜಾ,ಧರ್ಮರಾಜನಾಗಿ ಗಜೇಂದ್ರ ಚೌಹಾಣ್,  ಅರ್ಜುನನಾಗಿ ಫಿರೋಜ್ ಖಾನ್, ಭೀಮನಾಗಿ ಪ್ರವೀಣ್ ಕುಮಾರ್,   ಕರ್ಣನಾಗಿ ಪಂಜ್ ಧೀರ್, ಕುಂತಿಯಾಗಿ ನಝ್ದೀನ್, ದ್ರೌಪದಿಯಾಗಿ ರೂಪಾ ಗಂಗೂಲಿ ಅವರುಗಳು ಪಾತ್ರಗಳಿಗೆ ಸೂಕ್ತ ಆಯ್ಕೆ ಅನ್ನಿಸುತ್ತದೆ. ಅದರಲ್ಲಿಯೂ    ಮುಖೇಶ್ ಖನ್ನಾ,  ನಿತೀಶ್ ಭಾರಧ್ವಾಜ್,   ಗುಫಿ ಪೈಂತಾಲ್,  ಪುನೀತ್ ಇಸ್ಸಾರ್ ಹಾಗೂ ವಿಧುರನಾಗಿ ವಿರೆಂದರ್ ರಾಝ್ಧನ್ ಅವರುಗಳ ಅಭಿನಯ   ಮನೋಜ್ಞವಾಗಿದೆ. ಧಾರಾವಾಹಿಯ ಪ್ರಾರಂಭದಿದ ಅಂತ್ಯದ ವರೆಗೂ ಇರುವ ಭೀಷ್ಮ ಪಿತಾಮಹನಾಗಿ ಮುಖೇಶ್ ಖನ್ನಾರ ಸೊಗಸಾದ ಅಭಿನಯ ಮನಸ್ಸನ್ನು ತಟ್ಟುತ್ತದೆ. ಪ್ರತಿಜ್ಞೆಗೈಯುವ ವೀರ ಯುವಕ  , ಪ್ರತಿಜ್ಞೆಗೆ ಕಟ್ಟುಬಿದ್ದು ಏನೂ ಮಾಡಲಾಗದ ಅಸಹಾಯಕ ಸ್ಥಿತಿಯ  ವೃದ್ಧ, ಶರಶೈಯ್ಯೆಯಲ್ಲಿ ಮಲಗಿ ಆಘಾತದಿಂದ ತತ್ತರಿಸಿ ಹೋಗಿರುವ ಇಚ್ಚಾಮರಣಿ ಭೀಷ್ಮ . ಈ ಆಯಾಮಗಳಲ್ಲಿ ಮುಖೇಶ್ ಖನ್ನಾ ಅತ್ಯಂತ ಯಶಸ್ವಿಯಾಗಿದ್ದಾರೆ. ಶಕ್ತಿಮಾನ್ ಆಗಿ ನನಗೆ ಪರಿಚಯವಿದ್ದ ಮುಖೇಶ್ ಖನ್ನಾ ಭೀಷ್ಮ ಪಿತಾಮಹನಾಗಿ ಇನ್ನಷ್ಟು ಹತ್ತಿರವಾದರು. ಮುಖೇಶ್ ಖನ್ನಾ ಅವರಂತೆಯೇ ಸಹಜ ಸುಂದರ ಅಭಿನಯ ಶ್ರೀಕೃಷ್ಣ-ನಿತೀಶ್ ಭಾರದ್ವಾಜ್ ಅವರದ್ದು . ಅತ್ಯಂತ ಶಾಂತ ಸಮಚಿತ್ತದ ಶ್ರೀಕೃಷ್ಣ, ಪಾಂಡವರ ರಕ್ಷಕ ಶ್ರೀಕೃಷ್ಣ,  ಭಗವದ್ಗೀತೆಯನ್ನು ಬೋಧಿಸುವ ಶ್ರೀಕೃಷ್ಣ,  ಭೀಷ್ಮನ ವಿರುದ್ಧ ಕೋಪದಿಂದ ಸುದರ್ಶನ ಚಕ್ರ ಹಿಡಿಯುವ ಶ್ರೀಕೃಷ್ಣ- ಹೀಗೆ ಎಲ್ಲಾ ಶ್ರೀಕೃಷ್ಣನಾಗಿಯೂ ಭಾರಧ್ವಾಜ್ ಇಷ್ಟವಾಗುತ್ತಾರೆ.  ಮಹಾಭಾರತ ಯುದ್ಧದ ಮೂಲ ಧಾಳವನ್ನು ಉರುಳಿಸಿದಾತ ಶಕುನಿ. ' ಸುನೋ ಭಾಂಜೇ' ಎನ್ನುತ್ತ ಕುಠಿಲ ಉಪಾಯಗಳನ್ನು ಹೂಡುವ, ಕಪಟವನ್ನೇ ಉಸಿರಾಡುವ ಶಕುನಿಯಾಗಿ ಗುಫಿ ಪೈಂತಾಲ್ ಅವರ ಅಭಿನಯವೂ ಧಾರಾವಾಹಿಯ ಧನಾತ್ಮಕ ಅಂಶಗಳಲ್ಲಿ ಒಂದು. ಹಿಡಿದ ಹಠವನ್ನೇ ಸಾಧಿಸುವ, ಮಿತೃತ್ವಕ್ಕಾಗಿ ಸರ್ವಸ್ವವನ್ನೂ ಧಾರೆ ಎರೆಯುವ, ಅತಿಯಾದ ಸ್ವಾಭಿಮಾನ ಹಾಗೂ ಕಿವಿಚುಚ್ಚಿಕೊಡುವವರಿಗೆ ಮಣೆ ಹಾಕಿ ಹಾಳಾಗುವ ವೀರ ದುರ್ಯೋಧನನಾಗಿ ಪುನೀತ್ ಇಸ್ಸಾರ್ ಅಭಿನಯ  ಅದ್ಭುತ ಎನ್ನಲೇಬೇಕು.
          'ಮಹಾಭಾರತ'ದ ಜೀವಾಳವಾಗಿರುವುದು ಹದಿನೆಂಟು ದಿನಗಳ ಯುದ್ಧ. ಧಾರವಾಹಿಯಲ್ಲಿನ ಯುದ್ಧ ಸನ್ನಿವೇಶ ಅತ್ಯಂತ ನೈಜವಾಗಿದೆ. ಗ್ರಾಫಿಕ್ ತಂತ್ರಜ್ಞಾನ ಅಷ್ಟಾಗಿ ಇರದಿದ್ದ ಆ ಕಾಲದಲ್ಲಿ ಯುದ್ಧವನ್ನು ದೊಡ್ಡ ಬಯಲಿನಲ್ಲಿಯೇ ಚಿತ್ರೀಕರಿಸಲಾಗಿದೆ. ಸೈನಿಕರಿಂದ, ವಿರಯೋಧರಿಂದ ಕಿಕ್ಕಿರಿದು ತುಂಬಿರುವ ಯುದ್ಧಭೂಮಿಯ ತುಂಬಾ ಕುದುರೆ , ರಥ, ಆನೆಗಳ ಓಡಾಟ ಇವುಗಳಿಂದಾಗಿ ಯುದ್ಧ ದೃಶ್ಯಗಳು ಅತ್ಯಂತ ಶ್ರೀಮಂತವಾಗಿವೆ, ನಮ್ಮನ್ನು ನಿಜವಾಗಿಯೂ ಕುರುಕ್ಷೇತ್ರಕ್ಕೇ ಕೊಂಡೊಯ್ದಂತೆ ಭಾಸವಾಗುತ್ತದೆ. 
          ಸುಂದರವಾಗಿರುವ ಅರಮನೆಯ ಸೆಟ್, ಪೌರಾಣಿಕ ವೇಶಭೂಷಣ, ಮನಮುಟ್ಟುವ ಸಂಭಾಷಣೆ, ಹೊರಾಂಗಣ ಚಿತ್ರೀಕರಣ ಇವುಗಳು ಧಾರಾವಾಹಿಯನ್ನು ಇಷ್ಟಪಡುವಂತೆ ಮಾಡುತ್ತವೆ. ಭಾರತೀಯ ದೃಶ್ಯಮಾಧ್ಯಮದಲ್ಲಿ ಧಾರಾವಾಹಿಗಳೆಂಬ ಕಲ್ಪನೆ ಇನ್ನೂ ಮೂಡಿರದಿದ್ದರಿಂದ ಈ ಧಾರಾವಾಹಿಯ ದೃಶ್ಯಗಳು ಚಲನಚಿತ್ರದ ದೃಶ್ಯಗಳಂತೆ ಭಾಸವಾಗುತ್ತವೆಯಾದರೂ  ಚಲನಚಿತ್ರಗಳ ಅನಿವಾರ್ಯ ವೇಗ ಇಲ್ಲದಿರುವುದರಿಂದ ಯಾವ ದೃಶ್ಯಗಳೂ ಸೊರಗಿದೆಯೆಂದು ಎನ್ನಿಸುವುದಿಲ್ಲ.
          ಪಾತ್ರಗಳಿಂದ ಆಡಿಸುವ ಮಾತುಗಳು ನೋಡುಗನನ್ನು ತಟ್ಟವಂತಿರದಿದ್ದರೆ ಅಂತಹ ನಾಟಕ, ಸಿನೆಮಾ, ಧಾರಾವಾಹಿ ಯಾವುದೂ ಯಶಸ್ವಿಯಾಗುವುದಿಲ್ಲ. ಮಹಾಭಾರತ ಧಾರಾವಾಹಿ 86% ಟಿ ಆರ್ ಪಿ ಯೊಂದಿಗೆ ಯಶಸ್ವಿಯಾಗಿತ್ತಂತೆ. ಈ ಯಶಸ್ಸಿಗೆ ಧಾರಾವಾಹಿಯ ಸಂಭಾಷಣೆಯನ್ನು ಬರೆದ 'ರಹಿ ಮಾಸೂಮ್ ರಾಝಾ' (Rahi Masoom Raza) ಅವರ ಸಂಭಾಷಣೆಯೂ ಕಾರಣ. ಉರ್ದು ಕವಿ ರಾಜಾ ಅವರು ವ್ಯಾಸರ ಬರವಣಿಗೆಯನ್ನು ಆಧರಿಸಿ ರಚಿಸಿದ ಸಂಭಾಷಣೆ ಪ್ರತಿ ಪಾತ್ರದ ಭಾವನೆ, ವ್ಯಕ್ತಿತ್ವಗಳನ್ನು ತುಂಬಾ ಚೆನ್ನಾಗಿ ನಿರೂಪಿಸುತ್ತದೆ. ಮುಸ್ಲಿಂ ಹಿನ್ನೆಲೆಯ ಇವರ ಸಾಮರ್ಥ್ಯದ ಬಗ್ಗೆ ಹಲವರು ಅಪನಂಬಿಕೆ ವ್ಯಕ್ತ ಪಡಿಸಿದ್ದರೂ, ರಾಜಾ ಅವರ ಪ್ರತಿಭೆ ಎಲ್ಲ ಅಪನಂಬಿಕೆಗಳನ್ನು ಮೀರಿ ನಿಂತಿದೆ.
           ವ್ಯಾಸರ ಮಹಾಭಾರತದ ಆಧಾರದ ಮೇಲೆ  ಧಾರವಾಹಿ ಮೂಡಿ ಬಂದಿದೆ ಎಂಬ ಮಾತಿದ್ದರೂ ವೀಕ್ಷಕನಲ್ಲಿ  ಕೆಲವು ಪ್ರಶ್ನೆಗಳು ಮೂಡುವಂತೆ ಮಾಡುತ್ತದೆ. ಭರತ ಚಕ್ರವರ್ತಿ ಆಸ್ಥಾನಕ್ಕೆ ಆಗಮಿಸುವುದರೊಂದಿಗೆ ಪ್ರಾರಂಭವಾಗುವ ಧಾರವಾಹಿ ಧರ್ಮರಾಜನ ಪಟ್ಟಾಭಿಷೇಕದೊಂದಿಗೆ ಮುಕ್ತಾಯವಾಗುವ ಮಧ್ಯೆ  ನಾವೆಲ್ಲ ಮುಖ್ಯ ಪಾತ್ರವೆಂದು ಪರಿಗಣಿಸುವ ದುರ್ಯೋಧನನ ಹೆಂಡತಿ ಭಾನುಮತಿ ಧಾರಾವಾಹಿಯಲ್ಲೆಲ್ಲೂ ಕಾಣಸಿಗುವುದೇ ಇಲ್ಲ!  ನನಗೆ ತಿಳಿದಂತೆ ಮಹಾಭಾರತ ಯುದ್ದಕ್ಕೆ ಬಲರಾಮನ ಪ್ರವೇಶವಾಗದಂತೆ ಗೋ ಹತ್ಯೆಯ ನೆಪವೊಡ್ಡಿ ಶ್ರೀಕೃಷ್ಣ ಆತನನ್ನು ತೀರ್ಥಯಾತ್ರೆಗೆ ಕಳುಹಿಸುತ್ತಾನೆ. ಧಾರವಾಹಿಯಲ್ಲಿ ಮಾತ್ರ ಬಲರಾಮ ತಾನಾಗಿಯೇ ತೀರ್ಥಯಾತ್ರೆಗೆ   ಹೊರಡುತ್ತಾನೆ. ಸೂಕ್ಷ್ಮವಾಗಿ ಗಮನಿಸಿದರೆ ಇನ್ನೂ ಹಲವು ಸಿಗಬಹುದೇನೊ? ಅಥವ ವ್ಯಾಸರು ರಚಿಸಿದ ಮಹಭಾರತದಲ್ಲಿಯೇ ಹಾಗಿದೆಯೋ!?
          ಏನೇ ಆದರೂ ಈ' ಮಹಾಭಾರತ' ಧಾರವಾಹಿ ಇಂದಿಗೂ ರೋಮಾಂಚನವುಂಟುಮಾಡುತ್ತದೆ. ದೂರದರ್ಶನದಲ್ಲಿ ಪ್ರಸಾರವಾದ ಬೇರೆ ಯಾವುದೇ ಪೌರಾಣಿಕ ಧಾರಾವಾಹಿಯೂ ಇದರಷ್ಟು ಜನಪ್ರೀಯವಾಗಿಲ್ಲ ಎಂಬುದು ಸತ್ಯ. ನಾವು ಭಾಷೆಯ ಗಡಿಯನ್ನು ಮೀರಿ ಮೆಚ್ಚುವಂತೆ ಮಾಡುವ ಧಾರಾವಾಹಿ ಇದು. ನನ್ನಲ್ಲಿ ಘಟನೆಗಳ ರೂಪದಲ್ಲಿದ್ದ ಮಹಾಭಾರತದ ಕಥೆ  ಈ ಧಾರಾವಾಹಿಯಿಂದ ಪೂರ್ಣ'ಮಹಾಭಾರತ'ದ ರೂಪ ಪಡೆಯಿತು. ಈ ಧಾರಾವಾಹಿಯಿಂದಾಗಿಯೇ ವ್ಯಾಸರ ಮೂಲ  ಮಹಾಭಾರತವನ್ನು ಓದಬೇಕೆಂದು ಮನಸ್ಸು ಹಂಬಲಿಸತೊಡಗಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸವೆದ ಕಲ್ಲಿನ ಹಿಂದೆ (ಕಥೆ)

ಇಬ್ಬಗೆಯ ನೀತಿ ಏಕೆ?

ಬೆಳಕು ಬಿದ್ದೊಡನೆ (ಕಥೆ )