'ಅಗ್ನಿ'ಜ್ವಾಲೆ ಅನಂತದೆಡೆಗೆ
ಕ್ಷಣ ಕ್ಷಣವು ಉರಿದುದುರಿದು ಪ್ರಖರತೆಯ ಸಿರಿ ಬಿರಿದು ಧಗಧಗಿಸಿ ಉರಿಯುತ್ತಲುರಿಯುತ್ತಲೆ ಸಾಗಿ ಹೋಯಿತು ಅಗ್ನಿಜ್ವಾಲೆ ಅನಂತದೆಡೆಗೆ ! ರಾಷ್ಟ್ರ ಕೀರ್ತಿಯ ವಿಶ್ವದಂಚಂಚಿಗೆ ಹರಡಿ ರಾಷ್ಟ್ರ ರಾಷ್ಟ್ರಗಳಿಗೆ ತನ್ನ ನೆಲದ ಬಲವನು ತೋರಿ ರಾಷ್ಟ್ರದೇಳಿಗೆಯ ಮಂತ್ರ ಪಠಿಸುತ್ತ ಜಪಿಸುತ್ತ ಬಿಸಿ ಕಾವು ಉಳಿಸಿ ಸಾಗಿ ಹೋಯಿತು ಅಗ್ನಿ ಜ್ವಾಲೆ ಅನಂತದೆಡೆಗೆ ! ತೋರುವುದು ಯಾವುದೂ ತಡೆಗೋಡೆಯಲ್ಲ ಪರಿಶ್ರಮ ಸೀಳುವುದು ತಡೆಗೋಡೆಯೊಡಲ ಒಳಿತಿನ ಹಂಬಲವೆ ಜೀವನದ ಕೀರ್ತಿ ಎಲ್ಲರಲಿ ಒಲವೇ ಜೀವನಕೆ ಸ್ಪೂರ್ತಿ ಎಂಬುದನು ತಿಳಿಸಿ ಸಾಗಿ ಹೋಯಿತು ಅಗ್ನಿಜ್ವಾಲೆ ಅನಂತದೆಡೆಗೆ ! ಕಾಶ್ಮೀರದಂಚಿಂದ ಕನ್ಯಾ ಕುಮಾರಿ ಹಂಬಲಿಸಿ ಹಂಬಲಿಸಿ ಕಂಬನಿಯ ಬೀರಿ ಸೂತಕದ ಯಾತನೆಯ ಪಡುವಂತೆ ಮಾಡಿ ನುಡಿ ನುಡಿವ ಮುನ್ನವೇ ಸಾಗಿ ಹೋಯಿತು ಅಗ್ನಿಜ್ವಾಲೆ ಅನಂತದೆಡೆಗೆ !