ರಾಶಿ ರಾಶಿ ಪುಸ್ತಕಗಳ ನಡುವೆ , ಪ್ರತೀ ಪುಸ್ತಕ ಪ್ರದರ್ಶನದಲ್ಲೂ ಕಾಣಿಸಿಕೊಳ್ಳುವ ಆ ಪುಸ್ತಕ . ಯಾರೊಬ್ಬರೂ ಪುಟ ತಿರುಗಿಸದೆ , ಬಂದಂತೆ , ತಂದಂತೆ , ಇದ್ದು ಎದ್ದು ಹೋಗುವ , ಯಾರೂ ಓದದ ಪುಸ್ತಕ . ಗರ್ಭದಿಂದ ಜೀವವೊಂದು ಜಾರುವಂತೆ , ಮುದ್ರಣಗೊಂಡು ಅದು ಬಂದದ್ದು ' ಪುಸ್ತಕಲೋಕ '. ದಪ್ಪವೆನಿಲ್ಲ , ಬಣ್ಣ ಚಿತ್ತಾರಗಳೂ ಇಲ್ಲ ಎಂದು ಹೇಳಲು ಓದಿದವರಾರೂ ಇಲ್ಲ . ಮಾಸಲು ಬಣ್ಣಕ್ಕೆ ತಿರುಗಿದ ಪುಸ್ತಕದ ಒಳ ಪುಟಗಳು ಹೇಗಿವೆಯೋ ಗೊತ್ತಿಲ್ಲ . ಸದ್ದು ಗದ್ದಲವಿಲ್ಲದೆ ಬಂದು ಕುಳಿತ ಅದು ಹೋದದ್ದೂ ಗೊತ್ತಿರುವುದಿಲ್ಲ . ಯಾವ ದೊಡ್ಡ ದೊಡ್ಡ ಹೆಸರುಗಳೂ ಕಾಣುವುದಿಲ್ಲ . ಚುಚ್ಚುಮದ್ದು ಹಾಕಿಸಿಕೊಳ್ಳದ ಮಗುವಿನಂತೆ ಕಿಲಕಿಲ ನಗುತ್ತಿರುತ್ತದೆ . ರೋಗಗ್ರಸ್ತ ವದ್ಯರು ಗಮನಿಸಿರುವುದಿಲ್ಲ . ನಾನು ಆ ಪುಸ್ತಕವನ್ನೇ ಆಯ್ದುಕೊಳ್ಳುತ್ತೇನೆ . ನುಡಿಯಲು ಅದಕ್ಕೂ ಸಾವಿರ ಮಾತುಗಳಿರುತ್ತವೆ . ನನ್ನಲ್ಲೂ ತೆರೆದೊಂದು ಹೃದಯವಿರುತ್ತದೆ . ಮುಂದೆಂದಾದರೂ ಅದು ಕಾಲ್ತುಳಿತಕ್ಕೆ ಸಿಕ್ಕೀತು ಎನ್ನುವ ಭಯದಿಂದ , ತಕ್ಷಣ ಎತ್ತಿಕೊಳ್ಳುತ್ತೇನೆ .